ಮಂಗಳವಾರ, ಅಕ್ಟೋಬರ್ 15, 2019
28 °C

ಕುಸಿದ ಶಾಲಾ ಕಟ್ಟಡ: ಜಗುಲಿ ಮೇಲೆ ಪಾಠ!

Published:
Updated:

ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್‌ಎಸ್‌ನಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಕುಸಿದಿದ್ದು, ಒಂದು ತಿಂಗಳಿಂದ ಶಿಕ್ಷಕರು ಜಗುಲಿ ಮೇಲೆ ಪಾಠ ಮಾಡುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ಕೆಆರ್‌ಎಸ್‌ನ ಓಕ್ಯೂ (ಅಫಿಷಿಯಲ್ ಕ್ವಾರ್ಟ್ರರ್ಸ್) ಶಾಲೆಯ ಕಟ್ಟಡದ ಒಂದು ಪಾರ್ಶ್ವ ಕುಸಿದಿದೆ. ಮತ್ತೊಂದು ಪಾರ್ಶ್ವ ಕುಸಿಯುವ ಹಂತ ದಲ್ಲಿದೆ. ಶಾಲಾ ಕಟ್ಟಡದ ಒಳಗೆ ಮಕ್ಕಳನ್ನು ಕೂರಿಸಿ ಪಾಠ ಮಾಡಲಾಗದೇ ಪಡಸಾಲೆಯ ಮೇಲೆ ಕುಳ್ಳಿರಿಸಿ ಬೋಧಿಸಲಾಗುತ್ತಿದೆ.ಕೆಆರ್‌ಎಸ್ ಓಕ್ಯೂ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಿಂದ 5ನೇ ತರಗತಿ ವರೆಗೆ 180 ಮಕ್ಕಳು ಇದ್ದು, ಈ ಪೈಕಿ ಎರಡು ತರಗತಿಗಳು ಶಾಲೆಯ ಹೊರಗೆ ನಡೆಯುತ್ತಿವೆ. ವಿದ್ಯಾರ್ಥಿಗಳ ಸಂಖ್ಯೆಗೆ ಅಗತ್ಯ ಇರುವಷ್ಟು ಕಟ್ಟಡ ಇಲ್ಲದೇ ಇರುವುದರಿಂದ ಮಕ್ಕಳನ್ನು ಹೊರಗೆ ಕೂರಿಸಿ ಪಾಠ ಮಾಡುತ್ತಿದ್ದೇವೆ ಎಂದು ಶಿಕ್ಷಕರು ಹೇಳಿದ್ದಾರೆ.ಈ ಶಾಲೆ ನಡೆಯುತ್ತಿರುವ ಕಟ್ಟಡ 50 ವರ್ಷಕ್ಕೂ ಹಳೆಯದಾಗಿದ್ದು, ಶಿಥಿಲ ಗೊಂಡಿದೆ. ಇದನ್ನು ನೆಲಸಮ ಮಾಡಿ ಹೊಸ ಕಟ್ಟಡ ಕಟ್ಟಲು ನೀರಾವರಿ ನಿಗಮದ ಅಧಿಕಾರಿಗಳು ಸಹಕರಿಸುತ್ತಿಲ್ಲ ಎಂದು ಶಾಲೆಯ ಶಿಕ್ಷಕ ಚಂದ್ರು ಅಸಮಾಧಾನ ವ್ಯಕ್ತಪಡಿಸಿದರು.ನಿಗಮದ ಮುಖ್ಯ ಎಂಜಿನಿಯರ್, ಕಾರ್ಯ ಪಾಲಕ ಎಂಜಿನಿಯರ್, ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ನೀಡಿದ್ದೇವೆ. ಆದರೂ ಪ್ರಯೋಜನ ಆಗಿಲ್ಲ. ಎರಡು ಕೊಠಡಿಗಳ ನಿರ್ಮಾಣಕ್ಕೆ ಸರ್ವ ಶಿಕ್ಷಾ ಅಭಿಯಾನ ಯೋಜನೆಯಡಿ ರೂ.7 ಲಕ್ಷ ಹಣ ಬಿಡುಗಡೆ ಆಗಿದೆ. ಆದರೆ, ಜಾಗದ ಕೊರತೆಯಿಂದ ಕಟ್ಟಡ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಹಳೆಯ ಕಟ್ಟಡವನ್ನು ಸಂಪೂರ್ಣ ಕೆಡವಿ ಹೊಸ ಕಟ್ಟಡ ಕಟ್ಟಲು ಸಹಕರಿಸಬೇಕು ಎಂದು ಮನವಿ ಮಾಡಿದರು.ಕೆಆರ್‌ಎಸ್ ಓಕ್ಯೂ ಶಾಲೆಯ ಕಟ್ಟಡ ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ್ದು, ಹಳೆಯ ಕಟ್ಟಡ ನೆಲಸಮ ಮಾಡಲು ಅಧಿಕಾರಿಗಳು ಅನುಮತಿ ನೀಡಬೇಕು. ಶಿಕ್ಷಣ ಇಲಾಖೆಯಿಂದ ಬಂದಿರುವ ರೂ.7 ಲಕ್ಷ ಹಣವನ್ನು ಸದ್ಬಳಕೆ ಮಾಡಿಕೊಂಡು ಶಾಲಾ ಕೊಠಡಿ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಜಗತಿಯ ಮೇಲೆ ಪಾಠ ಮಾಡುವ ಪ್ರಕ್ರಿಯೆ ನಿಲ್ಲಬೇಕು ಎಂದು ಕೆಆರ್‌ಎಸ್ ಗ್ರಾ.ಪಂ. ಸದಸ್ಯರಾದ ಎಂ.ಬಿ.ಕುಮಾರ್, ವಿಜಯಕುಮಾರ್, ಸಿ. ಮಂಜುನಾಥ್ ಇತರರು ಹೇಳಿದ್ದಾರೆ.

Post Comments (+)