ಗುರುವಾರ , ಏಪ್ರಿಲ್ 15, 2021
23 °C

ಕೃತಿ ಸಂಪುಟ: ಮಕ್ಕಳ ನಿಲುವುಗನ್ನಡಿ

ಮಂಜುನಾಥ ಗೌಡರ Updated:

ಅಕ್ಷರ ಗಾತ್ರ : | |

ಕೃತಿ ಸಂಪುಟ: ಮಕ್ಕಳ ನಿಲುವುಗನ್ನಡಿ

ಸರ್ಕಾರಿ ಶಾಲೆಗಳಲ್ಲಿ ಎಲ್ಲವೂ ಉಚಿತ. ಖಾಸಗಿ ಶಾಲೆಗಳಲ್ಲಿ ಸಣ್ಣ ಪೆನ್ಸಿಲ್‌ಗೂ ದುಡ್ಡು. ಆದರೂ ಸರ್ಕಾರಿ ಶಾಲೆಯತ್ತ ನಿರ್ಲಕ್ಷ್ಯ ನಿಂತಿಲ್ಲ. ಇದಕ್ಕೆ ಮಕ್ಕಳ ದೈನಂದಿನ ಚಟುವಟಿಕೆ ದಾಖಲಿಸುವ `ಕೃತಿ ಸಂಪುಟ~ ಸಹ ಹೊರತಾಗಿಲ್ಲ. ಇದನ್ನು ಪಾಲಕರು, ಕೆಲವು ಶಿಕ್ಷಕರು ಗಂಭೀರವಾಗಿ ತೆಗೆದುಕೊಳ್ಳದೇ ಇರುವುದರಿಂದ ಸಕಾಲಕ್ಕೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಮೌಲ್ಯಮಾಪನ ಹಾಗೂ ಸುಧಾರಣೆ ಸಾಧ್ಯವಾಗುತ್ತಿಲ್ಲ.ಇದಕ್ಕೊಂದು ತಾಜಾ ನಿದರ್ಶನ ಇಲ್ಲಿದೆ ನೋಡಿ:


ತುಮಕೂರಿನಲ್ಲಿ ವ್ಯಾಪಾರಿಗಳಾಗಿರುವ ದಂಪತಿ,  `ಚುರುಕು ಬುದ್ಧಿ~ಯ ತಮ್ಮ ಮಗಳನ್ನು ಖಾಸಗಿ ಶಾಲೆಗೆ ಸೇರಿಸಿದ್ದಾರೆ. ಪ್ರತಿ ತಿಂಗಳೂ ಮಗಳ ಕೃತಿ ಸಂಪುಟ (ಪೋರ್ಟ್‌ಫೋಲಿಯೊ) ಪರಿಶೀಲಿಸುತ್ತಾರೆ. ಆದರೆ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ತಮ್ಮ ಮಗನ ಅಧ್ಯಯನ ಯಾವ ರೀತಿ ಸಾಗಿದೆ ಎಂದು ಗಮನಿಸುವುದಕ್ಕೆ ಪುರುಸೊತ್ತು ಇಲ್ಲ ಎನ್ನುವುದು ಅವರ ಸಮಜಾಯಿಷಿ.ಇಂತಹ ನಿರ್ಲಕ್ಷ್ಯಗಳೇ ಮಕ್ಕಳ ಕಲಿಕಾ ಪ್ರಕ್ರಿಯೆಯನ್ನು ವಿವಿಧ ಆಯಾಮಗಳಲ್ಲಿ ಅರ್ಥ ಮಾಡಿಕೊಳ್ಳಲು ಅಡ್ಡಿಯಾಗುತ್ತಿವೆ. ಈ ತಾರತಮ್ಯದಿಂದಾಗಿ  ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಹೊರ ಹಾಕುವುದರಲ್ಲಿ ಹಿಂದೆ ಬೀಳುತ್ತಿದ್ದಾರೆ. ಇನ್ನು ಶಿಕ್ಷಕರಿಗೆ ಕಿಶೋರಿ, ನಲಿ ಕಲಿ ಮೊದಲಾದ ತರಬೇತಿಗಳ ಜತೆಗೆ ಚುನಾವಣೆ, ಗಣತಿಯಂತಹ ವಿವಿಧ ಕೆಲಸಗಳ `ಹೊರೆ~, ಇನ್ನೊಂದೆಡೆ ಸಂಪನ್ಮೂಲ ಕೊರತೆ. ಇವುಗಳ ಮಧ್ಯೆ `ಕೃತಿ ಸಂಪುಟ~ವನ್ನು ಸಮರ್ಥವಾಗಿ ನಿರ್ವಹಿಸಲು ಹೇಗೆ ಸಾಧ್ಯ?   ಏನಿದು ಕೃತಿ ಸಂಪುಟ?

ಮಕ್ಕಳ ವ್ಯಕ್ತಿತ್ವದ ಬಗ್ಗೆ ಒಂದು ಹಂತದವರೆಗೆ ಸಮಗ್ರ `ಹಿಮ್ಮಾಹಿತಿ~ ನೀಡುವ ವ್ಯವಸ್ಥಿತವಾದ  ದಾಖಲೆ ಇದು. ಮಕ್ಕಳ ಪ್ರಗತಿ ವರದಿ ದಾಖಲೆಗೆ ಕೃತಿ ಸಂಪುಟ ಅಗತ್ಯ. ಯಾವುದೇ ಸಂದರ್ಭದಲ್ಲಿ ಇದನ್ನು ಗಮನಿಸಿದರೂ ವಿದ್ಯಾರ್ಥಿಗಳು ಕಲಿಕಾ ಪ್ರಕ್ರಿಯೆಯಲ್ಲಿ ಯಾವ ರೀತಿ ತೊಡಗಿಸಿಕೊಂಡಿದ್ದಾರೆ, ಕಲಿಕೆಯ ಗುಣಮಟ್ಟ ಹೇಗಿದೆ, ಅವರಿಗೆ ಯಾವ ಬಗೆಯ ಮಾರ್ಗದರ್ಶನ ಬೇಕು ಎಂಬ ಸಮಗ್ರ ವಿವರ ದೊರೆಯುತ್ತದೆ.ಪ್ರತಿ ಮಗುವಿಗೂ ಪ್ರತ್ಯೇಕ ಕೃತಿ ಸಂಪುಟ ಇರುತ್ತದೆ. ಇದು ಸರಳವಾದ ಫೈಲ್ ಆಗಿರಬಹುದು. ಪ್ರಮುಖವಾಗಿ ಮಕ್ಕಳ ಬರವಣಿಗೆ ಮಾದರಿ, ಬರೆದ ಪರೀಕ್ಷಾ ಪತ್ರಿಕೆಗಳು, ಮೌಖಿಕ ಪರೀಕ್ಷೆಗಳಲ್ಲಿ ಮಕ್ಕಳ ನಿರ್ವಹಣೆ ಕುರಿತಾದ ದಾಖಲೆಗಳು ಹಾಗೂ ಗಳಿಸಿದ ಅಂಕ, ಮನೆಯಲ್ಲಿ ಮತ್ತು ತರಗತಿಯ ಹೊರಗೆ ಮಕ್ಕಳ ಚಟುವಟಿಕೆಗಳ ದಾಖಲೆ, ಮಕ್ಕಳ ಬಗ್ಗೆ ಶಿಕ್ಷಕರ ಅಭಿಪ್ರಾಯ, ಮಗುವಿನ ವಿದ್ಯಾಭ್ಯಾಸದಲ್ಲಿ ಪಾತ್ರ ವಹಿಸುವವರ ಅಭಿಪ್ರಾಯ, ಪೋಷಕರು ದಾಖಲಿಸುವ ಅಂಶಗಳು ಇದರಲ್ಲಿ ಇರುತ್ತವೆ.`ಖಾಸಗಿ ಶಾಲೆಯಲ್ಲಿ ಪ್ರತಿ ಕಿರು ಪರೀಕ್ಷೆಗೂ ದಾಖಲೆ ಇರುತ್ತದೆ. ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಫೈಲ್‌ನಲ್ಲಿ ಕಾದಿರಿಸುತ್ತಾರೆ. ಆದರೆ ನಾವು ಕೇವಲ ಅಂಕಗಳನ್ನು ಮಾತ್ರ ದಾಖಲಿಸುತ್ತೇವೆ. ಸರ್ಕಾರಿ ಶಾಲೆಯಲ್ಲಿ ಓದಿಸುವ ಮಕ್ಕಳ ಅಧ್ಯಯನದ ಬಗ್ಗೆ ಪಾಲಕರು ಹೆಚ್ಚು ಕಾಳಜಿಯನ್ನೇ ವಹಿಸುವುದಿಲ್ಲ~ ಎಂದು ಕೃತಿ ಸಂಪುಟದ ನಿರ್ಲಕ್ಷ್ಯಕ್ಕೆ ಪಾಲಕರನ್ನೇ ಹೊಣೆ ಮಾಡುತ್ತಾರೆ ಕೆಲವು ಶಿಕ್ಷಕರು.ಕೃತಿ ಸಂಪುಟದ ಉತ್ತಮ ನಿರ್ವಹಣೆಯಿಂದ ಪೋಷಕರಿಗೆ ಮಕ್ಕಳ ಕಲಿಕೆಯ ಬಗ್ಗೆ ಸಂಪೂರ್ಣ ಅರಿವು ಉಂಟಾಗುತ್ತದೆ. ಇದು ಅವರ ಭವಿಷ್ಯದ ಬೆಳವಣಿಗೆಗೆ ಪೂರಕವಾಗುತ್ತದೆ. ಭವಿಷ್ಯದಲ್ಲಿ ಕೃತಿ ಸಂಪುಟ ನಿರ್ವಹಣೆಯೇ ಮುಖ್ಯ ಮೌಲ್ಯಮಾಪನ ಸಾಧನವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

 

ಇದನ್ನರಿತು ವ್ಯವಸ್ಥಿತವಾಗಿ ಕೃತಿ ಸಂಪುಟವನ್ನು ದಾಖಲಿಸಿದರೆ, ಈ ಬಗ್ಗೆ ಪಾಲಕರು ಹೆಚ್ಚು ಆಸ್ಥೆ ವಹಿಸಲು ಮುಂದಾದರೆ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಅರ್ಥಪೂರ್ಣವಾಗಿ ರೂಪಿಸುವ  ಕಾರ್ಯ ಸುಗಮವಾಗುತ್ತದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.