ಕೂರಿಗೆ ಬಿತ್ತನೆಯಲ್ಲಿ ಇದೆ ಲಾಭ

7

ಕೂರಿಗೆ ಬಿತ್ತನೆಯಲ್ಲಿ ಇದೆ ಲಾಭ

Published:
Updated:

ತುಂಗಭದ್ರಾ ಮತ್ತು ಕೃಷ್ಣಾ ನದಿಗಳ ಅಚ್ಚುಕಟ್ಟು ಪ್ರದೇಶವನ್ನು ಬತ್ತದ ಕಣಜ ಎಂದು ಕರೆದರೆ ತಪ್ಪಾಗಲಾರದು. ಈ ವಲಯಕ್ಕೆ ಸೇರಿದ ರಾಯಚೂರಿನ ಸೋನಾ ಮಸೂರಿಗೆ ಎಲ್ಲಿಲ್ಲದ ಬೇಡಿಕೆ.ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಯಂತೆ ಸೆಪ್ಟೆಂಬರ್ ವರೆಗೆ 50 ಸೆಂಮೀ ಮಳೆ ಬರಬೇಕಿತ್ತು. ಆದರೆ ಆಗಿದ್ದು 25 ಸೆಂಮೀ ಮಾತ್ರ. ಸುಮಾರು 1.4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬತ್ತ ಬಿತ್ತನೆಯ ಗುರಿಗೆ ಬದಲಾಗಿ 56,000 ಹೆಕ್ಟೇರಿನಲ್ಲಿ ಮಾತ್ರ ಬಿತ್ತನೆಯಾಗಿದೆ. ಜೂನ್‌ನಲ್ಲಿ ಬಿದ್ದ ಮಳೆಯಿಂದ ತುಂಗಭದ್ರಾ ಜಲಾಶಯ ಭರ್ತಿಯಾಗಿ ಜುಲೈ ಮೊದಲ ವಾರ ಎಡೆದಂಡೆ ವ್ಯಾಪ್ತಿಯಲ್ಲಿ ಬತ್ತ ನಾಟಿಯಾಗುತ್ತಿತ್ತು.ಈ ವರ್ಷ ಕಾಲುವೆಯ ಕೊನೆಯ ರೈತರು ಸೆಪ್ಟೆಂಬರ್‌ನಲ್ಲಿ ಬತ್ತದ ನಾಟಿ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾಲುವೆ ನೀರು ಬಿಡುವುದು ತಡವಾಗುತ್ತಿದೆ. ಹೀಗಾಗಿ ರೈತರು ಸಾಕಷ್ಟು ವಿಳಂಬವಾಗಿ ಬತ್ತ ನಾಟಿ ಮಾಡುವ ಅನಿವಾರ್ಯತೆಯಿದೆ. ಇದರಿಂದ ಖರ್ಚು ಹೆಚ್ಚು, ಇಳುವರಿ ಕಡಿಮೆಯಾಗುತ್ತದೆ, ರೈತರು ಲುಕ್ಸಾನು ಅನುಭವಿಸಬೇಕಾಗುತ್ತದೆ.ಆದರೆ ರಾಯಚೂರು ತಾಲ್ಲೂಕು ಕಸಬೆ ಕ್ಯಾಂಪಿನ ರೈತರು ನಾಟಿ ಪದ್ಧತಿ ಬಿಟ್ಟು ಕೂರಿಗೆ ಪದ್ಧತಿ ಅಳವಡಿಸಿಕೊಂಡು ಉತ್ತಮ ಫಸಲು ಬೆಳೆದಿದ್ದಾರೆ. ಕಾಲುವೆಯ ನೀರನ್ನು ನಂಬದೆ ಜೂನ್ ತಿಂಗಳಲ್ಲಿ ಬಿದ್ದ ಅಲ್ಪ ಸ್ವಲ್ಪ ಮಳೆಗೆ ಹೊಲವನ್ನು ಹದ ಮಾಡಿ ಜುಲೈ ತಿಂಗಳ 2ನೇ ವಾರದಲ್ಲಿ ಶೂನ್ಯ ಬೇಸಾಯ ಕೂರಿಗೆಯಿಂದ ಬಿತ್ತನೆ ಮಾಡಿದರು.ರೈತರಾದ ಮಲ್ಲೆೀಕೃಷ್ಣಪ್ಪನವರು ಹೇಳುವಂತೆ ಎಕರೆಗೆ 16 ಕಿಲೊ ಬೀಜ ಬಳಸಿ 9 ಇಂಚಿನ ಸಾಲಿನಲ್ಲಿ ಬಿಪಿಟಿ ಸೋನಾ ತಳಿ ಬಿತ್ತಿದರು. ಎಕರೆಗೆ 1 ಚೀಲ ಡಿಎಪಿ, ಒಂದು ಚೀಲ ಯೂರಿಯ, ಅರ್ಧ ಚೀಲ ಪೊಟಾಷ್ ಮತ್ತು 10 ಕಿಲೊ ಜಿಂಕ್ ಸಲ್ಫೇಟನ್ನು ಬಿತ್ತನೆ ಸಮಯದಲ್ಲಿ ಒದಗಿಸಿದರು. ಬಿತ್ತನೆಯಾದ 20 ದಿನಗಳಲ್ಲಿ ಕಳೆ ತೆಗೆದು ಅಂತರ ಬೇಸಾಯ ಮಾಡಿದರು. ಕಾಲುವೆಯಿಂದ ನೀರು ಲಭ್ಯವಾದಾಗ 20-25 ದಿನಗಳಿಗೊಮ್ಮೆ ನೀರು ಹಾಯಿಸುತ್ತ ಬಂದರು.ಕೂರಿಗೆ ಬಿತ್ತನೆ ಪದ್ಧತಿ ಇಲ್ಲಿ ಮೂರು ವರ್ಷದಿಂದ ಚಾಲ್ತಿಯಲ್ಲಿದೆ. ಅದಕ್ಕೂ ಮೊದಲು ಇದರ ಬಗ್ಗೆ ತಿಳಿವಳಿಕೆ ಮತ್ತು ನಂಬಿಕೆ ಇರಲಿಲ್ಲ. ಕೃಷ್ಣಪ್ಪನವರು ಮೊದಲ ವರ್ಷ 5 ಎಕರೆ ಪ್ರದೇಶದಲ್ಲಿ ಕೂರಿಗೆ ಬಿತ್ತನೆ ಮಾಡಿ ಪ್ರತಿ ಎಕರೆಗೆ 45 ಚೀಲ ಬತ್ತ ಬೆಳೆದರು.

 

ಈಗ ಇದು 50 ಎಕರೆಗೆ ವಿಸ್ತರಿಸಿದೆ. ರೈತರ ಅನಿಸಿಕೆಯಂತೆ, ನಾಟಿ ಮಾಡುವುದಕ್ಕಿಂತಲೂ ಕೂರಿಗೆಯಿಂದ ಶೇಕಡ 30-40ರಷ್ಟು ನೀರಿನ ಉಳಿತಾಯವಾಗುತ್ತದೆ, ಖರ್ಚು ಎಕರೆಗೆ 6-8 ಸಾವಿರ ರೂ ದಷ್ಟು ಕಡಿಮೆಯಾಗುತ್ತದೆ.ಕೂರಿಗೆ ಬಿತ್ತನೆಗೆ ಕೆಸರಿನ ಭೂಮಿ ಸಿದ್ಧತೆಯ ಅವಶ್ಯಕತೆಯಿಲ್ಲ, ಕಡಿಮೆ ಬಿತ್ತನೆ ಬೀಜ, ಆಳುಗಳ ಉಳಿತಾಯ ಮತ್ತು ಸರಿಯಾದ ಸಮಯಕ್ಕೆ ಬಿತ್ತನೆ ಮಾಡಬಹುದು. ನೀರಿನ ಉಳಿತಾಯದಿಂದ ಅಷ್ಟೇ ಪ್ರಮಾಣದ ನೀರಾವರಿ ಪ್ರದೇಶವನ್ನು ಹೆಚ್ಚಿಸಬಹುದು.

ಆದರೆ ನಾಟಿ ಪದ್ಧತಿಯಲ್ಲಿ ತಡವಾದರೆ ಕಾಳು ಕಟ್ಟುವ ಸಮಯಕ್ಕೆ ಬೆಳೆ ಚಳಿಗೆ ಸಿಲುಕಿ ಕಾಳು ಜೊಳ್ಳಾಗುತ್ತದೆ, ಇಳುವರಿ ಮೇಲೆ ಪರಿಣಾಮ ಬೀರುತ್ತದೆ. ಕೂರಿಗೆ ಪದ್ಧತಿಯಲ್ಲಿ ಸಕಾಲಕ್ಕೆ ಬಿತ್ತುವುದರಿಂದ ಈ ಸಮಸ್ಯೆ ನಿಭಾಯಿಸಬಹುದು.ಕಾಲುವೆಯಲ್ಲಿ ನೀರು ಬಾರದೆ ಇದ್ದರೂ ತೇವಾಂಶ ಕೊರತೆ ಕಾಣದೆ ಒಳ್ಳೆಯ ಇಳುವರಿ ಸಿಗುತ್ತಿದೆ. ನಾಟಿಯಲ್ಲಿ ಸದಾ ನೀರು ನಿಲ್ಲಿಸುವುದರಿಂದ ಮಣ್ಣಿನ ಗುಣಲಕ್ಷಣಗಳು ಬದಲಾವಣೆಗೊಂಡು ಜೌಗು ಮತ್ತು ಸವಳು ಸಮಸ್ಯೆ ಹೆಚ್ಚುತ್ತಿತ್ತು. ಅದೀಗ ಕಡಿಮೆಯಾಗಿದೆ.ಈ ಕ್ಯಾಂಪ್‌ನ ರೈತ ಸ್ವಾಮಿಯವರು 13 ಎಕರೆಯಲ್ಲಿ, ಆದಿನಾರಾಯಣರವರು 20 ಎಕರೆಯಲ್ಲಿ ಕೂರಿಗೆಯಿಂದ ಬಿತ್ತನೆ ಮಾಡಿದ್ದಾರೆ. ಸುತ್ತಲಿನ ಗ್ರಾಮಗಳ ನೂರಾರು ರೈತರು ಇದನ್ನು ವೀಕ್ಷಿಸಿ ಕೂರಿಗೆ ಬಿತ್ತನೆಗೆ ಮಾರು ಹೋಗಿದ್ದಾರೆ. ರೈತರೇ ಹೇಳುವಂತೆ ಕಸಬೆ ಕ್ಯಾಂಪಿನ ಸುತ್ತಮುತ್ತ ಸುಮಾರು 6-7 ಸಾವಿರ ಎಕರೆ ಜಮೀನು ಈಗ ಕೂರಿಗೆ ಬಿತ್ತನೆಗೆ ಒಳಪಟ್ಟಿದೆ.ಕಡಿಮೆ ಖರ್ಚು, ಉತ್ತಮ ಇಳುವರಿಯ ಜೊತೆಗೆ ನೀರಾವರಿ ಪ್ರದೇಶವನ್ನು ಹೆಚ್ಚಿಸಲು ನೇರ ಕೂರಿಗೆ ಬತ್ತ ಬಿತ್ತನೆ ಬಹಳ ಪ್ರಯೋಜನಕಾರಿ. ಮಣ್ಣಿನ ಗುಣಮಟ್ಟ ಕಾಪಾಡಿಕೊಳ್ಳಲು ಮತ್ತು ನೀರನ್ನು ಉಳಿಸಿ ಇನ್ನೂ ಹೆಚ್ಚು ಪ್ರದೇಶಗಳಲ್ಲಿ ನೀರಾವರಿ ಕಲ್ಪಿಸಲು ಈ ಪದ್ಧತಿ ವರದಾನ. ಹೆಚ್ಚಿನ ಮಾಹಿತಿಗೆ ಕೃಷ್ಣಪ್ಪ (08532 249178), ಆದಿನಾರಾಯಣ ಅವರನ್ನು (96631 50547) ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry