ಶನಿವಾರ, ಮೇ 15, 2021
25 °C

ಕೂಳಿನ ಕಾಯಕದಲ್ಲಿ ಅನ್ನದಾತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡಗೋಡ: ಮುಂಗಾರು ಮಳೆಯು ಹೊಸ್ತಿಲಿನಲ್ಲಿರುವಾಗಲೇ ಬಿತ್ತನೆ ಕಾರ್ಯ ಮುಗಿಸಬೇಕೆಂಬ ತವಕದಲ್ಲಿ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು ವರ್ಷದ ಕೂಳಿಗಾಗಿ ಕಾಯಕದಲ್ಲಿ ನಿರತರಾಗಿದ್ದಾರೆ.`ತಾಲ್ಲೂಕಿನಲ್ಲಿ ಒಟ್ಟು 9189 ಹೆಕ್ಟೇರ್ ಬಿತ್ತನೆ ಕ್ಷೇತ್ರವಿದೆ. ಮುಂಡಗೋಡ ಹೋಬಳಿಯಲ್ಲಿ ಇಲ್ಲಿಯವರೆಗೆ ಸುಮಾರು 2800 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿದ್ದು ಶೇ 35ರಷ್ಟಾಗಿದೆ. ಅದರಲ್ಲಿ 2173 ಹೆಕ್ಟೇರ್ ಪ್ರದೇಶದಲ್ಲಿ ಬತ್ತ, 187ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ, 313 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ, 139 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯ ಬಿತ್ತನೆ ನಡೆದಿದೆ. ಪಾಳಾ ಹೋಬಳಿಯಲ್ಲಿ ಭತ್ತ, ಹತ್ತಿ ಸೇರಿದಂತೆ ಇತರೆ ಬೆಳೆಗಳ ಬಿತ್ತನೆ ಕಾರ್ಯ ಭರದಿಂದ ಸಾಗಿದ್ದು ಶೇ 30ರಷ್ಟಾಗಿದೆ' ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.ಕಳೆದ ಕೆಲ ದಿನಗಳ ಹಿಂದೆ ಭರದಿಂದ ಧರೆಗೆ ಇಳಿದ ವರುಣ ಕೃಷಿ ಚಟುವಟಿಕೆಗೆ ಪೂರಕವಾದ ವಾತಾವರಣ ನಿರ್ಮಿಸಿದ್ದನು. ರೈತರು ಮೊದಲೇ ಹೊಲಗದ್ದೆಗಳನ್ನು ಹಸನು ಮಾಡಿಕೊಂಡು ಹದವಾದ ಮಳೆಗೆ ಕಾಯುತ್ತಿರುವ ಸಂದರ್ಭದಲ್ಲಿಯೇ ಎರಡ್ಮೂರು ದಿನ ನಿರಂತರವಾಗಿ ಸುರಿದ ಮಳೆ ರೈತನ ಮೊಗದಲ್ಲಿ ಸಂತಸ ಮೂಡುವಂತೆ ಮಾಡಿತು. ಮಳೆಯಾದ ನಂತರ ಕೃಷಿ ಚಟುವಟಿಕೆಗೆ ಹೆಚ್ಚಿನ ವೇಗ ನೀಡಿದ ರೈತರು ಈಗ ಬಿತ್ತನೆ ಕಾರ್ಯದಲ್ಲಿ ನಿರತರಾಗಿದ್ದಾರೆ.ಮಳೆಯ ಮುನ್ನವೇ ಕೆಲವು ರೈತರು ಬಿತ್ತನೆ ಮಾಡಿದ್ದರ ಫಲವಾಗಿ ಈಗ 10-15ದಿನಗಳ ಭತ್ತದ ಸಸಿಗಳ ಸಾಲುಗಳನ್ನು ಹೊಲಗದ್ದೆಗಳಲ್ಲಿ ಕಾಣಬಹುದಾಗಿದೆ. ಇನ್ನೊಂದು ವಾರದಲ್ಲಿ ಸುಮಾರು ಶೇ 90ರಷ್ಟು ಬಿತ್ತನೆ ಕಾರ್ಯ ಮುಗಿಯಲಿದೆ ಎಂದು ಕೃಷಿ ಇಲಾಖೆಯ ಮೂಲ ತಿಳಿಸಿದ್ದು, ರೈತರು ಈಗಾಗಲೇ ಬಿತ್ತನೆಗೆ ಬೇಕಾದ ಬೀಜಗಳನ್ನು ಕೃಷಿ ಕೇಂದ್ರ ಹಾಗೂ ಇತರೆಡೆ ಖರೀದಿಸಿದ್ದಾರೆ.ತುಂಬದ ಕಣಜ...: ಭತ್ತದ ಕಣಜ ಎಂದು ಕರೆಯಲ್ಪಡುತ್ತಿದ್ದ ತಾಲ್ಲೂಕಿನಲ್ಲಿ ಕಳೆದ ಹಲವು ವರ್ಷಗಳಿಂದ ಮಳೆಯ ಬರುವಿಕೆಯಲ್ಲಿನ ವ್ಯತ್ಯಾಸದಿಂದ ಉಣ್ಣುವಕ್ಕಾಗುವಷ್ಟು ಅಕ್ಕಿ ಬಂತೇ ಹೊರತು ಕಣಜ ತುಂಬುವುದು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತ ಬಂದಿತು. ಇದರಿಂದ ಬತ್ತ ಬೆಳೆಯುವ ನಾಡಿನಲ್ಲಿಯೇ ಅಕ್ಕಿಯ ದರ ಗಗನಕ್ಕೇರಿತು. ಮಳೆಯಾಶ್ರಿತ ಬೆಳೆಯನ್ನೇ ನಂಬಿದ್ದ ರೈತಸಮುದಾಯ ನಿಧಾನವಾಗಿ ಹತ್ತಿ, ಜೋಳ, ಗೋವಿನಜೋಳ ಮುಂತಾದ ವಾಣಿಜ್ಯ ಬೆಳೆಗಳತ್ತ ಮುಖ ಮಾಡುವುದು ಅನಿವಾರ್ಯವಾಗಿತ್ತು.ಕಡಿಮೆ ಮಳೆಯಲ್ಲಿ ಅಧಿಕ ಲಾಭ ಪಡೆಯುವ ತವಕದಲ್ಲಿ ತಂಬಾಕು ಬೆಳೆಯತ್ತ ಹೆಚ್ಚಿನ ಆಕರ್ಷಣೆಗೊಂಡ ರೈತರು ಅಲ್ಲಿಯೂ ಕೈಸುಟ್ಟುಕೊಂಡರು. ನಂತರ ಅನುಭವದಿಂದ ಮತ್ತೆ ಭತ್ತ ಬೆಳೆಯುವಲ್ಲಿ ಆಸಕ್ತಿ ವಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.