ಕುಸ್ತಿ ಉಳಿಸಿಕೊಳ್ಳಲು ಶುರುವಾಗಿದೆ `ಕುಸ್ತಿ'

7

ಕುಸ್ತಿ ಉಳಿಸಿಕೊಳ್ಳಲು ಶುರುವಾಗಿದೆ `ಕುಸ್ತಿ'

Published:
Updated:
ಕುಸ್ತಿ ಉಳಿಸಿಕೊಳ್ಳಲು ಶುರುವಾಗಿದೆ `ಕುಸ್ತಿ'

ಕರ್ನಾಟಕದಲ್ಲಿ ಕುಸ್ತಿ ಚಟುವಟಿಕೆ ಕುರಿತು ಯೋಚಿಸುವಾಗ ಟಿ.ಆರ್.ಸ್ವಾಮಿಯವರನ್ನು ಹೊರತುಪಡಿಸುವಂತೆಯೇ ಇಲ್ಲ.    ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನಗಳಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜು ಮೈದಾನದ ಅಖಾಡದಲ್ಲಿ ಕುಸ್ತಿ ಆಡುತ್ತಿದ್ದ ಪೈಲ್ವಾನ ಇವರು. ಆಗಿನ ಮೈಸೂರು ವಿಶ್ವವಿದ್ಯಾಲಯ ತಂಡದಲ್ಲಿ ಸ್ಥಾನ ಪಡೆದಿದ್ದವರು. ನಂತರ ದೈಹಿಕ ಶಿಕ್ಷಣದಲ್ಲಿಯೇ ಉನ್ನತ ಶಿಕ್ಷಣ ಪಡೆದುದೇ ಅಲ್ಲದೆ, ಭಾರತದಲ್ಲಿ ಕುಸ್ತಿಯಲ್ಲಿಯೇ ಎನ್‌ಐಎಸ್ ತರಬೇತಿ ಪಡೆದ ಕೋಚ್‌ಗಳ ಮೊದಲ ತಂಡದಲ್ಲಿದ್ದವರು. ದಶಕಗಳ ಕಾಲ ತರಬೇತುದಾರರಾಗಿದ್ದರು. ವಿವಿಯ ದೈಹಿಕ ಶಿಕ್ಷಣ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದರು. ಕರ್ನಾಟಕ ರಾಜ್ಯ ಕುಸ್ತಿ ಸಂಸ್ಥೆಯಲ್ಲಿ 30 ವರ್ಷ ಕಾರ್ಯದರ್ಶಿಯಾಗಿದ್ದರು. 10 ವರ್ಷ ಇದರ ಅಧ್ಯಕ್ಷರಾಗಿದ್ದರು. ಭಾರತ ಕುಸ್ತಿ ಫೆಡರೇಷನ್‌ನ ಖಜಾಂಚಿಯಾಗಿ, ಹಿರಿಯ ಉಪಾಧ್ಯಕ್ಷರಾಗಿ ದಶಕದ ಕಾಲ ಸೇವೆ ಸಲ್ಲಿಸಿದರು. ಬಾರ್ಸಿಲೋನಾ ಒಲಿಂಪಿಕ್ಸ್, ಕೆನಡಾದಲ್ಲಿ ನಡೆದಿದ್ದ ಕುಸ್ತಿ ವಿಶ್ವ ಚಾಂಪಿಯನ್‌ಷಿಪ್ ಸೇರಿದಂತೆ ಹತ್ತಾರು ಅಂತರರಾಷ್ಟ್ರೀಯ ಕೂಟಗಳಲ್ಲಿ ಪಾಲ್ಗೊಂಡಿದ್ದಾರೆ. ಒಲಿಂಪಿಕ್ಸ್ ಕಾರ್ಯಕ್ರಮದಿಂದ ಕುಸ್ತಿಯನ್ನು ಕೈಬಿಟ್ಟಿರುವ ಬಗ್ಗೆ  83ರ ಹರೆಯದ ಪೈಲ್ವಾನ್ ಟಿ.ಆರ್.ಸ್ವಾಮಿಯವರು  `ಪ್ರಜಾವಾಣಿ'ಯ ಜತೆಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಕುಸ್ತಿ ಕ್ರೀಡೆಯ ಮೇಲೆ ಕೆಂಗಣ್ಣು ಬೀರಿದೆ. ಇದರಿಂದ ರಷ್ಯಾ, ಇರಾನ್, ಜಪಾನ್, ಉಕ್ರೇನ್, ಕಜಕಸ್ತಾನ ಸೇರಿದಂತೆ ಹಲವು ಕುಸ್ತಿಪ್ರಿಯ ದೇಶಗಳಿಗೆ ಐಒಸಿ ಮೇಲೆ ಅತಿಯಾದ ಸಿಟ್ಟು ಬಂದಿರಬಹುದು. ಅದೇ ರೀತಿ ಭಾರತೀಯರಿಗೂ ತೀವ್ರ ಅಸಮಾಧಾನವಾಗಿದೆ, ನಿಜ. ಆದರೆ ಇದರಿಂದ ಭಾರತ ಕಳೆದುಕೊಳ್ಳಲಿರುವುದು ಬಲು ದೊಡ್ಡದು ಎಂಬುದನ್ನು ನಾವು ಅರಿತು ಕೊಳ್ಳಬೇಕಿದೆ. ಈಗ ಎಲ್ಲವೂ ಮುಗಿದು ಹೋಗಿಲ್ಲ. ಮಾಸ್ಕೊದಲ್ಲೊಂದು ಸಭೆ ನಡೆಯಲಿದೆ. ಅಲ್ಲಿ ಈ ವಿಷಯ ಚರ್ಚೆಗೆ ಬರಲಿದೆ. ಆ ವೇಳೆಗೆ ಭಾರತ ತನ್ನ ಪ್ರಭಾವ ಬೀರಬೇಕಿದೆ. ಭಾರತದ ಜತೆಗೆ ದಕ್ಷಿಣ ಏಷ್ಯಾದ ಮಂದಿಯಷ್ಟೇ ಅಲ್ಲ, ಜಗತ್ತಿನಾದ್ಯಂತ ಬಹಳಷ್ಟು ಕುಸ್ತಿಪ್ರಿಯ ದೇಶಗಳು ಹೆಗಲು ಕೊಡಲಿವೆ ಎಂಬುದೂ ನಿಜ.ನಾನು ಕಳೆದ 60 ವರ್ಷಗಳಿಂದ ಭಾರತದ ಕುಸ್ತಿಯ ಏಳುಬೀಳುಗಳ ಜತೆಗೆ ಬೆಳೆದು ಬಂದಿದ್ದೇನೆ. ದಾವಣಗೆರೆಯಲ್ಲಿ ನನ್ನ ಬಾಲ್ಯದ ದಿನಗಳಲ್ಲಿ ಕಂಡಿದ್ದ ಕುಸ್ತಿ ಸಂಭ್ರಮ ಈಗಿಲ್ಲ. ಈಗ ಒಲಿಂಪಿಕ್ಸ್ ಎತ್ತರದಲ್ಲಿ `ಸೆಕೆಂಡುಗಳ ಲೆಕ್ಕಾಚಾರದ ಕುಸ್ತಿ' ಯದೇ ಅಬ್ಬರ. ಬಹಳ ಹಿಂದೆ ಒಬ್ಬ ಗೆಲ್ಲಬೇಕು, ಇನ್ನೊಬ್ಬ ಸೋಲಲೇಬೇಕು. ಅದೆಷ್ಟೇ ಹೊತ್ತಾದರೂ ಸೆಣಸಾಟ ನಡೆಯುತಿತ್ತು. ಸಾವಿರಾರು ಜನರ ಎದುರು ಶಕ್ತಿ ಪ್ರದರ್ಶನದ ಅನಾವರಣವಾಗುತಿತ್ತು. ನಂತರದ ದಿನಗಳಲ್ಲಿ ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ 15 ನಿಮಿಷಗಳ `ಬೌಟ್' ಆಯಿತು. ಆಗಲೂ ರೋಮಾಂಚನದ ಉತ್ತುಂಗವನ್ನು ಕಾಣಬಹುದಿತ್ತು. ನಂತರ ಅದು 15 ನಿಮಿಷವಾಯಿತು, 9 ಆಯ್ತು, 6 ಆಯ್ತು, ಈಗ ಎರಡು ನಿಮಿಷಗಳ `ಬೌಟ್'ಗೆ ಬಂದು ನಿಂತಿದೆ. ಈ ರೀತಿ ಕುಸ್ತಿಯ ರೋಮಾಂಚನದ ಕ್ಷಣಗಳನ್ನು ಕಡಿತಗೊಳಿಸುತ್ತಾ ಹೋದಂತೆ ಅದು ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಹಿಂದಿನ ಮನಮೋಹಕತೆಯನ್ನು ಕಳೆದುಕೊಳ್ಳುತ್ತಾ ಬಂದಿತು. ಇಂತಹ ಸಂದಿಗ್ಧದಲ್ಲಿ ಎಲ್ಲೋ ಒಂದು ಕಡೆ ಟೆಲಿವಿಷನ್ ಟಿಆರ್‌ಪಿಯನ್ನು ಗೆಲ್ಲುವಲ್ಲಿ ಈ ಕ್ರೀಡೆ ಹಿಂದೆ ಬಿದ್ದಾಗ, ಅದನ್ನೂ ಆಯುಧ ಮಾಡಿಕೊಂಡವರು ಕುಸ್ತಿಯ ಮೇಲೆ ದಾಳಿ ಶುರು ಮಾಡಿದ್ದಾರಷ್ಟೇ. ಈ ದಾಳಿಯ ವಿರುದ್ಧ ಕುಸ್ತಿಪ್ರಿಯ ದೇಶಗಳೆಲ್ಲವೂ ಒಗ್ಗೂಡಿ ತಂತ್ರಗಾರಿಕೆಯಿಂದ ಗೆಲ್ಲಬೇಕಾದ ಬಗ್ಗೆ ಚಿಂತನೆ ನಡೆಸಬೇಕಿದೆ.ಭಾರತದ ಮಟ್ಟಿಗೆ ಕುಸ್ತಿಗೆ ಅಪರೂಪದ ಹಿನ್ನಲೆ ಇದೆ. ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದೆಯೇ ಇಲ್ಲಿ ಮಲ್ಲಯುದ್ಧ ನಡೆಯುತ್ತಿದ್ದುದಕ್ಕೆ ಐತಿಹ್ಯಗಳಿವೆ. ಆದರೆ ಒಂದು ಸಾವಿರ ವರ್ಷದ ಹಿಂದೆ ಪರ್ಷಿಯನ್ನರು, ಮಂಗೋಲಿಯನ್ನರು ಭಾರತದತ್ತ ಬಂದರಲ್ಲಾ, ಅವರ ಜತೆಯಲ್ಲೇ ಅಲ್ಲಿನ `ಕುಸ್ತಿಪಟ್ಟು'ಗಳೂ ಬಂದವು. ಇಲ್ಲಿನ ಮಲ್ಲಯುದ್ಧದ ಜತೆ ಆ `ಪಟ್ಟು'ಗಳು ಐಕ್ಯವಾದವು. ಅನನ್ಯವಾದ ಭಾರತೀಯ ಕುಸ್ತಿಯು ಜನಮನ ಗೆದ್ದಿತು. ಆ ದಿನಗಳಲ್ಲಿ ಕ್ರೀಡೆ ಎಂದರೆ ಕುಸ್ತಿಯೇ. ಇಂತಹದ್ದೊಂದು ಪೈಪೋಟಿ, ಜಿದ್ದಾಜಿದ್ದಿ ನಡೆಯುತ್ತದೆ ಎಂದಾಗ ಅಕ್ಕಪಕ್ಕದ ಹಳ್ಳಿಗಳಿಗೂ ಸುದ್ದಿ ತಲುಪಿ ಕುಸ್ತಿ ನಡೆಯುವ ಊರಲ್ಲಿ ಜನಜಾತ್ರೆಯೇ ನಡೆದು ಬಿಡುತಿತ್ತು. ಪೈಲ್ವಾನರು ಆ ಕಾಲದಲ್ಲಿ ಈಗಿನ ಕಾಲದ ಚಲನಚಿತ್ರ ತಾರೆಯರಂತೆ ಜನಪ್ರಿಯರಾಗಿರುತ್ತಿದ್ದರು.ಸ್ವಾತಂತ್ರ್ಯಾನಂತರ ಇಂತಹದ್ದೊಂದು ಕುಸ್ತಿಯಲ್ಲಿ ಭಾರತ ತನ್ನ ಹಿರಿಮೆಯನ್ನು ಜಗಜ್ಜಾಹೀರುಗೊಳಿಸಲು ಹೊರಟು ನಿಂತಿತು. ಮಹಾರಾಷ್ಟ್ರ ನೆಲದ ಕೆ.ಡಿ.ಜಾಧವ್ ಎಂಬುವವರು 1948ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿ ಆರನೇ ಸ್ಥಾನ ಪಡೆದುಕೊಂಡಿದ್ದು, ದೊಡ್ಡ ಸಂಗತಿಯೇ ಹೌದು. ಜಾಧವ್ 1952ರಲ್ಲಿ ಹೆಲ್ಸಿಂಕಿಯಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿಯೂ ಪಾಲ್ಗೊಂಡರು. ಅಲ್ಲಿ ಅವರು ಕಂಚಿನ ಪದಕ ಗೆದ್ದಾಗ ಇಡೀ ಭಾರತ ಸಂಭ್ರಮಿಸಿತ್ತು. ಸ್ವತಂತ್ರ ಭಾರತ ಗೆದ್ದ ಮೊದಲ ವೈಯಕ್ತಿಕ ಒಲಿಂಪಿಕ್ ಪದಕ ಅದು. ಆ ನಂತರ ಅಂತಹ ಇನ್ನೊಂದು ವೈಯಕ್ತಿಕ ಪದಕ ಭಾರತಕ್ಕೆ ಸಿಕ್ಕಿದ್ದು 1996ರಲ್ಲಿ ಎಂಬುದನ್ನು ಗಮನಿಸಿದಾಗ ಜಾಧವ್ ಚಾರಿತ್ರಿಕ ಮಹತ್ವ ನಮಗೆ ಅರಿವಾಗುತ್ತದೆ.ಭಾರತದ ಪೈಲ್ವಾನರು 60ರ ದಶಕದಲ್ಲಿ ಅತ್ಯುತ್ತಮ `ಫಾರ್ಮ್'ನಲ್ಲಿದ್ದರು. ಜಕಾರ್ತಾದಲ್ಲಿ ನಾಲ್ಕನೇ ಏಷ್ಯನ್ ಕ್ರೀಡಾಕೂಟ ನಡೆದಿತ್ತು. ಆಗ ಭಾರತದ ಏಳು ಮಂದಿ ಪೈಲ್ವಾನರು ಪದಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಪ್ರೀಸ್ಟೈಲ್ ಮತ್ತು ಗ್ರೀಕೊ ರೋಮನ್ ಕುಸ್ತಿಗಳಲ್ಲಿ ಇವರು ಆಗ ಒಟ್ಟು 12 ಪದಕಗಳನ್ನು ಗಳಿಸಿದ್ದು ಕಡಿಮೆ ಸಾಧನೆಯಂತೂ ಅಲ್ಲವೇ ಅಲ್ಲ. ಆ ದಿನಗಳಲ್ಲಿ ಭಾರತದಾದ್ಯಂತ ಒಂದಿಲ್ಲಾ ಒಂದು ಕುಸ್ತಿ ಕಾರ್ಯಕ್ರಮ ಗಮನ ಸೆಳೆದಿತ್ತು. ಹೀಗಾಗಿ 1967ರಲ್ಲಿ ದೆಹಲಿಯಲ್ಲಿ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್ ನಡೆದಿತ್ತು.ಆ ನಂತರ ಸುಶಿಲ್ ಕುಮಾರ್ ಅವರ ಬೀಜಿಂಗ್ ಒಲಿಂಪಿಕ್ಸ್ ಸಾಧನೆಯೇ ಮಹತ್ತರವಾದುದು. ಸುಶಿಲ್ ಮತ್ತೆ ಲಂಡನ್ ಒಲಿಂಪಿಕ್ಸ್‌ನಲ್ಲಿಯೂ ಬೆಳ್ಳಿಗೆರೆ ಮೂಡಿಸಿದ್ದರು. ಜತೆಗೆ ಯೋಗೇಶ್ವರ್ ದತ್ತ ಕಂಚಿನ ಸಾಧನೆಯ ಹೆಗ್ಗಳಿಕೆ. ಹೌದು, ಭಾರತ ಕುಸ್ತಿಗೆ ಸಂಬಂಧಿಸಿದಂತೆ ಇದೀಗ ಒಲಿಂಪಿಕ್ಸ್‌ನತ್ತ ದೃಢವಾದ ಹೆಜ್ಜೆಗಳನ್ನು ಇಡುತ್ತಾ ಸಾಗಿದೆ. ಸುಶಿಲ್ ರಯೋ ಡಿ ಜನೈರೊದಲ್ಲಿಯೂ ಪದಕ ಗೆಲ್ಲುವ ಆತ್ಮವಿಶ್ವಾಸ ಹೊಂದಿದ್ದಾರೆ. ಕುಸ್ತಿಯ ಇತರ ವಿಭಾಗಗಳಲ್ಲಿಯೂ ನೂರಾರು ಮಂದಿ ಸಜ್ಜುಗೊಳ್ಳುತ್ತಿದ್ದಾರೆ. ಪರಿಸ್ಥಿತಿ ಈ ರೀತಿ ಇರುವಾಗ 2020ರ ಒಲಿಂಪಿಕ್ಸ್‌ನಿಂದ ಕುಸ್ತಿಯನ್ನು ಒಲಿಂಪಿಕ್ಸ್ ಕಾರ್ಯಕ್ರಮದಿಂದಲೇ ಕೈಬಿಡುವುದಾಗಿ ಐಒಸಿ ಹೇಳಿರುವುದು ಭಾರತದ ಮಟ್ಟಿಗಂತೂ ವಿವೇಕ ಶೂನ್ಯ ಮಾತಾಗಿದೆ.15 ನಿಮಿಷಗಳ ಬೌಟ್‌ನಿಂದ ಇದೀಗ 2 ನಿಮಿಷಗಳ ಬೌಟ್‌ಗೆ ಇಳಿದಿರುವ ಸ್ಪರ್ಧೆಗಳು ಆಕರ್ಷಣೆ ಕಳೆದುಕೊಳ್ಳುತ್ತಿರುವುದನ್ನು ಕಂಡಾಗ, ಹೋಗಲಿ ಬಿಡಿ ಇಂತಹ ಕುಸ್ತಿ ಇದ್ದರೆಷ್ಟು ಬಿಟ್ಟರೆಷ್ಟು ಎಂಬ ಯೋಚನೆಯೂ ಬರುತ್ತದೆ. ಈ ಹಿನ್ನೆಲೆಯಲ್ಲಿ ಒಲಿಂಪಿಕ್ಸ್‌ನಲ್ಲಿ ಈ ಕ್ರೀಡೆಯನ್ನು ಉಳಿಸಿಕೊಳ್ಳಲು ನಾವು ಹೆಚ್ಚು ಒತ್ತಡ ಹೇರುವುದರ ಜತೆಗೆ `ಹಣಾಹಣಿ'ಯ ಸಮಯವನ್ನು ಹೆಚ್ಚು ಮಾಡುವ ನಿಟ್ಟಿನಲ್ಲೂ ತಿಳಿವಳಿಕೆ ನೀಡಬೇಕಾದ ಅಗತ್ಯವಿದೆ.ಒಲಿಂಪಿಕ್ಸ್‌ನಲ್ಲಿ ಸುಶಿಲ್, ಯೋಗೇಶ್ವರ್ ಮುಂತಾದವರು ಸುದ್ದಿಯಾಗಿರುವ ಹಿನ್ನೆಲೆಯಲ್ಲಿ ಈಚೆಗೆ ಕಾರ್ಪೊರೇಟ್ ಮಂದಿಯೂ ಕುಸ್ತಿಯತ್ತ ನೋಡುತ್ತಿದ್ದಾರೆ. ಸರ್ಕಾರಗಳಂತೂ ಕುಸ್ತಿಪಟುಗಳಿಗೆ ನೆರವು ನೀಡಲು ನಾಮುಂದು ತಾಮುಂದು ಎನ್ನತೊಡಗಿದವು. ಇದೆಲ್ಲಾ ಅತ್ಯಂತ ಸಂತಸದ ಕ್ಷಣಗಳಾಗಿದ್ದವು. ನಾನು ಕಂಡ ಹಾಗೆ ಹಿಂದೆ ಕುಸ್ತಿಪಟುಗಳನ್ನು ಯಾವ ಸರ್ಕಾರವೂ ಕೇಳುತ್ತಿರಲಿಲ್ಲ. ಪೈಲ್ವಾನರ ರಟ್ಟೆಗಳಲ್ಲಿ ಕಸುವು ಕಡಿಮೆಯಾದಾಗ ಅವರ ಸ್ಥಿತಿ ತೀರಾ ತೊಂದರೆಗೆ ಸಿಲುಕಿರುತ್ತಿದ್ದವು.ಆದರೆ ಹರಿಯಾಣ, ಪಂಜಾಬ್, ದಿಲ್ಲಿಗಳಲ್ಲಿ ಕುಸ್ತಿಯ ಬಗ್ಗೆ ಅಪಾರ ಪ್ರೀತಿ. ಅಲ್ಲಿನ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕಿಂತ ಹೆಚ್ಚು ಉತ್ಸಾಹದಿಂದ ಅಖಾಡಗಳಿಗೆ ಕಳಿಸುತ್ತಾರೆ. ಕುಸ್ತಿಯಲ್ಲಿ ಭಾರತವನ್ನು ಪ್ರತಿನಿಧಿಸುವ ಪೈಲ್ವಾನನಿಗೆ ಅಲ್ಲಿನ ಪೊಲೀಸ್ ಇಲಾಖೆಗಳಲ್ಲಿ ಡಿವೈಎಸ್‌ಪಿ ಹುದ್ದೆ ಮೀಸಲು ಎನ್ನುವುದು ಸಾಮಾನ್ಯವಾಗಿಬಿಟ್ಟಿದೆ.ಆದರೆ ಕರ್ನಾಟಕದಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಎ.ಜೆ.ಆನಂದನ್ ಹಿಂದೆ ಕುಸ್ತಿಪಟುಗಳಿಗೆ ನೀಡಿದ ನೆರವನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ಕರ್ನಾಟಕ ತಂಡವನ್ನು ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಿಗೆ ಕಳುಹಿಸುತ್ತಿದ್ದಂತೆ ಆನಂದನ್ ಅವರಿಂದ ನನಗೆ ಕರೆ ಬರುತಿತ್ತು. ತಂಡದ ಪಟ್ಟಿಯನ್ನು ಪಡೆದುಕೊಂಡು ಅವರೆಲ್ಲರಿಗೂ ಪೊಲೀಸ್ ಇಲಾಖೆಯಲ್ಲಿ ಕೆಲಸ ಕೊಡುತ್ತಿದ್ದರು. ಅಂತಹ ಇನ್ನೊಬ್ಬ ಅಧಿಕಾರಿಯನ್ನು ನಾನು ಕಂಡಿಲ್ಲ.ರೈಲ್ವೆ ಇಲಾಖೆಯು ಪೈಲ್ವಾನರನ್ನು ತಯಾರಿಸಲಿಲ್ಲ ನಿಜ, ಆದರೆ ಅದು ಪೈಲ್ವಾನರಿಗೆ ನೆರಳು ನೀಡಿತು, ತಂಪು ನೀಡಿತು.

ಇಂತಹ ಎಲ್ಲಾ ಏಳುಬೀಳುಗಳ ನಡುವೆ ಭಾರತದಲ್ಲಿ ಕುಸ್ತಿ ಇದೀಗ ಎತ್ತರಕ್ಕೆ ಬೆಳೆದು ನಿಂತಿದೆ. ಜನಮನ ಗೆದ್ದಿದೆ. ಕೆ.ಡಿ.ಜಾಧವ್ ಅವರನ್ನು ಜನ ಮರೆತಿರಬಹುದು, ಆದರೆ ಈಗ ಸುಶಿಲ್, ಯೋಗೇಶ್ವರ ದತ್ತ ಹಳ್ಳಿಹಳ್ಳಿಗಳಿಗೂ ತಲುಪಿಬಿಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಕ್ರೀಡೆಯನ್ನು ಒಲಿಂಪಿಕ್ಸ್ ಕಾರ್ಯಕ್ರಮದಿಂದ ತೆಗೆದುಹಾಕಲು ಪ್ರಯತ್ನ ನಡೆಯುತ್ತಿರುವುದು ಭಾರತದ ಮಟ್ಟಿಗೆ ಅಪಾರ ನೋವು ತರುವಂತಹ ಸಂಗತಿಯಾಗಿದೆ.

`ಭಾರತ ಐಒಸಿ ಮೇಲೆ ಒತ್ತಡ ಹೇರಲಿದೆ'

ಒಲಿಂಪಿಕ್ಸ್ ಕಾರ್ಯಕ್ರಮದಿಂದ ಕುಸ್ತಿಯನ್ನು ಹೊರಗಿಡುವ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ನಿರ್ಧಾರ ಗೊತ್ತಾದ ಮೇಲೆ ಭಾರತ ಕುಸ್ತಿ ಫೆಡರೇಷನ್ ಸುಮ್ಮನೆ ಕುಳಿತಿಲ್ಲ. ಸದ್ಯದಲ್ಲಿಯೇ ಮಾಸ್ಕೊದಲ್ಲಿ ನಡೆಯಲಿರುವ ಒಲಿಂಪಿಕ್ ಸಮಿತಿ ಸಭೆಯಲ್ಲಿ ಭಾರತವಷ್ಟೇ ಅಲ್ಲ, ಕುಸ್ತಿಪ್ರಿಯ ದೇಶಗಳೆಲ್ಲದರ ಪರವಾಗಿ ಒತ್ತಡ ಹೇರಲಾಗುವುದು.ಇದಕ್ಕೆ ಸಂಬಂಧಿಸಿದಂತೆ ಭಾರತ ಕುಸ್ತಿ ಫೆಡರೇಷನ್ ಕಾರ್ಯದರ್ಶಿಯವರ ಜತೆಗೆ ಈಗಾಗಲೇ ನಾನು ಚರ್ಚಿಸಿದ್ದೇನೆ. ಕೆಲವೇ ದಿನಗಳಲ್ಲಿ ದೆಹಲಿಯಲ್ಲಿ ನಡೆಯಲಿರುವ ಫೆಡರೇಷನ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ ಒಂದು ನಿರ್ಧಾರಕ್ಕೆ ಬರಲಿದ್ದೇವೆ.ರಷ್ಯಾ, ಮಂಗೋಲಿಯ, ಕಜಕಸ್ತಾನ ಸೇರಿದಂತೆ ಕುಸ್ತಿ ಆಡುವ ದೇಶಗಳ ಕುಸ್ತಿ ಸಂಘಟನೆಗಳ ಜತೆಗೆ ಭಾರತದ ಫೆಡರೇಷನ್ ಮಾತುಕತೆ ನಡೆಸಿ ಎಲ್ಲರನ್ನೂ ಒಂದು ಚೌಕಟ್ಟಿನೊಳಗೆ ತಂದು ಐಒಸಿ ಅಧಿಕಾರಸ್ತರಲ್ಲಿ ಅರಿವು ಮೂಡಿಸಲೆತ್ನಿಸುವ ಉದ್ದೇಶವಿದೆ. ಜತೆಗೆ ಒತ್ತಡ ತಂತ್ರವನ್ನೂ ಬಳಸಲಿದ್ದೇವೆ. ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ದೆಹಲಿ, ರಾಜಸ್ತಾನ ಮುಂತಾದ ರಾಜ್ಯಗಳಲ್ಲಿ ಕುಸ್ತಿ ಕ್ರೀಡೆ ಅಪಾರ ಜನಪ್ರಿಯತೆ ಹೊಂದಿದೆ. ಅಂತಹ ರಾಜ್ಯಗಳ ಪ್ರಭಾವಿ ಮುಖಂಡರು ಕೇಂದ್ರ ಸರ್ಕಾರದ ಆಡಳಿತಗಾರರ ಮೇಲೆ ಒತ್ತಡ ಹೇರಲಿದ್ದಾರೆ. ಹೀಗಾಗಿ ಸ್ವತಃ ಪ್ರಧಾನಿಯವರೇ ಈ ಬಗ್ಗೆ ಮುತುವರ್ಜಿ ವಹಿಸಲಿದ್ದು, ಸರ್ಕಾರದ ಮುಖಾಂತರವೇ ಐಒಸಿ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಕಾಮನ್‌ವೆಲ್ತ್ ದೇಶಗಳ ಒಕ್ಕೂಟ ಕೂಡಾ ಈ ಕ್ರೀಡೆಯನ್ನು ಉಳಿಸಿಕೊಳ್ಳುವ ಬಗ್ಗೆ ಆಸಕ್ತಿ ವಹಿಸಿದೆ. ಅಂತರರಾಷ್ಟ್ರೀಯ ಕುಸ್ತಿ ಸಂಸ್ಥೆಯಂತೂ ಒಲಿಂಪಿಕ್ಸ್‌ನಲ್ಲಿ ಈ ಕ್ರೀಡೆಯನ್ನು ಉಳಿಸಿಕೊಳ್ಳಲೇ ಬೇಕೆಂದು ಪಟ್ಟು ಹಿಡಿದು ಆ ನಿಟ್ಟಿನಲ್ಲಿ ಸಮರಕ್ಕೆ ಸಜ್ಜಾಗಿದೆ.ಆಧುನಿಕ ಪೆಂಟತ್ಲಾನ್ 1912ರ ಸ್ಟಾಕ್‌ಹೋಮ್ ಒಲಿಂಪಿಕ್ಸ್ ಕೂಟದಿಂದಲೇ ಒಲಿಂಪಿಕ್ಸ್‌ನ ಅವಿಭಾಜ್ಯ ಅಂಗವಾಗಿದೆ. ಒಲಿಂಪಿಕ್ಸ್‌ನಲ್ಲಿ ಇದಕ್ಕೂ ಕುಸ್ತಿಯಷ್ಟೇ ಪರಂಪರೆ ಇದೆ. ಅದನ್ನೇ ಆಗಲಿ, ಇನ್ನಾವುದೇ ಕ್ರೀಡೆಯನ್ನಾಗಲಿ ಕೈಬಿಡಿ ಎಂದು ನಾವು ಹೇಳುವುದಿಲ್ಲ. ಆದರೆ ಕುಸ್ತಿಯನ್ನು ಕೈಬಿಡಬೇಡಿ ಎನ್ನುತ್ತೇವಷ್ಟೆ.ಭಾರತದಲ್ಲಿ ಕಳೆದ ಒಂದು ದಶಕದ ಈಚೆಗಂತೂ ಕುಸ್ತಿ ಹಿಂದಿಗಿಂತಲೂ ಹೆಚ್ಚು ವ್ಯಾಪಕಗೊಳ್ಳುತ್ತಿದೆ. ನಮ್ಮ ಪೈಲ್ವಾನರಲ್ಲಿ ಉದ್ದೀಪನಾ ಮದ್ದು ಸೇವನೆಯ ಹಾವಳಿ ಇಲ್ಲವೇ ಇಲ್ಲ. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಹಾದಿಯಲ್ಲಿ ಭಾರತದ ಪೈಲ್ವಾನರು ದಾಪುಗಾಲು ಇಡುತ್ತಿರುವಂತಹ ಇಂತಹ ಕಾಲಘಟ್ಟದಲ್ಲಿ ಐಒಸಿ ನಿರ್ಧಾರ ನಿಜಕ್ಕೂ ವಿಷಾದಕರವಾಗಿದೆ. ಆ ನಿರ್ಧಾರವನ್ನು ಬದಲಿಸುವುದಕ್ಕೆ ಭಾರತ ತನ್ನ ಶಕ್ತಿ ಮೀರಿ ಪ್ರಯತ್ನಿಸಲಿದೆ.

ಡಾ.ಮುನಿರೆಡ್ಡಿ ಜಂಟಿ ಕಾರ್ಯದರ್ಶಿ, ಭಾರತ ಕುಸ್ತಿ ಫೆಡರೇಷನ್, ಅಧ್ಯಕ್ಷರು, ಕರ್ನಾಟಕ ಕುಸ್ತಿ ಸಂಸ್ಥೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry