ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದ ಗಗನ್

5

ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದ ಗಗನ್

Published:
Updated:
ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದ ಗಗನ್

ರಾಂಚಿ: ಪ್ರತಿಭಾನ್ವಿತ ಈಜು ಸ್ಪರ್ಧಿ ಎ.ಪಿ. ಗಗನ್ ಅವರು 34ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸೋಮವಾರ ನೂತನ ಕೂಟ ದಾಖಲೆಯೊಂದಿಗೆ ಕರ್ನಾಟಕಕ್ಕೆ ಚಿನ್ನ ತಂದಿತ್ತರು. ಪುರುಷರ ರಿಲೆ ತಂಡವೂ ಬಂಗಾರದ ನಗು ಬೀರಿತು.ಗಗನ್ ಸೋಮವಾರ ಬುಧು ಭಗತ್ ಈಜು ಕೇಂದ್ರದಲ್ಲಿ ಮಿಂಚಿನ ಸಂಚಲನ ಉಂಟು ಮಾಡಿದರು. 1500 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಅವರು 16 ನಿಮಿಷ 15:54 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಅಗ್ರಸ್ಥಾನ ಪಡೆದರು.ಕರ್ನಾಟದವರೇ ಆದ ರೋಹಿತ್ ಹವಾಲ್ದಾರ್ ಅವರು ನಾಲ್ಕು ವರ್ಷಗಳ ಹಿಂದೆ ಸ್ಥಾಪಿಸಿದ್ದ ಕೂಟ ದಾಖಲೆಯನ್ನು (16.24:54) ಗಗನ್ ಮುರಿದರು. 19ರ ಹರೆಯದ ಸ್ಪರ್ಧಿ ಅದ್ಭುತ ಪ್ರದರ್ಶನ ತೋರಿದರಲ್ಲದೆ, ರಾಷ್ಟ್ರೀಯ ದಾಖಲೆ ಹೊಂದಿರುವ ಮಂದರ್ ದಿವಾಸೆ (16.41:07) ಅವರನ್ನು ಹಿಂದಿಕ್ಕಿದರು.ಮೊದಲ 50 ಮೀ. ಕ್ರಮಿಸುವುದರ ಒಳಗಾಗಿ ಗಗನ್ ಇತರ ಎಲ್ಲ ಸ್ಪರ್ಧಿಗಳನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿದ್ದರು. ಆ ಬಳಿಕ ಅದೇ ಮುನ್ನಡೆಯನ್ನು ಕೊನೆಯವರೆಗೂ ಉಳಿಸಿ ಂಡು ಚಿನ್ನದ ನಗು ಬೀರಿದರು.‘ಬಂಗಾರ ಗೆಲ್ಲುವ ಮೂಲಕ ನನ್ನ ಕನಸು ಈಡೇರಿದೆ. ಮಾತ್ರವಲ್ಲ ಕೂಟ ದಾಖಲೆಯನ್ನೂ ಸ್ಥಾಪಿಸಲು ಸಾಧ್ಯವಾಗಿದೆ’ ಎಂದು ಗಗನ್ ಪ್ರತಿಕ್ರಿಯಿಸಿದರು. ‘ರಾಷ್ಟ್ರೀಯ ಕ್ರೀಡಾಕೂಟ ನನಗೆ ಮಹತ್ವದ್ದಾಗಿತ್ತು. ಇಲ್ಲಿ ಉತ್ತಮ ಪ್ರದರ್ಶನ ನೀಡಿದರೆ ನನಗೆ ಪ್ರಾಯೋಜಕರು ಲಭಿಸಬಹುದು. ಆ ಮೂಲಕ 2012ರ ಲಂಡನ್ ಒಲಿಂಪಿಕ್‌ಗೆ ಸಿದ್ಧತೆ ಮಾಡಿಕೊಳ್ಳಬಹುದು’ ಎಂದರು.ಈಜು ಸ್ಪರ್ಧೆಯಲ್ಲಿ ಕರ್ನಾಟಕ ಮತ್ತೊಂದು ಚಿನ್ನ ಜಯಿಸಿತು. ರಾಜ್ಯದ ಪುರುಷರ ರಿಲೆ ತಂಡ 4ಷ100 ಮೀ. ಮೆಡ್ಲೆ ಸ್ಪರ್ಧೆಯಲ್ಲಿ ಕೂಟ ದಾಖಲೆಯೊಂದಿಗೆ ಸ್ವರ್ಣ ಗೆದ್ದುಕೊಂಡಿತು. ಅಶ್ವಿನ್ ಮೆನನ್, ಆದಿತ್ಯ ರೋಶನ್, ಜೆ.ಪಿ. ಅರ್ಜುನ್ ಮತ್ತು ರೋಹಿತ್ ಹವಾಲ್ದಾರ್ ಅವರನ್ನೊಳಗೊಂಡ ತಂಡ 04.02:21 ನಿಮಿಷಗಳಲ್ಲಿ ಸ್ಪರ್ಧೆ ಕೊನೆಗೊಳಿಸಿತು.ಕರ್ನಾಟಕ ಮಹಿಳೆಯರ ತಂಡ 4ಷ100 ಮೀ. ಮೆಡ್ಲೆ ರಿಲೇ ಸ್ಪರ್ಧೆಯಲ್ಲಿ ಕಂಚು ಜಯಿಸಿತು. ಈ ವಿಭಾಗದ ಬಂಗಾರದ ಪದಕ ಮಹಾರಾಷ್ಟ್ರ ತಂಡದ ಪಾಲಾಯಿತು. ಬೆಳ್ಳಿಯನ್ನು ತಮಿಳುನಾಡು ತಂಡ ಜಯಿಸಿತು. ಕ್ಷಿಪ್ರಾ ಮಹಾಜನ್, ಆರ್. ಕೀರ್ತನಾ, ಪೂಜಾ ಆರ್ ಆಳ್ವ ಮತ್ತು ಕೆ. ಪ್ರತಿಮಾ ಅವರನ್ನೊಳಗೊಂಡ ರಾಜ್ಯ ತಂಡ 4:59.90 ನಿಮಿಷಗಳಲ್ಲಿ ಗುರಿ ತಲುಪಿತು.ವಾಟರ್‌ಪೋಲೊ ಸ್ಪರ್ಧೆಯ ಪುರುಷರ ವಿಭಾಗದ ಪಂದ್ಯದಲ್ಲಿ ಸರ್ವಿಸಸ್ ತಂಡ 11-0 ರಲ್ಲಿ ಕರ್ನಾಟಕ ವಿರುದ್ಧ ಜಯ ಸಾಧಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry