ಕೃತಿಗೆ ನೈತಿಕ ನಿರ್ಬಂಧಕ್ಕೆ ಕಾರ್ನಾಡ್ ವಿರೋಧ

7
`ಢುಂಡಿ' ಕಾದಂಬರಿ ಸಮಾಲೋಚನಾ ಸಭೆ

ಕೃತಿಗೆ ನೈತಿಕ ನಿರ್ಬಂಧಕ್ಕೆ ಕಾರ್ನಾಡ್ ವಿರೋಧ

Published:
Updated:

ಬೆಂಗಳೂರು: `ರಾಜ್ಯದಲ್ಲಿ ಪೊಲೀಸರಿಗೆ ಸಾಂಸ್ಕೃತಿಕ ಅಧಿಕಾರವನ್ನು ಕೊಟ್ಟವರು ಯಾರು? ಅವರು ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡಲಿ' ಎಂದು ಹಿರಿಯ ಸಾಹಿತಿ ಡಾ.ಗಿರೀಶ್ ಕಾರ್ನಾಡ್ ಆಕ್ರೋಶ  ವ್ಯಕ್ತಪಡಿಸಿದರು.ಲೇಖಕ ಯೋಗೇಶ್ ಮಾಸ್ಟರ್ ಅವರ`ಢುಂಡಿ' ಕಾದಂಬರಿ ಕುರಿತು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ವತಿಯಿಂದ ನಗರದ ಶಾಸಕರ ಭವನದಲ್ಲಿ ಬುಧವಾರ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.`ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಬರೆಯುವ ಅಧಿಕಾರ ಇದೆ. ಕಾದಂಬರಿ ಎಷ್ಟೇ ಕೆಟ್ಟದಾಗಿದ್ದರೂ ಅದನ್ನು ಬರೆಯುವ ಹಕ್ಕು ಲೇಖಕನಿಗೆ ಇದೆ.  ಆ ಕಾದಂಬರಿ ಓದಿ ಯಾರಿಗಾದರೂ ನೋವಾದರೆ ಅದಕ್ಕೆ ಲೇಖಕ ಜವಾಬ್ದಾರ ಅಲ್ಲ. ನನಗೆ ಅನಿಸಿದ ವಿಷಯಗಳನ್ನು ಹೇಳುವ ಅಧಿಕಾರವನ್ನು ಯಾರೂ ಕಿತ್ತುಕೊಳ್ಳುವಂತಿಲ್ಲ. ಕೆಲವು ಮೂರ್ಖರು ವಿರೋಧ ವ್ಯಕ್ತಪಡಿಸಿದರು ಎಂಬ ಕಾರಣಕ್ಕೆ ಕೃತಿಗೆ ನಿರ್ಬಂಧ ವಿಧಿಸುವುದು ಸರಿಯಲ್ಲ' ಎಂದು ಖಾರವಾಗಿ ಪ್ರತಿಕ್ರಿಯಿಸಿದರು.`ಈ ಪುಸ್ತಕದಲ್ಲಿ ಏನು ಇದೆ ಎಂಬುದು ಮುಖ್ಯ ಅಲ್ಲ. ಬರೆಯುವ ಸ್ವಾತಂತ್ರ್ಯ ನನಗೆ ಇದೆ. ವಿಚಾರ ಮಾಡಿ ಬರೆಯಬೇಕು ಎಂಬ ವಾದ ಮುಖ್ಯ ಅಲ್ಲ. ಆದರೆ, ದೇಶದ ಯಾವ ವ್ಯಕ್ತಿಗೂ ದೈಹಿಕ ನೋವು ಉಂಟು ಮಾಡುವುದು ತಪ್ಪು. ಅಂತಹ ವೈಯಕ್ತಿಕ ದಾಳಿ ನಡೆಸಬಾರದು. ವಿಷಯದ ಬಗ್ಗೆ ಚರ್ಚೆ ನಡೆಸಲು ಯಾವಾಗಲೂ ಅವಕಾಶ ಇದೆ' ಎಂದು ಅವರು ಪ್ರತಿಪಾದಿಸಿದರು.`1972ರಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ (1), 153 ಬಿ, ಸೆಕ್ಷನ್ 295ರಿಂದ 298ರ ವರೆಗೆ ತಿದ್ದುಪಡಿ ತರಲಾಗಿದೆ. ಲೇಖನ, ಭಾಷಣದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ದೂರು ಸಲ್ಲಿಸಿದರೆ ಅಂತಹ ಲೇಖಕ, ಭಾಷಣಕಾರರನ್ನು ಜೈಲಿಗೆ ಕಳುಹಿಸಲು ಅವಕಾಶ ಇದೆ. ಈ ಸೆಕ್ಷನ್ ಕೈಬಿಡುವಂತೆ ಆಗ್ರಹಿಸಿ ಹೋರಾಟ ಮಾಡಬೇಕು' ಎಂದು  ಹಿರಿಯ ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್ ನುಡಿದರು.`ಢುಂಡಿ ಕಾದಂಬರಿಯನ್ನು ಕಾದಂಬರಿಯಂತೆಯೇ ಓದಬೇಕು. ಇದೊಂದು ರೋಚಕ ಕಾದಂಬರಿ. ಅಲಕ್ಷಿತ ಸಮುದಾಯದ ಯುವಕನೊಬ್ಬ ಪ್ರಭುತ್ವವನ್ನು ಮೆಟ್ಟಿ ನಿಂತು ಮಹಾ ನಾಯಕನಾದ ಪ್ರಕ್ರಿಯೆಯನ್ನು ಇಲ್ಲಿ ಬಹಳ ಚೆನ್ನಾಗಿ ಬಿಂಬಿಸಲಾಗಿದೆ. ಪ್ರಾಚೀನ ಭಾರತದ ಸಾಮಾಜಿಕ ಚಲನೆಗಳ ಕುರಿತ ನಡೆಸಿದ ಕೆಲವು ಸಂಶೋಧನೆಗಳನ್ನು ಆಧರಿಸಿ ಈ ಕಾದಂಬರಿ ಬರೆಯಲಾಗಿದೆ' ಎಂದು ಅವರು ವಿಶ್ಲೇಷಿಸಿದರು.ಹಿರಿಯ ಲೇಖಕ ಪ್ರೊ.ಚಂದ್ರಶೇಖರ ಪಾಟೀಲ್, `ಯೋಗೇಶ್ ಮಾಸ್ಟರ್ ಅವರ ಹಿನ್ನೆಲೆ ಇಲ್ಲಿ ಮುಖ್ಯ ಅನಿಸುವುದಿಲ್ಲ. ಕೃತಿ ಮಾರಾಟ ಮಾಡುವ ಹಕ್ಕು ಅವರಿಗೆ ಇದೆ. ಅದರ ಮೇಲೆ ನಿರ್ಬಂಧ ಹೇರುವ ಅಧಿಕಾರ ಪೊಲೀಸರಿಗೆ ಇಲ್ಲ. ಅವರ ಮೇಲೆ ಹಾಕಿರುವ ಮೊಕದ್ದಮೆಯನ್ನು ಕೂಡಲೇ ವಾಪಸ್ ಪಡೆಯಬೇಕು' ಎಂದು ಆಗ್ರಹಿಸಿದರು.ಹಿರಿಯ ವಕೀಲ ಡಾ.ಸಿ.ಎಸ್.ದ್ವಾರಕಾನಾಥ್, `ಈ ಕೃತಿ ಮಾರುಕಟ್ಟೆಯಲ್ಲಿ ಎಲ್ಲಿಯೂ ದೊರಕುತ್ತಿಲ್ಲ. ಕೃತಿಯನ್ನು ಓದದೆ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ವಿರೋಧ ಮಾಡುವವರಿಗೆ ಕೃತಿಯಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಇಡೀ ಹಿಂದೂ ಸಮಾಜಕ್ಕೆ ಅನ್ಯಾಯ ಆಗಿದೆ ಎಂಬ ವಾದ ಮಂಡಿಸಲಾಗುತ್ತಿದೆ. ಇಂತಹ ಧೋರಣೆ ಸರಿಯಲ್ಲ. ಬಿಜೆಪಿ ಸರ್ಕಾರ ಅಧಿಕಾರ ಕಳೆದುಕೊಂಡ ಬಳಿಕವೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ಮುಂದುವರೆದಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.ವೇದಿಕೆಯ ಅಧ್ಯಕ್ಷೆ ಬಿ.ಟಿ.ಲಲಿತಾ ನಾಯಕ್, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್, ಕೇಂದ್ರ ಸಮಿತಿ ಸದಸ್ಯ ಎ.ಕೆ. ಸುಬ್ಬಯ್ಯ, ಎಲ್.ಹನುಮಂತಯ್ಯ, ಲೇಖಕ ಯೋಗೇಶ್ ಮಾಸ್ಟರ್ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry