ಸೋಮವಾರ, ಮೇ 17, 2021
23 °C

ಕೂಡಗಿಯಲ್ಲಿ ಭರವಸೆಯ ಬೆಳಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸರ್ಕಾರಿ ಸ್ವಾಮ್ಯದ `ಎನ್‌ಟಿಪಿಸಿ~ ವಿಜಾಪುರ ಜಿಲ್ಲೆಯ ಕೂಡಗಿಯಲ್ಲಿ ಮುಂದಿನ ಮೂರು ವರ್ಷದಲ್ಲಿ 800 ಮೆ.ವಾ ಸಾಮರ್ಥ್ಯದ ಮೂರು ಉಷ್ಣ ವಿದ್ಯುತ್ ಉತ್ಪಾದನಾ ಘಟಕಗಳನ್ನು  ಆರಂಭಿಸಲಿದೆ.ಕೂಡಗಿ ಗ್ರಾಮದಲ್ಲಿ ವಿದ್ಯುತ್ ಘಟಕಗಳಿಗೆ ಮಂಜೂರಾಗಿರುವ ಭೂಮಿಯನ್ನು ಸಮತಟ್ಟು ಮಾಡಿ ಕಾಂಪೌಂಡ್ ನಿರ್ಮಿಸುವ ಕೆಲಸ ತ್ವರಿತವಾಗಿ ಸಾಗಿದೆ ಎಂದು ಕೇಂದ್ರ ಇಂಧನ ಖಾತೆ ಸಚಿವ ಸುಶೀಲ್ ಕುಮಾರ್ ಶಿಂಧೆ `ಪ್ರಜಾವಾಣಿ~ಗೆ ತಿಳಿಸಿದರು.ಈ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಕಲ್ಲಿದ್ದಲು ಪೂರೈಸಲು ಅನುಕೂಲವಾಗುವಂತೆ ಹೊಸ ರೈಲು ಮಾರ್ಗ ನಿರ್ಮಾಣದ ಬಗ್ಗೆ ಎನ್‌ಟಿಪಿಸಿ ಅಧಿಕಾರಿಗಳು ರೈಲ್ವೆ ಮಂಡಳಿ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದಾರೆ. ಕಂಪೆನಿಗೆ ಸೇರಿದ ಜಾರ್ಖಂಡ್ ಗಣಿಯಿಂದ ಕಲ್ಲಿದ್ದಲು ಪೂರೈಕೆ ಮಾಡಲಾಗುವುದು. ಈ ಘಟಕಗಳು ಕಾರ್ಯಾರಂಭ ಮಾಡುವುದರಿಂದ ಮೂರು ಸಾವಿರದಷ್ಟು ಉದ್ಯೋಗ ಸೃಷ್ಟಿಯಾಗಲಿದೆ.ಮೊದಲ ಹಂತದ ಯೋಜನೆಗೆ ಪರಿಸರ ಮತ್ತು ಅರಣ್ಯ ಸಚಿವಾಲಯದ ಅನುಮೋದನೆ ದೊರೆತಿದೆ. ಎನ್‌ಟಿಪಿಸಿ ಆಡಳಿತ ಮಂಡಳಿ 15,166ಕೋಟಿ ಹೂಡಿಕೆಗೆ ಒಪ್ಪಿಗೆ ನೀಡಿದೆ. ಕೂಡಗಿ ಗ್ರಾಮದಲ್ಲಿ ಒಟ್ಟು 4000 ಮೆ.ವಾ. ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದ್ದು, ಮೊದಲ ಹಂತದಲ್ಲಿ 2400 ಉತ್ಪಾದನೆ ಮಾಡಲಾಗುತ್ತಿದೆ.ಕೇಂದ್ರ ಜಾಲದಲ್ಲಿ ಲಭ್ಯವಿರುವ ಹೆಚ್ಚುವರಿ ವಿದ್ಯುತ್ ಅನ್ನು ರಾಜ್ಯಗಳ ಬೇಡಿಕೆ ಆಧರಿಸಿ ಹಂಚಿಕೆ ಮಾಡಲಾಗುವುದು ಎಂದು ಶಿಂಧೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ವಿದ್ಯುತ್ ಹಂಚಿಕೆಯ ವಿಷಯದಲ್ಲಿ ಕೇಂದ್ರ ಕರ್ನಾಟಕದ ಬಗೆಗೆ ಮಲತಾಯಿ ಧೋರಣೆ ತಳೆದಿದೆ ಎಂಬ ಆರೋಪವನ್ನು ತಳ್ಳಿಹಾಕಿದರು. ಬೇರೆ ನೆರೆಹೊರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ವಿದ್ಯುತ್ ಪರಿಸ್ಥಿತಿ ಉತ್ತಮವಾಗಿದೆ ಎಂದು ಸ್ಪಷ್ಟಪಡಿಸಿದರು.ಹರಿಯಾಣದ ಜಜ್ಜಾರ್‌ನಲ್ಲಿ ಹೊಸದಾಗಿ ಆರಂಭಿಸಲಾಗಿರುವ ವಿದ್ಯುತ್ ಘಟಕದಿಂದ ಕರ್ನಾಟಕಕ್ಕೆ ವಿದ್ಯುತ್ ಹಂಚಿಕೆ ಮಾಡಿಲ್ಲ ಎಂಬ ನಿರ್ದಿಷ್ಟ ಆರೋಪಕ್ಕೆ ಉತ್ತರಿಸಿದ ಸಚಿವರು, ಈ ಬಗ್ಗೆ ಅಧಿಕಾರಿಗಳಿಂದ ವಿವರ ಪಡೆಯುವುದಾಗಿ ತಿಳಿಸಿದರು. ಈ ಘಟಕದಿಂದ ಕರ್ನಾಟಕಕ್ಕೆ ಒಂದೇ ಒಂದು ಮೆ.ವಾ. ವಿದ್ಯುತ್ ಅನ್ನು ಕೇಂದ್ರ ಹಂಚಿಕೆ ಮಾಡಿಲ್ಲ ಎಂದು ರಾಜ್ಯದ ಇಂಧನ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಇತ್ತೀಚೆಗೆ ಆರೋಪ ಮಾಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.