ಕೂರಣಗೆರೆ ಯೋಜನೆ ಶೀಘ್ರ ಅನುಷ್ಠಾನ: ಸಚಿವ

7

ಕೂರಣಗೆರೆ ಯೋಜನೆ ಶೀಘ್ರ ಅನುಷ್ಠಾನ: ಸಚಿವ

Published:
Updated:

ಚನ್ನಪಟ್ಟಣ: ‘ತಾಲ್ಲೂಕಿನಲ್ಲಿ ಎದುರಾಗಿರುವ ನೀರಾವರಿ ಸಮಸ್ಯೆ ಬಗ್ಗೆ ತಮಗೆ ಅರಿವಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡು ಶೀಘ್ರದಲ್ಲೇ ಸಮಸ್ಯೆ ನಿವಾರಿಸಲಾಗುವುದು’ ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಇಲ್ಲಿ ತಿಳಿಸಿದರು.ತಾಲ್ಲೂಕಿನ ಕೂರಣಗೆರೆ ಯೋಗನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಏರ್ಪಡಿಸಿದ್ದ ತಾಲ್ಲೂಕಿನ ನೀರಾವರಿ ಯೋಜನೆಯ ಘೋಷಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಣ್ವ ಜಲಾಶಯದ ನೀರಿನ ಸಂಪನ್ಮೂಲ ಸಮಸ್ಯೆಯ ಬಗ್ಗೆ ಅರಿವಿದೆ. ಇದೀಗ ಇಗ್ಗಲೂರು ಜಲಾಶಯದಿಂದ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಕೂರಣಗೆರೆ ಬೆಟ್ಟದಲ್ಲಿ ಟ್ಯಾಂಕ್ ನಿರ್ಮಿಸಿ ಅಲ್ಲಿಂದ ತಾಲ್ಲೂಕಿನ ಕೆರೆಗಳು ಹಾಗೂ ಕಣ್ವ ಜಲಾಶಯಕ್ಕೆ ನೀರು ಹರಿಸುವ ಯೋಜನೆಯೂ ನಮ್ಮ ಮುಂದಿದೆ.ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಇಂಥದೊಂದು ಶ್ಲಾಘನೀಯ ಯೋಜನೆ ರೂಪಿಸಿದ್ದಾರೆ. ಆದರೆ ಈ ಯೋಜನೆಗೆ ಹೆಚ್ಚು ಪ್ರಮಾಣದಲ್ಲಿ ವಿದ್ಯುತ್ ಬೇಕಾಗುತ್ತದೆ. ಆ ಕುರಿತು ನೀರಾವರಿ ತಾಂತ್ರಿಕ ಸಮಿತಿ ವರದಿ ನೀಡಲಿದ್ದು, ಅದನ್ನು ಆಧರಿಸಿ ಕಣ್ವ ಜಲಾಶಯಕ್ಕೆ ನೀರು ಹರಿಸುವ ಈ ಮಹತ್ವದ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ಒದಗಿಸುವುದಾಗಿ ಅವರು ತಿಳಿಸಿದರು.ತಾಲ್ಲೂಕಿನಲ್ಲಿ ಶಾಶ್ವತವಾಗಿ ನೀರಾವರಿ ಸಮಸ್ಯೆಗಳನ್ನು ಬಗೆಹರಿಸಲು, ಕಣ್ವ ಜಲಾಶಯವನ್ನು ಭರ್ತಿಮಾಡಿ ನದಿ ಪಾತ್ರದ ರೈತರ ಕೃಷಿ ಚಟುವಟಿಕೆಗಳಿಗೆ ನೀರು ಒದಗಿಸಲು ಬೇರೆ ಯೋಜನೆಗಳನ್ನು ಜಾರಿಗೆ ತಂದು ನೀರಿನ ಬವಣೆ ನೀಗಿಸಲಾಗುವುದು. ಕೂರಣಗೆರೆ ಬೆಟ್ಟದ 150ಕೋಟಿ ರೂಪಾಯಿ ಯೋಜನೆಗೆ ಅನುದಾನದ ಕೊರತೆ ಏನಿಲ್ಲ, ತಾಂತ್ರಿಕ ಸಮಸ್ಯೆಯನ್ನು ಮೊದಲು ಬಗೆಹರಿಸುವುದು ಮುಖ್ಯವಾಗಿದೆ ಎಂದರು.ಮಾಜಿ ಶಾಸಕ ಸಿ.ಪಿ. ಯೋಗೇಶ್ವರ್ ಮಾತನಾಡಿ, ತಾಲ್ಲೂಕಿನಲ್ಲಿ ಸಹಸ್ರಾರು ಬೋರ್‌ವೆಲ್‌ಗಳು ಬತ್ತಿಹೋಗಿವೆ. ಕೃಷಿ ಚಟುವಟಿಕೆಗಳಿಗೆ ನೀರಿಲ್ಲದೆ ರೈತರು ಕಂಗಾಲಾಗಿದ್ದಾರೆ. ಕಣ್ವ ಜಲಾಶಯದಿಂದ ಯಾವ ಕೆರೆಗಳಿಗೆ ನೀರು ಹರಿಯುತ್ತಿತ್ತೋ ಆ ಕೆರೆಗಳಿಗೆ ನೀರು ಹರಿಸುವ ಮಹತ್ವಾಕಾಂಕ್ಷೆಯಿಂದ ಕೂರಣಗೆರೆ ಬೆಟ್ಟದ ಯೋಜನೆ ರೂಪಿಸಿದ್ದೇನೆ.ಇದರ ಹಿಂದೆ ಯಾವುದೇ ರಾಜಕೀಯ ಆಕಾಂಕ್ಷೆಗಳಿಲ್ಲ ಎಂದು ತಿಳಿಸಿದರು.ರೈತ ಸಂಘದ ರಾಜ್ಯ ಕಾರ್ಯದರ್ಶಿ ಸಿ.ಪುಟ್ಟಸ್ವಾಮಿ ಮಾತನಾಡಿ, ಸಚಿವರು ಇಂದು ನೀಡಿರುವ ಭರವಸೆ ಹಾಗೂ ಘೋಷಣೆಗಳು ನಿರ್ದಿಷ್ಟ ಕಾಲಮಿತಿಯಲ್ಲಿ ಜಾರಿಗೊಂಡಾಗ ಮಾತ್ರ ತಾಲ್ಲೂಕಿನ ರೈತರು ಹಲವು ದಿನಗಳಿಂದ ಎದುರಿಸುತ್ತಿರುವ ನೀರಾವರಿ ಸಮಸ್ಯೆ ಬಗೆಹರಿಯಲಿದೆ.ಸಚಿವರು ಈ ನಿಟ್ಟಿನಲ್ಲಿ ಹೆಚ್ಚು ಗಮನಹರಿಸಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಮನವಿ ಮಾಡಿದರು.ರೈತ ಸಂಘದ ಜಿಲ್ಲಾಧ್ಯಕ್ಷ ಎಂ.ರಾಮು, ಇಗ್ಗಲೂರು ಬಸವರಾಜು, ನೀರಾವರಿ ಇಲಾಖೆ ತಾಂತ್ರಿಕ ನಿರ್ದೇಶಕ ಶಿವಸ್ವಾಮಿ, ಮುಖ್ಯ ಎಂಜಿನಿಯರ್ ಪ್ರಸನ್ನ, ಚ.ರಾ.ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಎಸ್.ಆರ್.ನಾಗರಾಜು ಉಪಸ್ಥಿತರಿದ್ದರು. ಹಾಪ್‌ಕಾಮ್ಸ್ ನಿರ್ದೇಶಕ ಎಸ್.ಸಿ. ಶೇಖರ್ ಸ್ವಾಗತಿಸಿ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry