ಮಂಗಳವಾರ, ನವೆಂಬರ್ 19, 2019
29 °C

ಕೂಸನ್ನು ಕಾಡುತ್ತಿದೆಯೇ ಕೋಲಿಂಗ್

Published:
Updated:

ರಾತ್ರಿ ಒಂಬತ್ತು ಗಂಟೆಗೆ ಹಸುಗೂಸು ಇದ್ದಕ್ಕಿದ್ದಂತೆ ಕಿರಿಕಿರಿ ಮಾಡಲಾರಂಭಿಸಿತು. ಮಡಿಲಲ್ಲಿ ಮಲಗಿಸಿಕೊಂಡು ಹಾಲು ಕುಡಿಸಲು ಬಾಣಂತಿ ಏನೆಲ್ಲ ಕಸರತ್ತು ಮಾಡಿದರೂ ಮೊಲೆ ಹಿಡಿಯುತ್ತಿಲ್ಲ. ಹೆಗಲ ಮೇಲೆ ಹಾಕಿಕೊಂಡು ತಿರುಗಿದರೂ ಸುಮ್ಮನಾಗುತ್ತಿಲ್ಲ. ತೊಟ್ಟಿಲಲ್ಲಿ ಹಾಕಿ ತೂಗಿದರೂ ಅಳು ನಿಲ್ಲಿಸುವುದಿಲ್ಲ. ಏನು ಮಾಡಬೇಕೆಂದು ತೋಚದೆ ಗಾಬರಿಯಾಗುತ್ತಾಳೆ. ಇದು ಕೋಲಿಕ್‌ನಿಂದ ನರಳುವ ಮಗುವಿನ ಪಾಡು.ಕೋಲಿಕ್ ಎಂದರೆ ಮೂರು ತಿಂಗಳೊಳಗಿನ ಕೂಸನ್ನು ಕಾಡುವ ತೀವ್ರತರಹದ ಹೊಟ್ಟೆನೋವು. ಇದ್ದಕ್ಕಿದ್ದಂತೆ ಕೂಸುಗಳಲ್ಲಿ ಕರುಳುಗಳು ಕಿವುಚಿದಂತಾಗಿ ತೀವ್ರವಾಗಿ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ಯಾವ ಔಷಧಿಗೂ ಬಗ್ಗದೇ ಮೇಲಿಂದ ಮೇಲೆ ಮರುಕಳಿಸುತ್ತಲೇ ಇರುವುದು ಇದರ ಮುಖ್ಯ ಲಕ್ಷಣ. ಇದು ಕೆಲವೇ ಕೂಸುಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ.ಕೂಸುಗಳಿಗೆ ಕೋಲಿಕ್ ನಿಯಮಿತವಾಗಿ ದಾಳಿ ಮಾಡುತ್ತದೆ. ಇದು ಸಾಮಾನ್ಯವಾಗಿ ಸಾಯಂಕಾಲ ಅಥವಾ ರಾತ್ರಿ ವೇಳೆ ಬರುವುದರಿಂದ ಇದನ್ನು `ಸಂಜೆಯ ಕೋಲಿಕ್' ಎಂದು ಕರೆಯುತ್ತಾರೆ. ಈ ರೀತಿ ಕೋಲಿಕ್ ಮೂರು ತಿಂಗಳೊಳಗಿನ ಕೂಸುಗಳನ್ನು ಮಾತ್ರ ಕಾಡುವುದರಿಂದ ಇದಕ್ಕೆ `ಮೂರು ತಿಂಗಳ ಕೋಲಿಕ್' ಎಂದು ಸಹ ಕರೆಯುವುದುಂಟು. ಇದು ಮೂರು ತಿಂಗಳ ನಂತರ ತನ್ನಷ್ಟಕ್ಕೆ ತಾನೇ ಮಾಯವಾಗುವ ಸೋಜಿಗದ ಕಾಯಿಲೆ.ವೈದ್ಯಕೀಯ ಆಕರ ಗ್ರಂಥಗಳಲ್ಲಿ ಇದರ ನಿರ್ದಿಷ್ಟವಾದ ಕಾರಣಗಳು ಲಭ್ಯವಿಲ್ಲ. ಹಲವು ವಿವರಣೆಗಳು ಇದ್ದರೂ, ಒಂದೂ ತೃಪ್ತಿಕರವಾಗಿಲ್ಲ. ಹೀಗಾಗಿ ಇದನ್ನು ವೈದ್ಯಕೀಯ ಚಿಕಿತ್ಸೆಗೆ ಬಗ್ಗದ ಹೊಟ್ಟೆನೋವು ಎನ್ನಬಹುದು.ಕೂಸಿಗೆ ಕೋಲಿಕ್ ಅಪ್ಪಿದಾಗ ನಿಯಂತ್ರಿಸಲಾಗದ ಹೊಟ್ಟೆನೋವಿನಿಂದ ಅದು ಗಟ್ಟಿಯಾಗಿ ಚೀರಿ ಅಳಲಾರಂಭಿಸುತ್ತದೆ. ಆಗ ತನ್ನೆರಡೂ ಮೊಣಕಾಲುಗಳನ್ನು ಹೊಟ್ಟೆಯ ಮೇಲೆ ಎಳೆದುಕೊಂಡು, ಮುಷ್ಟಿಗಳೆರಡನ್ನೂ ಬಿಗಿ ಹಿಡಿದುಕೊಂಡು ಗಟ್ಟಿಯಾಗಿ ಅಳುತ್ತದೆ. ಬೆಳಿಗ್ಗೆಯಿಂದ ತನ್ನ ಪರಿಸರದಲ್ಲಿ ಉಂಟಾಗಿದ್ದ ಪ್ರತಿಕೂಲ ಅನುಭವಗಳು, ಕೋಲಿಕ್ ದಾಳಿಗೆ ಅನುಕೂಲಕರ ಆಗಿರುತ್ತವೆ. ಬಾಟಲಿ ಹಾಲು ಕೂಡಿಯುವ ಕೂಸುಗಳನ್ನು ಕಂಡರೆ ಕೋಲಿಕ್ ಹಿರಿಹಿರಿ ಹಿಗ್ಗುತ್ತದೆ. ತಾಯಿ ಹಾಲು ಅಮೃತ. ಅದು ಕೋಲಿಕ್ ಶೂಲೆಗೆ ಕಾರಣ ಆಗಬಹುದೆಂದು ಯಾವ ವೈದ್ಯಕೀಯ ಆಕರ ಗ್ರಂಥಗಳಲ್ಲೂ ಉಲ್ಲೇಖವಾಗಿಲ್ಲ. ಆದ್ದರಿಂದ `ಕೋಲಿಕ್'ನಿಂದ ತತ್ತರಿಸುವ ಮಗುವಿನ ತಾಯಿ, ಯಾವುದೇ ತಪ್ಪು ಗ್ರಹಿಕೆಗಳಿಲ್ಲದೆ ಮೊಲೆ ಹಾಲುಣಿಸುವುದನ್ನು ಮುಂದುವರಿಸಬೇಕು.ಶಮನಕ್ಕೆ ಹೀಗೆ ಮಾಡಿ

ಕೋಲಿಕ್‌ಗೆ ತುತ್ತಾದ ಮಗುವಿನ ಸಂಕಟವನ್ನು ತಾತ್ಕಾಲಿಕವಾಗಿ ತಗ್ಗಿಸಲು, ತಾಯಿಯ ಆತಂಕವನ್ನು ಕುಗ್ಗಿಸಿ ಆತ್ಮವಿಶ್ವಾಸ ಹೆಚ್ಚಿಸಲು ಕೆಳಕಂಡ ಕೆಲವು ಕ್ರಮಗಳನ್ನು ಕೈಗೊಳ್ಳಬಹುದು.ಮಗುವಿಗೆ ಆಧಾರ ನೀಡಿ ನೇರವಾಗಿ ನಿಲ್ಲಿಸಬೇಕು ಅಥವಾ ಅದನ್ನು ತೊಡೆಯ ಮೇಲೆ ಬೋರಲು ಮಲಗಿಸಿ ಬೆನ್ನು ಸವರಬೇಕು ಅಥವಾ ಹೊಕ್ಕಳ ಸುತ್ತಲೂ ಬೆಚ್ಚನೆ ಕಾವು ಕೊಡಬೇಕು. ಹೊಟ್ಟೆಯ ಮೇಲೆ ಬಿಸಿ ನೀರಿನ ಚೀಲ ಅಥವಾ ಬಾಟಲಿಯನ್ನು ಇಡುವುದರಿಂದ ಉದರ ಶೂಲೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ತಾಯಂದಿರು ನೆಮ್ಮದಿಯ ನಿಟ್ಟುಸಿರು ಬಿಡಲು ಸಹಕಾರಿಯಾಗುತ್ತದೆ.ಗಂಟೆಗಟ್ಟಲೆ ಮಗು ಅತ್ತು ಅತ್ತು ಸುಸ್ತಾಗುವಂತೆ ಮಾಡುವ ಬದಲು, ಮಗುವನ್ನು ತೀವ್ರವಾದ ಕೋಲಿಕ್ ಕಾಡುವಾಗ ನಿದ್ರಾಕಾರಕ ಔಷಧಿ ನೀಡುವುದು ಉಪಯುಕ್ತ.

ಪ್ರತಿಕ್ರಿಯೆ

6.4.2013ರ ಭೂಮಿಕಾ ಸಂಚಿಕೆಯಲ್ಲಿ ಅಬ್ಬಾ ಎಷ್ಟು ಉಪಯುಕ್ತ ವಿಷಯಗಳು! `ಆರೋಗ್ಯ ತಪಾಸಣೆ ತಪ್ಪಿಸಿ ಬವಣೆ' (ಡಾ. ವಿನಯಾ ಶ್ರೀನಿವಾಸ್) ಮಾಹಿತಿಪೂರ್ಣ ಲೇಖನ. ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೇಗೆ ಕಾಳಜಿ ವಹಿಸಬೇಕೆಂಬುದನ್ನು ಮನಮುಟ್ಟುವಂತೆ ವಿವರಿಸಿದೆ. ಬಿ.ಪಿ. ಎಂದರೆ ಪ್ರಾಣವೇ ಹೊರಟುಹೋಗುವುದೇನೋ ಎಂದು ಅತಿ ಭಯ ಪಡುವವರಿಗೆ `ಬಿ.ಪಿ: ಬೇಡ ಹಪಾಪಹಿ' (ಡಾ. ಪ್ರೊ. ಮಹಾಬಲರಾಜು) ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಿಕೊಟ್ಟಿದೆ. `ಸಕ್ಕರೆ ರೋಗಕ್ಕೆ ಅಕ್ಕರೆಯ ಸಲಹೆ' (ಡಾ. ಎನ್.ಅನಂತ ರಾಮನ್) ಸಹ ಉಪಯುಕ್ತವಾಗಿದೆ.

-ಎ.ಕೆ.ಅನಂತ ಮೂರ್ತಿ, ಬೆಂಗಳೂರು.

`ಟ್ರಿಪ್ಪು ಮತ್ತು ಟಾಯ್ಲೆಟ್' ಪ್ರಬಂಧ ಚೆನ್ನಾಗಿದ್ದು ನಗೆತರಿಸಿತು. ಹೋದ್ ಹೋದಲ್ಲಿ ಟಾಯ್ಲೆಟ್‌ಗಾಗಿ ಹುಡುಕಾಡುವ ಪ್ರಿಯಾ ಎಂ. ಕೆರ್ವಾಶೆ ಅವರ ಅನುಭವ ಬರೀ ಅವರೊಬ್ಬರದೇ ಅಲ್ಲ, ತುಂಬಾ ಹೆಂಗಸರ ಸಮಸ್ಯೆ ಅದು. ಯಾವುದೇ ಮುಜುಗರವಿಲ್ಲದೆ ರಸ್ತೆ ಬದಿಯಲ್ಲಿ ನಿಂತು ಕಾರ್ಯ ಪೂರೈಸಿ ನಿರಾಳವಾಗುವ ಗಂಡಸರನ್ನು ನೋಡಿ ಅದೆಷ್ಟು ಬಾರಿ ಹೊಟ್ಟೆ ಉರಿದುಕೊಂಡಿದ್ದೀನೋ ನಾನು. ಹಾಗೇ ಎಲ್ಲೆಂದರಲ್ಲಿ ಉಚ್ಚೆ ಹಾರಿಸಿ ದುರ್ನಾತಕ್ಕೂ ಅವರೇ ಕಾರಣ ಎನ್ನುವುದನ್ನು ನೆನೆದು ಶಾಪ ಹಾಕಿದ್ದೂ ಇದೆ. ಪ್ರಕೃತಿ ಈ ವಿಷಯದಲ್ಲೂ ಹೆಂಗಸರಿಗೆ ಅನ್ಯಾಯ ಮಾಡಿದೆ ಎಂದು ತಮಾಷೆ ಕೂಡಾ ಮಾಡುತ್ತಿರುತ್ತೇನೆ.

-ಶ್ವೇತಾ ಹೊಸಬಾಳೆ.

ಪ್ರಿಯಾ ಕೆರ್ವಾಶೆ ಅವರ ಲೇಖನ ಓದಿ ನನಗೂ ಬಸ್ ಪ್ರಯಾಣ ಮಾಡಿದ  ಅನುಭವ ಆಯಿತು. ಶೌಚಾಲಯದ ಬಗ್ಗೆ ಮಹಿಳೆಯರಿಗೆ ಇರುವ ತೊಂದರೆ ತಿಳಿದು ತುಂಬಾ ದುಃಖವೂ ಆಯಿತು.

-ಬಿ.ಎಸ್.ಸೂರಮಂಜುನಾಥ್, ಬನ್ನೂರು, ಚಿಕ್ಕಮಗಳೂರು ಜಿಲ್ಲೆ.

ಮಿನಿ ಕಥೆ `ಆಯಮ್ಮ' (ಡಾ. ಕಮಲಾದಾಸ್ ಸುರೈಯಾ) ಅರ್ಥಗರ್ಭಿತವಾಗಿದೆ. ಹೆಚ್ಚಿನವರು ಹಣ- ಆಸ್ತಿಗಾಗಿಯೇ ಹೊರತು ಪ್ರೀತಿಗಾಗಿ ಅಲ್ಲ ಎಂಬುದು ಈ ಕಥೆಯಿಂದ ತಿಳಿಯುತ್ತದೆ.

-ಮೃತ್ಯುಂಜಯ, ಮಂಡ್ಯ

ಸಂಪಟೂರ್ ವಿಶ್ವನಾಥ್ ಅವರ `ಆಶಾವಾದಿ ಅಪ್ಪಯ್ಯ' (ಮಾರ್ಚ್ 30) ಉತ್ತಮ ಲೇಖನ. ನಿರಾಶಾವಾದದಿಂದ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಲು ವಿಫಲರಾಗುವ ಎಷ್ಟೋ ಮಂದಿಗೆ ಅಪ್ಪಯ್ಯನ ಮಾತುಗಳು ಆಪ್ತ ನುಡಿಗಳಂತಿದ್ದವು. ನಾಗರತ್ನ ಚಂದ್ರಶೇಖರ್ ಅವರ `ಅಜ್ಜಿಯ ಅಂತರಂಗ' ವಾಸ್ತವಿಕ ಬರಹ. ಮಿನಿಕಥೆ `ಶಿಲ್ಪಿ' (ಡಾ. ಕೆ.ಎಸ್.ಚೈತ್ರಾ) ಕೇವಲ ಕಥೆಯಲ್ಲ ಜೀವನ.

-ನಿತ್ಯಶ್ರೀ, ಬೆಂಗಳೂರು.  

                                     

ಪ್ರತಿಕ್ರಿಯಿಸಿ (+)