ಕೃಷಿಯಿಂದ ವಿಮುಖನಾಗುತ್ತಿರುವ ರೈತ: ಆತಂಕ

ಬುಧವಾರ, ಜೂಲೈ 17, 2019
26 °C

ಕೃಷಿಯಿಂದ ವಿಮುಖನಾಗುತ್ತಿರುವ ರೈತ: ಆತಂಕ

Published:
Updated:

ಬಾಗಲಕೋಟೆ: `ಪ್ರಕೃತಿ ವಿಕೋಪದಿಂದ ತೀವ್ರ ತೊಂದರೆಗೆ ಒಳಗಾಗುತ್ತಿರುವ ರೈತ, ಕೃಷಿಯಿಂದ ವಿಮುಖನಾಗುತ್ತಿರುವುದು ವಿಷಾದದ ಸಂಗತಿ~ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.ಬಾಗಲಕೋಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಗರದ ಎಪಿಎಂಸಿ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಾನುವಾರು ಹಾಗೂ ಕುರಿಗಳ ವಾರದ ಸಂತೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ರೈತರಿಗೆ ಜಾನುವಾರು ಮತ್ತು ಕೃಷಿ ಭೂಮಿಯೇ ಜೀವಾಳ. ಜಮೀನು ಮತ್ತು ಜಾನುವಾರುಗಳ ಬಗ್ಗೆ ರೈತರು ಗೌರವ ಬೆಳೆಸಿಕೊಳ್ಳಬೇಕು. ಜಾನುವಾರು ಮನೆಯಲ್ಲಿ ಇದ್ದರೆ ರೈತರು ಹೆಚ್ಚು ಹೊತ್ತು ಅವುಗಳ ಜೊತೆ ಕಾಲ ಕಳೆಯುವುದರಿಂದ ನೆಮ್ಮದಿ ಲಭಿಸುತ್ತದೆ ಎಂದು ಅಭಿಪ್ರಾಯಪಟ್ಟರು.ಮಳೆಯಿಲ್ಲದೇ ರೈತರು ತೊಂದರೆಗೆ ಒಳಗಾಗಿದ್ದಾರೆ. ಮೇವು-ನೀರಿನ ಕೊರತೆ ತಲೆದೋರಿದೆ. ಸರ್ಕಾರ ಮೇವು ನೀರಿನ ಅಭಾವ ನೀಗಲು ಕ್ರಮಕೈಗೊಂಡಿದೆ ಎಂದರು.ಬಾಗಲಕೋಟೆ ಕೃಷಿ ಉತ್ಪನ್ನ ಸಮಿತಿ ನೂತನವಾಗಿ ಆರಂಭಿಸಿರುವ ಜಾನುವಾರು ಸಂತೆ ಈ ಭಾಗದ ರೈತ ಸಮುದಾಯಕ್ಕೆ ಸಹಾಯವಾಗಲಿದೆ. ಎಪಿಎಂಸಿಯನ್ನು ಬಲಪಡಿಸುವ ಕಾರ್ಯ ಮತ್ತಷ್ಟು ನಡೆಯಬೇಕಿದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಬಾಗಲಕೋಟೆ ಎಪಿಎಂಸಿಗೆ `ಮುಚಖಂಡಿ ಶ್ರಿವೀರಭದ್ರೇಶ್ವರ ಮಾರುಕಟ್ಟೆ ಸಮಿತಿ~ ಎಂದು ನಾಮಕರಣ ಮಾಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಮಾನ್ಯತೆ ಸಿಗಲಿದೆ ಎಂದರು. ಎಪಿಎಂಸಿಯಿಂದ ರೈತರ ಹೊಲಕ್ಕೆ ರಸ್ತೆ ಮತ್ತು ಆಕಸ್ಮಿಕ ಅಪಘಾತದಲ್ಲಿ ಮೃತಪಟ್ಟರೆ ಪರಿಹಾರ ನೀಡುವ ಯೋಜನೆ ಜಾರಿಯಲ್ಲಿದೆ. ರೈತರು ಈ ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಎಪಿಎಂಸಿ ಅಧ್ಯಕ್ಷ ಪ್ರಭುಸ್ವಾಮಿ ಸರಗಣಾಚಾರಿ, ಬಾಗಲಕೋಟೆ ನಗರದಲ್ಲಿ 25 ವರ್ಷಗಳ ಹಿಂದೆ ಜಾನುವಾರು ಸಂತೆ ನಡೆಯುತ್ತಿತ್ತು. ಬಳಿಕ ಆಲಮಟ್ಟಿ ಹಿನ್ನೀರಿನಲ್ಲಿ ಹಳೆ ನಗರ ಮುಳುಗಡೆಯಾದ ಕಾರಣ ಜಾನುವಾರು ಸಂತೆ ಸ್ಥಗಿತವಾಗಿತ್ತು. ಇದರಿಂದ ಈ ಭಾಗದ ರೈತರಿಗೆ ತೊಂದರೆಯಾಗುತ್ತಿರುವುದನ್ನು ಮನಗೊಂಡು 5 ಎಕರೆ ಜಮೀನಿನಲ್ಲಿ ಹೊಸದಾಗಿ ಸಂತೆಯನ್ನು ಮರು ಆಯೋಜನೆ ಮಾಡುತ್ತಿರುವುದಾಗಿ ಹೇಳಿದರು.ಪ್ರಸಕ್ತ ಸಾಲಿನಲ್ಲಿ ಎಪಿಎಂಸಿ ರೂ. 3.5 ಕೋಟಿ ತೆರಿಗೆ ಸಂಗ್ರಹಿಸಿದೆ ಎಂದು ತಿಳಿಸಿದರು.

ಚರಂತಿಮಠದ ಪ್ರಭು ಸ್ವಾಮೀಜಿ, ಬಿಲ್‌ಕೆರೂರ ಬಿಲ್ವಾಶ್ರಮದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ಎಪಿಎಂಸಿ ಉಪಾಧ್ಯಕ್ಷ ಎಸ್.ಎಂ. ಹರಗಬಲ್, ಕಾರ್ಯದರ್ಶಿ ಬಿ.ಆರ್. ಶ್ರಿಹರಿ, ತಾ.ಪಂ. ಅಧ್ಯಕ್ಷೆ ತಾರಾಬಾಯಿ ಲಮಾಣಿ, ಬಿಟಿಡಿಎ ಅಧ್ಯಕ್ಷ ಸಿ.ವಿ.ಕೋಠಿ, ಡಿವೈಎಸ್‌ಪಿ ವೀರನಗೌಡ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ನೂರಾರು ಜಾನುವಾರು: ನಗರದ ಎಪಿಎಂಸಿ ಆವರಣದಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗಿದ್ದ ಜಾನುವಾರು ಮತ್ತು ಕುರಿ ಸಂತೆಗೆ ಸುಮಾರು 200ಕ್ಕೂ ಅಧಿಕ ಎತ್ತುಗಳ ಜೋಡಿ, ಎಮ್ಮೆ, ಕುರಿಗಳನ್ನು ರೈತರು ಮಾರಾಟಕ್ಕೆ ತಂದಿದ್ದರು. ಸಂತೆಗೆ ಆಗಮಿಸಿದ್ದ ರೈತರಿಗೆ ಊಟದ ವ್ಯವಸ್ಥೆ ಹಾಗೂ ಜಾನುವಾರುಗಳಿಗೆ ಮೇವು-ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಮುಂದಿನ ದಿನಗಳಲ್ಲಿ ಪ್ರತಿ ಶುಕ್ರವಾರ ಜಾನುವಾರು ಸಂತೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry