ಬುಧವಾರ, ನವೆಂಬರ್ 13, 2019
22 °C
ಬಳಸು ದಾರಿ ಬಹುದೂರ; ಬಸ್ ನಿಲ್ದಾಣಕ್ಕೆ ಹೋಗಲು ತೊಂದರೆ

ಕುಸಿದ ಸೇತುವೆಗೆ ಸಿಗದ ಪುನರ್ಜನ್ಮ

Published:
Updated:

ಸಂತೇಬೆನ್ನೂರು: ಈಗಂತೂ ಶಾಲಾ-ಕಾಲೇಜುಗಳಿಗೆ ರಜೆ. ಆದರೆ, ಬಸ್ ನಿಲ್ದಾಣಕ್ಕೆ ಹೋಗಬೇಕೆಂದರೆ ಸೇತುವೆ ದಾಟಲೇಬೇಕು. ಹಾಗಾಗಿ, ಕಳೆದ ತಿಂಗಳು ಕುಸಿದ ಸೇತುವೆಗೆ ದುರಸ್ತಿಯೆಂಬ ಪುನರ್ಜನ್ಮ ಸಿಗದೇ ಇರುವುದರಿಂದ ನಾಗರಿಕರು ಸೇತುವೆ ದಾಟುವ ಸಂಚಾರ  ನಿತ್ಯ ನರಕದಂತಾಗಿದೆ. ಈ ನರಕ ನಡೆಯುತ್ತಿರುವುದು ಸಂತೇಬೆನ್ನೂರು ಸಮೀಪದ ಗೊಲ್ಲರಹಳ್ಳಿ ಬಳಿ ಭದ್ರಾನಾಲೆಯ ಸೇತುವೆ ಬಳಿ.ಗ್ರಾಮದಿಂದ ಬಸ್‌ನಿಲ್ದಾಣಕ್ಕೆ ಬರಲು ಒಂದೂವರೆ ಕಿ.ಮೀ. ನಡೆಯಬೇಕು. ಗ್ರಾಮದ ಪಕ್ಕದಲ್ಲೇ ಹಾದು ಹೋಗುವ ಭದ್ರಾನಲೆಯ ಸೇತುವೆ ದಾಟಲೇಬೇಕು. ಖರೀದಿ, ಶಾಲಾ-ಕಾಲೇಜುಗಳಿಗೆ   ಸಂಚಾರ ಅನಿವಾರ್ಯ. ಸೇತುವೆ ಕುಸಿತದಿಂದ ಬಳಸು ದಾರಿ ಬಹುದೂರ.ಅಡಿಕೆ ಮರಗಳನ್ನು ಜೋಡಿಸಿ ಮುರಿದ್ದು ಬಿದ್ದ ಸೇತುವೆಯ ಎರಡು ದಡಕ್ಕೆ ಸಂಪರ್ಕ ಕಲ್ಪಿಸಿದ್ದಾರೆ. ಎರಡೂ ಬದಿಯ ಸೇತುವೆ ಮಧ್ಯೆ ಹಗ್ಗ ಕಟ್ಟಲಾಗಿದೆ. ಸಮತೋಲನ ಕಾಯ್ದುಕೊಳ್ಳಲು ಹಗ್ಗ ಹಿಡಿದು ನಡೆಯುತ್ತಾರೆ ಎನ್ನುತ್ತಾರೆ ಶಿಕ್ಷಕ ಲೋಕೇಶ್.ಇದೇ ತಿಂಗಳ ಆರಂಭದಲ್ಲಿ ಒಂದು ವಾರ ಭದ್ರಾ ನಾಲೆಯ ನೀರು ನಿಲ್ಲಿಸಲಾಗಿತ್ತು. ಕನಿಷ್ಠ ಸೇತುವೆಯ ಅವಶೇಷಗಳನ್ನು ತೆರವುಗೊಳಿಸಿ ತಾತ್ಕಾಲಿಕವಾಗಿ ಪರ‌್ಯಾಯ ವ್ಯವಸ್ಥೆ ನಿರ್ಮಿಸಲು ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಉಕ್ಕಿನ ತಾತ್ಕಾಲಿಕ ಸೇತುವೆ ನಿರ್ಮಿಸಲು ಮುಂದಾಗಬೇಕು. ಈಗ ಪುನಃ ನಾಲೆಯಲ್ಲಿ ನೀರು ಬಿಟ್ಟ ಕಾರಣ ಸೇತುವೆ ಮೇಲೆ ಸಂಚರಿಸಲು ಮಹಿಳೆಯರಿಗೆ ತೀವ್ರ ತೊಂದರೆಯಾಗಿದೆ. ಸೇತುವೆ ದಾಟಿಸಲು ಇತರರ ಸಹಾಯಕ್ಕೆ ಮೊರೆ ಹೋಗಬೇಕು. ಸಮತೋಲನ ತಪ್ಪಿದಲ್ಲಿ ನೀರಿನಲ್ಲಿ ಕೊಚ್ಚಿ ಹೋಗುವ ಸಾಧ್ಯತೆಗಳಿವೆ.ದನ-ಕರುಗಳನ್ನು ಹೊಲ-ಗದ್ದೆಗಳಿಗೆ ತಲುಪಿಸಲು 5 ಕಿ.ಮೀ. ಬಳಸಿ ಬರಬೇಕು. ಸೇತುವೆ ಕುಸಿದ ನಂತರ ಪ್ರವೇಶಿಸದಂತೆ ಎಚ್ಚರಿಕೆಯ ತಡೆಗೋಡೆ ನಿರ್ಮಿಸಲಾಗಿಲ್ಲ. ಗ್ರಾಮದ ಕೆಲ ಯುವಕರು ಮರದ ದೊಡ್ಡ ಬೊಡ್ಡೆಯನ್ನು ಅಡ್ಡಲಾಗಿ ಇರಿಸಿ ಪ್ರವೇಶ ನಿರ್ಬಂಧಿಸಿದ್ದಾರೆ ಎನ್ನುತ್ತಾರೆ ಸ್ವಾಮಿ, ಪ್ರಕಾಶ್.

 

ಪ್ರತಿಕ್ರಿಯಿಸಿ (+)