ಕೂಡುಂಕುಳಂ ಪರಮಾಣು ಸ್ಥಾವರ ವಿರುದ್ಧ ಸಮುದ್ರಕ್ಕಿಳಿದು ಪ್ರತಿಭಟನೆ

7

ಕೂಡುಂಕುಳಂ ಪರಮಾಣು ಸ್ಥಾವರ ವಿರುದ್ಧ ಸಮುದ್ರಕ್ಕಿಳಿದು ಪ್ರತಿಭಟನೆ

Published:
Updated:

ಚೆನ್ನೈ (ಐಎಎನ್‌ಎಸ್): ಕೂಡುಂಕುಳಂ ಪರಮಾಣು ವಿದ್ಯುತ್ ಯೋಜನೆಗೆ (ಕೆಎನ್‌ಪಿಪಿ) ವಿರೋಧ ವ್ಯಕ್ತಪಡಿಸಿ  ಮೀನುಗಾರರು, ವ್ಯಾಪಾರಸ್ಥರು ಹಾಗೂ ಹಲವಾರು ಕಾರ್ಯಕರ್ತರು ಸೋಮವಾರ ಅಣು ಸ್ಥಾವರದ ಸಮೀಪ ಸಮುದ್ರಕ್ಕಿಳಿದು ಪ್ರತಿಭಟನೆ ನಡೆಸಿದರು. ಕನ್ಯಾಕುಮಾರಿ, ತಿರುನಲ್ವೇಲಿ ಮತ್ತು ತೂತ್ತುಕುಡಿಯಿಂದ  ಮೀನುಗಾರರ ದೋಣಿಗಳಲ್ಲಿ ಬಂದಿದ್ದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎಂದು ಪರಮಾಣು ಶಕ್ತಿ ವಿರುದ್ಧದ ನಾಗರಿಕ ಚಳುವಳಿಯ (ಪಿಎಂಎಎನ್‌ಇ) ಮುಖಂಡರಾದ ಎಂ. ಪುಷ್ಪರಾಯನ್ ತಿಳಿಸಿದರು.ಕಳೆದ ತಿಂಗಳು ಇದೇ ರೀತಿ ಪ್ರತಿಭಟನಾಕಾರರು ಸಮುದ್ರಕ್ಕಿಳಿದು ಪ್ರತಿಭಟನೆ ನಡೆಸಿದ್ದರು. 3 ಸಾವಿರ ಪೊಲೀಸರನ್ನು ಕೂಡುಂಕುಳಂ ಸಮೀಪ ನಿಯೋಜಿಸಲಾಗಿದೆ.  ಕೆಎನ್‌ಪಿಪಿ ವಿರುದ್ಧ ಪಿಎಂಎಎನ್‌ಇ ಒಂದು ವರ್ಷದಿಂದಲೂ ನಾಗರಿಕ ಚಳುವಳಿಯನ್ನು ನಡೆಸುತ್ತಾ ಬಂದಿದೆ. ಗ್ರಾಮಸ್ಥರು ಕೂಡ ಜಪಾನಿನಲ್ಲಿ ಸಂಭವಿಸಿದ ಫುಕುಶಿಮಾ ದುರಂತದಂತೆ ಮತ್ತೊಂದು ಅವಘಡ ಸಂಭವಿಸುವ ಸಾಧ್ಯತೆಯಿದೆ ಎಂದು ಭಯಭೀತರಾಗಿ ಸ್ಥಾವರ ಯೋಜನೆ ವಿರೋಧಿಸಿ ಪಿಎಂಎಎನ್‌ಇ ಯೊಂದಿಗೆ ಸೇರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಭಾರತೀಯ ಪರಮಾಣು ವಿದ್ಯುತ್ ನಿಗಮವು (ಎನ್‌ಪಿಸಿಐಎಲ್) ರಷ್ಯಾ ಸಹಯೋಗದೊಂದಿಗೆ  ಕೂಡುಂಕುಳಂನಲ್ಲಿ ಸಾವಿರ ಮೆಗಾ ವಾಟ್ ವಿದ್ಯುತ್ ಸಾಮರ್ಥ್ಯದ ಎರಡು ರಿಯಾಕ್ಟರ್‌ಗಳನ್ನು ನಿರ್ಮಿಸುತ್ತಿದೆ.    

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry