ಭಾನುವಾರ, ಏಪ್ರಿಲ್ 11, 2021
32 °C

ಕೂಲ್ ಚಿತ್ರದ ಹಾಟ್ ಬೆಡಗಿಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀಳಕಾಯದ ಸುಂದರಿ ಸಾರಾ ಜೇನ್ ದಿಯಾಸ್, ಕೆಂಪು ತುಂಡುಡುಗೆ ಮತ್ತು ಟಾಪ್‌ನೊಂದಿಗೆ ಗೇಣೆತ್ತರದ ಹಿಲ್ಸ್ ಇರುವ ಪಾದರಕ್ಷೆ ತೊಟ್ಟು ಹೆಜ್ಜೆಯ ಮೇಲೊಂದು ಹೆಜ್ಜೆಯನಿಕ್ಕುತ `ಪ್ರಜಾವಾಣಿ~ ಕಚೇರಿಗೆ ಕಾಲಿಟ್ಟರು.ಅವರೊಂದಿಗೆ ಹಳದಿ ಟಾಪ್ ಹಾಗೂ ಕಪ್ಪು ಜೀನ್ಸ್ ತೊಟ್ಟ ನೇಹಾ ಶರ್ಮಾ ಸಹ ಬಂದಿದ್ದರು. ಇಬ್ಬರೂ ಬಂದಿದ್ದು ತಮ್ಮ `ಕ್ಯಾ ಸೂಪರ್ ಕೂಲ್ ಹೈ ಹಮ್~ ಚಿತ್ರದ ಪ್ರಚಾರಕ್ಕಾಗಿ.ಎಲ್ಲರಂತೆ ಬೆಂಗಳೂರು ಎಂದರೆ ನನಗಿಷ್ಟ ಎನ್ನುತ್ತಲೇ ಮಾತು ಆರಂಭಿಸಿದ ಸಾರಾ, ಬೆಂಗಳೂರು ಬಿಟ್ಟು ಹೋಗುವಾಗ ಬಿಕ್ಕಳಿಸಿ ಅತ್ತಿದ್ದೆ ಎಂದರು. ಬೆಂಗಳೂರಿನ ಹವಾಮಾನ, ಆಹಾರ, ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಮೆಚ್ಚುಗೆಯನ್ನು ಸೂಸುತ್ತಲೇ ತಮ್ಮ ಚಿತ್ರದತ್ತ ಮಾತನ್ನು ಹೊರಳಿಸಿದ್ದರು ಸಾರಾ.`ಈ ಚಿತ್ರದ ವಿಶೇಷವೆಂದರೆ ಚಿತ್ರದುದ್ದಕ್ಕೂ ನಗೆಯುಕ್ಕಿಸುವ ಮಾತುಗಳಿವೆ. ಎಲ್ಲಕ್ಕೂ ದ್ವಂದ್ವಾರ್ಥಗಳಿವೆ. ಕೆಲವೊಂದು ಸಂಭಾಷಣೆಗಳನ್ನು ಹೇಳುವಾಗಲೇ ನಗೆಯುಕ್ಕಿ ಬರುತ್ತಿತ್ತು. ಚಿತ್ರಕ್ಕೆ ವಯಸ್ಕರ ಚಿತ್ರ ಎಂದು ಹೇಳುತ್ತಿದ್ದಾರೆ. ಅದಕ್ಕೆ ದ್ವಂದ್ವಾರ್ಥದ ಮಾತುಗಳೇ ಕಾರಣ~ ಎನ್ನುತ್ತಾ ತುಟಿಗಳನ್ನು ಸಾಕಷ್ಟು ಅಗಲಿಸಿ ನಕ್ಕರು.ಅವರಿಗೆ ಹೇಳಲು ಅತಿ ಕಷ್ಟವಾದ ಸಾಲು ಯಾವುದು ಎಂದು ಕೇಳಿದಾಗ, `ಯೇ ಜೋ ಕ್ಯಾಂಡಲ್ಸ್ ಹೈ, ಅಲಗ್ ಅಲಗ್ ಸೈಜ್ ಮೆ ಮಿಲ್ತೆ ಹೈ... ತುಮ್ ಬಾತ್‌ರೂಮ್ ಮೇ ಭಿ ಯೂಸ್ ಕರ್‌ಸಕ್ತೆ ಹೋ... ಬೆಡ್‌ರೂಂ ಮೇ ಭಿ~ ಯುವಜನಾಂಗಕ್ಕೆ ತನ್ನದೇ ಆದ ಸ್ಲ್ಯಾಂಗ್ ಇದೆ. ಇದೇ ಸ್ಲ್ಯಾಂಗ್‌ಗೆ ಹೋಲುವಂಥ ಸ್ಕ್ರಿಪ್ಟ್ ಇದೆ. ಹಾಗಾಗಿ ಚಿತ್ರದುದ್ದಕ್ಕೂ ನಗೆಯುಕ್ಕಿಸುವ ಮಾತುಗಳೇ ಇವೆ~ ಎನ್ನುತ್ತಾರೆ ಅವರು.ಸಾರಾ ಇದಕ್ಕೂ ಮೊದಲು `ಬ್ರೈಡ್ ಸರ್ಚ್~ ಎನ್ನುವ ಚಿತ್ರದಲ್ಲಿಯೂ ನಟಿಸಿದ್ದರು. ಆಗ ಅವರು ಬೆಂಗಳೂರಿನಲ್ಲಿ ವಾಸವಾಗಿದ್ದರಂತೆ. ಆ ಚಿತ್ರ ಇನ್ನೂ ಬಿಡುಗಡೆಯಾಗಲಿಲ್ಲ. ಆದರೆ ಆ ಚಿತ್ರಕ್ಕಾಗಿ ನೀಡಿದ ಒಂದು ಲಕ್ಷ ರೂಪಾಯಿ ಸಂಭಾವನೆಯಲ್ಲಿ ಮೆಲ್ಬರ್ನ್‌ಗೆ ವಿದ್ಯಾಭ್ಯಾಸಕ್ಕೆ ಹೊರಟರಂತೆ.“ಕ್ಯಾ ಸೂಪರ್ ಕೂಲ್ ಹೈ ಹಮ್ ಚಿತ್ರಕತೆ ಇಷ್ಟವಾಗಿದ್ದಕ್ಕೆ ಇದರಲ್ಲಿ ನಟಿಸಿದೆ. ನಾನು ಅವಕಾಶವಾದಿ. ಅವಕಾಶಗಳು ಸಿಕ್ಕಾಗ ಅವು ನನಗೆ ಇಷ್ಟವಾಗುವಂತಿದ್ದರೆ ಅವನ್ನು ಬಾಚಿಕೊಳ್ಳುತ್ತೇನೆ. ಇಲ್ಲದಿದ್ದರೆ ನಿರ್ಲಕ್ಷಿಸುತ್ತೇನೆ. ಇಂದಿಗೂ ನನ್ನ ಅಗ್ರ ಆಯ್ಕೆ `ನನಗೆ ಇಷ್ಟವಾಗುವಂತಿದ್ದರೆ~ ಎಂಬ ಸಾಲಿನ ಮೇಲೆಯೇ ತೀರ್ಮಾನವಾಗುತ್ತದೆ” ಎನ್ನುವುದು ಅವರ ದೃಢವಾದ ನಿಲುವು.ಒಂದು ವೇಳೆ ನಟಿಯಾಗಿರದಿದ್ದರೆ ಏನಾಗಿರುತ್ತಿದ್ದಿರಿ? ಎಂಬ ಪ್ರಶ್ನೆಗೆ ಥಟ್ಟನೆ ಉತ್ತರಿಸಿದ್ದು- `ಶೆಫ್ ಆಗಿರುತ್ತಿದ್ದೆ. ಅಡುಗೆ ಮಾಡುವುದು ನನಗಿಷ್ಟ. ಅಡುಗೆಯಲ್ಲಿ ಅನೇಕ ಪ್ರಯೋಗಗಳನ್ನು ಮಾಡುತ್ತೇನೆ. ಫ್ರೆಂಚ್ ಖಾದ್ಯದೊಂದಿಗೆ ಇಟಾಲಿಯನ್ ಖಾದ್ಯಗಳನ್ನು ಬೆರೆಸಿ ಮಾಡುವುದು ಖುಷಿ ಕೊಡುತ್ತದೆ~.ಮಾತಿನ ನಡುವೆಯೇ ಸಾರಾ ಫೋಟೊ ತೆಗೆಸಿಕೊಳ್ಳಲು ಅಲಂಕಾರ ಮಾಡಿಕೊಳ್ಳಲಾರಂಭಿಸಿದರು. ಅವರ ಮೇಕಪ್‌ಗೆಂದೆ ಜತೆಯಲ್ಲಿ ಬಂದಿದ್ದವರು ತುಟಿರಂಗು ತೆಗೆದುಕೊಟ್ಟರು. ಕಡು ಗುಲಾಬಿ ಬಣ್ಣದ ತುಟಿರಂಗಿನೊಂದಿಗೆ ತಮ್ಮ ನಗುವನ್ನೂ ತೀಡುತ್ತ ನಗುಹೊದ್ದ ಮುಖದೊಂದಿಗೆ ಚಿತ್ರಗಳಿಗಾಗಿ ಸಿದ್ಧರಾದರು.

`ನಾನು ಇದೇ ಮೊದಲ ಸಲ ಬೆಂಗಳೂರಿಗೆ ಬಂದಿದ್ದು~ ಎಂದು ಮಾತಿಗಿಳಿದ ನೇಹಾ ಶರ್ಮಾ ಬಿಹಾರ್ ಮೂಲದವರು.

 

`~ಮೊದಲ ಭೇಟಿಯಲ್ಲಿಯೇ ಬೆಂಗಳೂರನ್ನು ಪ್ರೀತಿಸಲಾರಂಭಿಸಿದ್ದೇನೆ. ಇಲ್ಲಿಯ ಹವಾಮಾನ, ತಾಜಾ ಗಾಳಿ ಎಲ್ಲವೂ ಆಹ್ಲಾದಕರವಾಗಿದೆ. ಬಹಳಷ್ಟು ಜನ ತೆಲುಗು ಚಿತ್ರಗಳನ್ನು ನೋಡಿದವರೂ ಇದ್ದಾರೆ. ಇಲ್ಲಿ ಎಲ್ಲರೂ ಚಿರುತಾ ಸಂಜನಾ ಎಂದು ಕೂಗಿದ್ದೇ ಕೂಗಿದ್ದು. ಒಂದರೆ ಕ್ಷಣ, ಇಲ್ಲಿಯವಳೇನಾ ಎಂಬ ಬೆಚ್ಚನೆಯ ಭಾವ ನೀಡುತ್ತಾರೆ ಬೆಂಗಳೂರಿಗರು~ ಎಂದು ಹೊಗಳುತ್ತಲೇ ಇದ್ದರು.ಫ್ಯಾಶನ್ ಡಿಸೈನಿಂಗ್ ಕೋರ್ಸ್ ಮಾಡಿರುವ ನೇಹಾ ಶರ್ಮಾಗೆ ಇದು ಹಿಂದಿಯಲ್ಲಿ ಎರಡನೆಯ ಚಿತ್ರ. ಇಮ್ರಾನ್ ಹಶ್ಮಿಯೊಂದಿಗೆ `ಕ್ರೂಕ್~ ಎಂಬ ಮೊದಲ ಚಿತ್ರದಲ್ಲಿ ನಟಿಸಿದ್ದರು. ಈ ಎರಡೂ ಚಿತ್ರಗಳ ನಡುವೆ ಅಜಗಜಾಂತರವಿದೆ. ಅದು ಗಂಭೀರವಾದ ಚಿತ್ರ. ಅಲ್ಲಿ ಗಾಂಭೀರ್ಯದ ಪರದೆ ಹೊದ್ದು ನಟಿಸಬೇಕಾದುದು ಅನಿವಾರ್ಯವಾಗಿತ್ತು.ಆದರೆ `ಕ್ಯಾ ಸೂಪರ್ ಕೂಲ್ ಹೈ ಹಮ್ ~ ಚಿತ್ರದಲ್ಲಿ ಸಹಜವಾಗಿ ನಟಿಸಿದೆ. ಅದು ನಮ್ಮ ವಯಸ್ಸಿನ ಚಿತ್ರ. ತೀರ ನಮ್ಮದೇ ಆಗಿರುವ ಜೋಕುಗಳು, ಮಾತು... ಮಾತು.. ಹಾಗಾಗಿ ಈ ಚಿತ್ರ ಖುಷಿ ಕೊಟ್ಟಿತು~ ಎನ್ನುತ್ತಾರೆ ನೇಹಾ ಶರ್ಮಾ.ದ್ವಂದ್ವಾರ್ಥ ಇರುವ ಚಿತ್ರ ಎಂದೇ ಪ್ರಚಾರ ಮಾಡುತ್ತೀರಲ್ಲ, ಇದು ಅಭಿರುಚಿ ಕೆಡಿಸುವುದಿಲ್ಲವೇ ಎಂಬ ಮಾತಿಗೆ ನೇಹಾ ಒಂದು ಚಂದದ ನಗೆ ಚೆಲ್ಲಿದರು. `ಯಾವುದೇ ಕಾಲೇಜಿಗೆ ಹೋಗಿ ನೋಡಿ, ಅಲ್ಲಿ ಮಾತನಾಡದ ಯಾವ ಸಂಭಾಷಣೆಗಳೂ ಈ ಚಿತ್ರದಲ್ಲಿಲ್ಲ. ಇದು ಯುವಜನಾಂಗವು ತಮ್ಮ ವಯಸ್ಸಿನ ಒಂದು ಅವಧಿಯಲ್ಲಿ ಮಾತನಾಡುವ ವಿಷಯಗಳೇ ಆಗಿವೆ.ಮನರಂಜನೆಯ ದೃಷ್ಟಿಯಿಂದ ಮಾತ್ರ ನೋಡಿದರೆ, ನಕ್ಕು ಮರೆತುಬಿಡುವ ಮಾತುಗಳು. ಆದರೆ ಭರಪೂರ ಮನರಂಜನೆ ನೀಡಿದ ಚಿತ್ರ ಎಂದು ಮಾತ್ರ ನೆನಪಿಸಿಕೊಳ್ಳಬಹುದು~ ಎಂದರು.ಚಿತ್ರ ನೋಡಲು ಮರೆಯಬೇಡಿ ಎಂದು ಹೇಳುತ್ತ ಇಬ್ಬರೂ ಚಿತ್ರ ಪ್ರಚಾರದ ಯಾನದಲ್ಲಿ ಭಾಗವಹಿಸಲು ಎದ್ದು ಹೊರಟರು. ಚಿತ್ರ: ಎಂ.ಎಸ್. ಮಂಜುನಾಥ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.