ಗುರುವಾರ , ಮಾರ್ಚ್ 4, 2021
26 °C
ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವ ಕೆ.ಜೆ.ಜಾರ್ಜ್‌ ಆಶಯ

ಕೂಪ ಮಂಡೂಕವಲ್ಲ, ವಿಶ್ವ ಮಾನವರಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಪ ಮಂಡೂಕವಲ್ಲ, ವಿಶ್ವ ಮಾನವರಾಗಿ

ಬೆಂಗಳೂರು: ‘ದೇಶದ ಜನಸಂಖ್ಯೆಯಲ್ಲಿ ಶೇ 70 ರಷ್ಟಿರುವ ಯುವ ಜನರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಹೀಗಾಗಿ, ಯುವ ಪೀಳಿಗೆ ಕೂಪ ಮಂಡೂಕದಂತಾಗುವ ಬದಲು ವಿಶ್ವಮಾನವರಾಗುವತ್ತ ಚಿತ್ತ ಹರಿಸಬೇಕು’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಹೇಳಿದರು.ವಿವಿಧ ಇಲಾಖೆಗಳ ಸಹಯೋಗದಲ್ಲಿ ನಗರ ಜಿಲ್ಲಾಡಳಿತ ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ರಾಷ್ಟ್ರೀಯ ಯುವ ದಿನಾಚರಣೆ’ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ನಮ್ಮ ಪೂರ್ವಿಕರು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ ನಮಗೆ ಸ್ವಾತಂತ್ರ್ಯ ದೊರೆಕಿಸಿಕೊಟ್ಟಿದ್ದಾರೆ. ಅದರಿಂದಾಗಿ ನಮಗೆ ಬೇಕಾದ ಸಾಧನೆ ಮಾಡುವ ಸಂದರ್ಭ ನಮಗೆ ಒದಗಿ ಬಂದಿದೆ ಎನ್ನುವುದು ಮರೆಯಬಾರದು’ ಎಂದು ತಿಳಿಸಿದರು.‘ನಾವು ಈವರೆಗೆ ಏನು ಸಾಧಿಸಿದ್ದೇವೆ ಎಂಬಂತಹ ಸಿನಿಕತನದ ಮಾತುಗಳನ್ನು ಬಿಡಿ. ಸ್ವಾತಂತ್ರ್ಯೋತ್ತರ ನಾವು ಬಹಳಷ್ಟು ಸಾಧನೆ ಮಾಡಿದ್ದೇವೆ. ನಾವು ಈ ಸ್ಥಾನಕ್ಕೆ ಏರಬೇಕಾದರೆ ನಮ್ಮ ಯುವಶಕ್ತಿಯೇ ಕಾರಣ. ನಾವೆಲ್ಲರೂ ನಮ್ಮ ಪೂರ್ವಿಕರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯೋಣ’ ಎಂದರು.ನಟ ಶ್ರೀನಗರ ಕಿಟ್ಟಿ ಮಾತನಾಡಿ, ‘ಪ್ರತಿಜ್ಞಾ ವಿಧಿ ಸಮಾರಂಭದಲ್ಲಿ ಸ್ವೀಕರಿಸಿ, ಮರೆಯುವಂತಾಗಬಾರದು. ಅದನ್ನು ನಮ್ಮ ಮನಸ್ಸು, ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ. ಯುವಜನರು ಜೀವನದಲ್ಲಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡು, ಅವರ ಕನಸುಗಳನ್ನು ನನಸು ಮಾಡಲು ಕೆಲಸ ಮಾಡಬೇಕು’ ಎಂದರು.ಕಾಂಗ್ರೆಸ್‌ ಮುಖಂಡ ನೆ.ಲ.ನರೇಂದ್ರಬಾಬು ಮಾತನಾಡಿ, ‘ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಅಂಗವಾಗಿ ರಾಜ್ಯದಲ್ಲಿ ಜನವರಿ 12ರಿಂದ ಏಳು ದಿನಗಳ ಕಾಲ ಈ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಸುಮಾರು 8,000 ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ’ ಎಂದು ಅವರು ಹೇಳಿದರು.ಕಾರ್ಯಕ್ರಮದಲ್ಲಿ ‘ಯಂಗಿಸ್ತಾನ್, ಯಂಗಿಸ್ತಾನ್’ ಧ್ವನಿಸುರುಳಿ ಬಿಡುಗಡೆ ಮಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್‌ ಗೂಂಡುರಾವ್‌ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.