ಬುಧವಾರ, ಜನವರಿ 29, 2020
24 °C

ಕೃತಿಚೌರ್ಯದ ಹೊಸ ಮಾದರಿ ಸಾವಿಲ್ಲದ ಹಾಡು

ಡಾ. ಲಿಂಗದಹಳ್ಳಿ ಹಾಲಪ್ಪ, ಶಕ್ತಿನಗರ (ರಾಯಚೂರು) Updated:

ಅಕ್ಷರ ಗಾತ್ರ : | |

ಜಾಗತಿಕ ಸಾಹಿತ್ಯಿಕ ಸಂದರ್ಭದಲ್ಲಿ `ಕೃತಿಚೌರ್ಯ~ ವನ್ನು ಅಪಹರಣವೆಂದು ಗುರುತಿಸಲಾಗುತ್ತಿದೆ. ಉಪಕಾರ ಸ್ಮರಣೆಯ ಪ್ರಸ್ತಾಪವಿಲ್ಲದೆ, ಪೂರ್ವ ಕವಿಗಳಿಂದ ಅನಾಮತ್ತಾಗಿ ಎತ್ತಿಕೊಂಡ ಪದ್ಯಗಳನ್ನೋ, ಪದ್ಯಖಂಡಗಳನ್ನೋ ತಮ್ಮ ಕೃತಿಗಳಲ್ಲಿ ಕವಿಗಳು ಸೇರಿಸಿಕೊಂಡಾಗ ಕೃತಿಚೌರ್ಯವೆನಿಸಿಕೊಳ್ಳುತ್ತದೆ. ಪ್ರಖ್ಯಾತ, ಜನಪ್ರಿಯ ಬರಹಗಾರರ ಕಾವ್ಯ, ಕೀರ್ತನೆ, ಚೌಪದಿಗಳನ್ನು ಯಥಾವತ್ತು ಇಳಿಸಿಯೋ, ಅದರ ಬಹು ಜನಪ್ರಿಯ ತುಣುಕುಗಳನ್ನು ಕದ್ದೋ ತಮ್ಮದಾಗಿ ಮಾಡಿಕೊಳ್ಳುವ ಲೇಖಕರು ಒಂದೆಡೆಯಾದರೆ, ಮೂಲವನ್ನು ಕದ್ದು ತಮ್ಮ ಪಂಥ, ಕುಲ, ಜಾತಿಗಳಲ್ಲಿ ಜನಿಸಿದ ಖ್ಯಾತ ನಾಮಾಂಕಿತರ ಮುಡಿಗೇರಿಸಿ ಕೃತಾರ್ಥರಾಗುವ ಹೊಗಳುಭಟ್ಟರು ಇನ್ನೊಂದೆಡೆ ಇದ್ದಾರೆ.

ಬಾಳೆಹೊಸೂರು ದಿಂಗಾಲೇಶ್ವರ ಸ್ವಾಮಿಗಳು ಸಂಪಾದಿಸಿದ `ಸಾವಿಲ್ಲದ ಹಾಡು~ ಕೃತಿಚೌರ್ಯದ ಕೃತಿಗಳ ಸಾಲಿಗೆ ಸೇರುವಂತಹುದು.ಬಿಡುಗಡೆಯ ಸಂದರ್ಭದಲ್ಲಿಯೇ ವೇದಿಕೆಯಲ್ಲಿದ್ದ ಕಾಗಿನೆಲೆ ಪೀಠಾಧಿಪತಿಗಳಾದ ನಿರಂಜನಾನಂದಪುರಿ ಸ್ವಾಮಿಗಳು `ಸಾವಿಲ್ಲದ ಹಾಡು~ಗಳಲ್ಲಿ ಕನಕದಾಸರ ಆರು ಕೀರ್ತನೆಗಳನ್ನು ಇತರರ ಹೆಸರಿಗೆ ಕೃತಿಚೌರ್ಯ ಮಾಡಲಾಗಿದೆಯೆಂದು ಸಾತ್ವಿಕ ಧ್ವನಿಯಲ್ಲಿ ಪ್ರತಿಭಟಿಸಿದ್ದಾರೆ. ಹಾವೇರಿ ಜಿಲ್ಲೆಯ ಹಲವೆಡೆ ಪ್ರತಿಭಟನೆಗಳು ನಡೆದಿವೆ. ಈ ಆಕ್ಷೇಪಕ್ಕೆ ಪುಸ್ತಕದಲ್ಲಿ ಹಲವಾರು ಸಾಕ್ಷಿಗಳಿವೆ. ಕನಕದಾಸರು 16ನೆಯ ಶತಮಾನದಲ್ಲಿ ರಚಿಸಿದ ಎರಡು ರಚನೆಗಳನ್ನು 18ನೆಯ ಶತಮಾನದಲ್ಲಿದ್ದ ಮುಪ್ಪಿನ ಷಡಾಕ್ಷರಿಯವರ ಹೆಸರಿನಲ್ಲಿ ಯಥಾವತ್ತು ನಕಲು ಮಾಡಲಾಗಿದೆ (ಪುಟ 67 ಮತ್ತು 110). ಉಳಿದವನ್ನು ಪುರಂದರದಾಸರ ಮತ್ತು ಇತರರ ಹೆಸರಿನಲ್ಲಿ ಒಂದೆರಡು ಶಬ್ದ ಬದಲಾವಣೆಯೊಂದಿಗೆ ಕೊಡಲಾಗಿದೆ (ಪುಟ 4).ಪುಸ್ತಕದಲ್ಲಿ ಕನಕದಾಸರ ಹೆಸರಿನಲ್ಲಿ ಪ್ರಕಟವಾದ ಅವರ ಕೀರ್ತನೆಗಳು ಮೂಲದಿಂದ ಭಿನ್ನವಾದ ರಚನಾ ಕ್ರಮ ಹೊಂದಿವೆ ಹಾಗೂ ಹಲವು ವ್ಯಾಕರಣ, ಪದದೋಷಗಳಿಂದ ಕೂಡಿವೆ. ಒಂದೆರಡು ಚೌಪದಿ ರಚನೆಗಳನ್ನು ದ್ವಿಪದಿ ರೂಪದಲ್ಲಿ ಪ್ರಕಟಿಸಿ ವಿರೂಪಗೊಳಿಸಲಾಗಿದೆ (ಪುಟ 48, 69). ಕನಕದಾಸರ ಪ್ರಸಿದ್ಧ ರಚನೆ `ನಾವು ಕುರುಬರು, ನಮ್ಮ ದೇವರು ಬೀರಯ್ಯ~ ಇದನ್ನು ತಿರುಚಿ `ಕುರುಬರೋ ನಾವು ಕುರುಬರು~ ಮತ್ತು `ಅಗಸರೋ ನಾವು ಅಗಸರು~ ಎಂಬ ಕೃತಕ ರಚನೆಗಳನ್ನು ರಚಿಸಿ ಇನ್ನಾರದೋ ಹೆಸರಿನಲ್ಲಿ ಪ್ರಕಟಿಸಲಾಗಿದೆ. ಇದು ಮೂಲ ಲೇಖಕರಿಗೆ ಮಾಡಿದ ಸಾಹಿತ್ಯಿಕ ಅಪಮಾನ.`ದಲಿತ, ಹಿಂದುಳಿದ ಸಂತ ಬರಹಗಾರ ಕನಕದಾಸರ ಕೃತಿಗಳನ್ನು ವೈದಿಕ ಪರಂಪರೆಯ ಪಟ್ಟಭದ್ರರು ತಿರುಚಿ ಬರೆದು, ಅಂಕಿತನಾಮ ಬದಲಾಯಿಸಿದ್ದನ್ನು ಕಂಡಿದ್ದೆೀವೆ. ಈಗ ಬಸವಾದಿ ಶರಣರನ್ನು ಪ್ರತಿನಿಧಿಸುವ ಸಮಷ್ಟಿ ಪ್ರಜ್ಞೆಯ ಲಿಂಗಾಯತ ಸ್ವಾಮೀಜಿಗಳು ಇಂತಹ ಕಾರ್ಯಕ್ಕೆ ಕೈ ಹಾಕಿರುವುದು ನಮಗೆ, ಕನಕದಾಸರ ಅನುಯಾಯಿ-ಅಭಿಮಾನಿಗಳಿಗೆ ನೋವುಂಟು ಮಾಡಿದೆ~ ಎಂದು ನಿರಂಜನಾನಂದ ಪುರಿ ಸ್ವಾಮೀಜಿ ವೇದಿಕೆಯಲ್ಲಿ ವಿಷಾದಿಸಿದ್ದಾರೆ.ಈ ಕೃತಿಯಲ್ಲಿ ಸಂಪಾದಕರ-ಲೇಖಕರ ಹಕ್ಕುಸ್ವಾಮ್ಯದ ಘೋಷಣೆಯಿಲ್ಲ. ಪ್ರಕಟಣೆಗೊಂಡ ವರ್ಷದ ಮಾಹಿತಿಯಿಲ್ಲ. ಎಲ್ಲ ಹಾಡುಗಳನ್ನು ಯಾವ ಆಕರಗಳಿಂದ ಸಂಪಾದಿಸಿದ್ದು ಎಂಬುದರ ಕುರಿತು ಅಧಿಕೃತ ದಾಖಲೆಗಳನ್ನೂ (ಗ್ರಂಥಋಣ) ನಮೂದಿಸಿಲ್ಲ. ಈ `ಇಲ್ಲ~ಗಳು ಕೃತಿಯ ಪ್ರಾಮಾಣಿಕತೆಯೊಂದಿಗೆ ಸಂಪಾದಕರ ಸಂಗ್ರಹಣೆಯ ಪಾರದರ್ಶಕತೆಯನ್ನು ಸಂಶಯ ದೃಷ್ಟಿಯಿಂದ ನೋಡುವಂತೆ ಮಾಡಿದೆ. `ಕನಕದಾಸರ ಕೀರ್ತನೆಗಳನ್ನು ಕದಿಯಲಾಗಿದೆ~ ಎಂಬ ಆರೋಪದ ಜೊತೆಗೆ ಒಟ್ಟು ಕೃತಿಯನ್ನು ನೋಡಿದಾಗ ಕೃತಿಯು ಅಸಂಬದ್ಧವಾದ, ಅವಿವೇಕತನದ ಮತ್ತು ಅವಾಸ್ತವಿಕ ಅಂಶಗಳಿಂದ ಕೂಡಿರುವುದು ಗಮನಕ್ಕೆ ಬರುತ್ತದೆ.  ಸಂತ ಕವಿ ಶಿಶುನಾಳ ಷರೀಫರ `ಕೋಡಗನ ಕೋಳಿ ನುಂಗಿತ್ತ~ ಎಂಬುದನ್ನು ಅಲ್ಪ ಪರಿವರ್ತನೆಗೊಳಿಸಿ `ಚೆನ್ನಬಸವಣ್ಣ~ ಎಂಬವರ ಹೆಸರಿನಲ್ಲಿ `ಬಯಲು ಬಾನುವ ನುಂಗಿ, ನಿಲವು ನೆಳಲನ್ನೆ ನುಂಗಿ~ ಎಂದೂ, `ಅಳಬೇಡ ತಂಗಿ ಅಳಬೇಡ~ ಎಂಬ ಇನ್ನೊಂದು ಗೀತೆಯನ್ನು `ಕೂಡಲೂರು ಬಸವಲಿಂಗ ಶರಣರು~ ಅವರ ಹೆಸರಿನಲ್ಲಿ `ಅಳುತಿದ್ಯಾ ಕಂದ ಅಳುತಿದ್ಯಾ, ನೀನು...~ ಎಂದು ಪ್ರಚುರಪಡಿಸಿರುವುದು ಷರೀಫರ ವ್ಯಕ್ತಿತ್ವಕ್ಕೆ ಮಾಡಿರುವ ಅಪಚಾರವಾಗಿದೆ. ಹಾಗೆಂದು ಇಲ್ಲಿ ಪುರಂದರದಾಸರನ್ನೂ ಬಿಟ್ಟಿಲ್ಲ. ಅವರ ಪ್ರಸಿದ್ಧ `ತೂಗಿರಿ ರಂಗನ, ತೂಗಿರಿ ಕೃಷ್ಣನ~ ಎಂಬ ಕೀರ್ತನೆ `ಬಾಲಲೀಲಾ ಮಹಾಂತ ಶಿವಯೋಗಿ~ ಎಂಬುವರ ಹೆಸರಿನಲ್ಲಿ `ಮಗನ ತೂಗಿರೋ ಭಕ್ತರು, ಮಗನ ತೂಗಿರೋ~ ಎಂದು ಆರಂಭವಾಗಿ ಮೂಲವನ್ನು ಅಣಕಿಸುತ್ತದೆ.

ಬಸವ, ಕನಕರ ಸಾಧನೆಗಳನ್ನು ಉಳಿಸಲು ಸಾಂಸ್ಥೀಕರಣಗೊಂಡ ಸಾಮಾಜಿಕ ವ್ಯವಸ್ಥೆಗಳಿವೆ. ಹಾಗಾದರೆ `ಹಾಡುಹಕ್ಕಿ~ ಎಂದು ಹೆಸರಾಗಿ ಹೋದ ಷರೀಫರ ರಚನೆಗಳನ್ನು ಉಳಿಸಲು  ಪ್ರತಿಭಟಿಸುವವರ‌್ಯಾರು? ಹೀಗೆ ಹಲವಾರು ಸಂತರ, ಸಾಧಕರ ಮತ್ತು ಮಹಾನುಭಾವರ ಪ್ರಸಿದ್ಧ ರಚನೆಗಳು ಇನ್ನಾರವೋ ಹೆಸರಿನಲ್ಲಿ ಪ್ರಕಟವಾಗಿವೆ. ಇದು ಬರಹಗಾರರ ತಪ್ಪೋ ಅಥವಾ ಸಂಪಾದಕರ ಅವಜ್ಞೆಯೋ ಎಂಬ ಜಿಜ್ಞಾಸೆ ಕಾಡುತ್ತದೆ. ಕೃತಿಯನ್ನು ಸಮಗ್ರವಾಗಿ ಪರಿಶೀಲಿಸಿದಾಗ ಓದುಗನಿಗೆ ಕಂಡು ಬರುವ ಎರಡು ಅಂಶಗಳನ್ನು ಹೀಗೆ ಗುರುತಿಸಬಹುದು.1. ಗಡಿಬಿಡಿಯಲ್ಲಿ ಸಿಕ್ಕಿದ್ದನ್ನೆಲ್ಲ ಪರಿಶೀಲಿಸದೆ ಸೀರುಂಡೆ ಮಾಡಿ ತುಂಬಿಕೊಂಡು ಕೃತಿ ರಚಿಸಿ `ನಾನೂ ಒಬ್ಬ ಸಂಪಾದಕ ಲೇಖಕ~ ಎಂಬ ಹೆಸರು ಪಡೆಯಬೇಕೆಂಬ ಆಂತರಿಕ ವಾಂಛೆಯ ಅನಾವರಣ. 2. ಬಸವಣ್ಣನವರ ಹೆಸರು ಮತ್ತು ಸಾಧನೆಗಳನ್ನು ಮುಂದಿಟ್ಟುಕೊಂಡು, ಸಾಮಾಜಿಕ ಸಮಷ್ಟಿಯನ್ನು ಎತ್ತಿಹಿಡಿಯುವ ಸೋಗಲಾಡಿತನದ ಮರೆಯಲ್ಲಿ ಹಿಂದುಳಿದ, ದಲಿತ ಸಂತರ ಸಾಧನೆಯನ್ನು ಮರೆಮಾಚುವ ಹುನ್ನಾರ ಕೃತಿಯಲ್ಲಿ ಎದ್ದು ಕಾಣುತ್ತದೆ. ಇಲ್ಲಿರುವ ಮೂಲದ ಲೇಖಕರು ಕನ್ನಡ ಸಾರಸ್ವತ ಲೋಕಕ್ಕೆ ಪ್ರಾತಃಸ್ಮರಣೀಯರು. ಕನ್ನಡ ಸಾಹಿತ್ಯಲೋಕ ಇಂತಹ ಕದಿಯುವ, ಕಸಿಯುವ ಕೃತಿಗಳನ್ನು ಸ್ವಾಗತಿಸುವುದಿಲ್ಲ ಮತ್ತು ಬೆಂಬಲಿಸುವುದಿಲ್ಲ ಎಂಬ ವಾಸ್ತವವನ್ನು, ಇಂಥ ಕೃತಿಗಳನ್ನು ಹೊರತರುವವರು ತಿಳಿಯಬೇಕಿದೆ.

ಪ್ರತಿಕ್ರಿಯಿಸಿ (+)