ಮಂಗಳವಾರ, ಅಕ್ಟೋಬರ್ 15, 2019
28 °C

ಕೃಷಿಗೆ ಕುತ್ತು; ಜನಕ್ಕೆ ಆಪತ್ತು

Published:
Updated:
ಕೃಷಿಗೆ ಕುತ್ತು; ಜನಕ್ಕೆ ಆಪತ್ತು

ನವದೆಹಲಿ: ಅಕ್ರಮ ಗಣಿಗಾರಿಕೆಯಿಂದ ಪರಿಸರಕ್ಕೆ ಮಾತ್ರ ಹಾನಿ ಆಗುತ್ತಿಲ್ಲ. ಮನುಷ್ಯನ ಆರೋಗ್ಯ, ಕೃಷಿ ಮತ್ತು ತೋಟಗಾರಿಕೆ ಮೇಲೂ ಕೆಟ್ಟ ಪರಿಣಾಮ ಉಂಟಾಗುತ್ತಿದೆ ಎಂಬ ಅಂಶವನ್ನು `ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ~ (ಐಸಿಆಫ್‌ಆರ್‌ಇ) ಅಧ್ಯಯನ ವರದಿ ಬಹಿರಂಗ ಮಾಡಿದೆ.ಬಳ್ಳಾರಿ, ಚಿತ್ರದುರ್ಗ, ತುಮಕೂರು ಜಿಲ್ಲೆಗಳು ಒಳಗೊಂಡಂತೆ ರಾಜ್ಯದ ಅಕ್ರಮ ಗಣಿಗಾರಿಕೆ ಕುರಿತು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ನ ಸೂಚನೆಯ ಹಿನ್ನೆಲೆಯಲ್ಲಿ ಮಂಡಳಿ ಅಧ್ಯಯನ ನಡೆಸಿದೆ. ಅಕ್ರಮ ಗಣಿಗಾರಿಕೆಯಿಂದಾಗಿ ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನ ಕುಂಠಿತಗೊಂಡಿದೆ. ಅಲ್ಲದೆ, ಗಣಿಗಾರಿಕೆ ಪ್ರದೇಶದ ಸುತ್ತಮುತ್ತಲ ಗ್ರಾಮಗಳಲ್ಲಿ ವಾಸವಾಗಿರುವ ಜನರಿಗೆ ಆಸ್ತಮಾ, ಅಲರ್ಜಿ ಮತ್ತು ಚರ್ಮ ಸಂಬಂಧಿತ ಕಾಯಿಲೆಗಳನ್ನು ಹರಡುತ್ತಿದೆ ಎಂದು ವರದಿ ತಿಳಿಸಿದೆ.ಅಕ್ರಮ ಗಣಿಗಾರಿಕೆ ಕುರಿತು ಕಳವಳ ವ್ಯಕ್ತಪಡಿಸಿರುವ ಮಂಡಳಿ, `ಎಲ್ಲ ನೀತಿ- ನಿಯಮಗಳನ್ನು ಉಲ್ಲಂಘಿಸಿ ಗಣಿಗಾರಿಕೆ ನಡೆಸಲಾಗಿದೆ. ಇದರಿಂದಾಗಿ ವ್ಯಾಪಕ ಹಾನಿಯಾಗಿದ್ದು ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದರ ಜತೆಗೆ ಆಗಿರುವ ಹಾನಿ ತುಂಬಿಸಿಕೊಳ್ಳಬೇಕು~ ಎಂದು ಅರಣ್ಯ ಸಂಶೋಧನಾ ಮಂಡಳಿ ವರದಿಯಲ್ಲಿ ಶಿಪಾರಸು ಮಾಡಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಅಧೀನದಲ್ಲಿ ಕೆಲಸ ಮಾಡುವ ಮಂಡಳಿ ಈಗಾಗಲೇ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ತನ್ನ ಅಧ್ಯಯನ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ.ಎರಡೂ ಜಿಲ್ಲೆಗಳಲ್ಲಿ ನಡೆದಿರುವ ಗಣಿಗಾರಿಕೆಯಿಂದ ಕೃಷಿ ಉತ್ಪಾದನೆ ಶೇ.40ರಷ್ಟು ಕುಂಠಿತಗೊಂಡಿದೆ. ಗಣಿಗಾರಿಕೆ ಪ್ರದೇಶದ ಜತೆ ಗಣಿಗಾರಿಕೆ ಹೊರತಾದ ಪ್ರದೇಶವನ್ನು ಹೋಲಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಉದ್ಯಮಿಗಳು ನಿಗದಿತ ಪ್ರದೇಶದ ಆಚೆಗೂ ನಡೆಸಿರುವ ಗಣಿಗಾರಿಕೆಯಿಂದ ಎಂಟು ಚದರ ಮೈಲಿ ಅರಣ್ಯ ಅತಿಕ್ರಮಣವಾಗಿದೆ ಎಂದು ವರದಿ ಹೇಳಿದೆ.ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರ ಮತ್ತು ಹೊಸದುರ್ಗದ ಸುತ್ತಮುತ್ತ 24 ಕಂಪೆನಿಗಳು ಗಣಿಗಾರಿಕೆಯಲ್ಲಿ ತೊಡಗಿವೆ. ಇದರಲ್ಲಿ ಅರ್ಧದಷ್ಟು ಕಂಪೆನಿಗಳು 604.42 ಹೆಕ್ಟೇರ್ ಅರಣ್ಯ ಭೂಮಿಯಲ್ಲಿ ಗಣಿಗಾರಿಕೆ ನಡೆಸುತ್ತಿವೆ ಎಂಬ ಅಂಶ ವರದಿಯಲ್ಲಿದೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ, ತಿಪಟೂರು, ಗುಬ್ಬಿ ತಾಲೂಕುಗಳಲ್ಲಿ ಇಷ್ಟೇ ಸಂಖ್ಯೆಯ ಕಂಪೆನಿಗಳು ಗಣಿಗಾರಿಕೆ ನಡೆಸಿವೆ. ಇವುಗಳ ಪೈಕಿ 17 ಕಂಪೆನಿಗಳ ಸಮೀಕ್ಷೆ ನಡೆಸಲಾಗಿದ್ದು, 13 ಕಂಪೆನಿಗಳು 513.32 ಹೆಕ್ಟೇರ್ ಅರಣ್ಯ ಭೂಮಿ ಅತಿಕ್ರಮಣ ಮಾಡಿವೆ ಎಂದು ವರದಿ ಪ್ರಸ್ತಾಪಿಸಿದೆ.ಬಳ್ಳಾರಿಯಂತೆ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲೂ ಗಣಿಗಾರಿಕೆಯಿಂದ ರಸ್ತೆ ಸಿಕ್ಕಾಪಟ್ಟೆ ಹದಗೆಟ್ಟಿದೆ. ಇದರಿಂದ ಅಪಘಾತಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಇದರಿಂದ ಅಪರೂಪದ ಸಸ್ಯ- ಪ್ರಾಣಿ ಸಂಕುಲಕ್ಕೂ ಆತಂಕ ಎದುರಾಗಿದೆ. ಗಣಿಗಾರಿಕೆಯಿಂದ ಗಾಳಿ ಮತ್ತು ಅಂತರ್ಜಲದ ಗುಣಮಟ್ಟವೂ ಕುಸಿಯುತ್ತಿದೆ.ತುಮಕೂರು ಜಿಲ್ಲೆಯ ನೀರು ನೀರಾವರಿಗೆ ಯೋಗ್ಯವಾಗಿ ಕಂಡರೂ ಚಿತ್ರದುರ್ಗದ ನೀರು ಎಲ್ಲ ವಿಧದಲ್ಲೂ ಕಳಪೆಯಾಗಿದೆ ಎಂದು ವರದಿ ವಿಶ್ಲೇಷಿಸಿದೆ. ಈಗ ಬೆಟ್ಟಗುಡ್ಡಗಳಿಗೆ ಸೀಮಿತವಾಗಿರುವ ಗಣಿಗಾರಿಕೆ ನೆಲದಾಳಕ್ಕೆ ಇಳಿದರೆ ಇನ್ನೂ ಕೆಟ್ಟ ಪರಿಣಾಮ ಉಂಟಾಗಲಿದೆ ಎಂದು ಎಚ್ಚರಿಕೆ ನೀಡಿದೆ.ಅಕ್ರಮ ಗಣಿಗಾರಿಕೆಯಿಂದ ಆಗಿರುವ ಹಾನಿ ಕುರಿತು ವಿಶ್ಲೇಷಣಾತ್ಮಕವಾಗಿ ಅಧ್ಯಯನ ನಡೆಸಿರುವ ಮಂಡಳಿ ಎರಡೂ ಜಿಲ್ಲೆಗಳಲ್ಲಿ ಲಭ್ಯವಿರುವ ಅಪರೂಪದ ಜೀವ ವೈವಿಧ್ಯಗಳನ್ನು ಪಟ್ಟಿ ಮಾಡಿದೆ. ಅಕ್ರಮಗಳಿಗೆ ಕಡಿವಾಣ ಹಾಕಿ, ಯೋಜನಾಬದ್ಧ ಗಣಿಗಾರಿಕೆಗೆ ಮಾತ್ರ ಅವಕಾಶ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರಚಿಸಲಾಗಿರುವ ಕಾರ್ಯಪಡೆಗೆ ಹೆಚ್ಚಿನ ಅಧಿಕಾರ ನೀಡುವಂತೆ ಶಿಫಾರಸು ಮಾಡಲಾಗಿದೆ.ಜಿಲ್ಲಾಧಿಕಾರಿಗಳ ನೇತೃತ್ವದ ಕಾರ್ಯಪಡೆಗೆ ಈಗಿರುವ ವಿವಿಧ ಇಲಾಖೆ ಅಧಿಕಾರಿಗಳ ಜತೆಗೆ `ಇಂಡಿಯನ್ ಬ್ಯುರೋ ಆಫ್ ಮೈನ್ಸ್~, ಗಣಿ ಸುರಕ್ಷತೆ ಮಹಾನಿರ್ದೇಶಕರ ಕಚೇರಿ, ಮುಖ್ಯ ವೈದ್ಯಕೀಯ ಅಧಿಕಾರಿ, ಪರಿಸರ ಮತ್ತು ಅರಣ್ಯ ಸಚಿವಾಲಯದ ಪ್ರಾದೇಶಿಕ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳನ್ನು ನೇಮಕ ಮಾಡುವಂತೆ ವರದಿ ಸಲಹೆ ಮಾಡಿದೆ.ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಹಾನಿಯಾಗಿರುವ ಪರಿಸರವನ್ನು ಪುನಃ ರೂಪಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಕುರಿತು ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ ಹಲವು ಶಿಫಾರಸುಗಳನ್ನು ಮಾಡಿದೆ. ಐಸಿಎಫ್‌ಆರ್‌ಇ ಇದಕ್ಕೂ ಮೊದಲೇ ಬಳ್ಳಾರಿ ಗಣಿಗಾರಿಕೆಯಿಂದ ಆಗಿರುವ ಪರಿಣಾಮ ಕುರಿತು ಅಧ್ಯಯನ ನಡೆಸಿ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ನೀಡಿದೆ.

 

Post Comments (+)