ಕೃಷಿಗೆ ಗಮನ ನೀಡದಿದ್ದರೆ ದುರಂತ ತಪ್ಪಿದ್ದಲ್ಲ

7

ಕೃಷಿಗೆ ಗಮನ ನೀಡದಿದ್ದರೆ ದುರಂತ ತಪ್ಪಿದ್ದಲ್ಲ

Published:
Updated:

ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರ ಬೆಳೆಯುತ್ತ ಹೋದಂತೆ ಕೃಷಿ ಅಧೋಗತಿಯತ್ತ ಸಾಗಿದೆ. ರೈತರನ್ನು ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿ ದುಡಿಯುವ ಜನರ ಆದಾಯದಲ್ಲಿ ಗಣನೀಯ ಹೆಚ್ಚಳವಾಗಿದೆ.

 

ರೈತರ ಆದಾಯ ಮಾತ್ರ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಇದರಿಂದಾಗಿ ರೈತರ ಮಕ್ಕಳು, ಗ್ರಾಮೀಣ ಯುವಜನರು ಅನಾಯಾಸದ ಕೆಲಸ ಹುಡುಕಿಕೊಂಡು ಪೇಟೆ- ಪಟ್ಟಣಗಳನ್ನು ಸೇರಿಕೊಳ್ಳುತ್ತಿದ್ದಾರೆ.ಕೃಷಿಯಲ್ಲಿ ಕಾರ್ಮಿಕರ ಅಭಾವ, ಉತ್ತಮ, ಬೀಜ, ಗೊಬ್ಬರ, ಕ್ರಿಮಿನಾಶಕಗಳಂತಹ `ಒಳ ಸುರಿ~ಗಳ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ. ಹವಾಮಾನ ವೈಪರೀತ್ಯದಿಂದ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಮಧ್ಯವರ್ತಿಗಳ ಕೈವಾಡ ಹೆಚ್ಚಾಗಿದೆ.

 

ರೈತರಿಗೆ ಈಗ ಸಂಕಷ್ಟದ ಸಮಯ. ಈಗ ಕೃಷಿ, ಮಾರುಕಟ್ಟೆ ಇಲಾಖೆಗಳು ಮತ್ತು ಸರ್ಕಾರ ಅರೆ ನಿದ್ರಾವಸ್ಥೆಯಲ್ಲಿವೆ. ಕೃಷಿ ವಿವಿಗಳು ಮತ್ತು ಇಲಾಖೆ ವರ್ಷಕ್ಕೆ ಇಂತಿಷ್ಟು `ಕೃಷಿ ಮೇಳ~ಗಳನ್ನು ಜಾತ್ರೆಯಂತೆ ಸಂಘಟಿಸಿ ಕೈತೊಳೆದುಕೊಳ್ಳುತ್ತಿವೆ. ಕೃಷಿ ವಿವಿ ಪ್ರಾಧ್ಯಾಪಕರು ಹಾಗೂ ಸಂಶೋಧಕರು ಹೊಲದ ಮಣ್ಣು, ಕೆಸರನ್ನು ಮುಟ್ಟಿಸಿಕೊಳ್ಳುತ್ತಿಲ್ಲ! ಇಂತಹ ಸನ್ನಿವೇಶದಲ್ಲಿ ಕೃಷಿ ಅಭಿವೃದ್ಧಿ ಹೇಗೆ ಸಾಧ್ಯ?ಅನೇಕ ದೇಶಗಳು ಕೃಷಿಗೆ ನೀಡಿರುವ ಪ್ರಾಧಾನ್ಯತೆಯನ್ನು ಗಮನಿಸಿ ನಾವೂ ಆ ದಿಕ್ಕಿನಲ್ಲಿ ಹೆಜ್ಜೆ ಹಾಕದಿದ್ದರೆ ಕೆಲವೇ ವರ್ಷಗಳಲ್ಲಿ ದೇಶ ಆಹಾರದ ಕೊರತೆ ಎದುರಿಸಬೇಕಾದೀತು.

ಕೃಷಿಯ ಪುನಶ್ಚೇತನಕ್ಕೆ ನಾವು ಕೈಗೊಳ್ಳಬೇಕಾದ ಕ್ರಮಗಳು ಯಾವುವು? ಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಒಂದು ಕೃಷಿ ವಿಚಾರ ಸಂಕಿರಣದಲ್ಲಿ ರೈತರೊಬ್ಬರು ಅಮೆರಿಕಾದಲ್ಲಿನ ಸಮೃದ್ಧ ಕೃಷಿ ಪರಿಸ್ಥಿತಿಯನ್ನು ಪ್ರಸ್ತಾಪಿಸಲು ಪ್ರಯತ್ನಿಸಿದರು.ಅಲ್ಲಿದ್ದ  ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು  ಅಮೆರಿಕೆಗೂ ನಮಗೂ ಸಂಬಂಧವಿಲ್ಲ ಎಂದು ಹೇಳಿ ರೈತರ ಉತ್ಸಾಹ ಕುಗ್ಗಿಸಿದರು. ದೂರದೃಷ್ಟಿ ಇಲ್ಲದ  ಇಂತಹ ಅಧಿಕಾರಿಗಳು ಕೃಷಿ ಇಲಾಖೆಯಲ್ಲಿ ಇದ್ದಾರೆ ಎನ್ನುವುದು ನಮ್ಮ ದುರಂತ. ಅಮೆರಿಕಾ  `ಕೃಷಿ ವರಮಾನ ಸ್ಥಿರೀಕರಣ~  ಯೋಜನೆ ಅಡಿಯಲ್ಲಿ ಅಲ್ಲಿನ ರೈತರಿಗೆ  ಪ್ರತಿ ವರ್ಷ ಸಾವಿರಾರು ಡಾಲರ್‌ಗಳ ನೆರವನ್ನು ನೀಡುತ್ತಿದೆ.

 

ಹೀಗಾಗಿ ಅಲ್ಲಿಯ ಕೃಷಿ ಲಾಭದಾಯಕ ಉದ್ಯೋಗವಾಗಿ ಬೆಳೆದಿದೆ. ಆದರೆ ನಮ್ಮ ಸರ್ಕಾರ ರೂಪಿಸಿರುವ ಯೋಜನೆಗಳು ಮತ್ತು ನೀಡುತ್ತಿರುವ ಸಹಾಯ ಧನದ ಪ್ರಮಾಣ ರೈತರಿಗೆ ಸಾಲದು. ಕೃಷಿಯನ್ನು ಲಾಭದಾಯಕವಾಗಿ ಮಾಡುವ ಯೋಜನೆ ರೂಪಿಸಲು ಆದ್ಯತೆ ನೀಡಬೇಕಿದೆ.ಪ್ರತಿ ವರ್ಷ ರೈತರಿಗೆ ಸಹಾಯ ಧನವನ್ನು ಕಡ್ಡಾಯವಾಗಿ ನೀಡಬೇಕು. ಅದು ದುರುಪಯೋಗವಾಗದಂತೆ ತಡೆಯಲು `ಕೃಷಿ ಉತ್ಪನ್ನ -ಆಧಾರಿತ~ ಮಾನದಂಡವನ್ನು ಅನುಸರಿಸಿ, ಸಹಾಯ ಧನ ನೇರವಾಗಿ ರೈತರಿಗೇ ತಲುಪುವಂತೆ ನೋಡಿಕೊಳ್ಳಬೇಕು. ಇಂತಹ ಯೋಜನೆಯಿಂದ ರೈತರಿಗೆ ಆರ್ಥಿಕ ಸಹಾಯ ಸಿಗುತ್ತದೆ  ಮತ್ತು ರಾಷ್ಟ್ರೀಯ ಕೃಷಿ ಉತ್ಪನ್ನಗಳ ಒಟ್ಟಾರೆ ಹೆಚ್ಚಳಕ್ಕೆ ನೆರವಾಗುತ್ತದೆ.ಇನ್ನು, ರೈತರಿಗೆ ಅಗತ್ಯವಾದ ಬೀಜ- ಗೊಬ್ಬರ- ಕ್ರಿಮಿನಾಶಕ ಇತ್ಯಾದಿ `ಒಳ ಸುರಿ~ ಗಳನ್ನು ಸತತವಾಗಿ ಸರಬರಾಜು ಮಾಡಲು ಅನುಕೂಲವಾಗುವಂತೆ ಸಹಕಾರ ಸಂಘಗಳು, ಯುವಕ ಸಂಘಗಳು, ರೈತರ ಕೂಟಗಳನ್ನು ಒಳಗೊಂಡ ಒಂದು ಸಶಕ್ತ ವಿತರಣಾ ಜಾಲವನ್ನು ರಾಜ್ಯದಾದ್ಯಂತ ರೂಪಿಸಬೇಕು.ಕೃಷಿ ವಿಶ್ವವಿದ್ಯಾಲಯಗಳ ಸಂಶೋಧಕರು, ಕೃಷಿ ಇಲಾಖೆ ಅಧಿಕಾರಿ, ಸಿಬ್ಬಂದಿ ಕಚೇರಿಯನ್ನು ಬಿಟ್ಟು ಕ್ಷೇತ್ರಗಳತ್ತ  ಹೆಜ್ಜೆ ಹಾಕಬೇಕು. ಸಾಲವೂ ಸೇರಿದಂತೆ ರೈತರ ಎಲ್ಲಾ ಅಗತ್ಯಗಳನ್ನು ಕಾಲಕಾಲಕ್ಕೆ ಸಿಗುವಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಅತಿವೃಷ್ಟಿ, ಅನಾವೃಷ್ಟಿ ಅಥವಾ ಇತರೆ ಕಾರಣಗಳಿಂದ ಬೆಳೆ ನಷ್ಟವಾದರೆ ತ್ವರಿತವಾಗಿ ರೈತರಿಗೆ ಪರಿಹಾರ ಸಿಗುವಂತಿರಬೇಕು. ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದು ಸೂಕ್ತ `ಬೆಂಬಲ ಬೆಲೆ~ ನೀಡುವಂತೆ ಬೀದಿಗಿಳಿದು ಚಳವಳಿ ಮಾಡಬೇಕಾದ ಪರಿಸ್ಥಿತಿ ನಮ್ಮ ರಾಜ್ಯದಲ್ಲಿದೆ. ಈ ಬೆಳವಣಿಗೆ ಕೃಷಿ ಕ್ಷೇತ್ರದ ದುರಂತ. ಇಂತಹ ಪರಿಸ್ಥಿತಿ ಯಾವುದೇ ಸರ್ಕಾರಕ್ಕೆ ಶೋಭೆ ತರುವುದಿಲ್ಲ. ರೈತರಿಗೆ ಸಿಗಬೇಕಾದ ವರಮಾನದ ಲಭ್ಯತೆಯನ್ನು ಖಚಿತಪಡಿಸುವ ಸ್ಥಿತಿಯೂ ನಮ್ಮ ದೇಶದಲ್ಲಿ ಇಲ್ಲ.ನಮ್ಮ ರಾಜ್ಯದಲ್ಲಿ `ಕೃಷಿ ಉತ್ಪನ್ನ ಮಾರಾಟ~ ಕಾರ್ಯವನ್ನು ಕೃಷಿ ಇಲಾಖೆಯಿಂದ ಬೇರ್ಪಡಿಸಲಾಗಿದೆ. ಇದರಿಂದ ಪರಿಸ್ಥಿತಿ ಜಟಿಲಗೊಂಡಿದೆ. ರೈತರಿಗೆ ನೀಡಬೇಕಾದ `ಸಮಗ್ರ ಸೇವೆ~ಯ ದೃಷ್ಟಿಯಿಂದ ಇದು ಕೃಷಿ ಇಲಾಖೆಯಲ್ಲಿಯೇ ಇರಬೇಕು. ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳನ್ನು (ಟಿಎಪಿಸಿಎಂಎಸ್) ಈ ಉದ್ದೇಶ ಕ್ಕಾಗಿಯೇ ಪ್ರತಿ ತಾಲ್ಲೂಕಿನಲ್ಲಿ ಸ್ಥಾಪಿಸಲಾಗಿದೆ.ಬಹುತೇಕ ಸಂಘಗಳು ತಮ್ಮ ಉದ್ದೇಶ ಮರೆತಿವೆ. ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈ ಸಂಘಗಳು ಒಟ್ಟಾರೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಉಳಿದ ಜಿಲ್ಲೆಗಳಲ್ಲಿರುವ ಈ ಸಂಘಗಳನ್ನು ಪುನಶ್ಚೇತನಗೊಳಿಸಿದರೆ, ಕೃಷಿ ಉತ್ಪನ್ನಗಳ ಮಾರಾಟ ಸುಗಮವಾಗಿ ರೈತರ ಸಂಕಟ ಸ್ವಲ್ಪವಾದರೂ ದೂರವಾಗಬಹುದು. ಕೃಷಿ ಉತ್ಪನ್ನಗಳ ಸಂಸ್ಕರಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕಿದೆ. ಅದರಿಂದ ರೈತರು ಹೆಚ್ಚಿನ ವರಮಾನ ಪಡೆಯಲು ಸಾಧ್ಯವಿದೆ. ಆಧುನಿಕ ಕೃಷಿ ಪದ್ಧತಿ ಬಗ್ಗೆ ತರಬೇತಿ, ತಾಂತ್ರಿಕ ಮಾರ್ಗದರ್ಶನ, ಕಾಲಕಾಲಕ್ಕೆ ಸಹಾಯಧನ- ನಷ್ಟ ಪರಿಹಾರ- ಬೆಂಬಲ ಬೆಲೆ ನೀಡಿಕೆ ಮತ್ತು ಸೂಕ್ತ ಮಾರುಕಟ್ಟೆ ಒದಗಿಸುವುದು- ಇತ್ಯಾದಿ ಎಲ್ಲವೂ  ಕೃಷಿ ಇಲಾಖೆಯ ಜವಾಬ್ದಾರಿಯಾಗಬೇಕು.  ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿದ್ಯಮಾನವನ್ನು ಗಮನದಲ್ಲಿಟ್ಟುಕೊಂಡು ಕೃಷಿ ಇಲಾಖೆ ಕಾಲಕಾಲಕ್ಕೆ ಸೂಕ್ತ ನಿರ್ಧಾರಗಳನ್ನು ಕೈಗೊಂಡು ರೈತರ ಬಾಳು ಹಸನಾಗುವಂತೆ ನೋಡಿಕೊಳ್ಳಬೇಕು. ಸರ್ಕಾರದ ಎಲ್ಲ ಕ್ರಮಗಳು ರೈತರ ಸಮಸ್ಯೆಗಳ ನಿವಾರಣೆ ಹಾಗೂ ಅವರ ಜೀವನ ಮಟ್ಟದ ಉತ್ಕರ್ಷದ ರೂಪದಲ್ಲಿ ಪ್ರತಿಫಲನವಾಗಬೇಕು.ಮೇಲಿನ ಅಂಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕನಿಷ್ಠ ಹತ್ತು ವರ್ಷಗಳ ಅವಧಿಗೆ ದೀರ್ಘಾವಧಿ ಯೋಜನೆಯನ್ನು ರೂಪಿಸಿ ಕಾರ್ಯರೂಪಕ್ಕೆ ತಂದರೆ ಕೃಷಿ ಲಾಭದಾಯಕವಾಗುತ್ತದೆ. ರೈತರು ನಗರ ಪ್ರದೇಶಗಳತ್ತ ವಲಸೆ ಹೋಗುವುದು ತಪ್ಪುತ್ತದೆ. ಇಲ್ಲವಾದರೆ ದುರಂತ ತಪ್ಪಿದ್ದಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry