ಭಾನುವಾರ, ಮಾರ್ಚ್ 7, 2021
19 °C
ಲಾಲ್‌ಬಾಗ್‌ನಲ್ಲಿ ರಾಷ್ಟ್ರೀಯ ಪುಷ್ಪ ಹಬ್ಬಕ್ಕೆ ಚಾಲನೆ

ಕೃಂಬಿಗಲ್‌ ಮನೆಗೆ ಅಭಿಮಾನಿಗಳ ದಂಡು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಂಬಿಗಲ್‌ ಮನೆಗೆ ಅಭಿಮಾನಿಗಳ ದಂಡು!

ಬೆಂಗಳೂರು: ಅದು ಮನೆ. 30x25 ಅಡಿ ಅಗಲ, 25 ಅಡಿ ಎತ್ತರವಷ್ಟೇ ಇದೆ. ನಾಲ್ಕು ಗೋಡೆಗಳಿಂದ ನಿರ್ಮಿತಗೊಂಡಿರುವ ಆ ಮನೆಗೆ ಸಾವಿರಾರು ಅಭಿಮಾನಿಗಳು!ದಂಪತಿಗಳು, ನವ–ಜೋಡಿಗಳು, ಯುವಕ–ಯುವತಿಯರು, ಮಕ್ಕಳು ಹೀಗೆ ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಅದು ಆಪ್ತ. ಎಷ್ಟು ಆಪ್ತವೆಂದರೆ, ಆ ಮನೆಯ ಜತೆಗಿನ ಅವಿಸ್ಮರಣೀಯ ಕ್ಷಣಗಳು ತಮ್ಮ ಜೀವಿತಾವಧಿಯವರೆಗೂ ಇರಬೇಕೆಂಬ ಹಂಬಲ.ಇದಕ್ಕಾಗಿ ಅಲ್ಲಿದ್ದವರು ತಮ್ಮ ಮೊಬೈಲ್‌, ಸ್ಮಾರ್ಟ್‌ಫೋನ್‌ಗಳಲ್ಲಿ ಆ ಮನೆಯನ್ನು ಸೆರೆ ಹಿಡಿಯುತ್ತಿದ್ದರು.  ಬಹುಪಾಲು ಮಂದಿ ಸ್ವಂತೀ ಚಿತ್ರಗಳನ್ನು ಕ್ಲಿಕ್ಕಿಸಲು ದುಂಬಾಲು ಬೀಳುತ್ತಿದ್ದರು. ಎಲ್ಲರನ್ನು ಸಮ್ಮೋಹನಗೊಳಿಸುವ ಶಕ್ತಿವುಳ್ಳ ಆ ಮನೆ ಯಾವುದು? ಯಾರದು?ಈ ಪ್ರಶ್ನೆಗೆ ಉತ್ತರ ಬೇಕೆಂದರೆ, ನೈಜ ಅನುಭವ ನಿಮ್ಮದಾಗಬೇಕಾದರೆ ಒಮ್ಮೆ ಲಾಲ್‌ಬಾಗ್‌ ಕಡೆಗೆ ಹೆಜ್ಜೆ ಹಾಕಬೇಕು.ಹೌದು, ಲಾಲ್‌ಬಾಗ್‌, ಕೃಷ್ಣರಾಜ ಸಾಗರದಲ್ಲಿರುವ ಬೃಂದಾವನ ಉದ್ಯಾನದ ವಿನ್ಯಾಸಕಾರ ಗುಸ್ತವ್‌ ಹೆರ್ಮನ್‌ ಕೃಂಬಿಗಲ್‌ ಅವರ ಜರ್ಮನಿಯ ಲೊಮನ್‌ನಲ್ಲಿರುವ ಮನೆಯ ಪ್ರತಿರೂಪವೇ ಜನರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.ಕೃಂಬಿಗಲ್‌ ಅವರ 150ನೇ ಜನ್ಮಶತಾಬ್ದಿ ಅಂಗವಾಗಿ  ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾಸಂಘದ ಆಶ್ರಯದಲ್ಲಿ ‘ಗಣರಾಜ್ಯೋತ್ಸವದ ರಾಷ್ಟ್ರೀಯ ಪುಷ್ಪ ಹಬ್ಬ’ಆಯೋಜಿಸಿದ್ದು, ಮೊದಲ ದಿನವೇ ಜನರನ್ನು ಸೂಜಿಗಲ್ಲಿನಂತೆ ಸೆಳೆಯಿತು.ಕುಂಡದಲ್ಲಿ ಬೆಳೆದ ಪೆಟೋನಿಯಾ, ಡಯಾಂತಸ್‌, ಬಿಗೋನಿಯಾ, ಪ್ಯಾನ್ಸಿ, ಜಿರೇನಿಯಂ, ಕ್ಯಾಲಾಂಚು, ಸೇವಂತಿಗೆ ಮುಂತಾದ 2.60 ಲಕ್ಷ ಹೂವಿನ ಗಿಡಗಳಿಂದ ಕೃಂಬಿಗಲ್‌ ಅವರ ಮನೆಯ ಪ್ರತಿರೂಪವನ್ನು ಅಲಂಕರಿಸಲಾಗಿದೆ.ಮನೆಯ ಮುಂಭಾಗದಲ್ಲಿ ಕೃಂಬಿಗಲ್‌ ಅವರ ಪುತ್ಥಳಿ ಇಟ್ಟು ಸುತ್ತಲೂ ಅಪರೂಪದ ಹೂಗಿಡಗಳನ್ನು ಜೋಡಿಸಲಾಗಿದೆ.ಮನೆಯ ನಾಲ್ಕೂ ದಿಕ್ಕುಗಳಲ್ಲಿ 17 ಅಡಿ ಎತ್ತರದ ಪುಷ್ಪ ವೃಕ್ಷಗಳನ್ನು ನಿರ್ಮಿಸಲಾಗಿದೆ.  ವಿವಿಧ ವರ್ಣದ 3 ಸಾವಿರಕ್ಕೂ ಹೆಚ್ಚು ಪಾಯಿನ್‌ ಸಿಟಿಯಾ ಹೂವಿನ ಗಿಡಗಳನ್ನು ಬಳಸಲಾಗಿದೆ. ಹಿಂಭಾಗದಲ್ಲಿ 13, 14 ಹಾಗೂ 15 ಅಡಿ ಎತ್ತರದ ಮೂರು ಪುಷ್ಪ ಹೃದಯದ ಪ್ರತಿರೂಪಗಳು ಕುಂಡದಲ್ಲಿ ಬೆಳೆದ 50 ಸಾವಿರಕ್ಕೂ ಅಧಿಕ ಪೆಟೋನಿಯಾ ಗಿಡಗಳಿಂದ ಅಲಂಕರಿಸಲಾಗಿದೆ.ಓರಿಯಂಟಲ್‌ ಲಿಲ್ಲಿ, ಕ್ಯಾಲಾಲಿಲ್ಲಿ, ಏಷಟಿಕ್‌ ಲಿಲ್ಲಿ, ಕ್ಯಾಲಾಂಚು, ಇಂಪೇಷನ್ಸ್, ಆಕರ್ಷಕ ಎಲೆ ಜಾತಿಯ ಗಿಡಗಳು, ಗೂಸ್‌ಬಾನಿಯಾ, ಬೇಬಿಸನ್‌ ರೋಸ್‌ ಮತ್ತಿತರ ಹೂಗಳಿಂದ ಕಂಗೊಳಿಸುವ ಫ್ಲೋರಲ್‌ ಫ್ಲೋಗಳು ವಿಶೇಷ ಮೆರುಗು ನೀಡುತ್ತಿವೆ.ಹಳದಿ ಬಣ್ಣದ ಸೇವಂತಿಗೆಯನ್ನು ಎಲ್ಲರೂ ಕಂಡಿರುತ್ತಾರೆ. ಆದರೆ 10ಕ್ಕೂ ಹೆಚ್ಚು ಬಗೆಯ 5 ಸಾವಿರ ಚಿತ್ತಾಕರ್ಷಕ ಸೇವಂತಿಗೆ ಹೂವಿನ ಜೋಡಣೆ ನೋಡುಗರನ್ನು ಆಕರ್ಷಿಸುತ್ತಿದೆ.ಕೃಂಬಿಗಲ್‌ ಅವರ ಮನೆಯ ಪ್ರತಿರೂಪ ಹಾಗೂ ಪುಷ್ಪ ಹಬ್ಬದ ಪ್ರಮುಖ ಪ್ರದರ್ಶನಗಳನ್ನು ವಿನ್ಯಾಸಗೊಳಿಸಿದವರು ರತ್ನಶ್ರೀ ಲ್ಯಾಂಡ್‌ಸ್ಕೇಪರ್ಸ್‌ ಸಂಸ್ಥೆಯ ಮುಖ್ಯ ವಾಸ್ತುಶಿಲ್ಪಿ ಡಾ.ಕೃಷ್ಣ ಚವ್ಹಾಣ್‌.  ಅವರೊಂದಿಗೆ ವಿಜಯಸಿಂಧೆ, ಭಾಸ್ಕರ್‌ರೆಡ್ಡಿ, ರೋಹಿತ್‌ ಜಾದವ್‌, ಕುಮಾರ್‌ ಕೈಜೋಡಿಸಿದ್ದಾರೆ.‘ಎರಡು ದಿನ ಹಗಲು–ರಾತ್ರಿ ಕೆಲಸ ಮಾಡಿ ಕೃಂಬಿಗಲ್‌ ಅವರ ಮನೆಯ ಪ್ರತಿರೂಪವನ್ನು ಸೃಷ್ಟಿಸಲಾಯಿತು. ಇದೇ ಮೊದಲ ಬಾರಿಗೆ ಕುಂಡಗಳಲ್ಲಿ ಬೆಳೆದ ಹೂವಿನ ಗಿಡಗಳನ್ನು ಬಳಸಲಾಗಿದೆ. ಇವು 10ರಿಂದ 15 ದಿನಗಳ ಕಾಲ ಬಾಡುವುದಿಲ್ಲ. ಆದರೆ, ಗುಲಾಬಿ ಮೊದಲಾದ ಹೂಗಳಿಂದ ಅಲಂಕರಿಸಿದರೆ ಮೂರ್ನಾಲ್ಕು ದಿನದಲ್ಲಿ ಬಾಡುತ್ತವೆ’ ಎನ್ನುತ್ತಾರೆ ಕೃಷ್ಣ ಚವ್ಹಾಣ್‌.‘ಪ್ರದರ್ಶನಕ್ಕೆ ಒಂದು ತಿಂಗಳು ಬಾಕಿ ಇರುವಾಗ ಸಣ್ಣ ಸಣ್ಣ ಕುಂಡಗಳಲ್ಲಿ ಗೊಬ್ಬರ ತುಂಬಿ ವಿವಿಧ ಜಾತಿಯ ಹೂಗಿಡಗಳ ಬೀಜಗಳನ್ನು ನಾಟಿ ಮಾಡಲಾಗುತ್ತದೆ. ಅವುಗಳಿಗೆ ನಿಯಮಿತವಾಗಿ ನೀರು ಹಾಯಿಸಿದರೆ 20ರಿಂದ 25 ದಿನದಲ್ಲಿ ಹೂಗಳು ಬಿಡುತ್ತವೆ’ ಎಂದು ಹೇಳಿದರು.‘ಜೀವಂತ ಹೂಗಳನ್ನೇ ಬಳಸಿ ಪ್ರತಿರೂಪ ನಿರ್ಮಿಸುವುದು ನನ್ನ ಕನಸಾಗಿತ್ತು. ಅದು ಇಂದು ಈಡೇರಿದೆ. 14 ವರ್ಷಗಳ ಹಿಂದೆ ದುಬೈನಲ್ಲಿ ಇಂತಹ ಪ್ರದರ್ಶನವನ್ನು ನೋಡಿದ್ದೆ. ನಮ್ಮ ದೇಶದಲ್ಲಿ ಈ ಮೊದಲು ಎಲ್ಲೂ ಇಂತಹ ಪ್ರದರ್ಶನ ಏರ್ಪಡಿಸಿದ್ದರ ಮಾಹಿತಿ ಇಲ್ಲ’ ಎಂದು ತಿಳಿಸಿದರು.‘ಕಳೆದ ಹಲವು ವರ್ಷಗಳಿಂದ ಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡುತ್ತಿದ್ದೇನೆ. ಈ ಬಾರಿ ಭಿನ್ನ ಅನುಭವವಾಗುತ್ತಿದೆ. ಮಕ್ಕಳಿಗೆ ಹೂಗಳ ಬಗ್ಗೆ ಮಾಹಿತಿ ನೀಡಲು  ಪುಷ್ಪ ಪ್ರದರ್ಶನ ಸಹಕಾರಿ ಆಗಿದೆ’ ಎನ್ನುತ್ತಾರೆ ಹೊಸೂರಿನ ನಿವಾಸಿ ಪರಿಣಿತಾ.‘ಪುಷ್ಪ ಪ್ರದರ್ಶನ ಮನೋಹರವಾಗಿದೆ. ಕೃಂಬಿಗಲ್‌ ಅವರ ಮನೆಯ ಪ್ರತಿರೂಪವಂತೂ ಅದ್ಭುತವಾಗಿ ಮೂಡಿಬಂದಿದೆ. ವೈವಿಧ್ಯಮಯ ಹೂಗಳಿಂದ ಅಲಕೃತಗೊಂಡ ಪ್ರದರ್ಶನವನ್ನು ನೋಡಲು ಖುಷಿ ಆಗುತ್ತಿದೆ’ ಎಂದು ಅಮೆರಿಕದ ಕ್ರಿಸ್ಟಿನಾ ಅವರು ಹೇಳಿದರು.ನಾವೀಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದೇವೆ. ರಜೆ ದಿನಗಳಾದ್ದರಿಂದ ಬೆಂಗಳೂರಿಗೆ ಬಂದಿದ್ದೇವೆ. ಲಾಲ್‌್ಬಾಗ್‌ನಲ್ಲಿ 30 ವರ್ಷಗಳ ಹಿಂದೆ ಇದ್ದ  ವೈಭವ ಈಗ ಕಾಣುತ್ತಿಲ್ಲ. ಈ ಬಾರಿ ವೈವಿಧ್ಯಮಯ ಹೂಗಳ ಕೊರತೆ ಕಾಣುತ್ತಿದೆ. ಕೃಂಬಿಗಲ್‌ ಅವರ ಮನೆ   ಚೆನ್ನಾಗಿದೆ’ ಎಂದು ಮುರಳಿ ಅವರು ‘ಪ್ರಜಾವಾಣಿ’ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.ರಾಜ್ಯದ ಪ್ರವಾಸಿಗರು ಮಾತ್ರವಲ್ಲದೆ, ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ದೇಶದ ನಾನಾ ಕಡೆಗಳಿಂದ ಪ್ರವಾಸಿಗರು ಬಂದಿದ್ದರು. ವಿದೇಶಿ ಪ್ರವಾಸಿಗರ ಸಂಖ್ಯೆಗೂ ಕೊರತೆ ಇರಲಿಲ್ಲ.ವಾಹನ ನಿಲುಗಡೆ: ಲಾಲ್‌ಬಾಗ್‌ಗೆ ಭೇಟಿ ನೀಡುವ ಸಾರ್ವಜನಿಕರು ತಮ್ಮ ವಾಹನಗಳನ್ನು ಶಾಂತಿನಗರ ಬಸ್‌ ನಿಲ್ದಾಣದಲ್ಲಿರುವ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣ ಹಾಗೂ ಜೆ.ಸಿ. ರಸ್ತೆಯ ಬಹುಮಹಡಿ ವಾಹನ ನಿಲ್ದಾಣದಲ್ಲಿ ನಿಲುಗಡೆ ಮಾಡಬೇಕು. ದ್ವಿಚಕ್ರ ವಾಹನಗಳನ್ನು ಅಲ್‌ ಅಮೀನ್‌ ಕಾಲೇಜಿನ ಮೈದಾನದಲ್ಲಿ ನಿಲ್ಲಿಸಬೇಕಿದೆ.ಜ.26ರವರೆಗೆ ಪ್ರದರ್ಶನ

ಜ.26ರವರೆಗೆ ಪುಷ್ಪ ಹಬ್ಬ ಇರಲಿದೆ. 19 ಹಾಗೂ 26ರಂದು ಖಾಸಗಿ, ಸರ್ಕಾರಿ ಶಾಲಾ ಮಕ್ಕಳಿಗೆ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ  ಉಚಿತ ಪ್ರವೇಶ ಕಲ್ಪಿಸಲಾಗಿದೆ. ಸಾಮಾನ್ಯ ದಿನಗಳಲ್ಲಿ ಪ್ರವೇಶ ಶುಲ್ಕ ₹50, ರಜಾ ದಿನಗಳಲ್ಲಿ ₹60, ಮಕ್ಕಳಿಗೆ ₹10 ಇದೆ.‘ಪ್ರತಿ ಜಿಲ್ಲೆಯಲ್ಲಿ ಸಸ್ಯೋದ್ಯಾನ  ನಿರ್ಮಿಸಿ’

ರಾಷ್ಟ್ರೀಯ ಪುಷ್ಪ ಹಬ್ಬವನ್ನು ಉದ್ಘಾಟಿಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್‌, ‘ಲಾಲ್‌ಬಾಗ್‌ ಮಾದರಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ಸಸ್ಯೋದ್ಯಾನ ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.

‘ಸಸ್ಯೋದ್ಯಾನ ನಿರ್ಮಿಸಲು ಕೇಂದ್ರ ಸರ್ಕಾರ ಆರ್ಥಿಕ ಸಹಾಯ ನೀಡಬೇಕು’ ಎಂದು ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ ಮನವಿ ಮಾಡಿದರು.ಇದಕ್ಕೆ ಸ್ಪಂದಿಸಿದ ಅನಂತಕುಮಾರ್‌, ‘ರಾಜ್ಯ ಸರ್ಕಾರ ಸಸ್ಯೋದ್ಯಾನಕ್ಕೆ ಜಾಗ ಗುರುತಿಸಲಿ. ಇದಕ್ಕೆ ಬೇಕಾದ ಆರ್ಥಿಕ ನೆರವನ್ನು ಕೇಂದ್ರ ಸರ್ಕಾರ ಒದಗಿಸಲಿದೆ’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.