ಕುಸ್ತಿಲೋಕದ ದಸರಾ ವೈಭವ

7

ಕುಸ್ತಿಲೋಕದ ದಸರಾ ವೈಭವ

Published:
Updated:
ಕುಸ್ತಿಲೋಕದ ದಸರಾ ವೈಭವ

`ಕಾವೇರಿ~ ಹೋರಾಟದ ಬಿಸಿಗೆ ಮೈಸೂರು ದಸರಾ ಮಹೋತ್ಸವದ ಹಲವು ಕಾರ್ಯಕ್ರಮಗಳಲ್ಲಿ ಜನರೇ ಇಲ್ಲ. ಆದರೆ ದಸರಾ ಕುಸ್ತಿ ಪಂದ್ಯಾವಳಿ ಮಾತ್ರ ಈ ಮಾತಿಗೆ ಅಪವಾದ!ಮೊದಲ ದಿನವೇ (ಅಕ್ಟೋಬರ್ 16) ಆರು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಡಿ.ದೇವರಾಜ್ ವಿವಿಧೋದ್ದೇಶ ಕ್ರೀಡಾಂಗಣದ ಕುಸ್ತಿ ಅಖಾಡಾದಲ್ಲಿ ಸೇರಿದ್ದರು. ಪ್ರತಿದಿನವೂ ಕನಿಷ್ಟ ಒಂದೂವರೆ ಸಾವಿರ ಜನ ಬಂದು ಕುಸ್ತಿ ನೋಡಿ ಹೋದರು.ಹೌದು; ದಸರಾ ಕುಸ್ತಿಯ ಗಮ್ಮತ್ತೇ ಅಂತಹದ್ದು. ಗಣೇಶ ಚತುರ್ಥಿ ಮುಗಿಯುತ್ತಿದ್ದಂತೆ ಮೈಸೂರು ಸೇರಿದಂತೆ  ಬೇರೆ ಬೇರೆ ಜಿಲ್ಲೆಗಳ ಪೈಲ್ವಾನರು ದಸರಾ ಕುಸ್ತಿಗೆ ತಯಾರಾಗಲು ಶುರು ಮಾಡುತ್ತಾರೆ. ಅಂತಹ `ಚುಂಬಕ ಶಕ್ತಿ~ ದಸರೆಯ ಕುಸ್ತಿಗೆ ಇದೆ. ದಸರಾ ಕೇಸರಿ, ದಸರಾ ಕಂಠೀರವ, ದಸರಾ ಕುಮಾರ, ದಸರಾ ಕಿಶೋರ ಪ್ರಶಸ್ತಿಗಳ ಆಕರ್ಷಣೆ ಪೈಲ್ವಾನರಿಗೆ, ಅವರೆಲ್ಲರ ಭುಜಬಲ ನೋಡುವ ತವಕ ಕುಸ್ತಿಪ್ರೇಮಿಗಳಿಗೆ. ಇದು ಶತಮಾನಗಳಿಂದಲೂ ನಡೆದುಕೊಂಡು ಬಂದಿರುವ ಪರಂಪರೆ.ಆ ದಿನಗಳು;  ವಿಜಯನಗರದಲ್ಲಿ ದಸರಾ ನಡೆಯುತ್ತಿದ್ದಾಗಲೂ ಕುಸ್ತಿ ಸ್ಪರ್ಧೆಗಳು ಮತ್ತು ವಜ್ರಮುಷ್ಟಿ ಕಾಳಗ ಸೇರಿದಂತೆ ಹಲವು ಸಾಹಸ ಕ್ರೀಡೆಗಳು ನಡೆಯುತ್ತಿದ್ದವು. ಆಗಿನ ರಾಜಾಶ್ರಯದಲ್ಲಿ ಕುಸ್ತಿಗೆ ಚಿನ್ನದ ಮೆರಗು ಇತ್ತು. ನವರಾತ್ರಿಯ ಉತ್ಸವದ ಆರಂಭದ ದಿನ ಮಹಾರಾಜರು ಸ್ವರ್ಣ ಸಿಂಹಾಸನರೋಹಣ ಮಾಡಿದ ಕೂಡಲೇ ಆರಂಭವಾಗುತ್ತಿದ್ದದ್ದೇ ಕುಸ್ತಿ ಸ್ಪರ್ಧೆ.

 

ಅಂಬಾವಿಲಾಸ ಅರಮನೆಯ ಆವರಣದಲ್ಲಿ 300ರಿಂದ 350 ಜೋಡಿಗಳ ಕುಸ್ತಿ ಸ್ಪರ್ಧೆಗಳು ನಡೆಯುತ್ತಿದ್ದವು. ಹಣ, ಬಂಗಾರ, ಬೆಳ್ಳಿ ಗದೆ, ಕಪ್ ಮತ್ತಿತರ ರೂಪದಲ್ಲಿ ಸ್ವತಃ ರಾಜರೇ ಬಹುಮಾನ ನೀಡುತ್ತಿದ್ದರು.ಯದುವಂಶದ ಕೆಲವು ರಾಜರೂ ಕುಸ್ತಿಪಟುಗಳಾಗಿದ್ದರು. ಅರಮನೆಯಲ್ಲಿಯೇ ದೊಡ್ಡ ಗರಡಿ ಇತ್ತು. ಜಗಜಟ್ಟಿಗಳನ್ನು ಸೋಲಿಸಿದ ನರಸರಾಜ ಒಡೆಯರು `ರಣಧೀರ ಕಂಠೀರವ~ ಎಂದೇ ಬಿರುದಾಂಕಿತರಾಗಿದ್ದರು. ಮುಮ್ಮಡಿ ಕೃಷ್ಣರಾಜೇಂದ್ರ ಒಡೆಯರ ಕಾಲದಲ್ಲಿಯೇ ಗರಡಿ ಮನೆಗಳು ಅರಮನೆಯಿಂದ ಹೊರಗೂ ನಿರ್ಮಾಣವಾದವು.ಇದರಿಂದ ಆಯಾ ಪ್ರದೇಶಗಳ ಯುವಕರು ಅಂಗಸಾಧನೆ ಮಾಡಿ ಕುಸ್ತಿ ಕಲಿಯತೊಡಗಿದರು. ಸಮರ ಕಲೆ ಪರಿಣಿತರಾದ ಜಟ್ಟಿಗಳು ಕುಸ್ತಿ   ಕಲೆಯನ್ನು ಹೇಳಿಕೊಡುತ್ತಿದ್ದರು. ಆ ಕಾಲದ ಹಲವು ಗರಡಿಗಳು ಇಂದಿಗೂ ಮೈಸೂರಿನಲ್ಲಿವೆ. ಅಂದು ಅವರು ನೀಡಿದ ಮರದ ವ್ಯಾಯಾಮ ಸಲಕರಣೆಗಳು ಈಗಲೂ ಇವೆ.

 

ನಂತರ ನಾಲ್ವಡಿ ಕೃಷ್ಣರಾಜ ಒಡೆಯರು ಕುಸ್ತಿ ಮಾಡಲು ಹೊರಗೆ ಹೋಗದಿದ್ದರೂ ಅವರು ಅಂಗಸಾಧನೆ ಪ್ರವೀಣರಾಗಿದ್ದರು.  ಅಂದು ಅವರು ಬಳಕೆ ಮಾಡಿದ ವ್ಯಾಯಾಮ ಸಲಕರಣೆಗಳು ಇಂದಿಗೂ ಜಗನ್ಮೋಹನ ಅರಮನೆಯ ವಸ್ತುಸಂಗ್ರಹಾಲಯದಲ್ಲಿ ಇವೆ. ಅವರೂ ಕೂಡ ದಸರಾ ಕುಸ್ತಿಯನ್ನು ಅತ್ಯಂತ ಉನ್ನತ ಮಟ್ಟಕ್ಕೆ ಏರಿಸಿದವರು.ದಸರಾ ಕುಸ್ತಿಗಾಗಿ ಒಂದು ತಿಂಗಳು ಮೊದಲೇ ಬೇರೆ  ಬೇರೆ ಸಂಸ್ಥಾನಗಳಿಂದ ಪೈಲ್ವಾನರನ್ನು ಕರೆಸಿ ಅವರಿಗೆ ಊಟ, ವಸತಿ, ಉಪಚಾರಗಳನ್ನು ನೀಡುತ್ತಿದ್ದರು. ದರ್ಬಾರ್ ಭಕ್ಷಿ. ಕಿಲ್ಲೇದಾರ್ ಭಕ್ಷಿ ಸ್ಥಾನಗಳಲ್ಲಿರುವವರು ಕುಸ್ತಿ ಮಾಡಬೇಕಾದ ಸೂಕ್ತ ಜೋಡಿಗಳನ್ನು ನಿರ್ಧರಿಸುತ್ತಿದ್ದರು. ಇದರಲ್ಲಿ ಯಾವುದೇ ತಾರತಮ್ಯಕ್ಕೆ ಅವಕಾಶವೇ ಇರಲಿಲ್ಲ.ಒಂದು ತಿಂಗಳ ಅವಧಿಯಲ್ಲಿ ಪೈಲ್ವಾನರ ಅಭ್ಯಾಸ, ವ್ಯಾಯಾಮದ ರೀತಿಗಳನ್ನು ಗಮನಿಸಿ ಜೋಡಿಗಳನ್ನು ನಿರ್ಧರಿಸುತ್ತಿದ್ದರು. 1940ರ ನಂತರ ಜಯಚಾಮರಾಜೇಂದ್ರ ಒಡೆಯರ್ ಕಾಲದಲ್ಲಿಯೂ ಕುಸ್ತಿಯನ್ನು ಕಳೆಗುಂದಲು ಬಿಡಲಿಲ್ಲ. ದಸರಾ ಕುಸ್ತಿಗೆ ಹೊಸತನ ತುಂಬಿದರು.1952ರವರೆಗೂ ಅರಮನೆ ಆವರಣದಲ್ಲಿ ನಡೆಯುತ್ತಿದ್ದ ದಸರಾ ಕುಸ್ತಿ ಸ್ಪರ್ಧೆಯು ವಸ್ತು ಪ್ರದರ್ಶನ ಮೈದಾನಕ್ಕೆ ವರ್ಗಾವಣೆಯಾಯಿತು. 50ರಿಂದ 60 ಸಾವಿರ ಜನರು ಕುಸ್ತಿ ನೋಡಲು ಸೇರುತ್ತಿದ್ದರು. 1976ರಲ್ಲಿ ಜಕ್ಕರಾಯನಕಟ್ಟೆ ಮೈದಾನದಲ್ಲಿ ನಾಲ್ಕು ವರ್ಷದವರೆಗೆ ನಡೆಯಿತು. 1980ರಿಂದ ದೊಡ್ಡಕೆರೆ ಮೈದಾನದಲ್ಲಿರುವ ಸಾಹುಕಾರ್ ಚೆನ್ನಯ್ಯ ಅಖಾಡಾದಲ್ಲಿ ಕುಸ್ತಿ ನಡೆಯುತ್ತಿತ್ತು. ಯಜಮಾನ್ ಶಿವನಂಜಪ್ಪ ಮತ್ತು ಸಾಹುಕಾರ್ ಚೆನ್ನಯ್ಯನವರ ಮಾರ್ಗದರ್ಶನದಲ್ಲಿ ದಸರಾ ಕುಸ್ತಿಯು ವೈಭವದಿಂದ ಜರುಗುತ್ತಿತ್ತು. ರಾಜಾಶ್ರಯದಲ್ಲಿ ಬೆಳೆದ ಖ್ಯಾತನಾಮ ಪೈಲ್ವಾನರ ಪಟ್ಟಿ ದೊಡ್ಡದು. ಪೈಲ್ವಾನ್ ಪಾಪಯ್ಯ, ಕೋರಾಫಿಟ್ ಶ್ರೀಕಂಠು, ಕೊಪ್ಪಲು ಬಸವಯ್ಯ, ದೊಡ್ಡತಿಮ್ಮಯ್ಯ, ರುದ್ರ ಉರುಫ್ ಮೂಗ, ಪೈಲ್ವಾನ್ ನಾಗರಾಜು, ಅಶೋಕಪುರಂನ ಪೈಲ್ವಾನ್ ಪುಟ್ಟಸ್ವಾಮಿ, ಎಂ.ಚೆಲುವಸ್ವಾಮಿ, ಎಂ.ಎಲ್. ಪುಟ್ಟಯ್ಯ, ಅಮೀರುದ್ದೀನ್,  ಸುದರ್ಶನ್, ಟೈಗರ್ ಬಾಲಾಜಿ, ವಿಜೇಂದ್ರ, ಶಂಕರ್ ಚಕ್ರವರ್ತಿ ಮುಂತಾದವರು ಪ್ರಮುಖರು.ದಸರಾ ಕುಸ್ತಿಯಲ್ಲಿ ಧಾರವಾಡದ ಅರ್ಜುನ ಖಾನಾಪುರ, ರುದ್ರಪ್ಪ ಹಂಚಿ, ಶಂಕರ್ ಅಷ್ಟೇಕರ್, ಮಹಾರಾಷ್ಟ್ರದ ಚಂಬಾ ಮುತ್ನಾಳ, ಶಿವಾಜಿ ಚಿಂಗ್ಳೆ, ಬೆಂಗಳೂರಿನ ಕಾಶ್ಮೀರ ಮೆಹಬೂಬ್, ಗೂಗಾ, ದಾವಣಗೆರೆ ದೊಡ್ಡ ಚಾರ್ಲಿ, ಸೋಮಲಿಂಗಪ್ಪ ಇತರರು ಕುಸ್ತಿ ಆಡಿದ್ದನ್ನು ಇಲ್ಲಿಯ ಜನರು ಮರೆತಿಲ್ಲ.1979ರಲ್ಲಿ ದಸರಾದಲ್ಲಿ ನಾಡಕುಸ್ತಿಯ ಜೊತೆಗೆ ಮ್ಯಾಟ್ ಕುಸ್ತಿಯನ್ನೂ ಆರಂಭಿಸಲಾಯಿತು. ಇದರಿಂದಾಗಿ ದೆಹಲಿ, ಪಂಜಾಬ್, ಉತ್ತರ ಪ್ರದೇಶಗಳಿಂದ ಬಂದ ಪೈಲ್ವಾನರೂ ಇಲ್ಲಿ ಕುಸ್ತಿ ಮಾಡಿದ್ದಾರೆ. ಈಗಲೂ ನಾಡಕುಸ್ತಿ ಮತ್ತು ಮ್ಯಾಟ್‌ಕುಸ್ತಿಗಳೆರಡೂ ನಡೆಯುತ್ತಿವೆ. ಎಂಟು ವರ್ಷಗಳಿಂದ ಮಹಿಳೆಯರ ಕುಸ್ತಿಗಳನ್ನು ಆಯೋಜಿಸಲಾಗುತ್ತಿದೆ.2004ರಿಂದ ದೊಡ್ಡಕೆರೆಯ ವಸ್ತುಪ್ರದರ್ಶನ ಮೈದಾನದಲ್ಲಿ ದಸರಾ ಕುಸ್ತಿ ನಡೆಯುತ್ತಿದೆ. ವಸ್ತು ಪ್ರದರ್ಶನ ಪ್ರಾಧಿಕಾರವು ಕುಸ್ತಿಗಾಗಿ ಡಿ. ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣ ಮತ್ತು ಕುಸ್ತಿ ಅಖಾಡಾ ಮಾಡಿಸಿದೆ.  ಆದರೆ ಆಗಿನ ಕಾಲದ ಕುಸ್ತಿ ವೈಭವ ಈಗಿಲ್ಲ. ಆಡುವ ಆಸಕ್ತರಿದ್ದರೂ ಸೂಕ್ತವಾದ ಗೌರವ ಸಿಗುತ್ತಿಲ್ಲ ಎಂಬ ಕೊರಗು ಇದೆ. ಅಂದು ಪೈಲ್ವಾನರಿಗೆ ಸೌಲಭ್ಯ, ಸಲಕರಣೆ, ಉದ್ಯೋಗ, ಭಕ್ಷೀಸು ಕೊಡುವಲ್ಲಿ ರಾಜರು ಉದಾರವಾದಿಗಳಾಗಿದ್ದರು. ಆದರೆ ಇಂದು ಅಂತಹ ಪ್ರಗತಿಪರ ಆಡಳಿತಗಾರರಿಲ್ಲ. ನ್ಯಾಯಯುತವಾಗಿ ನೀಡಬೇಕಾದ ಗೌರವ, ಸ್ಥಾನಮಾನಗಳೇ ಕುಸ್ತಿಪಟುಗಳಿಗೆ ಸಿಗುತ್ತಿಲ್ಲ. ಇದೇ ಕಾರಣಕ್ಕೆ ಪಾರಂಪರಿಕ ಕಲೆ ಸೊರಗುತ್ತಿದೆ. ಆದರೂ ದಸರಾ ಬಂದಾಕ್ಷಣ ಮೈಕೊಡವಿ ಏಳುವ ಪ್ರಯತ್ನ ಮಾಡುತ್ತಲೇ ಇದೆ.ದಸರಾ ಕುಸ್ತಿಗೆ ಕಾಯುತ್ತಿದ್ದರು

ಆಗಿನ ಕುಸ್ತಿಪಟುಗಳು ಅಂದರೆ ಆಜಾನುಬಾಹುಗಳು. ನಾವು ಚಿಕ್ಕವರಿದ್ದಾಗ ನೋಡುತ್ತಿದ್ದ ಕುಸ್ತಿಗೂ ಈಗಿನದ್ದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಆಗ ರಾಜ, ಮಹಾರಾಜರು ನೀಡುತ್ತಿದ್ದ ಪ್ರೋತ್ಸಾಹದಿಂದಾಗಿ ಮನೆಮನೆಯೂ ಗರಡಿಯಾಗಿತ್ತು.ದಸರಾ ಕುಸ್ತಿಗಾಗಿ ಇಡೀ ವರ್ಷ ಸಾಧನೆ ಮಾಡುತ್ತಿದ್ದರು. ಎಷ್ಟೇ ಕುಸ್ತಿ ಸ್ಪರ್ಧೆಗಳಿದ್ದರೂ ದಸರಾ ಕುಸ್ತಿ ಮಾತ್ರ ಪ್ರತಿವರ್ಷ ನಡೆದೇ ನಡೆಯುತ್ತದೆ ಎನ್ನುವುದೇ ಪೈಲ್ವಾನರಿಗೆ ಸಾಧನೆ ಮಾಡಲು ಹಚ್ಚುತ್ತದೆ.

-ಯಜಮಾನ್ ಎಸ್. ಮಹದೇವ್

ಗರಡಿ ಸಂಘದ ಅಧ್ಯಕ್ಷರು.

ಹಿಂದೆ ತೀವ್ರ ಪೈಪೋಟಿ ಇತ್ತು

ಹಿಂದಿನ ಕಾಲದಲ್ಲಿ ಕುಸ್ತಿಯಲ್ಲಿ ಭಾಗವಹಿಸಲು ತೀವ್ರ ಪೈಪೋಟಿ ಇರುತ್ತಿತ್ತು. ಪೈಲ್ವಾನ್ ಜೆಟ್ಟಪ್ಪ (ಟೈಗರ್ ಬಾಲಾಜಿಯವರ ತಾತ) ಕುಸ್ತಿ ಸ್ಪರ್ಧೆಯನ್ನು ಶಿಸ್ತಿನಿಂದ ನಿರ್ವಹಿಸುತ್ತಿದ್ದರು. ನಂತರದ ದಿನಗಳಲ್ಲಿಯೂ ಸಾಹುಕಾರ್ ಚೆನ್ನಯ್ಯನವರು, ಬಜ್ಜಣ್ಣ ಮತ್ತು ಯಜಮಾನ್ ಶಿವನಂಜಪ್ಪನವರು ಕುಸ್ತಿ ಬೆಳೆಯಲು ಕಾರಣವಾದರು.

-ಉಸ್ತಾದ್ ಕುಳ್ಳಣ್ಣ

ಈ ಬಾರಿಯ ದಸರಾ ಕುಸ್ತಿಗೆ ಜ್ಯೋತಿ ತಂದ ಪೈಲ್ವಾನರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry