ಸೋಮವಾರ, ಮೇ 23, 2022
30 °C
ಉಡುಪಿ ಜಿಲ್ಲಾ ತೋಟಗಾರಿಕಾ ಬೆಳೆಗಾರರ ಸಹಕಾರ ಸಂಘ ಉದ್ಘಾಟನೆ

ಕೃಷಿಕರ ಸಮಸ್ಯೆಗೆ ಯತ್ನ: ಪ್ರಮೋದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: `ಕೃಷಿಕರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಬೆಳೆಗಳನ್ನು ಸಂಗ್ರಹಿಸಿಡಲು ದಾಸ್ತಾನು ಮತ್ತು ಶೀಥಲೀಕರಣ ವ್ಯವಸ್ಥೆ ಸಮರ್ಪಕವಾಗಿಲ್ಲ. ಆದ್ದರಿಂದ ಬೆಳೆಗಾರರು ಸಂಘಟನೆ ಆಗುವ ಮೂಲಕ ಬೆಳೆಗಳಿಗೆ ನ್ಯಾಯಯುತ ಬೆಲೆ ಪಡೆಯಲು ಯತ್ನಿಸಬೇಕು' ಎಂದು ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದರು.ಆದಿ ಉಡುಪಿಯ ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಬುಧವಾರ ನಡೆದ ಉಡುಪಿ ಜಿಲ್ಲಾ ತೋಟಗಾರಿಕಾ ಬೆಳೆಗಾರರ ಸಹಕಾರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಕೃಷಿಕರ ಸಮಸ್ಯೆಗಳನ್ನು ಬಗೆಹರಿಸಲು ಯತ್ನಿಸುತ್ತೇವೆ. ಯಾವುದೇ ಸಮಸ್ಯೆಗಳಿದ್ದರೂ ಸರ್ಕಾರದ ಗಮನಕ್ಕೆ ತಂದು ಅದನ್ನು ಪರಿಹರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.`ಬೆಲೆ ಕುಸಿತ, ಮಧ್ಯವರ್ತಿಗಳ ಹಾವಳಿ ಮುಂತಾದ ಸಮಸ್ಯೆಗಳಿಂದಾಗಿ ಜನರು ಕೃಷಿಯ ಬಗ್ಗೆ ಒಲವು ಕಳೆದುಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿರುವ ಕೃಷಿ ಭೂಮಿಯಲ್ಲಿ ಅರ್ಧದಷ್ಟು ಭೂಮಿಯಲ್ಲಿಯೂ ಕೃಷಿ ಚಟುವಟಿಕೆ ನಡೆಯುತ್ತಿಲ್ಲ. ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುವವರೆಗು ದಾಸ್ತಾನು ಮಾಡಲು ದಾಸ್ತಾನು ವ್ಯವಸ್ಥೆಯೂ ಇಲ್ಲದಾಗಿದೆ' ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಉಪೇಂದ್ರ ನಾಯಕ್ ಹೇಳಿದರು.ಸಂಘದ ಭದ್ರತಾ ಕೋಶವನ್ನು ಪ್ರಮೋದ್ ಮಧ್ವರಾಜ್ ಉದ್ಘಾಟಿಸಿದರು. ಸಂಘದ ಶೇರುದಾರರಿಗೆ ಕಾರ್ಯಕ್ರಮದಲ್ಲಿ ಠೇವಣಿ ಪತ್ರವನ್ನು ವಿತರಿಸಲಾಯಿತು.ಪ್ರಗತಿಪರ ಕೃಷಿಕ ಎ.ಜಿ. ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎಸ್.ಎ. ಪ್ರಭಾಕರ ಶರ್ಮ, ಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಲಕ್ಷ್ಮಣಶೆಟ್ಟಿ, ಮೈಸೂರು ವಿಭಾಗದ ಸಹಕಾರ ಸಂಘಗಳ ಜಂಟಿ ನಿಬಂಧಕ ಡಾ. ಎಚ್.ಆರ್. ಕೃಷ್ಣಯ್ಯಗೌಡ, ಜಂಟಿ ಕೃಷಿ ನಿರ್ದೇಶಕ ಅಂತೋಣಿ ಮರಿಯಾ ಇಮಾನ್ಯೂವೆಲ್. ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಡಾ. ಬಿ.ಪಿ.ಸತೀಶ, ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರದ ಹನುಮಂತಪ್ಪ ಅತಿಥಿಗಳಾಗಿ ಆಗಮಿಸಿದ್ದರು.ಸಂಘದ ಅಧ್ಯಕ್ಷ ಎ. ಅಶೋಕ ಕುಮಾರ ಕೊಡ್ಗಿ, ಉಪಾಧ್ಯಕ್ಷ ಎಸ್. ನರಸಿಂಹ ನಾಯಕ್, ಕಾರ್ಯ ನಿರ್ವಹಣಾ ಮಂಡಳಿಯ ಎ. ವಿಶ್ವನಾಥ ಉಡುಪ, ಎಚ್. ವಿಠಲ ಶೆಟ್ಟಿ, ಕೆ. ಪ್ರದೀಪ್ ಹೆಬ್ಬಾರ್, ಸುಭಾಷಿತ್ ಕುಮಾರ್, ಎ.ಶಶಿಧರ್ ಅಲ್ಸೆ, ಯಶವಂತ್ ಕಾಮತ್, ಬಾಲಕೃಷ್ಣ ಶೆಟ್ಟಿ, ಬಿ. ಮುರಳೀಧರ, ಸುಮಾ ಆರ್ ಕಾಮತ್, ಎಂ. ಬಲರಾಮ ಮಧ್ಯಸ್ಥ, ಬಿ. ರಾಮಕೃಷ್ಣ ರಾವ್ ಉಪಸ್ಥಿತರಿದ್ದರು.

ಸುಮಾ ಆರ್ ಕಾಮತ್ ಪ್ರಾರ್ಥನೆ ಮಾಡಿದರು. ಸುಫಲಿನಾ ಮನ್‌ಪ್ರಿತ್ ನೃತ್ಯ ಪ್ರದರ್ಶನ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.