ಮಂಗಳವಾರ, ನವೆಂಬರ್ 19, 2019
29 °C

ಕೂರಿಗೆ ಬೇಸಾಯ; ಅಧಿಕ ಆದಾಯ

Published:
Updated:

ಅಚ್ಚುಕಟ್ಟು ಪ್ರದೇಶದಲ್ಲಿ ನಾಟಿ ಪದ್ಧತಿಯಲ್ಲಿ ಬತ್ತ ಬೆಳೆಯುವುದರಿಂದ ಸಮಸ್ಯೆ ಎದುರಿಸುತ್ತಿರುವ ರೈತರಿಗೆ ವರದಾನವಾಗಿದೆ `ಕೂರಿಗೆ ಬತ್ತ ಬೇಸಾಯ'. ನೀರಿನ ಕೊರತೆ, ಕೃಷಿ ಕಾರ್ಮಿಕರ ಅಲಭ್ಯ, ಅಧಿಕ ಖರ್ಚು ಮತ್ತು ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವ ಭೂಮಿಯ ಫಲವತ್ತತೆ ಇತ್ಯಾದಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಈ ಬೇಸಾಯ.ದಾವಣಗೆರೆ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಚನ್ನಗಿರಿ ತಾಲ್ಲೂಕು ಕಾರಿಗನೂರು ಗ್ರಾಮದ ರೈತ ಜಿ.ಟಿ. ಮಹಾರುದ್ರಪ್ಪ ಅವರ ಜಮೀನಿನಲ್ಲಿ ಈಚೆಗೆ ಟ್ರ್ಯಾಕ್ಟರ್ ಚಾಲಿತ ಕೂರಿಗೆ ಬತ್ತ ಬೇಸಾಯದ ರಾಯಚೂರು ಕೃಷಿ ವಿವಿ ವಿಜ್ಞಾನಿ ಡಾ. ಪ್ರಕಾಶ್ ಎಚ್. ಕುಚನೂರು ಮತ್ತು ತಂಡ ನೀಡಿದ ಪ್ರಾತ್ಯಕ್ಷಿಕೆ ಇದಕ್ಕೆ ಸಾಕ್ಷಿ. ನಾಟಿ ಪದ್ಧತಿಯಲ್ಲಿ ಭೂಮಿ ತಯಾರಿಕೆ ವೆಚ್ಚ ಉಳಿತಾಯ, ಸಸಿಮಡಿ ತಯಾರಿಸಿ ಅದನ್ನು ಸಂರಕ್ಷಿಸುವ ಖರ್ಚು ಉಳಿತಾಯವಾಗುತ್ತದೆ. ಬಿತ್ತನೆಗೆ ಕೇವಲ 8-12 ಕಿ.ಗ್ರಾಂ. ಬೀಜ ಸಾಕು. ಇದರಿಂದಾಗಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸಬಹುದು.ಕೂರಿಗೆ ಬೇಸಾಯ ಹೇಗೆ?

ಹಿಂಗಾರು ಹಂಗಾಮಿಗೆ ಮುನ್ನ ಮುಂಗಾರು ಬತ್ತ ಕಟಾವು ಮಾಡಿದ ತಕ್ಷಣ ಭೂಮಿಯ ಹದವರಿತು ಒಂದು ಬಾರಿ ಟ್ರ್ಯಾಕ್ಟರ್‌ನಿಂದ ಕಲ್ಟಿವೇಟರ್ ಹೊಡೆಯಬೇಕು. ನಂತರ ಭೂಮಿಗೆ ನೀರು ಬಿಟ್ಟು ಹಿಂದಿನ ಬೆಳೆಯಿಂದ ಭೂಮಿಗೆ ಬಿದ್ದಿರುವ ಬತ್ತದ ಬೀಜವನ್ನು ಮೊಳಕೆ ಬರಿಸಿ, ನಂತರ ಹದವರಿತು ಒಮ್ಮೆ ಡಿಸ್ಕ್ ಹ್ಯಾರೋ ಉಪಯೋಗಿಸಿ ಬೆಳೆದ ಸಸಿಗಳನ್ನು ನಾಶ ಮಾಡಬೇಕು. ಡಿಸ್ಕ್ ಹ್ಯಾರೋ ಮಾಡಿದ ಭೂಮಿ ಒಣಗಿದ ಮೇಲೆ ಹಿಮ್ಮುಖವಾಗಿ ಟ್ರ್ಯಾಕ್ಟರ್‌ಗೆ ಒಣಗೋರು ಜೋಡಣೆ ಮಾಡಿ ಭೂಮಿ ಸಮತಟ್ಟುಗೊಳಿಸಬೇಕು. ನಂತರ ಬತ್ತವನ್ನು 50 ಕಿ.ಗ್ರಾಂ. ಡಿ.ಎ.ಪಿ. ಮೂಲ ಗೊಬ್ಬರದೊಂದಿಗೆ ಬಿತ್ತಿ ನೀರು ಹಾಯಿಸಬೇಕು.ಕಳೆಗಳನ್ನು ಸಮರ್ಥವಾಗಿ ನಿಯಂತ್ರಿಸಲು ಪೆಂಡಿಮಿಥಾಲಿನ್ (ಪ್ರತಿ ಲೀ ನೀರಿಗೆ 3.50ಮಿ.ಲಿ. ಬೆರೆಸಿ) ಕಳೆನಾಶಕ ದ್ರಾವಣವನ್ನು ಬಿತ್ತನೆಯಾದ ಪ್ರದೇಶಕ್ಕೆ ಸಿಂಪಡಿಸಬೇಕು. ಸಿಂಪರಣೆಗೆ ಮುನ್ನ ಮಣ್ಣಿನಲ್ಲಿ ಸಾಕಷ್ಟು ತೇವಾಂಶ ಇರುವುದು ಅತಿ ಅವಶ್ಯಕ. ಬತ್ತ ಬಿತ್ತಿ ನೀರು ಹಾಯಿಸಿದ 24ರಿಂದ 36 ಗಂಟೆಗಳ ಒಳಗಾಗಿ ಈ ಸಿಂಪರಣೆ ಮಾಡಬೇಕು. ಇದರಿಂದ 20-25 ದಿವಸಗಳವರೆಗೆ ಕಳೆ ನಿಯಂತ್ರಣ ಸಾಧ್ಯ. ನಂತರ ಬರುವ ಕಳೆಗಳನ್ನು ಎಕರೆಗೆ 100ಮಿಲೀ. ಬಿಸ್‌ಪೈರಿಬ್ಯಾಕ್ ಸೋಡಿಯಂ ಕಳೆನಾಶಕ ಸಿಂಪರಣೆಯಿಂದ ಕಳೆಗಳ ನಿಯಂತ್ರಣ ಮಾಡಬಹುದು.ಈ ಕಳೆನಾಶಕವು ಗಂಡು ಬತ್ತವನ್ನು ಹೊರತುಪಡಿಸಿ ಉಳಿದೆಲ್ಲಾ ಕಳೆಗಳನ್ನು ನಿಯಂತ್ರಿಸುವುದು.ಬಿಸ್‌ಪೈರಿಬ್ಯಾಕ್ ಸೋಡಿಯಂ ಕಳೆನಾಶಕ ಸಿಂಪರಣೆ ಮಾಡಿದ ನಂತರ ಭೂಮಿಯಲ್ಲಿ ಉತ್ತಮವಾದ ತೇವಾಂಶವು ಕನಿಷ್ಠ 3-4ದಿವಸಗಳ ಕಾಲ ಇದ್ದರೆ ಮಾತ್ರ ಈ ಕಳೆನಾಶಕ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಇಲ್ಲದಿದ್ದರೆ ಆಳುಗಳಿಂದ ಕೈಗಳೆ ಮಾಡುವುದು ಉತ್ತಮ. ಕೆಲವು ಬತ್ತದ ಹೊಲಗಳಲ್ಲಿ ಹುಲ್ಲು ಜಾತಿ ಕಳೆಗಳು ಕಡಿಮೆ ಇದ್ದು, ಹೆಚ್ಚಾಗಿ ಎಲೆ-ಕಸಗಳಿಂದ ಕೂಡಿದ್ದರೆ ಇವುಗಳನ್ನು 2,4-ಡಿ ಸೋಡಿಯಂ ಉಪ್ಪು ಅಥವಾ 2, 4-ಡಿ ಈಥೈಲ್ ಈಸ್ಟರ್ (ಪ್ರತಿ ಲೀ. ನೀರಿಗೆ 2.5ಗ್ರಾ/ಮಿ.ಲೀ. ಬೆರೆಸಿ) ಸಿಂಪರಣೆ ಮಾಡಿ ನಿಯಂತ್ರಿಸಬಹುದು. ಹುಲ್ಲು ಜಾತಿಯ ಕಳೆಗಳನ್ನು ಕೈಯಿಂದ ತೆಗೆಯಬಹುದು.

ನೀರು ನಿರ್ವಹಣೆ

ಬತ್ತ ಮೊಳಕೆ ಒಡೆವಾಗ, ತೆಂಡೆಯೊಡೆಯುವಾಗ, ಹೂವಾಡುವಾಗ ಮತ್ತು ಕಾಳುಕಟ್ಟುವಾಗ ಭೂಮಿಯಲ್ಲಿ ತೇವಾಂಶದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಉಳಿದ ಸಮಯದಲ್ಲಿ ಬೆಳೆಗೆ ಮೊದಲು ಒದಗಿಸಿದ ನೀರು ಭೂಮಿಯಲ್ಲಿ ಇಂಗಿ, ಸ್ವಲ್ಪ ಬಿರುಕು ಕಾಣಿಸಿದಾಗ ಮತ್ತೆ ನೀರುಣಿಸಬೇಕು. ಇದರಿಂದ ನೀರಿನ ಉಳಿತಾಯದೊಂದಿಗೆ ಪೋಷಕಾಂಶಗಳು ಹೆಚ್ಚಿ, ಬತ್ತದ ಇಳುವರಿ ಅಧಿಕವಾಗುವುದು. ಬೀಜದ ಜತೆಗೆ ಕೆಲ ರಸಗೊಬ್ಬ ಬಳಸಿ, ಉತ್ತಮ ಇಳುವರಿ ಪಡೆಯಬಹುದು. ಕೀಟ ಮತ್ತು ರೋಗಬಾಧೆಗಳನ್ನು ತಡೆಗಟ್ಟಲು ನಾಟಿ ಬತ್ತ ಪದ್ಧತಿಯೇ ಅನುಸರಿಸಬಹುದು.ನೀರು ಸಿಗುವ ಅವಧಿ, ಉಪಯೋಗಿಸುವ ತಳಿಯ ಅವಧಿ ಒಂದೇ ಆಗಿರುವಂತೆ ಆಯ್ಕೆ ಮಾಡಿಕೊಂಡರೆ, ಕೂರಿಗೆ ಬತ್ತದ ಇಳುವರಿ ನಾಟಿ ಮಾಡಿದ ಬತ್ತದ ಇಳುವರಿಯಷ್ಟೇ ಬರುತ್ತದೆ. ಕೆಲವೊಮ್ಮೆ ನಾಟಿ ಮಾಡಿದ ಬತ್ತಕ್ಕಿಂತ ಎಕರೆಗೆ 1-2 ಕ್ವಿಂಟಲ್ ಹೆಚ್ಚು ಬರುತ್ತದೆ. ಕೂರಿಗೆ ಯಂತ್ರದ ಬೆಲೆ ಸುಮಾರು 58 ಸಾವಿರ ರೂಪಾಯಿ. ಕೃಷಿ ಇಲಾಖೆಯಲ್ಲಿ ಸಬ್ಸಿಡಿಯೂ ಸಿಗುತ್ತದೆ.

ಸಂಪರ್ಕಕ್ಕೆ: ಡಾ.ಎಸ್.ಜಿ. ಪಾಟೀಲ್-94806 96301; ಡಾ. ಪ್ರಕಾಶ್ ಎಚ್. ಕುಚನೂರು- 94496 44585.

ಪ್ರತಿಕ್ರಿಯಿಸಿ (+)