ಕೂರ್ಮಗಡ ದ್ವೀಪದಲ್ಲಿ ಜನಜಾತ್ರೆ

7
ವೈಭವದ ನರಸಿಂಹ ದೇವರ ಉತ್ಸವಕ್ಕೆ ದೋಣಿಯಲ್ಲಿ ಪಯಣ..

ಕೂರ್ಮಗಡ ದ್ವೀಪದಲ್ಲಿ ಜನಜಾತ್ರೆ

Published:
Updated:

ಕಾರವಾರ: ಇಲ್ಲಿನ ಸಮೀಪದ ಅರಬ್ಬಿ ಸಮುದ್ರದಲ್ಲಿನ ಕೂರ್ಮಗಡ ದ್ವೀಪದಲ್ಲಿ ಸೋಮವಾರ ನರಸಿಂಹ ದೇವರ ಜಾತ್ರೆ ವಿಜೃಂಭಣೆಯಿಂದ ನಡೆಯಿತು.

ಫಲ, ಪುಷ್ಪಗಳಿಂದ ಅಲಂಕೃತಗೊಂಡಿದ್ದ ದೋಣಿಯಲ್ಲಿ ಮುಂಜಾನೆ ಕೋಡಿಬಾಗದಿಂದ ನರಸಿಂಹ ದೇವರನ್ನು ಕೂರ್ಮಗಡಕ್ಕೆ ಕರೆತರಲಾಯಿತು. ದ್ವೀಪದ ಮೇಲಿನ ಚಿಕ್ಕ ಗುಡಿಯಲ್ಲಿ ದೇವರನ್ನು ಪ್ರತಿಷ್ಠಾಪಿಸಿ ಸಕಲ ಪೂಜಾ ಕೈಂಕರ್‍ಯಗಳನ್ನು ನೆರವೇರಿಸಲಾಯಿತು. ಜಾತ್ರೆಯ ಅಂಗವಾಗಿ ವಿಶೇಷ ಪೂಜೆಗಳು ನಡೆಯಿತು.ಪುಷ್ಯ ಮಾಸದ ಪೂರ್ಣಚಂದ್ರ ದಿನದಂದು ನಡೆಯುವ ಈ ಜಾತ್ರೆ ವರ್ಷಕ್ಕೊಮ್ಮೆ ಜರುಗುತ್ತದೆ. ಹೀಗಾಗಿ ನೆರೆಯ ರಾಜ್ಯ ಗೊೋವಾ, ಮಹಾರಾಷ್ಟ್ರ, ಉತ್ತರ ಕರ್ನಾಟಕದ ಕೆಲವು ಭಾಗಗಳಿಂದಲೂ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಹರಕೆ ಹೊತ್ತ ಭಕ್ತರು ಬಾಳೆಗೊನೆ ಅರ್ಪಿಸಿ ಪೂಜೆ ಸಲ್ಲಿಸಿದರು.ತಳಿರು ತೋರಣಗಳಿಂದ ಅಲಂಕೃತಗೊಂಡಿದ್ದ ನೂರಾರು ಮೀನುಗಾರಿಕಾ ದೋಣಿಗಳು ಬೆಳಗ್ಗಿನಿಂದಲೇ ಅರಬ್ಬಿ ಸಮುದ್ರದಲ್ಲಿನ ಕೂರ್ಮಗಡ ದ್ವೀಪಕ್ಕೆ ಯಾತ್ರೆ ಬೆಳೆಸಿದ್ದವು. ಮೀನುಗಾರರು ಕುಟುಂಬ ಸಮೇತರಾಗಿ ತಮ್ಮ ದೋಣಿಯಲ್ಲಿ ದ್ವೀಪಕ್ಕೆ ತೆರಳಿ ದೇವರಿಗೆ ಪೂಜೆ ಸಲ್ಲಿಸಿದರು. ಪ್ರಯಾಣದ ನಡುವೆಯೇ ದೋಣಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.  ಭಕ್ತರನ್ನು ದ್ವೀಪಕ್ಕೆ ಕರೆದೊಯ್ಯಲು ಕೋಡಿಬಾಗ ದಲ್ಲಿ ದೋಣಿ ವ್ಯವಸ್ಥೆ ಮಾಡಲಾಗಿತ್ತು.ಉಚಿತ ನೀರು ವಿತರಣೆ:ಗುಡ್ಡದಲ್ಲಿರುವ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ವಿವಿಧ ಸಂಘಟನೆಗಳು ತಂಪು ಪಾನೀಯದ ವ್ಯವಸ್ಥೆ ಮಾಡಿದ್ದವು. ದಾರಿ ಮಧ್ಯೆ ಅಲ್ಲಲ್ಲಿ ನಿಂತಿದ್ದ ಸ್ವಯಂ ಸೇವಕರು ಭಕ್ತರಿಗೆ ಕುಡಿಯಲು ನೀರು ನೀಡಿ ಸತ್ಕರಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿತ್ತು. ಜಾತ್ರೆಯು ದ್ವೀಪದಲ್ಲಿ ನಡೆಯುವುದರಿಂದ ದೇವರ ದರ್ಶನಕ್ಕೆ ಬರುವ ಭಕ್ತರಲ್ಲಿ ಹೆಚ್ಚಿನವರು ಪೂಜಾ ಸಾಮಗ್ರಿಯೊಂದಿಗೆ ಪಾಯಸ, ಸಿಹಿ ತಿನಿಸುಗಳನ್ನು ಸಹ ತಂದಿದ್ದರು. ಮಧ್ಯಾಹ್ನದ ಹೊತ್ತಿಗೆ ದ್ವೀಪದ ದಡದಲ್ಲಿ ಭಕ್ತರು ಊಟ, ಉಪಾಹಾರ ಸೇವಿಸಿದರು.‘ವರ್ಷಕ್ಕೊಮ್ಮೆ ಈ ಜಾತ್ರೆ ದ್ವೀಪದಲ್ಲಿ ನಡೆಯುವುದು ವಿಶೇಷ. ಹೆಚ್ಚಿನ ನರಸಿಂಹ ದೇವರಿಗೆ ಬಾಳೆಗೊನೆ ಅರ್ಪಿಸಿ ಹರಕೆ ತೀರಿಸುವರು. ಇಲ್ಲಿಗೆ ದೋಣಿಯಲ್ಲಿ ಬರುವುದೇ ಒಂದು ರೋಮಾಂಚನಕಾರಿ’ ಅಂಕೋಲಾದ ರಾಜು ಮಾಳ್ಸೇಕರ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry