ಕುಸುಗಲ್ ಹೆದ್ದಾರಿಯಲ್ಲಿ ತೇಪೆಗಳ ಸರಮಾಲೆ

7

ಕುಸುಗಲ್ ಹೆದ್ದಾರಿಯಲ್ಲಿ ತೇಪೆಗಳ ಸರಮಾಲೆ

Published:
Updated:

ಹುಬ್ಬಳ್ಳಿ: ಯುದ್ಧದಲ್ಲಿ ಗಾಯಗೊಂಡು ಶರಶಯ್ಯೆಯಲ್ಲಿ ಮಲಗಿದ ಭೀಷ್ಮನ ಮೈಮೇಲಿನ ಗಾಯಗಳಂತೆ ಕೇಶ್ವಾಪುರ-ಕುಸುಗಲ್ ಹೆದ್ದಾರಿಯ ಮೇಲಿನ ತೇಪೆಗಳು ಎದ್ದುಕಾಣುತ್ತವೆ. ಇಡೀ ರಸ್ತೆ ಪೂರ ಗುಂಡಿಗಳಿಂದ ತುಂಬಿದ್ದು, ಅದನ್ನು ಮುಚ್ಚುವ ಪ್ರಯತ್ನವೂ ನಡೆದಿದೆ. ಪಕ್ಕದಲ್ಲೇ ಇನ್ನಷ್ಟು ಗುಂಡಿಗಳು ಬಾಯಿ ತೆರೆಯತೊಡಗಿವೆ. ಅಲ್ಲಲ್ಲಿ ಕಲ್ಲುಗಳು ಮೇಲೆದ್ದಿದ್ದು, ವಾಹನದ ಚಕ್ರಗಳು ಜಾರುವ ಸಾಧ್ಯತೆ ಹೆಚ್ಚು.ರೈಲು ನಿಲ್ದಾಣದಿಂದ ಸ್ವಲ್ವ ಮುಂದುವರಿದು ಗದಗ ರಸ್ತೆಯ ಆರಂಭದಲ್ಲಿ ಎಡಕ್ಕೆ ತಿರುಗಿಕೊಂಡರೆ ಕುಸುಗಲ್ ರಸ್ತೆ ನಿಮ್ಮನ್ನು ಸ್ವಾಗತಿಸುತ್ತದೆ. ಮೊದಲಿಗೆ ಸಂಚಾರ ಸುಗಮ ಎನಿಸಿದರೂ ಮುಂದೆ ಸತ್ಯದ ಸಾಕ್ಷಾತ್ ದರ್ಶನವಾಗುತ್ತದೆ. ರೈಲು ನಿಲ್ದಾಣದಿಂದ ಕೇಶ್ವಾಪುರ ವೃತ್ತದವರೆಗಿನ ಅರ್ಧ ಕಿ.ಮೀ. ವ್ಯಾಪ್ತಿಯಲ್ಲೇ ಅನೇಕ ತಗ್ಗುಗಳು ಬಿದ್ದಿವೆ.ಕೇಶ್ವಾಪುರ ರಸ್ತೆಯಲ್ಲಿ ಸದಾ ಜನಸಂದಣಿ ಹೆಚ್ಚು. ಟ್ರಾಫಿಕ್ ದೀಪದ ಚಿಹ್ನೆ ಅರಿತು, ಕೊಂಚ ಕಾದು ರಸ್ತೆ ವಿಭಜಕದ ಎಡಬದಿಯಲ್ಲಿ ಮುನ್ನಡೆದು, ರಸ್ತೆಉಬ್ಬುಗಳ  ಸಾಲುಗಳ ಮೇಲೆ ವಾಹನವನ್ನು ಬಳುಕಿಸುತ್ತ ನಿಧಾನವಾಗಿ ಸಾಗಬೇಕು. ಮುಂದೆ ಇನ್ನಷ್ಟು ರಸ್ತೆಉಬ್ಬುಗಳು ಹೀಗೆಯೇ ಸ್ವಾಗತಿಸುತ್ತವೆ. ಅಲ್ಲಲ್ಲಿ ಬಾಯಿ ತೆರೆದು ಕುಳಿತ ಹೊಂಡಗಳು ಕಾಣುತ್ತವೆ. ಒಳರಸ್ತೆಗಳು ಮುಖ್ಯ ರಸ್ತೆಗಳಿಗೆ ಕೂಡಿಕೊಳ್ಳುವ ಜಾಗಗಳಲ್ಲಿ ರಸ್ತೆ ಹೆಚ್ಚು ಹದಗೆಟ್ಟಿದೆ.ಜಲ್ಲಿಕಲ್ಲುಗಳು ಎದ್ದಿದ್ದು, ವೇಗವಾಗಿ ಚಲಿಸುವ ಭಾರಿ ವಾಹನಗಳ ಹಿಂದೆ ಸಾಗಿದಲ್ಲಿ ಧೂಳಿನ ಜೊತೆಗೆ ಕಲ್ಲುಗಳೂ ನಿಮ್ಮ ಮುಖಕ್ಕೆ ಸಿಡಿಯಬಹುದು. ಆಕ್ಸ್‌ಫರ್ಡ್ ಕಾಲೇಜಿನವರೆಗೂ ಇದೇ ಪರಿಸ್ಥಿತಿ ಮುಂದುವರಿಯುತ್ತದೆ. ಈ ಭಾಗದ ಹಾದಿ ಎಷ್ಟೋ ವಾಸಿ.

ಅದೇ ಆಕ್ಸ್‌ಫರ್ಡ್ ಕಾಲೇಜು ಮುಂಭಾಗದಿಂದ ನಗರಕ್ಕೆ ಬರುವ ಹಾದಿ ಇನ್ನೂ ಕಠಿಣ. ಇಲ್ಲಿ ರಸ್ತೆ ಇನ್ನಷ್ಟು ಹದಗೆಟ್ಟಿದ್ದು, ಹೊಂಡಗಳ ಸಂಖ್ಯೆಯೂ ಸಾಕಷ್ಟಿದೆ. ಎಡಭಾಗದಲ್ಲಿ ಪಾದಚಾರಿ ರಸ್ತೆ ನಿರ್ಮಾಣ ಕಾಮಗಾರಿ ನಡೆದಿದ್ದು, ಮಣ್ಣು-ಕಲ್ಲುಗಳನ್ನು ಮುಖ್ಯರಸ್ತೆಗೆ ಸುರಿದಿರುವ ಕಾರಣ ಇನ್ನಷ್ಟು ಚಿಕ್ಕದಾಗಿದೆ.

 

ಒಂದು ಕಡೆ ನೀರಿನ ಪೈಪ್ ಒಡೆದು ನೀರು ರಸ್ತೆ ತುಂಬ ಹರಿದಾಡುತ್ತಿದೆ. ಇದರಿಂದ ದೊಡ್ಡ ಹೊಂಡ ನಿರ್ಮಾಣವಾಗಿದ್ದು, ಚಾಲಕರಿಗೆ ಚಾಲನೆಗೆ ಅಡ್ಡಿಯಾದರೆ ಪಾದಚಾರಿಗಳಿಗೆ ಆಗಾಗ್ಗೆ ಕೆಸರಿನ ಸ್ನಾನವೂ ಆಗುತ್ತಿದೆ.`ಈ ಹೆದ್ದಾರಿಯಲ್ಲಿ ಆಗಾಗ್ಗೆ ಗುಂಡಿಗಳು ಬೀಳುವುದು, ಅದಕ್ಕೆ  ಮಣ್ಣು ಸುರಿದು ಮುಚ್ಚುವುದು ಸಾಮಾನ್ಯ. ಆದರೆ ಹೀಗೆ ಮುಚ್ಚಿದ ಗುಂಡಿಗಳು ಎಷ್ಟು ದಿನ ಹಾಗೆಯೇ ಇರುತ್ತವೆ ಎನ್ನುವುದೇ ಪ್ರಶ್ನೆ. ಇದು ಮುಖ್ಯರಸ್ತೆಯ ಪಾಡಾಯಿತು. ಇನ್ನೂ ಒಳರಸ್ತೆಗಳ ಸ್ಥಿತಿ ಕೇಳುವಂತಿಲ್ಲ.

 

ಒಮ್ಮೆ ದುರಸ್ತಿ ಮಾಡಿ, ಬಳಿಕ ಅಲ್ಲೇ ಮತ್ತೊಂದು ಕಾಮಗಾರಿಗೆ ಗುಂಡಿ ಅಗೆದು ಹಾಳು ಮಾಡುವುದೂ ನಡೆಯುತ್ತಲೇ ಇರುತ್ತದೆ. ಒಟ್ಟಿಗೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಡಾಂಬರ್ ಹಾಕಿದರೆ ನಾವು ನೆಮ್ಮದಿಯಿಂದ ಓಡಾಡಿಕೊಂಡು ಇರಬಹುದು~ ಎನ್ನುತ್ತಾರೆ ಸ್ಥಳೀಯ ವ್ಯಾಪಾರಿ ಶ್ರೀನಿವಾಸ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry