ಕುಸುಮ ರೋಗದ ಯಾರೂ ತುಳಿಯದ ಹಾದಿ

7

ಕುಸುಮ ರೋಗದ ಯಾರೂ ತುಳಿಯದ ಹಾದಿ

Published:
Updated:
ಕುಸುಮ ರೋಗದ ಯಾರೂ ತುಳಿಯದ ಹಾದಿ

‘ತಲೆ ಸುಟ್ಟು ಹೋಗುವ ಬಿಸಿಲಿನಲ್ಲಿ ನನ್ನ ಮಾವ ನೀಲಕಂಠಪ್ಪ ದಾವಣಗೆರೆಯಲ್ಲಿನ ಚಿಗಟೆರಿ ಜನರಲ್ ಆಸ್ಪತ್ರೆ ಎದುರಿಗೆ ಇರುವ ವಿಶ್ವೇಶ್ವರಯ್ಯ ಪಾರ್ಕ್‌ನಲ್ಲಿ ಕುಳಿತು ತನ್ನ ತಲೆ ಕೂದಲನ್ನು ಕಿತ್ತುಕೊಳ್ಳುತ್ತಿದ್ದ. ತಲೆಯೊಳಗೆ ತೀವ್ರ ರಕ್ತಸ್ರಾವವಾಗಿ ಆತನಿಗೆ ಅಸಾಧ್ಯ ತಲೆ ನೋವು. ವೈದ್ಯರ ನಿರ್ಲಕ್ಷ್ಯದಿಂದ ಅದು ಇನ್ನೂ ಉಲ್ಬಣಗೊಂಡಿತ್ತು. ಆತ ಚೀರುತ್ತಿದ್ದ, ಅಳುತ್ತಿದ್ದ, ದೇವರನ್ನು ಶಪಿಸುತ್ತಿದ್ದ, ಸಾವನ್ನು ಬಯಸುತ್ತಿದ್ದ. ಕಿತ್ತು ತಿನ್ನುವ ನೋವು ಆತನನ್ನು ಪರೀಕ್ಷಿಸುತ್ತಿತ್ತು.ಏನೊಂದೂ ತಿಳಿಯದೆ ನಾನು ಅಸಹಾಯಕನಾಗಿ ಕಣ್ಣೀರಿಡುತ್ತಿದ್ದೆ. ‘ಸುರೇಶಾ ! ಹಿಮೊಫೀಲಿಯ ರೋಗ ಇದ್ದವ್ರ ಪಾಡಪ್ಪ ಇದು! ಇದಕ್ಕ ಔಷಧ ಇಲ್ಲ. ನೀ ಡಾಕ್ಟರ್ ಆಗು, ಏನಾರ ಮಾಡು, ಔಷಧ ಕಂಡಹಿಡಿ. ಇಲ್ಲಂದ್ರ ಹಿಮೊಫೀಲಿಯ ಇದ್ದವ್ರಗೆ ಸರಿಯಾದ ದಾರಿ ತೋರ್ಸು’ ನನ್ನ ಮಾವ ನನಗೆ ಗಟ್ಟಿಯಾಗಿ ಒತ್ತಾಯಿಸುತ್ತಿದ್ದ. ಮುಂದಿನ ನಾಲ್ಕು ದಿನ-ನಿಮಿಷದಿಂದ ನಿಮಿಷಕ್ಕೆ ಒದ್ದಾಡುತ್ತಾ, ಸಾಯುತ್ತಾ ಹೋದ. ನಾಲ್ಕನೇ ದಿನ ನೀಲಕಂಠಪ್ಪ ಹೆಣವಾಗಿಬಿಟ್ಟ. ‘ಅದು ನನ್ನ ಬದುಕನ್ನೇ ಬದಲಿಸಿದ ಎರಡು ಘಟನೆಗಳಲ್ಲಿ ಮೊದಲನೆಯದ್ದು. ನಾನು ಅಂದೇ ನಿರ್ಧರಿಸಿದೆ -ನಾನು ವೈದ್ಯನಾಗಬೇಕು, ಹಿಮೊಫೀಲಿಯ ರೋಗಿಗಳ ಬದುಕಿನಲ್ಲಿ ಆಶಾಕಿರಣವಾಗಬೇಕು’. ದಾವಣಗೆರೆ ಹಿಮೊಫೀಲಿಯ ಸೊಸೈಟಿ ಅಧ್ಯಕ್ಷ ಡಾ.ಸುರೇಶ ಹನಗವಾಡಿ ‘ಭೂಮಿಕಾ’ ಜತೆ ಮಾತನಾಡುತ್ತಾ ನೆನಪಿನ ಬುತ್ತಿ ಬಿಚ್ಚಿಟ್ಟಿದ್ದು ಹೀಗೆ.ಸ್ವತಃ ಹಿಮೊಫೀಲಿಯ ರೋಗಿಯಾಗಿರುವ ಸುರೇಶ ಹನಗವಾಡಿ ಹಿಮೊಫೀಲಿಯ ರೋಗಿಗಳ ಆಪ್ತಮಿತ್ರ. ಈ ಕ್ಷೇತ್ರದಲ್ಲಿ ಎರಡು ದಶಕಗಳ ಅವರ ಸಾಧನೆ ಸ್ಮರಣಾರ್ಹ. ಇಂದು ಹಿಮೊಫೀಲಿಯ ರೋಗದ ಚಿಕಿತ್ಸೆಗೆ ಈ ರಾಜ್ಯದಲ್ಲಿ ವ್ಯವಸ್ಥೆ ಏನಾದರೂ ಇದ್ದರೆ ಹಾಗೂ ಹಿಮೊಫೀಲಿಯ ರೋಗಿಗಳ ನಿಖರ ಅಂಕಿಸಂಖ್ಯೆ ಲಭ್ಯವಿದ್ದರೆ ಅದಕ್ಕೆ ಕಾರಣ ಸುರೇಶ ಹನಗವಾಡಿ ಅವರ ದಣಿವರಿಯದ ಸಾಧನೆ.ಸುರೇಶ ನಾಲ್ಕನೇ ತರಗತಿಯಲ್ಲಿದ್ದಾಗ ದೇಹದೆಲ್ಲೆಡೆ ಗಡ್ಡೆಗಳು ಕಾಣಿಸಿಕೊಳ್ಳತೊಡಗಿದವು. ಅದನ್ನು ಪರೀಕ್ಷಿಸಿದ ವೈದ್ಯರು, ಸುರೇಶನಿಗೆ ರಕ್ತಸ್ರಾವ ರೋಗವಿರುವುದಾಗಿಯೂ, ಅದಕ್ಕೆ ಚಿಕಿತ್ಸೆ ಇಲ್ಲವೆಂದೂ ಹಾಗೂ ಸುರೇಶನನ್ನು ಯಾವಾಗಲೂ ಮನೆಯೊಳಗೆ ಇಟ್ಟಿರಬೇಕೆಂದು ಹೇಳಿದರು. ತನ್ನ ಮಾವ ನೀಲಕಂಠಪ್ಪನಿಗೆ ಇರುವ ರೋಗ ತನಗೂ ಇದೆ ಎಂದು ಸುರೇಶನಿಗೆ ಆ ಕ್ಷಣಕ್ಕೆ ಗೊತ್ತಾಗಿ ಹೋಯ್ತು.ಅದು 1982ನೇ ಇಸವಿ. ತಲೆಯೊಳಗೆ ತೀವ್ರ ರಕ್ತ ಸ್ರಾವವಾಗಿ ನೀಲಕಂಠಪ್ಪನನ್ನು ಚಿಗಟೆರಿ ಆಸ್ಪತ್ರೆಗೆ ದಾಖಲಿಸಲಾಯಿತು. ತನಗೆ ತಲೆಯೊಳಗೆ ರಕ್ತಸ್ರಾವ ವಾಗುತ್ತಿರುವುದಾಗಿಯೂ, ಒಂದೆರಡು ಯುನಿಟ್ ರಕ್ತ ಕೊಟ್ಟರೆ ರಕ್ತಸ್ರಾವ ನಿಲ್ಲಬಹುದೆಂದೂ ಸೂಚಿಸಿದ. ಇದನ್ನು ಕೇಳಿ ಕೆಂಡಾಮಂಡಲನಾದ ವೈದ್ಯನೊಬ್ಬ, ‘ಇಲ್ಲಿ ಡಾಕ್ಟರ್ ನಾನೋ, ಇಲ್ಲ ನೀನೋ?’ ಎಂದು ಬೈದು ಸರಿಯಾಗಿ ಪರೀಕ್ಷಿಸದೆ ನೆಪಮಾತ್ರಕ್ಕೆ ಕೆಲವೊಂದು ಮಾತ್ರೆಗಳನ್ನು ಕೊಟ್ಟು ನೀಲಕಂಠಪ್ಪನನ್ನು ಸಾಗಹಾಕಿದ. ಇದಾದ ನಂತರ ವಿಶ್ವೇಶ್ವರಯ್ಯ ಪಾರ್ಕ್‌ನಲ್ಲಿ ನೀಲಕಂಠಪ್ಪ ಒಂದೊಂದಾಗಿ ತನ್ನ ತಲೆಯ ಕೂದಲನ್ನು ಕಿತ್ತುಕೊಂಡಿದ್ದು, ವೈದ್ಯರ ಅಜ್ಞಾನಕ್ಕೆ ಶವವಾಗಿ ಹೋಗಿದ್ದು.‘ನನ್ನ ಮಾವನ ದಾರುಣ ಅಂತ್ಯ, ಹಿಮೊಫೀಲಿಯ ಬಗ್ಗೆ ವೈದ್ಯರಲ್ಲಿನ ಮೌಢ್ಯತೆ ಹಾಗೂ ಈ ರೋಗದಿಂದ ನಾನೇ ಅನುಭವಿಸಿದ ನೋವು ನನ್ನಲ್ಲಿ ಛಲವೊಂದನ್ನು ಹುಟ್ಟುಹಾಕಿತ್ತು. ನಾನು ವೈದ್ಯನಾಗಲೇಬೇಕಿತ್ತು, ಏನನ್ನಾದರು ಸಾಧಿಸಲೇಬೇಕಿತ್ತು, ನಾನು ವೈದ್ಯನಾದ ನಂತರ ತಲೆಯಲ್ಲಿ ರಕ್ತಸ್ರಾವವಾದಾಗ ರೋಗಿಯ ಪರಿಸ್ಥಿತಿ ಹೇಗಿರುತ್ತದೆ ಮತ್ತು ಸಾವು ಹೇಗೆ ಸಂಭವಿಸುತ್ತದೆ ಎಂಬುದು ಗೊತ್ತಾಗಿದ್ದು, ಆರ್ದ್ರವಾಗಿ ಸುರೇಶ ನೆನಪಿಸಿಕೊಂಡರು.ಬಳ್ಳಾರಿಯಲ್ಲಿ  ಪಿ.ಯು.ಸಿ. ಮುಗಿಸಿ ದಾವಣಗೆರೆಯಲ್ಲಿ ಜೆ.ಜೆ.ಎಂ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪದವಿಗೆ ಸುರೇಶ ಸೇರಿದರು. ‘ಅದೊಂದು ವಿಚಿತ್ರ ಅನುಭವ. ನನಗೋ ವಿಪರೀತ ಕೀಳರಿಮೆ. ನನ್ನ ರೋಗವನ್ನು ಮುಚ್ಚಿಟ್ಟುಕೊಳ್ಳಲು ಹರಸಾಹಸ ಪಡುತ್ತಿದ್ದೆ, ಪದೇ ಪದೇ ರಕ್ತಸ್ರಾವಕ್ಕೆ ಒಳಗಾಗುತ್ತಿದ್ದೆ. ನಾನು ಎರಡನೇ ಪದವಿ ವರ್ಷದಲ್ಲಿದ್ದಾಗ ಬಳ್ಳಾರಿ ಹಾಗೂ ದಾವಣಗೆರೆ ಸರ್ಕಾರಿ ಆಸ್ಪತ್ರೆಗಳ ದಾಖಲಾತಿ ವಿಭಾಗಕ್ಕೆ ಹೋಗಿ ಹಿಮೊಫೀಲಿಯ ರೋಗಿಗಳ ವಿವರಗಳನ್ನು ಹೆಕ್ಕಿ ತೆಗೆದು ಅವರಿಗೆಲ್ಲ ಪತ್ರ ಬರೆದು ಸಂಪರ್ಕ ಸಾಧಿಸಿದೆ. ಅದು ನನ್ನ ಪ್ರಥಮ ಹೆಜ್ಜೆಯಾಗಿತ್ತು’ ಎಂದು ಸುರೇಶ ವಿವರಿಸಿದರು.ಈ ನಡುವೆ ಸುರೇಶರ ಬದುಕಿನಲ್ಲಿ ಎರಡನೇ ತಿರುವು ಸಂಭವಿಸುವುದರಲ್ಲಿತ್ತು. ಅವರ ತಮ್ಮ ದೇವರಾಜ ಈ ರೋಗದಿಂದಾಗಿ ಅದೊಂದು ದಿನ ತೀವ್ರ ರಕ್ತಸ್ರಾವಕ್ಕೆ ಒಳಗಾದ. ಆತನನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಸುರೇಶರಿಗೆ 70 ವರ್ಷದ ಶೇಷಾದ್ರಿ ಎಂಬುವವರ ಪರಿಚಯವಾಯ್ತು. ಶೇಷಾದ್ರಿ ಅವರು ಸುರೇಶರನ್ನು ತಮ್ಮ ಮನೆಗೆ ಕರೆದೊಯ್ದರು. ‘ಅಲ್ಲಿ ಶೇಷಾದ್ರಿ ಅವರ ಹಿರಿಯ ಮಗ ರಾಮಕೃಷ್ಣ ಎಂಬುವವರ ಫೋಟೊ ನೋಡಿದೆ. ಅವರೂ  ಹಿಮೊಫೀಲಿಯ ರೋಗಿ. ಅವರು ಸತ್ತು ಒಂದು ವಾರವಷ್ಟೇ ಆಗಿತ್ತು. ಶೇಷಾದ್ರಿ ಅವರು ರಾಮಕೃಷ್ಣರ ಫೈಲ್‌ವೊಂದನ್ನು ನನ್ನ ಕೈಗಿಟ್ಟರು. ಅದರಲ್ಲಿ ಈ ರೋಗದ, ರೋಗಿಗಳ ಹಾಗೂ ಚಿಕಿತ್ಸಾ ಕೇಂದ್ರಗಳ ವಿವರಗಳಿದ್ದವು. ಆತ ಈ ರೋಗದ ವಿರುದ್ಧ ಹೋರಾಡಿದ. ಆತ ಅರ್ಧಕ್ಕೇ ನಿಲ್ಲಿಸಿದ ಕೆಲಸವನ್ನು ಮುಂದುವರೆಸಲು ನೀನೇ ಸರಿಯಾದ ವ್ಯಕ್ತಿ,’ ಎಂದು ಶೇಷಾದ್ರಿ ಹುರಿದುಂಬಿಸಿದರು. ‘ಆ ಫೈಲ್ ನನ್ನ ಜೀವನದ ಎರಡನೇ ತಿರುವು’...ಸುರೇಶ ಕೆಲ ಕ್ಷಣ ಮೌನಕ್ಕೆ ಶರಣಾದರು.ನಂತರ ಸಂಭವಿಸಿದ್ದು ಮಹಾನ್ ಯಾತ್ರೆ. ವಿಶ್ವದಾದ್ಯಂತ ಇರುವ ಹಿಮೊಫೀಲಿಯ ರೋಗಿಗಳನ್ನು ಹಾಗೂ ಅದರ ಸಂಘಗಳನ್ನು ಒಗ್ಗೂಡಿಸುವ ಕೆಲಸಕ್ಕೆ ಸುರೇಶ ಕೈ ಹಾಕಿದರು. ತಮ್ಮ ವೃತ್ತಿ ಬದುಕಿನ ಮೊದಲನೆ ವೇತನವನ್ನು ಖರ್ಚು ಮಾಡಿ ಕರ್ನಾಟಕದ ಪ್ರಥಮ ಹಿಮೊಫೀಲಿಯ ಸೊಸೈಟಿಯನ್ನು ದಾವಣಗೆರೆಯಲ್ಲಿ 1989ರಲ್ಲಿ ಹುಟ್ಟು ಹಾಕಿದರು. ಹುಬ್ಬಳ್ಳಿಯಲ್ಲಿ ಪೆಥಾಲಜಿ ವಿಷಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿದ್ದಾಗ ಹಿಮೊಫೀಲಿಯ ರೋಗಿಗಳ ಸಹಾಯಕ್ಕಾಗಿ ಸ್ವಸಹಾಯ ಗುಂಪನ್ನು ಸ್ಥಾಪಿಸಿದರು.

 

1994ರಲ್ಲಿ ಜೆ.ಜೆ.ಎಂ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿದರು. ಎರಡು ಸಲ ಹಿಮೊಫೀಲಿಯ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷರಾದರು. ವಿಶ್ವದಾದ್ಯಂತ ಸಂಚರಿಸಿ ರೋಗಿಗಳ ನಡುವೆ ಸಂಪರ್ಕ ಹಾಗೂ ಚಿಕಿತ್ಸಾ ಕೇಂದ್ರಗಳ ಮಧ್ಯೆ ಸಮನ್ವಯ ಮತ್ತು ದೇಶ ದೇಶಗಳ ನಡುವೆ ಈ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಶೋಧನೆ, ಮಾಹಿತಿ ವಿನಿಮಯಕ್ಕೆ ನಾಂದಿ ಹಾಡಿದರು. ಪ್ರಸ್ತುತ ಮಣಿಪಾಲ, ಬೆಂಗಳೂರು, ದಾವಣಗೆರೆ, ಮೈಸೂರು, ಹುಬ್ಬಳ್ಳಿ- ಧಾರವಾಡ ಹಾಗೂ ಕೊಪ್ಪಳದಲ್ಲಿ ಹಿಮೊಫೀಲಿಯ ಸೊಸೈಟಿಗಳು ತಲೆ ಎತ್ತಿವೆ. ಪ್ರತಿ ಜಿಲ್ಲೆಯಲ್ಲಿ ಒಂದು ಹಿಮೊಫೀಲಿಯ ಸೊಸೈಟಿ ಇರಬೇಕು ಎನ್ನುವುದು ಸುರೇಶ ಅವರ ಕನಸು.ಸುರೇಶ ಅವರ ಸಾಧನೆಯಿಂದ ಆಕರ್ಷಿತರಾದ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ದಾವಣಗೆರೆ ಹಿಮೊಫೀಲಿಯ ಸೊಸೈಟಿಯ ಮಹಾನ್ ಪೋಷಕತ್ವವನ್ನು ಪಡೆದರು. ವರ್ಷದಲ್ಲಿ ಒಂದು ದಿನ ರೋಗಿಗಳ ಅಭ್ಯುದಯಕ್ಕೆ ಉಚಿತ ಕಾರ್ಯಕ್ರಮ ನೀಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಎಸ್.ಪಿ.ಬಿ, ಉಷಾ ಉತುಪ್, ಅನಿಲ್ ಕುಂಬ್ಳೆ ಹಾಗೂ ಜಾವಗಲ್ ಶ್ರೀನಾಥ್‌ರಂತಹ ಘಟಾನುಘಟಿಗಳ ನೆರವಿನಿಂದ ಸಹಾಯಾರ್ಥ ಕಾರ್ಯಕ್ರಮಗಳನ್ನು ರಾಜ್ಯದೆಲ್ಲೆಡೆ ಆಯೋಜಿಸಿದ್ದಾರೆ. ಬಂದ ಹಣದಲ್ಲಿ ರಕ್ತ ಸಂಗ್ರಹಣೆ ಹಾಗೂ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆಯ ವ್ಯವಸ್ಥೆ ಮಾಡಿದ್ದಾರೆ. ದೇಶದಲ್ಲೇ ಪ್ರಥಮವಾದ ಎಲ್ಲ ಪ್ರಕಾರಗಳ ರಕ್ತಸ್ರಾವ ರೋಗಗಳಿಗೆ ಒಂದೇ ಸೂರಿನಡಿ ಚಿಕಿತ್ಸಾ ಸೌಲಭ್ಯವನ್ನು ಕಲ್ಪಿಸುವ ಸಲುವಾಗಿ ಸುಸಜ್ಜಿತ ಆಸ್ಪತ್ರೆಯನ್ನು ದಾವಣಗೆರೆಯಲ್ಲಿ  ನಿರ್ಮಿಸುತ್ತಿದ್ದಾರೆ.‘ನನ್ನ ಬದುಕು ಹಾಗೂ ಸಾಧನೆಗೆ ಸ್ಫೂರ್ತಿ ಹೆಂಡತಿ ಮೀರಾ. ಆಕೆಯು ಕೂಡ ಹಿಮೊಫೀಲಿಯ ರೋಗಿಗಳ ಒಳಿತಿಗಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟಿದ್ದಾಳೆ. ಆಕೆ ಇಲ್ಲದೇ ಹೋಗಿದ್ದರೆ ನನ್ನಿಂದ ಇದನ್ನೆಲ್ಲ ಸಾಧಿಸುವುದು ಸಾಧ್ಯವೇ ಇರಲಿಲ್ಲ. ಆಕೆ ನಮ್ಮ ಸೊಸೈಟಿಯ ಮಹಿಳಾ ಮತ್ತು ಯುವ ಘಟಕದ ಮುಖ್ಯಸ್ಥೆ. ನಮ್ಮ ರಾಜ್ಯದಲ್ಲಿ ಎರಡು ಸಾವಿರದಷ್ಟು ನೋಂದಾಯಿತ ಹಿಮೊಫೀಲಿಯ ರೋಗಿಗಳಿದ್ದಾರೆ. ಸುಮಾರು ಆರು ಸಾವಿರದಷ್ಟು ನೋಂದಣಿಯಾಗದ ರೋಗಿಗಳು ಇರಬಹುದೆಂಬ ಅಂದಾಜಿದೆ. ನಾವು ಸಾಗಿ ಬಂದ ಹಾದಿ ತುಂಬಾ ಕಡಿಮೆ. ಸಾಗಬೇಕಾದದ್ದು ತುಂಬಾ ದೂರ’ ಎಂದಾಗ ಸುರೇಶ ಹನಗವಾಡಿ ಅವರ ಕಂಗಳಲ್ಲಿ ಆತ್ಮವಿಶ್ವಾಸ ನಲಿದಾಡುತ್ತಿತ್ತು.

ಸಂಪರ್ಕ ಸಂಖ್ಯೆ : 93410 04109ಏನಿದು ಹಿಮೊಫೀಲಿಯ?

ಕುಸುಮ ರೋಗವೆಂದು ಕನ್ನಡದಲ್ಲಿ ಹೇಳಲಾಗುವ ಹಿಮೊಫೀಲಿಯ ಫ್ಯಾಕ್ಟರ್ (ರಕ್ತ ಹೆಪ್ಪುಗಟ್ಟುವ ಕೆಲವು ಪ್ರೊಟಿನ್) ಕೊರತೆಯಿಂದ ಉಂಟಾಗುವ ರೋಗ.ಆಂತರಿಕ ಅಥವಾ ಬಾಹ್ಯ ಅಂಗಗಳಿಗೆ ಪೆಟ್ಟಾದರೆ ತೀವ್ರ ರಕ್ತಸ್ರಾವವಾಗುತ್ತದೆ. ಕೊರತೆಯಾಗಿರುವ ಫ್ಯಾಕ್ಟರ್ ಅನ್ನು  ಚುಚ್ಚುಮದ್ದಿನ ಮೂಲಕ ರಕ್ತಕ್ಕೆ ಸೇರಿಸುವ ಮುಖಾಂತರ ರಕ್ತಸ್ರಾವ ನಿಲ್ಲಿಸಬಹುದು. ಒಂದು ವೇಳೆ ಕೊರತೆಯಾಗಿರುವ ಫ್ಯಾಕ್ಟರ್ ಲಭ್ಯವಿಲ್ಲದಿದ್ದರೆ ತೀವ್ರ ರಕ್ತಸ್ರಾವವಾಗಿ ಅಂಗವೈಕಲ್ಯವಾಗಬಹುದು ಅಥವಾ ಸಾವೂ ಸಂಭವಿಸಬಹುದು. ಈ ರೋಗದ ಚಿಕಿತ್ಸೆ ತುಂಬಾ ದುಬಾರಿ. ಒಂದು ಸಲ ರಕ್ತಸ್ರಾವ ತಡೆಗಟ್ಟಬೇಕೆಂದರೆ 20ರಿಂದ 30 ಸಾವಿರ ರೂಪಾಯಿ ಬೇಕಾಗಬಹುದು. ದುರಂತವೆಂದರೆ ಫ್ಯಾಕ್ಟರ್‌ಗಳು ರಾಜ್ಯದ ಕೆಲವೇ ನಗರಗಳಲ್ಲಿ ಮಾತ್ರ ಲಭ್ಯವಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry