ಸೋಮವಾರ, ಮೇ 16, 2022
30 °C

ಕುಸಿದ ಕುಂಬಾರಿಕೆಗೆ ಪುನಶ್ಚೇತನ ನೀಡಿದ ಕಾರ್ಯಾಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಟ್ಟಿನಹೊಳೆ (ಬೈಂದೂರು): ಕುಂದಾಪುರ-ಬೈಂದೂರು ಹೆದ್ದಾರಿಯಲ್ಲಿ ಕಂಬದಕೋಣೆಯಿಂದ ಪೂರ್ವಕ್ಕೆ ಕೊಲ್ಲೂರಿನತ್ತ ಸಾಗುವ ಮಾರ್ಗದಲ್ಲಿ 5 ಕಿಲೋಮೀಟರು ದೂರದಲ್ಲಿ ಎದುರಾಗುವ ಕಾಲ್ತೋಡು ಗ್ರಾಮದ ಮೆಟ್ಟಿನಹೊಳೆ ಎನ್ನುವುದು ಕುಂಬಾರ ಜನಾಂಗದ ವಸತಿಪ್ರದೇಶ; ಸಾಂಪ್ರದಾಯಿಕ ಕುಂಬಾರವೃತ್ತಿ ನಿರತವಾಗಿದ್ದ ನೂರು ಕುಟುಂಬಗಳು ಇಲ್ಲಿ ನೆಲೆಸಿವೆ. ಅವರಿಂದಾಗಿಯೇ ಈ ಪ್ರದೇಶ ತಾಲ್ಲೂಕಿನಲ್ಲಿ ಮನೆಮಾತು.ಇಲ್ಲಿ ಪ್ರಾಕೃತಿಕವಾಗಿ ಲಭ್ಯವಿರುವ ಉತ್ಕೃಷ್ಟ ಗುಣದ ಮಣ್ಣು ಬಳಸಿ ಸಿದ್ಧಪಡಿಸುವ ವಿವಿಧ ರೂಪ, ಗಾತ್ರದ ಮಡಿಕೆ, ಕುಡಿಕೆ, ಪಾತ್ರೆ, ಪಗಡಿಗಳನ್ನು, ಪರಿಸರದ ಹತ್ತಾರು ಗ್ರಾಮವಾಸಿಗಳ ಬಳಿಗೆ, ಸಂತೆಮಾಳಗಳಿಗೆ ಹೊತ್ತು, ಮಾರಿ ತಮ್ಮ ಬದುಕಿನ ಮಡಿಕೆ ತುಂಬಿಸಿಕೊಳ್ಳುತ್ತಿದ್ದ ಇವರಿಗೆ ಕಳೆದ ಎರಡು ದಶಕಗಳು ಕುಸಿತದ ಕಾಲ. ಎಲ್ಲೆಲ್ಲೂ ಹರಿದ ಆಧುನಿಕತೆಯ ಪ್ರವಾಹದಲ್ಲಿ ಕೊಚ್ಚಿಹೋದ ಹಳ್ಳಿಯ ಹತ್ತಾರು ಕಲೆ. ಕೌಶಲಗಳಲ್ಲಿ ಸಾಂಪ್ರದಾಯಿಕ ಕುಂಭಕಲೆಯೂ ಒಂದು. ಲೋಹದ ಪಾತ್ರೆಗಳ ದಾಳಿಯ ಮುಂದೆ ಇದು ಸೋಲೊಪ್ಪಿಕೊಂಡು, ಶರಣಾಯಿತು.ಮೆಟ್ಟಿನಹೊಳೆಯ ಕುಲಾಲರೂ ಪರಂಪರೆಯ ಕಸುಬಿಗೆ ವಿದಾಯ ಹೇಳಿ ಅನ್ಯ ವೃತ್ತಿಗೆ ವಲಸೆಹೋದರು. ಹಲವರು ಕೃಷಿಕೂಲಿಯತ್ತ ಹೊರಳಿದರೆ, ಯುವಕರು ಪಟ್ಟಣದ ಹೋಟೆಲ್‌ಗಳತ್ತ ಹೆಜ್ಜೆಹಾಕಿದರು. ಈಗ ಅಲ್ಲಿ ಕುಂಬಾರಿಕೆಯನ್ನು ಅವಲಂಬಿಸಿರುವ ಕುಟುಂಬಗಳು ವಿರಳವಾಗಿವೆ. ಇಂತಹ ಒಂದು ಸಂದಿಗ್ಧ ಕಾಲಘಟ್ಟದಲ್ಲಿ ಇಲ್ಲಿನ ನಾರಾಯಣ ಕುಲಾಲರ ಮನೆಯಲ್ಲಿ ಎರಡುವಾರ ಕಾಲ ನಡೆದ ಕುಂಭಕಲೆಯ ವಿನ್ಯಾಸ ಮತ್ತು ತಾಂತ್ರಿಕ ಅಭಿವೃದ್ಧಿ ಕಾರ್ಯಾಗಾರ ಕುಸಿದ ಕುಂಬಾರಿಕೆಗೆ ಮರುಹುಟ್ಟು ನೀಡುವ ಆಶಾವಾದ ಹುಟ್ಟಿಸಿದೆ.  ಈ ಕಾರ್ಯಾಗಾರ ಏರ್ಪಡಿಸಿರುವುದು ಕೇಂದ್ರ ಸರ್ಕಾರದ ಜವಳಿ ಮಂತ್ರಾಲಯ ಅಧೀನದ ಬೆಂಗಳೂರಿನ ಪ್ರಾದೇಶಿಕ ವಿನ್ಯಾಸ ಮತ್ತು ತಾಂತ್ರಿಕ ಅಭಿವೃದ್ಧಿ ಕೇಂದ್ರ. ಇದರಲ್ಲಿ ಯುವಕ, ಯುವತಿಯರೂ ಸೇರಿ ಅಯ್ದ 30 ಮಂದಿ ಸ್ಥಳೀಯ ವೃತ್ತಿನಿರತರು ಭಾಗಿಗಳಾದರು. ಈ ಅವಧಿಯಲ್ಲಿ ಅವರ ದಿನದ ಕೆಲಸದ ನಷ್ಟ ಭರ್ತಿಗಾಗಿ ತಲಾ 150 ರೂಪಾಯಿ ಭತ್ಯೆ ಬೇರೆ ನೀಡಲಾಯಿತು. ಅವರ ಜನ್ಮಜಾತ ಕೌಶಲದ ಮೌಲ್ಯವರ್ಧಿಸಿ, ಸರಳ ತಾಂತ್ರಿಕ ಅರಿವು ನೀಡಿ, ಸೃಜಿಸುವ ವಸ್ತುಗಳ ವೈವಿಧ್ಯತೆ ಹಿಗ್ಗಿಸಿ, ಅವುಗಳಿಗೆ ಒಂದಿಷ್ಟು ಕಲಾತ್ಮಕತೆಯ ರೂಪ ತೊಡಿಸಿ ಆಧುನಿಕ ಕಾಲ ಮತ್ತು ಅಭಿರುಚಿಗೊಪ್ಪುವ ವಿವಿಧಗೃಹೋಪಯೋಗಿ ಮತ್ತು ಅಲಂಕಾರಿಕ ವಸ್ತುಗಳನ್ನು ಸಿದ್ಧಪಡಿಸುವ ಕಲೆಯನ್ನು ಪ್ರಾಯೋಗಿಕವಾಗಿ ಕಲಿಸುವುದು ಈ ತರಬೇತಿಯ ಉದ್ದೇಶವಾಗಿತ್ತು.   ಕಾರ್ಯಾಗಾರದಲ್ಲಿ ಮಣ್ಣು ಹದಗೊಳಿಸುವಿಕೆ, ಮಿಶ್ರಣ, ಅಗತ್ಯವಿರುವೆಡೆ ಅಚ್ಚು ತಯಾರಿ, ಕಲೆಯ ತಾಂತ್ರಿಕತೆ, ವಿವಿಧ ವಸ್ತುವಿನ್ಯಾಸ, ಬಟ್ಟಿ ಆವಿಗೆ, ಸುಡುವ ತಂತ್ರ ಮುಂತಾದ ವಿಷಯಗಳ ಕುರಿತು ತರಬೇತಿ ನೀಡಿದವರು ಕೇಂದ್ರದ ಪ್ರಧಾನ ವಿನ್ಯಾಸಗಾರ ವಿಠಲ ಭಂಡಾರಿ, ಮಡಿಕೆ ಮತ್ತು ಸಿರಾಮಿಕ್ ವಿಭಾಗದ ತಾಂತ್ರಿಕ ಮೇಲ್ವಿಚಾರಕ ಉಲ್ಲಾಸ್‌ಕರ್ ಡೇ, ಸಿರಾಮಿಕ್ ಸಹಾಯಕ ಎ. ಜಯರಾಮನ್ ಮತ್ತು ಕುಂಭಕಲಾವಿದ ಶಿವಲಿಂಗಯ್ಯ.ತರಬೇತಿ ಅವಧಿಯಲ್ಲಿ ತೂಗುದೀಪ, ಪೆನ್ ಹೋಲ್ಡರ್, ಟ್ರೇ, ಧೂಪ್‌ಧಾನಿ, ವಿವಿಧ ಗಾತ್ರ ಮತ್ತು ರೂಪದ ಬೌಲ್, ಗೋಡೆ ಮುಖವಾಡ, ಪೇಪರ್ ವೆಯ್ಟಿ, ಗಾರ್ಡನ್ ಲೈಟ್ ಶೇಡ್, ಮೊಬೈಲ್ ಸ್ಟ್ಯಾಂಡ್, ಫೋಟೋ ಫ್ರೇಮ್ ಮತ್ತು ವೈವಿಧ್ಯಮಯ ಆಭರಣ ತಯಾರಿಯ ವಿಸ್ತೃತ ಪ್ರಾಯೋಗಿಕ ಅನುಭವವನ್ನು ಶಿಕ್ಷಣಾರ್ಥಿಗಳು ತಮ್ಮದಾಗಿಸಿಕೊಂಡು, ಅವುಗಳನ್ನೆಲ್ಲ ಸ್ವತಂತ್ರವಾಗಿ ಸಿದ್ಧಪಡಿಸುವ ಪರಿಣತಿ ಗಳಿಸಿದರು. ಮಣ್ಣಿನ ಇಂತಹ ವಸ್ತುಗಳಿಗೆ ಈಗ ನಗರಗಳಲ್ಲಿ ಉತ್ತಮ ಬೇಡಿಕೆ ಇದೆ. ಮಂಗಳೂರಿನ ಜೆಪ್ಪು ಮಾರುಕಟ್ಟೆಯಲ್ಲಿ, ಪಿಲಿಕುಳದಲ್ಲಿ, ಕನ್ಯಾನದ ನಮ್ಮಭೂಮಿಯಲ್ಲಿ, ಮೈಸೂರು ಮತ್ತು ಧಾರವಾಡಗಳಲ್ಲಿ ಈ ವಸ್ತುಗಳನ್ನು ಮಾರಲಾಗುತ್ತಿದೆ. ವಿವಿಧ ಪ್ರದರ್ಶನಗಳಲ್ಲಿ ಜನ ಇವುಗಳನ್ನು ಖರೀದಿಸುತ್ತಾರೆ.ಬದಲಾವಣೆಗೆ ತಗಲುವ ಮೂಲವಸ್ತು ಮತ್ತು ಶ್ರಮದಲ್ಲಿ ಅಷ್ಟೇನೂ ಅಂತರವಿರದಿದ್ದರೂ ಕುಂಬಾರರ ಸಾಂಪ್ರದಾಯಿಕ ಉತ್ಪನ್ನಗಳ ಬೆಲೆಗಿಂತ ಹತ್ತುಪಟ್ಟು ಅಧಿಕ ಬೆಲೆ ಇವು ಗಳಿಸುತ್ತವೆ. ಈಗ ಹಲವು ಸರ್ಕಾರೇತರ ಸಂಘಟನೆಗಳು ಇದನ್ನು ಬೆಂಬಲಿಸುವ ಮೂಲಕ ಅಕ್ಷರಶ: ಮಣ್ಣಿನ ಮಕ್ಕಳೆನಿಸಿದ ಕುಂಬಾರರಬದುಕಿಗೆ ಆಸರೆಯಾಗುತ್ತಿದ್ದಾರೆ. ಈ ತರಬೇತಿಯ ಫಲವಾಗಿ ತಮ್ಮ ಮೂಲನೆಲೆಯಲ್ಲೇ ಇದ್ದುಕೊಂಡು ಪರಂಪರೆಯ ವೃತ್ತಿ ಅನುಸರಿಸುತ್ತಲೇ ಬದಲಿ ವಸ್ತುಗಳ ತಯಾರಿಯನ್ನೂ ನಡೆಸುತ್ತ ಹೊಸಬದುಕು ರೂಪಿಸಿಕೊಳ್ಳುವುದು ಸಾಧ್ಯ ಎನ್ನುತ್ತಾರೆ ವಿಠಲ ಭಂಡಾರಿ. ಈ ಕಸುಬು ಈಗ ತುಂಬ ಆಕರ್ಷಕ ಮತ್ತು ಲಾಭದಾಯಕ ಎನ್ನಿಸಿರುವುದರಿಂದ ನಾವು ಖಂಡಿತ ಇದನ್ನು ತ್ಯಜಿಸುವುದಿಲ್ಲ ಎನ್ನುವುದು ತರಬೇತಿಯಲ್ಲಿ ಪಾಲ್ಗೊಂಡ ಯುವಕರ ಖಚಿತ ಅಭಿಮತ.ಈ ತರಬೇತಿಯಿಂದ ಮೆಟ್ಟಿನಹೊಳೆ ಹೊಸಕಳೆ ಪಡೆಯಲಿದೆ. ಅದಕ್ಕೆ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ಪ್ರೋತ್ಸಾಹ ಬೇಕು, ಮುಖ್ಯವಾಗಿ ಒಂದು ಕಾರ್ಯಾಗಾರ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯೆ ಚಂದು ಕುಲಾಲ್ ಮತ್ತು ತರಬೇತಿಯಲ್ಲಿ ಭಾಗವಹಿಸಿದ ಮೂಕಾಂಬಿಕಾ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.