ಸೋಮವಾರ, ಮಾರ್ಚ್ 1, 2021
31 °C

ಕುಸ್ತಿಗೆ ಮರುಚೇತನದ ಆಶಯ

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

ಕುಸ್ತಿಗೆ ಮರುಚೇತನದ ಆಶಯ

ಕೇಸರಿಗಳ ಕಾದಾಟದ ರೋಚಕ ಕ್ಷಣಗಳು ನೆಹರೂ ಮೈದಾನದ ಹೊನಲು ಬೆಳಕಿನಲ್ಲಿ ಸೇರಿದ್ದ ಹದಿನೈದು ಸಾವಿರಕ್ಕೂ ಹೆಚ್ಚು ಕುಸ್ತಿ ಪ್ರಿಯರಿಗೆ ರಸರೋಮಾಂಚನ ನೀಡಿತ್ತು. ಸಮಯ ಮಧ್ಯರಾತ್ರಿಗೆ ಹತ್ತಿರವಾಗುತ್ತಿದ್ದರೂ ಹುಬ್ಬಳ್ಳಿ–ಧಾರವಾಡ ಅವಳಿ ನಗರಗಳ ಹೊರವಲಯಗಳಿಂದ ಬಂದಿದ್ದವರಿಗೆ ಕೂಡ ವಾಪಸ್‌ ಮನೆ ಸೇರುವ ಗೊಡವೆ ಇರಲಿಲ್ಲ.ಮನೆಗೆ ಹೇಗೆ ಹೋಗುತ್ತೀರಿ ಎಂದು ಕೇಳಿದರೆ, ಯಾವುದಾದರೂ ವಾಹನ ಸಿಗುತ್ತದೆ, ಕೈ ತೋರಿಸಿದರಾಯಿತು. ಮನೆ ಸೇರುವುದಕ್ಕಿಂತ ‘ಕಾಟಾ ನಿಕಾಲಿ’ ಆಗುವುದು ಮುಖ್ಯ ಎಂದು 60 ದಾಟಿದ ಬ್ಯಾಹಟ್ಟಿಯ ಶಿವಬಸಪ್ಪ ಕುಂಬಾರ ಅವರಂಥ ಅನೇಕ ಮಂದಿ ಹೇಳುತ್ತಿದ್ದರು. ಗಂಡು ಮೆಟ್ಟಿನ ನೆಲದಲ್ಲಿ ವರ್ಷಗಳ ನಂತರ ನಡೆದ ರಾಷ್ಟ್ರಮಟ್ಟದ ಕುಸ್ತಿ ಅವರನ್ನು ಅಷ್ಟರ ಮಟ್ಟಿಗೆ ಹಿಡಿದು ನಿಲ್ಲಿಸಿತ್ತು.ಹುಬ್ಬಳ್ಳಿ –ಧಾರವಾಡ ಆಸುಪಾಸಿನಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುವುದಕ್ಕಾಗಿಯೇ ಹುಟ್ಟಿಕೊಂಡ ‘ವಾಯುಪುತ್ರ ಯೂತ್‌ ಅಂಡ್‌ ಸ್ಪೋರ್ಟ್ಸ್‌ ಫೌಂಡೇಷನ್‌’ ಮಾರ್ಚ್‌ ಎರಡರಂದು ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಜಂಗೀ ಕಾಟಾ ನಿಕಾಲಿ ಕುಸ್ತಿಯಲ್ಲಿ ಪಾಲ್ಗೊಂಡ ‘ಕೇಸರಿ’ಗಳು ಹುಬ್ಬಳ್ಳಿ ಮಂದಿಯ ಹೃದಯದ ಅಖಾಡದಲ್ಲಿ ಕುಸ್ತಿಗೆ ನವಜೀವ ತುಂಬುವ ಉತ್ಸಾಹದ ಬೀಜ ಬಿತ್ತಿದ್ದಾರೆ. ಕುಸ್ತಿ ಕೂಟ ಒಟ್ಟು 70 ಜೋಡಿಗಳ ಕಾದಾಟಕ್ಕೆ ವೇದಿಕೆ ಒದಗಿಸಿತ್ತು.

ಮರಿ ಪೈಲ್ವಾನರ ಭರವಸೆಯ ‘ಡಾವ್‌’ಗಳ ನಂತರ ಕೇಸರಿಗಳ ಕಾದಾಟಕ್ಕೆ ಅಖಾಡ ಸಜ್ಜಾಗುತ್ತಿದ್ದಂತೆ ಹೊನಲು ಬೆಳಕಿನ ರಂಗು ಮೈದಾನವನ್ನು ಆವರಿಸಿತ್ತು. ಕರ್ನಾಟಕ ಕೇಸರಿಗಳಾದ ಆನಂದ ಮಾದನಬಾವಿ, ಕಾರ್ತಿಕ್‌ ರಾಣೆಬೆನ್ನೂರು, ವೆಂಕಟೇಶ ಪಾಟೀಲ ಹಳಿಯಾಳ ಮುಂತಾದವರು ಎದುರಾಳಿಗಳನ್ನು ಉರುಳಿಸಿದ ರೋಮಾಂಚಕ ಕ್ಷಣಗಳನ್ನು ಕುಸ್ತಿಪ್ರಿಯರು ಕಣ್ತುಂಬಿಕೊಂಡರು. 80ರ ದಶಕದಲ್ಲಿ ವರ್ಷವೊಂದಕ್ಕೆ ಏನಿಲ್ಲವೆಂದರೂ ಮೂರು ಥಿಯೇಟರ್‌ ಕುಸ್ತಿ (ಟಿಕೆಟ್‌ ಇರಿಸಿ ಆಡಿಸುವ ಸ್ಪರ್ಧೆ) ನಡೆಯು ತ್ತಿದ್ದ ಹುಬ್ಬಳ್ಳಿಯಲ್ಲಿ 1995ರಿಂದ ಈಚೆಗರ ದೊಡ್ಡ ಮಟ್ಟದ ಕುಸ್ತಿ ನಡೆದಿರಲಿಲ್ಲ. ಬೆಳಗಾವಿಯ ಚಂಬಣ್ಣ ಮುತ್ನಾಳ ಅವರ ಸಾಹಸಗಾಥೆಗಳನ್ನು ಕೇಳಿದ್ದ, ಧಾರವಾಡ ಅಳ್ನಾವರದ ಶಂಕರ ಅಷ್ಟೇಕರ್‌, ಅವರ ಶಿಷ್ಯಂದಿರಾದ ರುದ್ರಪ್ಪ ಹನಸಿ, ಅರ್ಜುನ ಖಾನಾಪುರ, ಮುದುಕಪ್ಪ ಪೈಲ್ವಾನ್‌ ಮುಂತಾದ ವರ ಕುಸ್ತಿಯ ಸವಿ ಉಂಡ ಇಲ್ಲಿನವರಿಗೆ ಕುಸ್ತಿ ಅಖಾಡದಲ್ಲಿ ಮತ್ತೆ ಜೀವದ ಕಳೆ ಮೂಡಿದ್ದರಿಂದ ಖುಷಿ ಉಂಟಾಗಿತ್ತು. ಜನರ ಉತ್ಸಾಹ ಕಂಡು ಸಂಘಟಕರು ಕೂಡ ರೋಮಾಂಚನಗೊಂಡಿದ್ದರು.ಎರಡು ದಶಕಗಳ ಹಿಂದೆ ಹುಬ್ಬಳ್ಳಿ ಭಾಗದಲ್ಲಿ ಕುಸ್ತಿಗೂ ಬಿಡಿಸಲಾಗದ ಸಂಬಂಧವಿತ್ತು ಎಂದು ಹೇಳುವ ಹಿರಿಯ ಕುಸ್ತಿ ಪಟು ಸುಭಾಷ್‌ ದ್ಯಾಮಕ್ಕನವರ, ‘ಆಧುನಿಕತೆ ಮತ್ತು ಕ್ರಿಕೆಟ್‌ ಜೊತೆಯಾಗಿ ಜನರ ಮನಸ್ಸಿಗೆ ಲಗ್ಗೆ ಇಟ್ಟ ನಂತರ ಗರಡಿ ಮನೆಗಳಲ್ಲಿ ಚಟುವಟಿಕೆ ಕಡಿಮೆಯಾಗತೊಡಗಿತು, ಜಾತ್ರೆಗಳಲ್ಲಿ ಕುಸ್ತಿ ಸ್ಪರ್ಧೆಗಳು ಮಾಯವಾಗತೊಡಗಿದವು’ ಎನ್ನುತ್ತಾರೆ.‘ಹುಬ್ಬಳ್ಳಿಯಲ್ಲಿ 1989ರಲ್ಲಿ ಕೊನೆಯದಾಗಿ ಥಿಯೇಟರ್‌ ಕುಸ್ತಿ ನಡೆದಿತ್ತು. 95ರಲ್ಲಿ ಮುಕ್ತ ಪಂದ್ಯಾವಳಿಯನ್ನೂ ಆಯೋ ಜಿಸಲಾಗಿತ್ತು’ ಎಂದು ನೆನಪಿಸಿಕೊಳ್ಳುವ ಕುಸ್ತಿ ಸಂಘಟಕರಾದ ಸತೀಶ ಮೆಹರವಾಡೆ ಮತ್ತು ಅಶೋಕ ಚಿಲ್ಲಣ್ಣವರ ‘ವಾಯು ಪುತ್ರ ಸಂಘಟನೆ ಮೂಲಕ ಈ ಭಾಗದಲ್ಲಿ ಗರಡಿ ಮನೆಗಳಿಗೆ ಪುನರ್ಜೀವ ನೀಡಲು ಹಾಗೂ ಹೊಸ ಗರಡಿ ಮನೆಗಳನ್ನು ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ, ಉಣಕಲ್‌ನಲ್ಲಿ ಕುಸ್ತಿ ಅಕಾಡೆಮಿ ಸ್ಥಾಪಿಸಿ ಉಚಿತವಾಗಿ ಕೋಚಿಂಗ್‌ ಕೊಡುವ ಯೋಜನೆಯೂ ಇದೆ’ ಎಂದು ಹೇಳುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.