ಬುಧವಾರ, ಜನವರಿ 22, 2020
28 °C

ಕೂಲಿಯಿಂದ ಕೃಷಿಯೆಡೆಗಿನ ಹಾದಿ

ಸ್ವರೂಪಾನಂದ.ಎಂ.ಕೊಟ್ಟೂರು Updated:

ಅಕ್ಷರ ಗಾತ್ರ : | |

ಕೃಷಿಯಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವುದು ಬಹುಪಾಲು ರೈತರ ಅನುಭವ. ಹೀಗಾಗಿ ಅನೇಕ ರೈತರು ಸ್ವಂತ ಜಮೀನಿದ್ದರೂ ಕೂಡ ಬೇರೆಯವರ ಹೊಲದಲ್ಲಿ ಕೂಲಿ-ನಾಲಿ ಮಾಡಿ ಹೊಟ್ಟೆ ಹೊರೆದುಕೊಳ್ಳುತ್ತಾರೆ. ಆದರೆ ಇವರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬಸರಕೋಡು ಗ್ರಾಮದ ಕುರುಬರ ಭರಮೇಶ್.ಬೇರೆಯವರ ಜಮೀನಿನಲ್ಲಿ ಕೂಲಿ ಮಾಡುತ್ತಿದ್ದ ಇವರು ಆ ಕೆಲಸಕ್ಕೆ ತಿಲಾಂಜಲಿ ಇಟ್ಟು ತನ್ನ ತಂದೆ ಬೀಳು ಬಿಟ್ಟಿದ್ದ ಹೊಲ ಸಾಗುವಳಿ ಮಾಡಿ ಈಗ `ಕೃಷಿ ಪಂಡಿತ~ನೆಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಕೂಲಿಕಾರರ ಸಮಸ್ಯೆಯ ನಡುವೆ ಮನೆಯ ಸದಸ್ಯರ ಸಹಕಾರದಿಂದ ಯಶಸ್ವಿಯಾಗಿ ಬೇಸಾಯ ನಡೆಸುತ್ತ ಸುತ್ತಲಿನ ಹತ್ತು ಹಲವು ಗ್ರಾಮಗಳಿಗೆ ಮಾದರಿಯಾಗಿದ್ದಾರೆ.ಬಡತನದಿಂದಾಗಿ ಶಿಕ್ಷಣದಿಂದ ವಂಚಿತರಾದ ಭರಮೇಶ್, ಜೀವನೋಪಾಯಕ್ಕೆ ಬೇರೆಯವರ ಹೊಲದಲ್ಲಿ ಕೂಲಿ ಕೆಲಸ ಮಾಡಿದರು. ಆದರೆ ಅದು ಇವರಿಗೆ ಒಗ್ಗಲಿಲ್ಲ. ಹೀಗಾಗಿ ತಾಯಿ ಕರಿಯಮ್ಮ ಹಾಗೂ ತಮ್ಮ ಚನ್ನಪ್ಪನ ಸಹಕಾರದಿಂದ ತಂದೆಯ ಬೀಳು ಜಮೀನು ಹದಗೊಳಿಸಿದರು. ಅಲ್ಲೂ ಮಳೆಯಾಶ್ರಿತ ಬೇಸಾಯದಿಂದ ಆದಾಯಕ್ಕಿಂತ ನಷ್ಟವೇ ಹೆಚ್ಚಾಯಿತು. ಆದರೂ ಹಿಂಜರಿಯಲಿಲ್ಲ. ಸಾಲ ಮಾಡಿ ಕೊಳವೆ ಬಾವಿ ಕೊರೆಸಿದರು. ವಾಣಿಜ್ಯ ಬೆಳೆ ಬೆಳೆದು ಸೈ ಅನಿಸಿಕೊಂಡರು.ಅವಿದ್ಯಾವಂತನಾದರೂ ಕೃಷಿಯಲ್ಲಿ ಅಗಾಧ ಜ್ಞಾನ ಸಂಪಾದಿಸಿರುವ ಇವರಿಗೆ ಹೊಸ ಹೊಸ ಪ್ರಯೋಗದಲ್ಲಿ ಆಸಕ್ತಿ. ಐದು ಎಕರೆ ಜಮೀನಿನಲ್ಲಿ ಹಿಪ್ಪು ನೇರಳೆ ಹಾಕಿದರು. ಆ ಸಮಯದಲ್ಲಿ ಬಿಳಿಗೂಡಿನ ರೇಷ್ಮೆ ತಳಿಗೆ ರೋಗಬಾಧೆ ಹೆಚ್ಚಾಗಿತ್ತು. ಇತರ ಬೆಳೆಗಾರರು ಕಂಗೆಟ್ಟು ಹೋಗಿದ್ದರು. ಆದರೂ ಭರಮೇಶ್ ಬಿಳಿಗೂಡನ್ನು ಆಯ್ಕೆ ಮಾಡಿಕೊಂಡರು.ಅನುಭವಿಗಳಿಂದ ಮಾಹಿತಿ ಕಲೆ ಹಾಕಿದರು. ಮೊದಲನೆಯದಾಗಿ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡರು. ಹಿಪ್ಪುನೇರಳೆ ನಾಟಿಯಲ್ಲಿ ಜಾಣತನ ಪ್ರದರ್ಶಿಸಿ ಸಾಲಿನಿಂದ ಸಾಲಿಗೆ 2 ಅಡಿ, 3 ಅಡಿ ಅಂತರ ಕಾಯ್ದುಕೊಂಡರು. ನಂತರ ಕಾಲ- ಕಾಲಕ್ಕೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದರು. ಉತ್ತಮ ಇಳುವರಿ ಪಡೆಯಲು ಸಾವಯವ ಗೊಬ್ಬರ ಬಳಸಿದರು.ಹುಳುಗಳ ಸೋಂಕು ನಿವಾರಣೆಗೆ ಮುಂಜಾಗ್ರತೆ ಕ್ರಮ ಅನುಸರಿಸಿದರು. ಊಜಿ ನೊಣಗಳ ಕಾಟ ನಿಯಂತ್ರಣಕ್ಕೆ ಪರದೆ ಜೊತೆಗೆ ಸಗಣಿ ರಾಡಿ ಮತ್ತು ಸುಣ್ಣದ ಪುಡಿಯನ್ನು ಬಳಸಿದರು. ಹುಳುಗಳಿಗೆ ಜ್ವರ ಬಂದಾಗ ಗಾಳಿ ಸರಾಗವಾಗಿ ಚಾಕಿ ಮನೆಯೊಳಗೆ ಹರಿದಾಡುವ ವ್ಯವಸ್ಥೆ ಮಾಡಿದರು.ಇಷ್ಟೆಲ್ಲ ಶ್ರಮ, ಜಾಣ್ಮೆ ಕೊನೆಗೂ ಫಲ ನೀಡಿತು. ತಿಂಗಳಿಗೆ ಪ್ರತಿ ನೂರು ಮೊಟ್ಟೆಗೆ 90 ಕಿಲೋ ವರೆಗೂ ಇಳುವರಿ ಬಂತು. ಈಗ ವರ್ಷಕ್ಕೆ ಆರು ಬೆಳೆ ತೆಗೆಯುತ್ತಿದ್ದು ಸಾಕಷ್ಟು ಸಂಪಾದಿಸುತ್ತಿದ್ದಾರೆ.ಅಲ್ಲದೆ  ಹೊಲದಲ್ಲಿಯೇ ಗೊಬ್ಬರ ತಯಾರಿಕೆಗೆ ಗುಂಡಿ ನಿರ್ಮಿಸಿದ್ದಾರೆ. ಇದರಲ್ಲಿ ರೇಷ್ಮೆ ಹುಳದ ಹಿಕ್ಕೆ, ತಿಂದು ಬಿಟ್ಟ ಸೊಪ್ಪು, ಕಡ್ಡಿಗಳನ್ನು ಹಾಕಿ ಕಳಿಯುವಂತೆ ನೋಡಿಕೊಳ್ಳುತ್ತಾರೆ. ಇದು ಹಸಿರು ಗೊಬ್ಬರವಾಗಿ ಪರಿವರ್ತನೆಯಾದ ನಂತರ ಪುನಃ ಹೊಲಕ್ಕೆ ಹಾಕುತ್ತಾರೆ. ರೇಷ್ಮೆ ಜತೆ ಸಣ್ಣ ಪ್ರಮಾಣದಲ್ಲಿ ಹೈನುಗಾರಿಕೆ, ಕೋಳಿ ಸಾಕಣೆ ಮಾಡಿದ್ದಾರೆ. ಇದೂ ಸಹ ಇವರ ಕೈ ಹಿಡಿದಿದೆ.ಇವರ ಇಡೀ ಕುಟುಂಬ ಇಂದು ಹೊಲವನ್ನೇ ನಂಬಿ ಬದುಕುತ್ತಿದೆ. ಭೂತಾಯಿ ಕೃಪೆಯಿಂದ ಆರ್ಥಿಕ ಮಟ್ಟ ಸುಧಾರಿಸಿದೆ. ಒಂದು ಕಾಲದಲ್ಲಿ ಬೇರೆಯವರ ಜಮೀನಿನಲ್ಲಿ ಕೂಲಿಗೆ ಹೋಗುತ್ತಿದ್ದವರು ಇಂದು ತಾನೇ ನಾಲ್ಕಾರು ಮಂದಿಗೆ ಕೆಲಸ ಕೊಡುವಷ್ಟು ಶಕ್ತರಾಗಿದ್ದಾರೆ. ಭರಮೇಶ್‌ನ ಈ ಯಶೋಗಾಥೆಯನ್ನು ಕಂಡು ಸರ್ಕಾರ 2010-2011 ನೇ ಸಾಲಿನ ತಾಲ್ಲೂಕು ಮಟ್ಟದ `ಕೃಷಿ ಪಂಡಿತ~ ಪ್ರಶಸ್ತಿ ನೀಡಿ ಸತ್ಕರಿಸಿದೆ.

ಅವರ ಮೊಬೈಲ್ ಸಂಖ್ಯೆ 99451 32207.

ಪ್ರತಿಕ್ರಿಯಿಸಿ (+)