ಮಂಗಳವಾರ, ಮಾರ್ಚ್ 2, 2021
23 °C

ಕುಸಿಯುವ ಭೀತಿಯಲ್ಲಿ ಅಂಗನವಾಡಿ ಕಟ್ಟಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಸಿಯುವ ಭೀತಿಯಲ್ಲಿ ಅಂಗನವಾಡಿ ಕಟ್ಟಡ

ಮೂಡಿಗೆರೆ: ಜನ ಪ್ರತಿನಿಧಿಗಳ ನಿರ್ಲಕ್ಷ್ಯಕೊಳಗಾಗಿ ಪಟ್ಟಣದ ಹೃದಯಭಾಗದಲ್ಲಿರುವ ಅಂಗನವಾಡಿ ಕೇಂದ್ರವೊಂದು ದುರಸ್ತಿಗೊಳ್ಳದೇ ಕುಸಿಯುವ ಹಂತದಲ್ಲಿದ್ದು, ಪ್ರಾಣಭೀತಿಯಲ್ಲಿ ಹಲವಾರು ಕಂದಮ್ಮಗಳು ತಮ್ಮ ಪೂರ್ವಪ್ರಾಥಮಿಕ ಶಿಕ್ಷಣವನ್ನು ಪಡೆಯಬೇಕಾದ ದುಃಸ್ಥಿತಿ ಬಂದೊದಗಿದೆ.ಮಿನಿ ವಿಧಾನಸೌಧದಿಂದ ಕೂಗಳತೆ ದೂರದಲ್ಲಿರುವ ಉರ್ದುಶಾಲೆಯ ಹಿಂಭಾಗದಲ್ಲಿರುವ ಅಂಗನವಾಡಿ ಕೇಂದ್ರವೇ ದುಃಸ್ಥಿತಿಯಲ್ಲಿರುವ ಕಟ್ಟಡ. ದೊಡ್ಡಿಬೀದಿ, ಜೆ.ಎಂ. ರಸ್ತೆ, ಬೇಲೂರು ರಸ್ತೆ, ನೀರಿನ ಟ್ಯಾಂಕ್ ರಸ್ತೆಯ ಮಕ್ಕಳಿಗೆಲ್ಲಾ ಈ ಅಂಗನವಾಡಿ ಕೇಂದ್ರವೇ ಮೊದಲ ಶಿಕ್ಷಣ ಕೇಂದ್ರವಾಗಿದ್ದು, 14 ವಿದ್ಯಾರ್ಥಿಗಳು ಪ್ರಸ್ತುತ ಸಾಲಿನಲ್ಲಿ ದಾಖಲಾಗಿದ್ದಾರೆ.ಈ ಕಟ್ಟಡ ಬಹಳ ಹಳೆಯ ಕಟ್ಟಡವಾಗಿದ್ದು, ಮೇಲ್ಛಾವಣಿ ಗೆದ್ದಲು ಹುಳುವಿಗೆ ಬಲಿಯಾಗಿ, ಮೇಲ್ಛಾವಣಿಗೆ ಬಳಸಿರುವ ಪಕಾಸುಗಳು ಕಳಚಿ ಬೀಳುವ ಸ್ಥಿತಿಯಲ್ಲಿವ್ದೆ. ತುಂಡಾದ ರೀಪುಗಳಿಂದಾಗಿ ಹೆಂಚುಗಳು ಉದುರುವ ಸ್ಥಿತಿಯಲ್ಲಿವೆ. ಮೇಲ್ಛಾವಣಿಯಲ್ಲಿ ಕೆಲವೆಡೆ ಕಳಚಿಬಿದ್ದ ಹೆಂಚುಗಳಿಂದಾಗಿ ಮಳೆಯ ನೀರು ಕೊಠಡಿಯೊಳಕ್ಕೆ ಬರುತ್ತಿದ್ದು, ಕೇಂದ್ರದಲ್ಲಿರುವ ಮುಗ್ಧ ಕಂದಮ್ಮಗಳು ಕೊಠಡಿಯ ಮೂಲೆಯಲ್ಲಿ ಕುಳಿತು ಪಾಠ ಕೇಳಬೇಕಾಗಿದೆ.ಈ ಅಂಗನವಾಡಿ ಕೇಂದ್ರಕ್ಕೆ ಹೊಂದಿಕೊಂಡಂತೆ ಸರ್ಕಾರಿ ಉರ್ದುಶಾಲೆ, ಶಾಸಕರ ಮಾದರಿ ಶಾಲೆ ಕಟ್ಟಡಗಳಿದ್ದು, ಕೇಂದ್ರದ ಮುಖ್ಯದ್ವಾರಗಳಿಗೆ ಭದ್ರತೆಯ ವ್ಯವಸ್ಥೆಯಿಲ್ಲದ್ದರಿಂದ ರಾತ್ರಿಯ ವೇಳೆ ಕಿಡಿಗೇಡಿಗಳು, ಶಾಲೆ, ಅಂಗನವಾಡಿ ಕಟ್ಟಡಗಳಿಗೆ ಹಾನಿಯುಂಟು ಮಾಡುತ್ತಿದ್ದು, ಇದಕ್ಕೆ ನಿದರ್ಶನ ಎಂಬಂತೆ ಅಂಗನವಾಡಿ ಕೇಂದ್ರದ ಚಾವಾಡಿಯಲ್ಲಿರುವ ಹೆಂಚುಗಳು ಕಿಡಿಗೇಡಿಗಳ ದಾಳಿಗೆ ಒಳಗಾಗಿವೆ.ವಿಧಾನಸಭಾ ಚುನಾವಣೆಗೂ ಪೂರ್ವದಲ್ಲಿ ಆಗಿನ ಶಾಸಕ ಎಂ.ಪಿ.ಕುಮಾರಸ್ವಾಮಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ದುರಸ್ತಿಗೊಳಿಸುವ ಭರವಸೆ ನೀಡಿದ್ದರು. ಆದರೆ ನಂತರ ಇದುವರೆಗೂ ದುರಸ್ತಿಗಾಗಿ ಅನೇಕ ಬಾರಿ ಅರ್ಜಿ ನೀಡಿದರೂ, ಯಾವುದೇ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎನ್ನುತ್ತಾರೆ ಉರ್ದು ಶಾಲೆಯ ಶಿಕ್ಷಕರೊಬ್ಬರು.ಸರ್ಕಾರಿ ಶಾಲೆಗಳಿಗೆ ಮಕ್ಕಳು ದಾಖಲಾಗುವುದೇ ಕಷ್ಟದ ಪರಿಸ್ಥಿತಿಯಿರುವಾಗ, ದಾಖಲಾದ ವಿದ್ಯಾರ್ಥಿಗಳಿಗೆ ಸಮರ್ಪಕ ಸೌಲಭ್ಯ ಒದಗಿಸದಿದ್ದರೆ, ಸರ್ಕಾರಿ ಶಾಲೆಗಳತ್ತ ಒಲವು ಹೇಗೆ ಮೂಡುತ್ತದೆ. ಜನಪ್ರತಿನಿಧಿಗಳು ಕೂಡಲೇ ಎಚ್ಚೆತ್ತು ದುಸ್ತಿತಿಯಲ್ಲಿರುವ ಅಂಗನವಾಡಿ ಕೇಂದ್ರವನ್ನು ದುರಸ್ತಿಗೊಳಿಸಬೇಕು ಎನ್ನುತ್ತಾರೆ ಪೋಷಕ ರಮೇಶ್.ಮಲೆನಾಡಿನಲ್ಲಿ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಅಂಗನವಾಡಿ ಕೇಂದ್ರದ ಚಾವಡಿ ಕೆರೆಯಂತಾಗಿದ್ದು, ಜೋರಾಗಿ ಗಾಳಿ ಬೀಸಿದರೆ, ಕೇಂದ್ರದಲ್ಲಿರುವ ಕಂದಮ್ಮಗಳು ಮೇಲ್ಛಾವಣಿಯನ್ನು ನೋಡುವಂತಹ ಪರಿಸ್ಥಿತಿಯಿದ್ದು, ಅನಾಹುತ ನಡೆಯುವುದಕ್ಕೂ ಮುನ್ನ ದುರಸ್ತಿ ನಡೆಸಬೇಕು ಎಂಬುದು ಪೋಷಕರ ಒತ್ತಾಯವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.