ಕುಸಿದ ಉಳ್ಳಾಗಡ್ಡಿ ದರ: ರೈತ ಕಂಗಾಲು

7

ಕುಸಿದ ಉಳ್ಳಾಗಡ್ಡಿ ದರ: ರೈತ ಕಂಗಾಲು

Published:
Updated:
ಕುಸಿದ ಉಳ್ಳಾಗಡ್ಡಿ ದರ: ರೈತ ಕಂಗಾಲು

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಉಳ್ಳಾಗಡ್ಡಿ ದರ ಪಾತಾಳ ಕಂಡ ಪರಿಣಾಮ ರೈತರು ಕಂಗಾಲಾಗಿದ್ದಾರೆ.

ಇಲ್ಲಿಯ ಎಪಿಎಂಸಿಯಲ್ಲಿ ಬಾಗಲಕೋಟೆ ಹಾಗೂ ವಿಜಾಪುರ ಜಿಲ್ಲೆಗಳಲ್ಲಿ ಬೆಳೆದ ಉಳ್ಳಾಗಡ್ಡಿಗೆ ಶನಿವಾರ ರೂ. 1,100 ದರವಿದ್ದುದು ಸೋಮವಾರ ರೂ. 900ಕ್ಕೆ ಕುಸಿಯಿತು. ಆದರೆ ಧಾರವಾಡ ಜಿಲ್ಲೆಯಲ್ಲಿ ಬೆಳೆದುದು ಗುಣಮಟ್ಟ ಚೆನ್ನಾಗಿರದ ಕಾರಣ ಕ್ವಿಂಟಲ್‌ಗೆ ರೂ. 300ಕ್ಕೆ ಮಾತ್ರ ಮಾರಾಟವಾಯಿತು. ಇದರಿಂದ ಆಕ್ರೋಶಗೊಂಡ ರೈತರು ಹುಬ್ಬಳ್ಳಿ-ಧಾರವಾಡ ರಸ್ತೆಯಲ್ಲಿ ಕುಳಿತು ಸೋಮವಾರ ಬೆಳಿಗ್ಗೆ ಪ್ರತಿಭಟಿಸಿದ ಘಟನೆಯೂ ನಡೆಯಿತು.ಕಳೆದ ವಾರ ರೂ. 700ರಿಂದ ರೂ. 1,200ಕ್ಕೆ ಮಾರಾಟವಾಗಿತ್ತು. ಆದರೆ ಸೋಮವಾರ ಮತ್ತೆ ಕುಸಿತ ಕಂಡಿರುವುದರಿಂದ ಉಳ್ಳಾಗಡ್ಡಿ ಬೆಳೆದ ರೈತರಲ್ಲಿ ಆತಂಕ ಹೆಚ್ಚಿದೆ. ಧಾರವಾಡ, ಗದಗ ಮೊದಲಾದ ಜಿಲ್ಲೆಗಳಲ್ಲಿ ಸರಿಯಾಗಿ ಮಳೆಯಾಗದೆ ಉಳ್ಳಾಗಡ್ಡಿ ಬೆಳೆ ಉತ್ತಮವಾಗಿ ಬರಲಿಲ್ಲ.

 

ಇದರೊಂದಿಗೆ ಮಹಾರಾಷ್ಟ್ರದಲ್ಲಿ ಇದೇ ಹೊತ್ತಿಗೆ ಉಳ್ಳಾಗಡ್ಡಿಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿರುವುದರಿಂದ ಈ ಭಾಗದ ಉಳ್ಳಾಗಡ್ಡಿ ಅಲ್ಲಿಗೆ ಹೋಗುತ್ತಿಲ್ಲ. ಹೀಗಾಗಿ ದರ ಕುಸಿಯಲು ಕಾರಣವಾಗಿದೆ. ಆದರೂ ಶೇ. 60-70ರಷ್ಟು ಉಳ್ಳಾಗಡ್ಡಿ ಸುಮಾರು ರೂ. 600-800 ದರಕ್ಕೆ ಮಾರಾಟವಾಗುತ್ತಿದೆ. ಉಳಿದ ಶೇ. 20-30ರಷ್ಟು ರೂ. 900ರ ವರೆಗೆ ಮಾರಾಟವಾಗುತ್ತಿದೆ.ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಎಪಿಎಂಸಿ ಕಾರ್ಯದರ್ಶಿ ಸಿ. ಪಾತಲಿಂಗಪ್ಪ, `ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಉಳ್ಳಾಗಡ್ಡಿಯ ಸೀಜನ್ ಇರಲಿಲ್ಲ. ಜೊತೆಗೆ ರಾಜ್ಯದ ಇತರೆಡೆಯಿಂದ ಅಲ್ಲಿಗೆ ಉಳ್ಳಾಗಡ್ಡಿ ಹೋಗುತ್ತಿರಲಿಲ್ಲ. ಆದರೆ ಈ ಬಾರಿ ಚಿತ್ರದುರ್ಗ, ಅಜ್ಜಂಪುರ, ತರೀಕೆರೆ ಮೊದಲಾದ ಕಡೆ ಹೆಚ್ಚು ಬೆಳೆದಿದ್ದಾರೆ.

ಕಳೆದ ವರ್ಷ ಬಂಪರ್ ದರ ಸಿಕ್ಕ ಪರಿಣಾಮ ಹೆಚ್ಚಿನ ಜಮೀನಿನಲ್ಲಿ ಬೆಳೆದಿದ್ದಾರೆ. ಜೊತೆಗೆ ಉತ್ತಮ ಬೆಳೆಯೂ ಬಂದಿದೆ. ಹೀಗಾಗಿ ಮಹಾರಾಷ್ಟ್ರ ಹಾಗೂ ಇತರ ರಾಜ್ಯಗಳಿಗೆ ಆ ಭಾಗದ ಉಳ್ಳಾಗಡ್ಡಿ ಹೆಚ್ಚು ಹೋಗುತ್ತಿದೆ. ಇದರಿಂದಲೂ ಇಲ್ಲಿ ದರ ಕುಸಿಯಲು ಕಾರಣ~ ಎಂದು ವಿವರಿಸಿದರು.ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಬೆಟ್ಟಸೂರು ಗ್ರಾಮದ ಪರಮೇಶ್ವರ ರಗಡಿ, ಉಳ್ಳಾಗಡ್ಡಿ ಲಾಭ ರವದಿಯೊಳಗ ಎನ್ನುವ ಹಾಗಿದೆ ನಮ್ಮ ಸ್ಥಿತಿ. ಪ್ರತಿ ವರ್ಷ ಬೆಳೆಯಲು ಕಷ್ಟವಾಗುತ್ತಿದೆ. ಕಸ ತೆಗೆಯಲು ಸರಿಯಾಗಿ ಆಳುಗಳು ಸಿಗುತ್ತಿಲ್ಲ. ಸಿಕ್ಕರೂ ದಿನಕ್ಕೆ 150 ರೂಪಾಯಿ ಪಗಾರ ಕೊಡಬೇಕು. ಹೇಗೋ ಬೆಳೆದು ಎಪಿಎಂಸಿಗೆ ತಂದು ಮಾರಿದರೆ ಕನಿಷ್ಠ ದುಡ್ಡು ಕೈಗೆ ಸಿಗುತ್ತದೆ. ಇದರಿಂದ ಕಣ್ಣೀರು ಕಪಾಳಕ್ಕೆ ಬರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರುಹುಬ್ಬಳ್ಳಿಯ ಗೋಪನಕೊಪ್ಪದ ಬಸವರಾಜ ಕಬ್ಬಕ್ಕಿ, `ನಾವು ಬೆಳೆದ ಉಳ್ಳಾಗಡ್ಡಿಯನ್ನು ರೂ. 300ರಿಂದ 600 ರೂಪಾಯಿಗೆ ಮಾರಾಟವಾಗುತ್ತದೆ. ನಾವೇ ಖರೀದಿಸಿದರೆ ರೂ.700 ಕೊಡಬೇಕು. ವರ್ಷದುದ್ದಕ್ಕು ದುಡಿದರೂ ಲಾಭ ಸಿಗುವುದಿಲ್ಲ~ ಎಂದು ಬೇಸರ ವ್ಯಕ್ತಪಡಿಸಿದರು.ರೈತರೂ ಎಪಿಎಂಸಿ ಸದಸ್ಯರೂ ಆದ ಸುರೇಶ ದಾಸನೂರ, ಗದುಗಿನ ಎಪಿಎಂಸಿಯಲ್ಲಿ ಕೇವಲ 200-300 ರೂಪಾಯಿಗೆ ಮಾರಾಟವಾದುದಕ್ಕೆ ರೈತರು ನಡೆಸಿದ ದಾಳಿಯನ್ನು ನೆನಪಿಸಿಕೊಂಡರು. `ದಲ್ಲಾಳಿ ಅಂಗಡಿಗಳ ಮೇಲೆ ರೈತರು ಕಲ್ಲು ಎಸೆದು, ಪೀಠೋಪಕರಣ ಧ್ವಂಸಗೊಳಿಸಿದರು.

 

ಜೊತೆಗೆ ಕಾರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಅಂದು ಅಮರಗೋಳದ ಎಪಿಎಂಸಿಯಲ್ಲೂ ಕೆಲವರು ಉಳ್ಳಾಗಡ್ಡಿ ಹೇರಿಕೊಂಡು ಹೊರಟ ಲಾರಿಗಳಿಗೆ ಕಲ್ಲು ತೂರಿದ್ದರಿಂದ ವಹಿವಾಟನ್ನು ಸ್ಥಗಿತಗೊಳಿಸಲಾಯಿತು.ಇದರ ಒಟ್ಟು ಪರಿಣಾಮ ನಮ್ಮ ರೈತರ ಮೇಲೆ ಆಗುತ್ತಿದೆ. ಒಂದು ಎಕರೆಯಲ್ಲಿ ಉಳ್ಳಾಗಡ್ಡಿ ಬೆಳೆಯಲು ಒಟ್ಟು ರೂ. 38,900 ಖರ್ಚು ಬರುತ್ತದೆ. ಇದಕ್ಕಾಗಿ ಮಾಡಿದ ಖರ್ಚು ಸಿಗಬೇಕೆಂದರೆ ಉಳ್ಳಾಗಡ್ಡಿಗೆ ಬೆಂಬಲ ಬೆಲೆಯೆಂದು ಕ್ವಿಂಟಲ್‌ಗೆ ರೂ. 1500 ಸಿಗಬೇಕು~ ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry