ಶುಕ್ರವಾರ, ನವೆಂಬರ್ 22, 2019
26 °C

ಕೂಡ್ಲಿಗಿ ಸಂತೆಯೊಳಗೊಂದು ಸುತ್ತು

Published:
Updated:

ಕೂಡ್ಲಿಗಿ: ಪಟ್ಟಣದಲ್ಲಿ ಪ್ರತಿ ಶುಕ್ರವಾರ ನಡೆಯುವ ಸಂತೆಯೊಳಗೆ ಸುತ್ತು ಹಾಕಿ ಬರಬೇಕಾದರೆ ಖಂಡಿತ ಕೈಯಲ್ಲೊಂದು ಕೋಲು ಇರಲೇಬೇಕು. ಸಂತೆಯೊಳಗೆ ನಿರ್ಭಯದಿಂದ ಸಂಚರಿಸುವ ದನಗಳು, ನಾಯಿಗಳನ್ನು ಓಡಿಸಲು ಕೋಲು ಅತ್ಯಗತ್ಯ.ಪಟ್ಟಣದ ಜನಸಂಖ್ಯೆ ಬೆಳೆಯುತ್ತಿದೆ. ಕೆಲವು ವರ್ಷಗಳ ಹಿಂದೆ ಪುಟ್ಟದಾಗಿದ್ದ ಸಂತೆ ಈಗ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಂಡಿದೆ. ಪಟ್ಟಣದ ಹೃದಯ ಭಾಗವಾಗಿರುವ ಕೊತ್ತಲ ಆಂಜನೇಯ ದೇವಸ್ಥಾನದಿಂದ ಕೊಟ್ಟೂರು ರಸ್ತೆಯವರೆಗೂ ಸಂತೆ ವಿಸ್ತರಿಸಿಕೊಂಡಿದೆ. ಹೀಗಾಗಿ ಇಲ್ಲಿ ವಾಹನಗಳಷ್ಟೇ ಅಲ್ಲ; ಜನಸಾಮಾನ್ಯರ ಸಂಚಾರಕ್ಕೂ ಕಷ್ಟವಾಗಿದೆ. ವಿಶೇಷವೆಂದರೆ ಇಲ್ಲಿ ಸಂತೆ ನಡೆಯುವುದೇ ರಸ್ತೆಯ ಮೇಲೆ. ಪ್ರತಿ ಶುಕ್ರವಾರ ಈ ರಸ್ತೆಯ ಜೊತೆಗೆ ಕೊಟ್ಟೂರು ರಸ್ತೆಗೂ ಸಂತೆ ಚಾಚಿಕೊಂಡಿದೆ. ಸಂತೆಗಾಗಿ ಪ್ರತ್ಯೇಕ ಮೈದಾನ ಇಲ್ಲದಿರುವುದು ಈ ಸಮಸ್ಯೆಗೆ ಕಾರಣ.ಸಂತೆಯೊಳಗೆ ಹೋಗಬೇಕೆಂದರೆ ಮೈಯೆಲ್ಲ ಕಣ್ಣಾಗಿರಬೇಕು. ತರಕಾರಿ ತೆಗೆದುಕೊಳ್ಳಲು ಪಕ್ಕಕ್ಕೆ ಚೀಲವನ್ನಿಟ್ಟು ಮರೆತರೆ ದನಗಳು ನುಗ್ಗಿ ಬಂದು ಚೀಲಕ್ಕೆ ಬಾಯಿ ಹಾಕಿರುತ್ತದೆ. ಹೀಗಾಗಿ ತರಕಾರಿ ಮಾರಾಟಗಾರರೆಲ್ಲರೂ ಕೋಲನ್ನು ಇಟ್ಟುಕೊಂಡಿರುವುದು ರೂಢಿ.ಅಕ್ಕಪಕ್ಕ, ನೋಡದೇ ನಡೆದರೆ ಕಾಲಲ್ಲೇ ನಾಯಿ ಗುರ್ ಎನ್ನುತ್ತಿರುತ್ತದೆ. ಇದಾವ ಫಜೀತಿಯೆಂದು ದನ, ನಾಯಿಗಳ ಕಡೆಗೇ ಲಕ್ಷ್ಯ ಕೊಡುತ್ತ, ತರಕಾರಿಯನ್ನೂ ನೋಡುತ್ತ ಮೈಮರೆತರೆ ಮೊಬೈಲ್ ಫೋನ್ ಕಳ್ಳತನವಾಗಿರುತ್ತದೆ. ಚಾಣಾಕ್ಷರು ಮಾತ್ರ ಸುಸೂತ್ರವಾಗಿ ಸಂತೆ ಮಾಡಿಕೊಂಡು ಹೋಗಬಹುದಾಗಿದೆ. 5-6 ದನಗಳು ನಿರಂತರವಾಗಿ ಸಂತೆಯಲ್ಲಿ ಯಾರ ಭಯವಿಲ್ಲದೆ ಗಸ್ತು ತಿರುಗುತ್ತ, ಆಗಾಗ ದಾಳಿ ನಡೆಸುತ್ತಿರುತ್ತವೆ.ಕೊಟ್ಟೂರು ರಸ್ತೆ ದ್ವಿಪಥ ರಸ್ತೆಯಾಗಿ ವಿಸ್ತಾರವಾಗಿದೆ. ಅದಕ್ಕೆ ತಕ್ಕಂತೆ ಸಂತೆಯೂ ಬೆಳೆದಿದೆ. ಅದು ಪಾದಚಾರಿಗಳಿಗೆ ಅಪಾಯಕಾರಿಯಾಗಿದೆ. `ರೋಡ್ ದೊಡ್ಡವಾಗ್ಯಾವ್ರಿ, ಆದ್ರ ಶುಕ್ರವಾರ ಸಂತೀ ದಿನ ಜನರು ಓಡಾಡೂದು ನೋಡಿ ಎಲ್ಲಿ ಏನ್ ಅನಾಹುತ ಆಗಿಬಿಡ್ತೈತಿ ಅಂತ ಭಯ ಆಗ್ತೈತ್ರಿ' ಎಂದು ವಾಹನ ಚಾಲಕ ಸಿದ್ದೇಶ್ ಹೇಳುತ್ತಾರೆ.`ಸಂತಿ ಭಾಳ ಹತ್ತಿ ಅನಸ್ತೈತಿ, ಅದ್ರಾಗ ದನಗಳ ಕಾಟ ಬ್ಯಾರೆ, ಹೆಣ್ಮಕ್ಕಳಿಗೆ, ಮಕ್ಕಳಿಗೆ ತೊಂದ್ರೆ, ಅದನ್ನೊಂದು ಹೆಂಗಾರ ಮಾಡಿ ಕಂಟ್ರೊಲ್ ಮಾಡ್ಬೇಕ್ರಿ' ಎಂದು ನಾಗರಾಜ ಹೇಳುತ್ತಾರೆ.ಬೆಳೆಯುತ್ತಿರುವ ಸಂತೆಗೊಂದು ಸೂಕ್ತ ಸ್ಥಳ ಒದಗಿಸಿಕೊಡಿ, ಸಂತೆಯೊಳಗೆ ದನಗಳು, ನಾಯಿಗಳು ನುಗ್ಗದಂತೆ ಕ್ರಮ ಕೈಗೊಳ್ಳಿರಿ, ಮೊಬೈಲ್ ಕಳ್ಳರನ್ನು ನಿಯಂತ್ರಿಸಿ ಎಂಬುದು ಪಟ್ಟಣದ ನಾಗರಿಕರ ಬೇಡಿಕೆ.

 

ಪ್ರತಿಕ್ರಿಯಿಸಿ (+)