ಕೂಡುಂಕುಳಂ: ಪ್ರತಿಭಟನೆಗೆ ಅಮೆರಿಕ ಎನ್‌ಜಿಒಗಳ ಕುಮ್ಮಕ್ಕು

7

ಕೂಡುಂಕುಳಂ: ಪ್ರತಿಭಟನೆಗೆ ಅಮೆರಿಕ ಎನ್‌ಜಿಒಗಳ ಕುಮ್ಮಕ್ಕು

Published:
Updated:

ನವದೆಹಲಿ: `ತಮಿಳುನಾಡಿನ ಕೂಡುಂಕುಳಂ ಅಣುಸ್ಥಾವರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಹಿಂದೆ ಅಮೆರಿಕದ ಸರ್ಕಾರೇತರ ಸಂಸ್ಥೆ(ಎನ್‌ಜಿಒ)ಗಳ ಕೈವಾಡವಿದೆ~ ಎಂಬ ಪ್ರಧಾನಿ ಮನಮೋಹನ್‌ಸಿಂಗ್ ಅವರ ಆರೋಪವನ್ನು ರಷ್ಯ  ಶನಿವಾರ ಪುನರುಚ್ಚರಿಸಿದೆ.ಇದರಿಂದಾಗಿ ಈ ಸಂಬಂಧ ಪ್ರಧಾನಿ  ಶುಕ್ರವಾರ ನೀಡಿರುವ ಹೇಳಿಕೆಗೆ ಸಮರ್ಥನೆ ದೊರೆತಂತಾಗಿದೆ. ಇದರ ಬೆನ್ನಲ್ಲೇ ಅಮೆರಿಕ ಭಾರತದ ಅಣುಶಕ್ತಿ ಕಾರ್ಯಕ್ರಮಗಳನ್ನು ಬೆಂಬಲಿಸುವುದಾಗಿ ಘೋಷಿಸಿದೆ.ಭಾರತದಲ್ಲಿನ ರಷ್ಯ ರಾಯಭಾರಿ ಅಲೆಗ್ಸಾಂಡರ್ ಕಡಕಿನ್, `ಕೂಡುಂಕುಳಂ ಅಣುಸ್ಥಾವರ ಘಟಕದ ನಿರ್ಮಾಣದ ವಿರುದ್ಧ ಚಳವಳಿ ನಡೆಸುತ್ತಿರುವವರಿಗೆ ಅಮೆರಿಕದ ಎನ್‌ಜಿಎಗಳ ಕುಮ್ಮಕ್ಕಿದೆ~ ಎಂದು ಆರೋಪ ಮಾಡಿದ್ದಾರೆ.

`ನಮಗೆ ಅಮೆರಿಕ ಎನ್‌ಜಿಒಗಳ ಮೇಲೆ ಅನುಮಾನ ಇದ್ದೇ ಇದೆ. ನಾನು ಇದನ್ನು ಬಹಿರಂಗವಾಗಿ ಹೇಳಬಲ್ಲೆ.ಫುಕುಶಿಮಾ ದುರಂತ ಸಂಭವಿಸಿದ ಆರು ತಿಂಗಳ ಬಳಿಕ ಪ್ರತಿಭಟನಾಕಾರರು ಕೂಡಂಕುಳಂ ಸ್ಥಾವರದ ವಿರುದ್ಧ ದನಿ ಎತ್ತಿದ್ದಾರೆ. ಆರು ತಿಂಗಳು ನಿದ್ದೆ ಮಾಡುತ್ತಿದ್ದ ಪ್ರತಿಭಟನಾಕಾರರು ಇದ್ದಕ್ಕಿದ್ದಂತೆ ಎದ್ದು ಕುಳಿತಿದ್ದಾರೆ. ಅತ್ಯಂತ ಸುರಕ್ಷಿತ- ಸುಭದ್ರ, ಉತ್ಕೃಷ್ಟ ತಂತ್ರಜ್ಞಾನ ಹೊಂದಿರುವ ಅಣುಸ್ಥಾವರದ ವಿರುದ್ಧ ಚಳವಳಿಗೆ ಇಳಿದಿರುವುದು ಅಚ್ಚರಿ ಮೂಡಿಸಿದೆ~ ಎಂದು ಕಡಕಿನ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.ಕಡಕಿನ್ ಅಮೆರಿಕ ಹೆಸರನ್ನು ನೇರವಾಗಿ ಪ್ರಸ್ತಾಪಿಸಿಲ್ಲ. `ಭಾರತದ ವಿದ್ಯುತ್ ಕ್ಷೇತ್ರದ ಅಭಿವೃದ್ಧಿಗೆ ಏನೇನೂ ಮಾಡದ ಅದರ ಮಿತ್ರ ರಾಷ್ಟ್ರವೊಂದು ಕೂಡುಂಕುಳಂ ಅಣುಸ್ಥಾವರಕ್ಕೆ ಅಡ್ಡಿ ಮಾಡುತ್ತಿದೆ. ಭಾರತ ಬಲಿಷ್ಠವಾಗುವುದು ಈ ರಾಷ್ಟ್ರಕ್ಕೆ ಬೇಡವಾಗಿದೆ~ ಎಂದು ದೂರಿದ್ದಾರೆ.`ಶಾಂತಿ ಉದ್ದೇಶಕ್ಕೆ ಅಣುಶಕ್ತಿ ಹೊಂದುವ ಭಾರತ-ರಷ್ಯ ಸಹಕಾರವನ್ನು ಹಾಳುಮಾಡಲು ಈ ರಾಷ್ಟ್ರ ಬಯಸಿದೆ. ಆದರೆ, ನಮಗೆ ಭಾರತ ಬಲಿಷ್ಠವಾಗಬೇಕಿದೆ. ತಮಿಳುನಾಡು ಜನರಿಗೆ ವಿದ್ಯುತ್ ಲಭಿಸಬೇಕಾಗಿದೆ~ ಎಂದು ರಷ್ಯ ರಾಯಭಾರಿ ಹೇಳಿದ್ದಾರೆ.`ಭಾರತ ಅಣುಶಕ್ತಿ ಯೋಜನೆಗಳನ್ನು ಮುಂದುವರಿಸಲಿದೆ~ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ಕಡಕಿನ್, `ಪ್ರಧಾನಿ ಮನಮೋಹನ್‌ಸಿಂಗ್ ಹೇಳಿಕೆ ಹಾಗೂ ಗೃಹ ಸಚಿವಾಲಯದ ತನಿಖೆ ಕೂಡುಂಕುಳಂ ಪರಿಸ್ಥಿತಿಯನ್ನು ತಿಳಿಗೊಳಿಸಲಿದೆ~ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.ಅಮೆರಿಕಾ ಬೆಂಬಲ: `ಈ ಮಧ್ಯೆ, ಭಾರತದ ಅಣುಶಕ್ತಿ ಕಾರ್ಯಕ್ರಮಗಳನ್ನು ಬೆಂಬಲಿಸುವುದಾಗಿ ಅಮೆರಿಕ ಪ್ರಕಟಿಸಿದೆ. ಭಾರತದ ಅಣು ಶಕ್ತಿ ಯೋಜನಗಳಿಗೆ ಅಮೆರಿಕದ ಆಕ್ಷೇಪಣೆಯೇನೂ ಇಲ್ಲ~ ಎಂದು ಅಮೆರಿಕದ ರಾಯಭಾರಿ ಪೀಟರ್ ಬರ್ಲಿಗ್ ಹೇಳಿದ್ದಾರೆ. ಅಲ್ಲದೆ ಪ್ರಧಾನಿ ಹೇಳಿಕೆ ಸತ್ಯಾಂಶ ಪರಿಶೀಲಿಸಿ ಪ್ರತಿಕ್ರಿಯಿಸುವುದಾಗಿ ತಿಳಿಸಿದ್ದಾರೆ.`ನಾಗರಿಕ ಉದ್ದೇಶಗಳಿಗೆ ಪರಮಾಣು ಶಕ್ತಿ ಬಳಸಬೇಕೆಂಬುದು ಅಮೆರಿಕ ಬಯಸುತ್ತದೆ. ಈ ಕಾರ್ಯಕ್ರಮದಲ್ಲಿ ಅಮೆರಿಕವೂ ಸಕ್ರಿಯವಾಗಿ ಪಾಲ್ಗೊಳ್ಳಲು ಬಯಸುತ್ತದೆ. ಅಮೆರಿಕ ಮತ್ತು ಭಾರತದ ಸಂಬಂಧ ಎಲ್ಲ ರೀತಿಯಲ್ಲೂ ಎಲ್ಲ ಹಂತಗಳಲ್ಲೂ ಬೆಳಯುತ್ತಿದೆ. ನಮ್ಮ ಕಂಪೆನಿಗಳೂ ಭಾರತಕ್ಕೆ ಬರಬೇಕು ಎಂದು ನಾವು ಬಯಸುತ್ತೇವೆ~ ಎಂದು ಬರ್ಲಿಗ್ ಹೇಳಿದ್ದಾರೆ.~ಪ್ರಧಾನಿ ವಿರುದ್ಧ ದಾವೆ~ಚೆನ್ನೈ (ಪಿಟಿಐ): ಕೂಡುಂಕುಳಂ ಅಣುಸ್ಥಾವರ ಯೋಜನೆ ವಿರೋಧಿಸಿ ನಡೆಸಲಾಗುತ್ತಿರುವ ಚಳವಳಿಗೆ ವಿದೇಶದಿಂದ ಹಣದ ನೆರವು ದೊರೆಯುತ್ತಿದೆ ಎಂದು ಹೇಳಿಕೆ ನೀಡಿರುವ ಪ್ರಧಾನಿ ಕಚೇರಿ ವಿರುದ್ಧ ಮೊಕದ್ದಮೆ ದಾಖಲಿಸುವುದಾಗಿ ಯೋಜನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ  ಪರಮಾಣು ಶಕ್ತಿ ವಿರುದ್ಧ ಜನರ ಚಳವಳಿ (ಪಿಎಂಎಎನ್‌ಇ) ಸಂಘಟನೆಯು ಬೆದರಿಸಿದೆ.ಚೆನ್ನೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಿಎಂಎಎನ್‌ಇ ಮುಖ್ಯಸ್ಥ ಎಸ್. ಪಿ ಉದಯಕುಮಾರ್, ವಿದೇಶಿ ನೆರವಿನ ಕುರಿತಾಗಿ ಹೇಳಿಕೆ ನೀಡಿರುವ ಪ್ರಧಾನಿ ಕಚೇರಿ ರಾಜ್ಯ ಖಾತೆ ಸಚಿವ ವಿ. ನಾರಾಯಣ ಸ್ವಾಮಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾರೆ.ತಾವು ವಿದೇಶಿ ಮೂಲಗಳಿಂದ 1.5 ಕೋಟಿ ರೂಪಾಯಿ ಪಡೆದಿರುವುದಾಗಿ ಹೇಳಿಕೆ ನೀಡಿದ್ದ ಸಚಿವ ನಾರಾಯಣ ಸ್ವಾಮಿ ಅವರು, ತಾವು ನೀಡಿದ್ದ ಕಾನೂನು ನೋಟಿಸ್‌ಗೆ ಪ್ರತಿಕ್ರಿಯಿಸಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಉದಯಕುಮಾರ್ ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry