ಕುಸುರಿ ಸಿರಿ ಈಚಲು

ಬುಧವಾರ, ಜೂಲೈ 17, 2019
24 °C

ಕುಸುರಿ ಸಿರಿ ಈಚಲು

Published:
Updated:

ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಬೆಳೆದಿರುವ ಈಚಲು ಮರಗಳಲ್ಲಿನ ಎಲೆ ದಂಟು ಕಲಾವಿದರ ಕೈಯಲ್ಲಿ ಕಲೆಯಾಗಿ ಅರಳುತ್ತಿದೆ. ಅವರೆಲ್ಲ ಆಂಧ್ರಪ್ರದೇಶದಿಂದ ವಲಸೆ ಬಂದಿರುವ ಬಡ ಕಲಾವಿದರು. ಈಚಲು ಎಲೆಯನ್ನು ಕೊಯ್ದು ದಂಟನ್ನು ಬೇರ್ಪಡಿಸಿ ಅದನ್ನು ಸೀಳಿ ಬುಟ್ಟಿ, ಹೂದಾನಿ, ಕೋಳಿ ಪಂಜದಂಥ ವಸ್ತುಗಳನ್ನು ಕಲಾತ್ಮಕವಾಗಿ ಹೆಣೆದು ಮಾರಿ, ಜೀವನ ನಿರ್ವಹಿಸುತ್ತಿದ್ದಾರೆ.  ಹಿಂದೆ ಗ್ರಾಮೀಣ ಪ್ರದೇಶದ ಕೃಷಿಕರು ಈಚಲು ಎಲೆಯನ್ನು ಕೊಯ್ದು ಚಾಪೆ ಹೆಣೆಯುತ್ತಿದ್ದರು. ಉಳಿದ ದಂಟಿನಿಂದ ಮಕ್ಕರಿಗಳನ್ನು ತಯಾರಿಸಿ ಕೃಷಿ ಚಟುವಟಿಕೆಗಳಿಗೆ ಬಳಸುತ್ತಿದ್ದರು. ದೊಡ್ಡ ಪ್ರಮಾಣದಲ್ಲಿ ಚಾಪೆ ಹೆಣೆದು ಹುಣಸೆ ಹಣ್ಣನ್ನು ಕಟ್ಟಲು ಬಳಸುತ್ತಿದ್ದರು. ಬಯಲು ಸೀಮೆಯಲ್ಲಿ ಬಿದಿರನ್ನು ಬೆಳೆಯುವುದು ಅಪರೂಪ. ಬೆಳೆದರೂ ಅದನ್ನು ಸ್ಥಳೀಯ ಉಪಯೋಗಕ್ಕೆ ಮಾತ್ರ ಸೀಮಿತವಾಗಿ ಬಳಸಿಕೊಳ್ಳಲಾಗುತ್ತದೆ.ಹೊರಗಡೆಯಿಂದ ತರಿಸುವ ಬಿದಿರಿನಿಂದ ತಯಾರಿಸಿದ ಕೃಷಿ ಉಪಕರಣಗಳು ದುಬಾರಿಯಾದ್ದರಿಂದ ಸ್ಥಳೀಯರು, ಸ್ಥಳೀಯವಾಗಿ ದೊರೆಯುವ ಪೂಳಿ ಮತ್ತು ಈಚಲು ದಂಟಿನಿಂದ ತಯಾರಿಸಿಕೊಳ್ಳುತ್ತಾರೆ. ಆದರೆ ಸ್ಥಳೀಯರು ತಯಾರಿಸುವ ವಸ್ತುಗಳಲ್ಲಿ ಕುಸುರಿ ಕೆಲಸ ಇರುವುದಿಲ್ಲ. ಕುಸುರಿ ಕಲಾವಿದರ ಕೈಚಳಕಕ್ಕೆ ಮನಸೋಲದವರು ಅಪರೂಪ.ಈ ವಲಸೆ ಕಲಾವಿದರು ಬೆಳಿಗ್ಗೆ ಎದ್ದು ಕೈಯಲ್ಲಿ ದೋಟಿ ಹಿಡಿದು ಈಚಲು ಮರಗಳನ್ನು ಹುಡುಕುತ್ತಾ ಹೊರಡುತ್ತಾರೆ. ಮರದಿಂದ ಉದ್ದನೆಯ ಎಲೆಯನ್ನು ಕೊಯ್ದು ಅಲ್ಲೇ ಸೊಪ್ಪನ್ನು ಜವರುತ್ತಾರೆ. ದಂಟನ್ನು ವಿಂಗಡಿಸಿ ಕೊಂಡೊಯ್ಯುತ್ತಾರೆ. ರಸ್ತೆ ಪಕ್ಕದ ತಮ್ಮ ನೆಲೆಯಲ್ಲಿ ಅದನ್ನು ಇರಿಸಿ, ಹದವಾಗಿ ಒಣಗಿಸಿ ಕರಕುಶಲ ವಸ್ತುಗಳನ್ನು ತಯಾರಿಸುತ್ತಾರೆ. ಅವುಗಳಿಂದ ಆಕರ್ಷಿತರಾಗಿ ಹತ್ತಿರ ಬರುವ ವ್ಯಕ್ತಿಗಳಿಗೆ ಮಾರಿ ಜೇಬು-ಹೊಟ್ಟೆ ತುಂಬಿಸಿಕೊಳ್ಳುತ್ತಾರೆ.  ಹೊಸ ತಲೆಮಾರಿನ ಜನರಲ್ಲಿ ಸೌಂದರ್ಯ ಪ್ರಜ್ಞೆ ಹೆಚ್ಚಿದೆ. ತಮ್ಮ ಮನೆ ಹಾಗೂ ಕಚೇರಿಗಳನ್ನು ಸರಳವಾಗಿ ತಯಾರಿಸಿದ ಕಲಾತ್ಮಕ ವಸ್ತುಗಳಿಂದ ಶೃಂಗರಿಸಲು ಇಷ್ಟಪಡುತ್ತಾರೆ. ಹಾಗಾಗಿ ಈಚಲು ಕಲೆಗೆ ಗೌರವ ಇದೆ. ಉದ್ದನೆಯ ಹೂದಾನಿ ರೂ. 700ಕ್ಕೆ ಮಾರಾಟವಾಗುತ್ತದೆ. ಕೊಸರಾಡಿದರೆ ಒಂದೈವತ್ತು ಹಾಗೋ ಹೀಗೋ ಆಗಬಹುದು. ಕೋಳಿ ಹುಂಜ ಸಾಕುವವರೂ ವಿಶೇಷವಾಗಿ ತಯಾರಿಸಿದ ಬುಟ್ಟಿಗಳನ್ನು ಕೊಂಡೊಯ್ಯುತ್ತಾರೆ. ಹೊಲ ಗದ್ದೆಗಳಿಗೆ ಊಟ ಕೊಂಡೊಯ್ಯಲೂ ಈಚಲು ಬುಟ್ಟಿ ಖರೀದಿಸುತ್ತಾರೆ ಎಂದು ಕಲಾವಿದ ಸೀನು ಹೆಮ್ಮೆಯಿಂದ ಹೇಳಿದರು.ಮೊದಲು ಬಿದಿರಿನಿಂದ ಕರಕುಶಲ ವಸ್ತುಗಳನ್ನು ತಯಾರಿಸುತ್ತಿದ್ದೆವು. ಬಿದಿರಿನ ಬೆಲೆ ಹೆಚ್ಚಾದ ಮೇಲೆ, ಈಚಲು ದಂಟಿನಿಂದ ತಯಾರಿಸುತ್ತಿದ್ದೇವೆ. ಇದಕ್ಕೆ ಹಣ ಅಗತ್ಯವಿಲ್ಲ. ತರಿದುಕೊಳ್ಳುವ ಸಂಸ್ಕೃತಿ ನಮ್ಮದು. ಈಚಲು ಎಲೆಯನ್ನಷ್ಟೇ ಕೊಯ್ದುಕೊಳ್ಳುತ್ತೇವೆ. ಅದರಿಂದ ಮರದ ಬೆಳವಣಿಗೆಗೆ ತೊಂದರೆ ಆಗುವುದಿಲ್ಲ. ಇದಕ್ಕೆ ಅರಣ್ಯ ಇಲಾಖೆಯ ಅಡ್ಡಿಯೂ ಇಲ್ಲ ಎಂದು ಆದಿ ವಿವರಿಸಿದರು. ಹೌದು, ಹಿಂದೆ ಕಳ್ಳು ತೆಗೆಯುತ್ತಿದ್ದ ಕಾಲದಲ್ಲಿ ತಾಲ್ಲೂಕಿನಲ್ಲಿ ವಿಶಾಲವಾದ ಈಚಲು ತೋಪುಗಳಿದ್ದವು. ಸರ್ಕಾರ ಕಳ್ಳು ತೆಗೆಯುವುದನ್ನು ನಿಷೇಧಿಸಿದ ಮೇಲೆ, ಈಚಲು ಮರಗಳನ್ನು ಕಡಿದು ಜಮೀನನ್ನು ವ್ಯವಸಾಯಕ್ಕೆ ಬಳಸಲಾಯಿತು. ಈಗ ಅಲ್ಲಿ ಮಾವಿನ ಮರಗಳು ಬೆಳೆದು ನಿಂತಿವೆ. ಆದರೂ ಸರ್ಕಾರಿ ಜಮೀನಲ್ಲಿ ಇನ್ನೂ ಈಚಲು ಮರಗಳು ಇವೆ. ಸ್ಥಳೀಯರು ಅವುಗಳ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಆದ್ದರಿಂದ ಈ ಮರಗಳಿಂದ ಈಚಲು ಕಾಯಿ ಸಿಗುತ್ತದೆ. ಬಯಲು ಸೀಮೆಯ ಖರ್ಜೂರ ಎಂದು ಕರೆಯಲ್ಪಡುವ ಈಚಲು ಕಾಯಿ ಮಕ್ಕಳಿಗೆ ಹೆಚ್ಚು ಪ್ರಿಯ.

ಮುಳ್ಳಿನ ಎಲೆಗಳನ್ನು ತಲೆಯ ಮೇಲೆ ಹೊತ್ತು ನಿಲ್ಲುವ ಈಚಲು ಮರ, ಕಲಾವಿದರಿಗೆ ಕಲ್ಪವೃಕ್ಷವಾಗಿದೆ.ಶಿಶುನಾಳ ಷರೀಫರು `ಬಿದಿರು ನೀನಾರಿಗಲ್ಲದವಳು~ ಎಂದು ಬರೆಯುವುದರ ಮೂಲಕ ಬಿದಿರಿನ ಮಹತ್ವವನ್ನು ಬಣ್ಣಿಸಿದ್ದಾರೆ. ಅವರೇನಾದರೂ ಕಲಾವಿದರ ಕೈಯಲ್ಲಿನ ಈಚಲು ದಂಟನ್ನು ಕಂಡಿದ್ದರೆ `ಈಚಲು ನೀನಾರಿಗಲ್ಲದವಳು~ ಎಂದು ಬರೆಯುತ್ತಿದ್ದರೇನೋ! 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry