ಕುಸಿದ ಎನ್‌ಇಎಸ್‌ ‘ಆಧಾರ’: ಕಂಗಾಲು

7

ಕುಸಿದ ಎನ್‌ಇಎಸ್‌ ‘ಆಧಾರ’: ಕಂಗಾಲು

Published:
Updated:

ಶಿವಮೊಗ್ಗ: ಸತತ 37 ದಿವಸ ಜೀವನ್ಮರಣದ ಹೋರಾಟದಲ್ಲಿ ಕೊನೆಗೂ ಸಾವು ಮೇಲುಗೈ ಸಾಧಿಸಿದೆ. ‘ಎಸ್‌ವಿಟಿ’ ಬದುಕುವುದು ಕಷ್ಟ ಎಂದು  ಆಸ್ಪತ್ರೆಯಲ್ಲಿ ಅವರನ್ನು ನೋಡಿದವರೆಲ್ಲರೂ ಹೇಳಿದರೂ, ಇಲ್ಲ ‘ಎಸ್‌ವಿಟಿ’ ಮತ್ತೆ ಚೇತರಿಸಿ ಕೊಳ್ಳುತ್ತಾರೆ ಎಂಬ ಸಣ್ಣ ನಂಬಿಕೆ ಎಲ್ಲರಲ್ಲೂ ಇತ್ತು. ಆದರೆ, ಈ ಎಲ್ಲಾ ನಂಬಿಕೆಗಳನ್ನು ಅವರ ಸಾವು ಬುಡಮೇಲು ಮಾಡಿದೆ.‘ಎಸ್‌ವಿಟಿ’ ಎಂದೇ ಎಲ್ಲರಿಗೂ ಪರಿಚಿತರಾಗಿದ್ದ ಪ್ರತಿಷ್ಠಿತ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್‌.ವಿ.ತಿಮ್ಮಯ್ಯ (66) ಬೆಂಗಳೂರಿನ  ನಿಮ್ಹಾನ್ಸ್‌ನಲ್ಲಿ ಮಂಗಳವಾರ ಮಧ್ಯಾಹ್ನ ಬಾರದ ಲೋಕಕ್ಕೆ ಪಯಣಿಸಿದ್ದಾರೆ.ಇದೇ ನವೆಂಬರ್‌ 24ರಂದು ತಮಿಳುನಾಡಿನ ಕರೂರು ಸಮೀಪ ಕಾರು ಅಪಘಾತಕ್ಕೆ ಈಡಾಗಿ, ಎಸ್‌.ವಿ.ತಿಮ್ಮಯ್ಯ ಅವರ ಬೆನ್ನುಮೂಳೆಗೆ ಬಲವಾಗಿ ಪೆಟ್ಟಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಪ್ರತಿನಿತ್ಯ ಅವರ ಆರೋಗ್ಯ ಏರು–ಪೇರು ಆಗುತ್ತಿತ್ತು.ಬಿ.ಪಿ.ಷುಗರ್‌ ಯಾವುದೂ ನಿಯಂತ್ರಣಕ್ಕೆ ಬಾರದೆ, ಚಿಕಿತ್ಸೆಗೂ ಸ್ಪಂದಿಸದೆ ಅವರು ಹೊಸ ವರ್ಷಕ್ಕೆ ಕಾಲಿಡುವ ಮೊದಲು ಇಹಲೋಕ ತ್ಯಜಿಸಿದ್ದಾರೆ.  ಸುಧಾರಣೆ ಬಯಸುವ ಆಡಳಿತಗಾರ,  ಉತ್ತಮ ಓದುಗ, ಆಕರ್ಷಣೆಯ ಮಾತುಗಾರ, ಎಲ್ಲದಕ್ಕೂ ಮಿಗಿಲಾಗಿ ಸಹೃದಯವಂತರಾಗಿದ್ದ ಎಸ್‌.ವಿ.ತಿಮ್ಮಯ್ಯ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯನ್ನು ಕಟ್ಟಿಬೆಳೆಸಿದ ಪರಿ ಮೆಚ್ಚುಗೆಗೆ ಅರ್ಹವಾದದ್ದು. ನಾಗಪ್ಪಶೆಟ್ಟಿ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರು ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಹುಟ್ಟಿಗೆ ಕಾರಣರಾಗಿದ್ದರು. ಆದರೆ, ಅದನ್ನು ಬಲವಾಗಿ ನೆಲೆಗೊಳಿಸುವಲ್ಲಿ ಎಸ್‌ವಿಟಿ ಶ್ರಮ ಅಷ್ಟಿಷ್ಟಲ್ಲ.ಜೆಎನ್‌ಎನ್‌ಸಿ ಎಂಜಿನಿಯರ್‌ ಕಾಲೇಜನ್ನು ದೇಶದ ಭೂಪಟದಲ್ಲಿ ಗುರುತಿಸುವಂತೆ ಮಾಡಿದ್ದು ಕಡಿಮೆ ಸಾಧನೆಯಲ್ಲ; ಅಲ್ಲಿ ಸುಂದರ ಪರಿಸರ, ಉತ್ತಮ ಶೈಕ್ಷಣಿಕ ವಾತಾವರಣ ರೂಪಿಸಿ, ಪ್ರತಿ ವಿದ್ಯಾರ್ಥಿಯೂ ಅಲ್ಲಿ ವಿದ್ಯಾಭ್ಯಾಸ ಮಾಡಬೇಕೆಂಬ ಕನಸು ಕಾಣುವಂತೆ ಮಾಡಿದ್ದು ತಿಮ್ಮಯ್ಯ ಅವರ ಹೆಚ್ಚುಗಾರಿಕೆ.  ಶಿವಮೊಗ್ಗದಲ್ಲಿ ಯಾವುದೇ ಸಭೆ–ಸಮಾರಂಭ ಇರಲಿ; ಮೊದಲು ಸಂಪರ್ಕಿಸುತ್ತಿದ್ದದ್ದು ಎಸ್‌.ವಿ.ತಿಮ್ಮಯ್ಯ ಅವರನ್ನು; ಅವರ ಎನ್‌ಇಎಸ್ ಮೈದಾನ, ಕಮಲಾ ನೆಹರೂ ಕಾಲೇಜಿನ ಕುವೆಂಪು ಸಭಾಂಗಣ, ಎಟಿಎನ್‌ಸಿ ಕಾಲೇಜಿನ ಚಂದನ ಸಭಾಂಗಣ, ಎಂಜಿನಿಯರಿಂಗ್‌ ಕಾಲೇಜಿನ ಎಂಸಿಎ/ ಎಂಬಿಎ ಸಭಾಂಗಣ, ಇದೇ ಕಾಲೇಜಿನ ಕ್ರೀಡಾಂಗಣಕ್ಕಾಗಿ ಎಲ್ಲರೂ ಇವರನ್ನು ಆಶ್ರಯಿಸುತ್ತಿದ್ದರು. ಹಣದ ಮುಖ ನೋಡದೆ ಸಾರ್ವಜನಿಕರಿಗೆ ಉಪಯೋಗುವಂತಹ ಯಾವುದೇ ಕಾರ್ಯಕ್ರಮದಲ್ಲಿ ತಮ್ಮನ್ನು, ತಮ್ಮ ಸಂಸ್ಥೆಯನ್ನು ತೊಡಗಿಸಿಕೊಳ್ಳುತ್ತಿದ್ದರು ತಿಮ್ಮಯ್ಯ.  ಅತ್ಯುತ್ತಮ ಓದುಗರಾಗಿದ್ದ ತಿಮ್ಮಯ್ಮ ಮನೆಯಲ್ಲಿ ಉತ್ತಮ ಪುಸ್ತಕ ಭಂಡಾರವನ್ನೇ ಹೊಂದಿದ್ದಾರೆ. ಅವರ ಪ್ರೀತಿ ಎಷ್ಟಿತ್ತೆಂದರೆ ಅವರ ಕಾಲೇಜಿನ ಶಿಕ್ಷಕರೊಂದಿಗೆ ಅವರು ಉತ್ತಮ ಪುಸ್ತಕಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಓದಿದ ಪುಸ್ತಕಗಳ ಕುರಿತಂತೆ ಅವರೊಂದಿಗೆ ಚರ್ಚೆ–ಸಂವಾದ ಕೂಡ ನಡೆಸುತ್ತಿದ್ದರು. ಹಾಲಿ ಕರ್ನಾಟಕ ಸಂಘದ ಅಧ್ಯಕ್ಷರಾಗಿಯೂ ಕೆಲಸ ಮಾಡುತ್ತಿದ್ದ ಎಸ್‌ವಿಟಿ, ಸಮಾಜದ ಬೇರೆ–ಬೇರೆ ವಲಯಗಳಲ್ಲಿ ಕೆಲಸ ಮಾಡುತ್ತಿದ್ದವರನ್ನೂ ಕರ್ನಾಟಕ ಸಂಘಕ್ಕೆ ಕರೆತಂದರು.ಜನರ ಬರದಿಂದ ಬಳಲುತ್ತಿದ್ದ ಕರ್ನಾಟಕ ಸಂಘಕ್ಕೆ ಜೀವಕಳೆ ತರುವ ಪ್ರಯತ್ನಯಲ್ಲಿದ್ದರು.

ಸಹಕಾರ ಕ್ಷೇತ್ರದಲ್ಲೂ ಕೆಲಸ ಮಾಡಿದ್ದ ಅವರು ಹಲವು ಪ್ರಶಸ್ತಿ–ಪುರಸ್ಕಾರಗಳಿಗೆ ಭಾಜನರಾಗಿದ್ದರು. ಜಿಲ್ಲೆಯ ನೂರಾರು ಸಂಘ–ಸಂಸ್ಥೆಗಳಿಗೆ ಅವರು ಅಧ್ಯಕ್ಷರಾಗಿ, ಪದಾಧಿಕಾರಿಯಾಗಿ, ಸದಸ್ಯರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.  ರಾಜಕೀಯದಲ್ಲಿ ಮೊದಲಿದ್ದ ಆಸಕ್ತಿ ಈಚೆಗೆ ಅವರಿಗೆ ಇದ್ದಂತಿರಲಿಲ್ಲ. ಈಚೆಗೆ ಜಿಲ್ಲಾಧಿಕಾರಿ ಕಚೇರಿ ಬಳಿ ಅವರು ಸಿಕ್ಕಾಗ, ಅವರ ಸ್ನೇಹಿತರೊಬ್ಬರು ಅವರ ಬಗ್ಗೆ ಹೇಳಿದ ಮಾತನ್ನು ಹಂಚಿಕೊಂಡಿದ್ದರು. ‘ನೂರಾರು ಸಂಸ್ಥೆ ನಡೆಸುವ ನೀನು ಒಬ್ಬ ಸಂಸತ್‌ ಸದಸ್ಯರಿಗಿಂತ ಹೆಚ್ಚು ಪ್ರಭಾವಿ; ನಿನಗೇಕೆ ರಾಜಕೀಯ ಎಂದಿದ್ದರಂತೆ’.ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯರಾಗಿ, ನಗರಸಭೆ ಸದಸ್ಯರಾಗಿ ಅವರು ಕೆಲಸ ಮಾಡಿದ್ದರು. ಇವೆಲ್ಲ ಆಗುವ ಮುಂಚೆ ಅವರು ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತ, ವಕೀಲರಾಗಿದ್ದರು. ಬಿ.ಎಸ್ಸಿಯನ್ನು ಸಹ್ಯಾದ್ರಿ ಕಾಲೇಜಿನಲ್ಲಿ, ಕಾನೂನು ಪದವಿಯನ್ನು ರಾಷ್ಟ್ರೀಯ ಕಾನೂನು ಕಾಲೇಜಿನಿಂದ ಪಡೆದಿದ್ದರು.ತಿಮ್ಮಯ್ಯ ಪ್ರಜಾಪ್ರಭುತ್ವವಾದಿ ಎನ್ನುವುದಕ್ಕೆ; ಅವರ ಯಾವುದೋ ಶಾಲೆಯ ರಸ್ತೆಗೆ ಜಾಗ ಕೊಡಲು ಕೆಲ ಜನ ಅಡ್ಡಿಪಡಿಸಿದರು. ತಿಮ್ಮಯ್ಯ ಮನಸ್ಸು ಮಾಡಿದ್ದರೆ ಆ ದನಿಗಳ ಸದ್ದು ಅಡಗಿಸಬಹುದಾಗಿತ್ತು. ಆದರೆ, ಆ ಭಿನ್ನ ದನಿಗಳಿಗೂ ತಿಮ್ಮಯ್ಯ ಮಹತ್ವ ನೀಡಿ, ಅವರಿಗೂ ಸ್ಪಂದಿಸಿ, ಸಮಸ್ಯೆಗಳನ್ನು ಪರಿಹರಿಸಿಕೊಂಡರು. ಇದೊಂದು ಉದಾಹರಣೆ ಮಾತ್ರ.ಕೆಲ ವರ್ಷಗಳ ಹಿಂದೆ ಅವರು ಪತ್ನಿ ಸೀತಾ ಅವರನ್ನು  ಕಳೆದುಕೊಂಡರು. ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯನ್ನು ಕೊನೆಯವರೆಗೂ ತಿಮ್ಮಯ್ಯ ಅವರೇ ನಿಂತು ಆರೈಕೆ ಮಾಡಿದ್ದರು. ಒಬ್ಬ ಮಗ–ಮಗಳು ತಿಮ್ಮಯ್ಯ ಅವರಿಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry