ಕೃಷಿಗೆ ಆದ್ಯತೆ ನೀಡಲು ದೊರೆಸ್ವಾಮಿ ಸಲಹೆ

7

ಕೃಷಿಗೆ ಆದ್ಯತೆ ನೀಡಲು ದೊರೆಸ್ವಾಮಿ ಸಲಹೆ

Published:
Updated:

ಗದಗ: ವ್ಯವಸಾಯಕ್ಕೆ ಮೊದಲ ಆದ್ಯತೆ ನೀಡಬೇಕು ನಂತರ ಕೈಗಾರಿಕೆ ಸ್ಥಾಪನೆಗೆ ಮುಂದಾಗಬೇಕು ಈ ಮೂಲಕ ದೇಶದ ಪ್ರಗತಿಗೆ ಶ್ರಮಿಸಬೇಕು ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಹೇಳಿದರು.ನಗರದ ತೋಂಟದ ಸಿದ್ದಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಸೋಮವಾರ ಭೂಸ್ವಾಧೀನ ವಿರೋಧಿ ಸಂಗ್ರಾಮ ಸಮಿತಿ ವತಿಯಿಂದ ನಡೆದ ಭೂ ಸ್ವಾಧೀನ ವಿರೋಧಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ. ಯಾವುದೇ ಕಾರಣಕ್ಕೂ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಿಡಬಾರದು. ಇದು ಸಂಘಟನೆಯ ಮೂಲಕ ಸಾಧ್ಯವಾಗುತ್ತದೆ ಎಂದರು.ಭೂ ಸ್ವಾಧೀನ ಪ್ರಕ್ರಿಯೆ ವೈಜ್ಞಾನಿಕವಾಗಿ ನಡೆಯುತ್ತಿಲ್ಲ. ಅದರಲ್ಲಿ ಜನಪ್ರತಿನಿಧಿಗಳ ಸ್ವ ಹಿತಾಸಕ್ತಿ ಅಡಗಿದೆ. ಸರ್ಕಾರ ಭೂಸ್ವಾಧೀನ ಮೂಲಕ ಫಲವತ್ತಾದ ಕೃಷಿ ಭೂಮಿಯನ್ನು ಬಹುರಾಷ್ಟ್ರೀಯ ಕಂಪೆನಿಗಳಿಗೆ ನೀಡಿ ಕೈಗಾರಿಕೆ ಸ್ಥಾಪನೆಗೆ ಮುಂದಾಗುತ್ತಿದೆ. ಇದರಿಂದ ರೈತರು ಜಮೀನು ಕಳೆದುಕೊಳ್ಳುವ ಮೂಲಕ ಆಹಾರ ಕೊರತೆ ಎದುರಿಸುವಂತಹ ಪರಿಸ್ಥಿತಿ ಬಂದೊದಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.ರೈತರ ಕೃಷಿ ಭೂಮಿ ಇಂದು ಬಂಡವಾಳ ಶಾಹಿಗಳ ಕೈಗೆ ಸೇರಲು ಸರ್ಕಾರ ಹುನ್ನಾರ ನಡೆಸಿದೆ. ರೈತರಿಗೆ ಹಣದ ಆಮಿಷವೊಡ್ಡಿ ಭೂ ಸ್ವಾಧಿನಕ್ಕೆ ಮುಂದಾಗಿದೆ. ಎಲ್ಲ ರಾಜಕೀಯ ಪಕ್ಷಗಳು ಭ್ರಷ್ಟಾಚಾರ, ವಂಚನೆಯಿಂದ ಕೂಡಿವೆ. ರಾಜಕೀಯ ನಾಯಕರು ತಮ್ಮ ಸ್ವಹಿತಕ್ಕಾಗಿ ಆಡಳಿತವನ್ನು ದುರ್ಬಳಕೆಮಾಡಿಕೊಂಡು, ರೈತರ ಪ್ರಾಣದ ಜೊತೆ ಆಟವಾಡುತ್ತಿದ್ದಾರೆ ಎಂದು ಹೇಳಿದರು.ಸಂತಸ: ಪೋಸ್ಕೊ ಕಂಪೆನಿಯನ್ನು ಜಿಲ್ಲೆಯಿಂದ ಓಡಿಸಲು ಡಾ. ತೋಂಟದ ಸ್ವಾಮೀಜಿ ಹಾಗೂ ರೈತ ಪರ ಸಂಘಟನೆಗಳು ಹೋರಾಟ ಮಾಡಿ ಯಶಸ್ಸು ಕಂಡಿರುವುದು ಅತೀವ ಸಂತಸ ತಂದಿದೆ. ಗದಗ ಜಿಲ್ಲೆ ಅಷ್ಟೇ ಅಲ್ಲ ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಈ ಕಂಪೆನಿಯ ಸ್ಥಾಪನೆ ಮಾಡಲು ಬಿಡಬಾರದು. ಸಂಘಟನೆ ಮೂಲಕ ಹೋರಾಟ ಮಾಡಬೇಕು ಎಂದರು.ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು: ರಾಜ್ಯದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಭ್ರಷ್ಟಾಚಾರ ನಿರ್ಮೂಲನೆಗೆ ಅಣ್ಣಾ ಹಜಾರೆ ಮಾತ್ರ ಹೋರಾಟ ಮಾಡಿದರೆ ಸಾಲದು. ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಯುವಕರ ತಂಡಗಳು ಸಂಘಟನೆಗೊಳ್ಳಬೇಕು. ಸರ್ಕಾರಿ ಕಚೇರಿಗೆ ಭೇಟಿ ನೀಡುವ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಕೆಲಸವಾಗಬೇಕು ಎಂದು ಹೇಳಿದರು.ತಲೆತಗ್ಗಿಸುವ ಕೆಲಸ: ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪನವರು  ಜೈಲಿನಲ್ಲಿರುವುದು ತಲೆ ತಗ್ಗಿಸುವ ಕೆಲಸ. ರಾಜಕೀಯ ಪಕ್ಷಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ದೇಶದಲ್ಲಿ ಯಾರೇ ತಪ್ಪು ಮಾಡಲಿ ಅವರಿಗೆ ಕಾನೂನು ರಿತ್ಯ ಶಿಕ್ಷೆಯಾಗಲೇ ಬೇಕು. ಭ್ರಷ್ಟಾಚಾರ ನಡೆಸುವರು ಜೈಲಿಗೆ ಹೋಗಲೇ ಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಡಾ. ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ವಿದ್ಯುತ್ ಇಲ್ಲ ಆದರೆ, ಸ್ಥಾಪನೆಯಾಗಲಿರುವ ಬಹುರಾಷ್ಟ್ರೀಯ ಕಂಪೆನಿಗಳಿಗೆ ಯಾವ ಭರವಸೆ ಮೇಲೆ ವಿದ್ಯುತ್ ನೀಡಲಾಗುವುದು ಎಂದು ರಾಜಕೀಯ ಮುಖಂಡರು ಹೇಳುತ್ತಾರೆ? ಇಂತಹ ಸುಳ್ಳು ಭರವಸೆಗಳನ್ನು ನೀಡುವುದು ಅಪಾಯಕಾರಿ ಎಂದರು.ಅನೇಕ ಹೋರಾಟಗಳ ಮೂಲಕ ಮೇಲೆ ಬಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರ ಬಂದ ನಂತರ ಎಲ್ಲವನ್ನು ಮರೆತು ಕಾನೂನು ಲೆಕ್ಕಿಸದೇ ಮಾಡಿದ ತಪ್ಪಿನಿಂದಾಗಿ ಜೈಲು ಪಾಲಾಗಿದ್ದಾರೆ ಎಂದು ಹೇಳಿದರು.ಬಾಬಾಗೌಡ ಪಾಟೀಲ, ಮಾರುತಿ ಮಾನ್ಪಡೆ, ಶೌಕತ್‌ಅಲಿ ಆಲೂರ, ರುದ್ರಮುನಿ ಆದರಗೆರೆ, ಮಾವಳ್ಳಿ ಶಂಕರ, ಬಿ. ಎಸ್. ಸೊಪ್ಪಿನ ಮತ್ತಿತರರು ಹಾಜರಿದ್ದರು. ಭೂಸ್ವಾಧೀನ ವಿರೋಧಿ ಸಂಗ್ರಾಮ ಸಮಿತಿ ಸಂಚಾಲಕ ಡಾ. ಸಿದ್ಧನಗೌಡ ಪಾಟೀಲ ಸ್ವಾಗತಿಸಿದರು. ಬಸವರಾಜ ಸೂಳಿಭಾವಿ ನಿರೂಪಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry