ಮಂಗಳವಾರ, ಅಕ್ಟೋಬರ್ 22, 2019
22 °C

ಕೃತಕ ತಲೆಬುರುಡೆ ಜೋಡಣೆ ಯಶಸ್ವಿ

Published:
Updated:

ಹುಬ್ಬಳ್ಳಿ:  ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರ ಮಿದುಳಿನ ಎಡಭಾಗಕ್ಕೆ ಇಲ್ಲಿಯ ಸುಶ್ರುತಾ ಆಸ್ಪತ್ರೆಯ ವೈದ್ಯರು ಕೃತಕ ತಲೆಬುರುಡೆ ಜೋಡಿಸುವ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಆಸ್ಪತ್ರೆಯ ವೈದ್ಯ ಡಾ.ಮಿಥುನ್ ಜಿ.ಸತ್ತೂರ, `ಆರು ತಿಂಗಳ ಹಿಂದೆ ಕೃಷ್ಣ (ಹೆಸರು ಬದಲಾಯಿಸಲಾಗಿದೆ) ಎಂಬುವವರಿಗೆ ಈ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. ಸ್ವಿಟ್ಜರ್‌ಲೆಂಡ್‌ನಿಂದ ತರಿಸಿದ `ಪಾಲಿ ಇಥ್ವಾಲ್ ಇಥರ್ ಕಿಟೋನ್~ (ಪೀಕ್) ಎಂಬ ಪಾಲಿಮರ್ ವಸ್ತುವಿನಿಂದ ತಯಾರಿಸಲಾದ ಕೃತಕ ತಲೆಬುರುಡೆಯ ಭಾಗವನ್ನು ಎಡಗಡೆ ಜೋಡಿಸಲಾಗಿದೆ.. ಈ ಶಸ್ತ್ರಚಿಕಿತ್ಸೆ ದೇಶದಲ್ಲಿಯೇ ಪ್ರಥಮ ಬಾರಿಗೆ ನಡೆದಿದೆ~ ಎಂದು ಹೇಳಿದರು.`ಈ ಕೃತಕ ತಲೆಬುರುಡೆಗೆ 2.5 ಲಕ್ಷ ರೂಪಾಯಿ ವೆಚ್ಚವಾಗಿದೆ. ಸಾಮಾನ್ಯ ತಲೆಬುರುಡೆಯಂತೆಯೇ ಇದು ಹೊಂದಿಕೊಂಡಿದೆ. ಇದನ್ನು ಪಿನ್ ಹಾಗೂ ಸ್ಕ್ರೂಗಳಿಂದ ಜೋಡಿಸ ಲಾಗಿದೆ~ ಎಂದು ಅವರು ನುಡಿದರು. `2009ರಲ್ಲಿಯೇ ತಲೆಯ ಎಡಭಾಗಕ್ಕೆ ತೀವ್ರ ಗಾಯವಾದ್ದರಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದರು.ತೀವ್ರವಾಗಿ ವಾಂತಿ ಮಾಡಿಕೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಇದ್ದರು. ಅಂದೇ ಸುಮಾರು 3 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿ, ಶೇ 80ರಷ್ಟು ಹಾನಿಗೊಳಗಾಗಿದ್ದ ತಲೆಭಾಗವನ್ನು ತೆಗೆಯಲಾಯಿತು.ಸ್ವಿಟ್ಜರ್ಲೆಂಡ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಿಂಥೆಸ್ ಸಂಸ್ಥೆ `ಪೀಕ್~ ಕೃತಕ ತಲೆಬುರುಡೆಯನ್ನು ತಯಾರಿಸುತ್ತದೆ. ಕೃಷ್ಣ ಅವರ ತಲೆಬುರುಡೆಯ ಅಳತೆ ನೀಡಿ ಇದನ್ನು ತರಿಸಿಕೊಳ್ಳಲಾಗಿದೆ. 2011ರ ಮಧ್ಯಭಾಗದಲ್ಲಿಯೇ  ಸುಮಾರು 5 ಗಂಟೆಗಳ ಸತತ ಶಸ್ತ್ರಚಿಕಿತ್ಸೆ ಮೂಲಕ ತಲೆಬುರುಡೆಯನ್ನು ಅಳವಡಿಸಲಾಗಿದೆ~ ಎಂದರು.`ಈ ಕೃತಕ ತಲೆಬುರುಡೆಯು 15-18 ಸೆ.ಮೀ. ಉದ್ದ, 10ರಿಂದ 12 ಸೆ.ಮೀ. ಅಗಲ ಇದೆ. ಜೋಡಣೆಯ ಬಳಿಕ ಅವರ ಸ್ಥಿತಿಯಲ್ಲಿ ಸುಧಾರಣೆ ಕಂಡು ಬಂದಿದೆಯಾದರೂ ಓಡಾಡಲು ಇನ್ನೂ ಬೇರೆಯವರ ಸಹಾಯ ಬೇಕು~ ಎಂದರು.ಆಸ್ಪತ್ರೆಯ ವೈದ್ಯರು, ರೋಗಿ ಹಾಗೂ ಅವರ ಕುಟುಂಬದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)