ಶನಿವಾರ, ಮೇ 28, 2022
28 °C

`ಕೂಲಿಂಗ್ ಸೆಂಟರ್‌ಫ್ಯೂಜ್' ಸ್ತಬ್ಧ

ಪ್ರಜಾವಾಣಿ ವಾರ್ತೆ / ಬಸವರಾಜ ಹವಾಲ್ದಾರ Updated:

ಅಕ್ಷರ ಗಾತ್ರ : | |

ಮಂಡ್ಯ: ಡೆಂಗೆ ಜ್ವರದಿಂದಾಗಿ ಜಿಲ್ಲೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ನಿತ್ಯ 8ರಿಂದ 10 ಹೊಸರೋಗಿಗಳು ಇದಕ್ಕೆ ತುತ್ತಾಗುತ್ತಿದ್ದಾರೆ. ಆದರೆ, ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಡೆಂಗೆ ಚಿಕಿತ್ಸೆಗೆ ಸಹಾಯವಾಗಲೆಂದು ತರಿಸಲಾದ ರಕ್ತದಿಂದ ಪ್ಲೇಟ್‌ಲೆಟ್ಸ್ ವಿಭಜಿಸುವ `ಕೂಲಿಂಗ್ ಸೆಂಟರ್‌ಫ್ಯೂಜ್' ರೊಟೆಂಟಾ ಯಂತ್ರವು ಒಂದು ವರ್ಷದಿಂದ `ಮಿಮ್ಸ'ನಲ್ಲಿ ದೂಳು ತಿನ್ನುತ್ತಿದೆ.ಡೆಂಗೆ ಜ್ವರದಿಂದ ಬಳಲುವವರಲ್ಲಿ ಪ್ಲೇಟ್‌ಲೆಟ್ಸ್‌ಗಳ ಸಂಖ್ಯೆ ಕಡಿಮೆಯಾಗುತ್ತದೆ. ಆಗ ರಕ್ತದಿಂದ ಪ್ಲೇಟ್‌ಲೆಟ್ಸ್‌ಗಳನ್ನು ವಿಭಜಿಸಿ ರೋಗಿಗಳಿಗೆ ನೀಡಬೇಕಾಗುತ್ತದೆ. ಇದಕ್ಕಾಗಿಯೇ ಕರ್ನಾಟಕ ಏಡ್ಸ್ ಪ್ರಿವೆನ್ಷನ್ ಸೊಸೈಟಿಯು (ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ) `ಮಿಮ್ಸ' ಆಸ್ಪತ್ರೆಗೆ ಯಂತ್ರವನ್ನು ನೀಡಿದೆ. ಅದರ ಕಾರ್ಯಾರಂಭಕ್ಕೆ ಮುಹೂರ್ತ ಕೂಡಿ ಬಂದಿಲ್ಲ.ಒಂದು ವರ್ಷದ ಹಿಂದೆಯೇ ಆ ಯಂತ್ರ ಆಸ್ಪತ್ರೆಗೆ ತರಲಾಗಿದ್ದು, ಅದನ್ನು ಇಡಲು ಸೂಕ್ತ ಜಾಗದ ಕೊರತೆ ಇದೆ. ಅದಕ್ಕಾಗಿ ಹೊಸ ಕಟ್ಟಡವೊಂದನ್ನು ನಿರ್ಮಾಣ ಮಾಡಲಾಗುತ್ತಿದೆ. ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಆ ನಂತರ ಯಂತ್ರ ಕಾರ್ಯಾರಂಭ ಮಾಡಲಿದೆ ಎನ್ನುತ್ತಾರೆ `ಮಿಮ್ಸ' ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ.ಕೆ.ಎಂ. ಶಿವಕುಮಾರ್.`ಮಿಮ್ಸ'ಗೆ ಒಪ್ಪಿಸಲಾಗಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಜಿಲ್ಲೆಯ ಜನರಿಗೆ ಅವಶ್ಯವಿರುವಷ್ಟು ಯಂತ್ರ ಇಡುವಷ್ಟು ಜಾಗವಿಲ್ಲವೇ? ಒಂದೂವರೆ ವರ್ಷದಲ್ಲಿ 500 ಚದರ ಅಡಿಯ ಅಳತೆಯ ಕಟ್ಟಡವನ್ನು ನಿರ್ಮಾಣ ಮಾಡಲು ಸಾಧ್ಯವಾಗಿಲ್ಲವೇ ಎಂಬ ಪ್ರಶ್ನೆಗಳು ಏಳುತ್ತವೆ.ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ 160 ಮಂದಿ ಡೆಂಗೆಪೀಡಿತರಾಗಿದ್ದಾರೆ. ಆ ಪೈಕಿ ಮದ್ದೂರು, ಶ್ರೀರಂಗಪಟ್ಟಣ ಹಾಗೂ ಮಳವಳ್ಳಿ ತಾಲ್ಲೂಕಿನ ಮೂವರು ಸಾವನ್ನಪ್ಪಿದ್ದಾರೆ. ಮಂಡ್ಯದಲ್ಲಿಯೂ ಒಬ್ಬರು ಡೆಂಗೆಯಿಂದ ಸತ್ತಿರಬಹುದು ಎಂಬ ಶಂಕೆ ಇದ್ದು, ವರದಿ ಬಂದಿಲ್ಲ.ಮಂಡ್ಯ ತಾಲ್ಲೂಕಿನಲ್ಲಿ 51, ಮದ್ದೂರಿನಲ್ಲಿ 36, ಮಳವಳ್ಳಿಯಲ್ಲಿ 32, ಕೆ.ಆರ್. ಪೇಟೆಯಲ್ಲಿ 16, ಶ್ರೀರಂಗಪಟ್ಟಣದಲ್ಲಿ 10, ನಾಗಮಂಗಲದಲ್ಲಿ 9 ಹಾಗೂ ಪಾಂಡವಪುರ ತಾಲ್ಲೂಕಿನಲ್ಲಿ 6 ಮಂದಿ ಡೆಂಗೆ ಜ್ವರದಿಂದ ಬಳಲುತ್ತಿರುವುದು ಖಚಿತವಾಗಿದೆ.`ನಿತ್ಯ ಹೊಸದಾಗಿ 8ರಿಂದ 10 ಮಂದಿ ಡೆಂಗೆ ಜ್ವರದಿಂದ ಬಳಲುತ್ತಿರುವವರು ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಡೆಂಗೆ ಜ್ವರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಆಶಾ ಕಾರ್ಯಕರ್ತೆಯರು ಮಾಡುತ್ತಿದ್ದಾರೆ' ಎನ್ನುತ್ತಾರೆ ಜಿಲ್ಲಾ ರೋಗವಾಹಕ ಮತ್ತು ಕೀಟ ರೋಗಗಳ ನಿಯಂತ್ರಣಾಧಿಕಾರಿ ಡಾ.ಗಂಗಾಧರ.ಡೆಂಗೆ ಜ್ವರದಿಂದ ಬಳಲುತ್ತಿರುವ ಹಲವಾರು ಬಡ ರೋಗಿಗಳು ಮೊದಲಿಗೆ `ಮಿಮ್ಸ' ಆಸ್ಪತ್ರೆಯಲ್ಲಿ ದಾಖಲಾಗುತ್ತಾರೆ. ಒಂದೆರಡು ದಿನ ಚಿಕಿತ್ಸೆಯನ್ನೂ ಪಡೆಯುತ್ತಾರೆ. ಯಾವಾಗ ಪ್ಲೇಟ್‌ಲೆಟ್ಸ್ ಕಡಿಮೆಯಾಗುತ್ತದೆಯೂ ಆಗ ರೋಗಿಗಳು ಮೈಸೂರು ಅಥವಾ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ತೆರಳುತ್ತಾರೆ. ಇದರಿಂದಾಗಿ ಸಾವಿರಾರು ರೂಪಾಯಿ ಆಸ್ಪತ್ರೆಯ ವೆಚ್ಚ ಭರಿಸುವಂತಾಗಿದೆ.

ಯಾವುದೇ ಯಂತ್ರ ಬಂದಿಲ್ಲ

`ಡೆಂಗೆ ಚಿಕಿತ್ಸೆಗೆ ಬೇಕಾಗಿರುವ ರಕ್ತದಿಂದ ಪ್ಲೇಟ್‌ಲೆಟ್ಸ್ ವಿಭಜಿಸುವ ಯಾವುದೇ ಕೂಲಿಂಗ್ ಸೆಂಟರ್‌ಫ್ಯೂಜ್ ಯಂತ್ರ ಬಂದಿಲ್ಲ' ಯಂತ್ರದ ಫೋಟೊ ತೆಗೆಯಲು ಅನುಮತಿ ಕೇಳಿ `ಪ್ರಜಾವಾಣಿ' ಪ್ರತಿನಿಧಿ ಕರೆ ಮಾಡಿದಾಗ `ಮಿಮ್ಸ' ನಿರ್ದೇಶಕಿ ಡಾ.ಪುಷ್ಪಾ ಸರ್ಕಾರ್ ಉತ್ತರಿಸಿದರು. ರಕ್ತದಿಂದ ಪ್ಲೇಟ್‌ಲೆಟ್ಸ್ ವಿಭಜಿಸುವ ಯಂತ್ರಕ್ಕಾಗಿ ಕಟ್ಟಡ ನಿರ್ಮಾಣ ಕಾರ್ಯ ನಡೆದಿದೆ. ನಾಲ್ಕು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಆ ನಂತರವಷ್ಟೇ ಯಂತ್ರ ತರಿಸಲಾಗುವುದು ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.