ಸೋಮವಾರ, ಮೇ 10, 2021
21 °C
ಜಿಲ್ಲೆಯ 960 ರೈತರಿಗೆ ಯೋಜನೆ ಲಾಭ

ಕೃಷಿಹೊಂಡ: ಅಧಿಕಾರಿಗಳಿಗೆ ಸವಾಲು

ಪ್ರಜಾವಾಣಿ ವಾರ್ತೆ/ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್‌ಕೆವಿವೈ) ಅಡಿಯಲ್ಲಿ ರೈತರು ಕೃಷಿಹೊಂಡ ನಿರ್ಮಿಸಿಕೊಳ್ಳಲು ಆಯ್ಕೆಯಾದ ರಾಜ್ಯದ ಮೂರು ಜಿಲ್ಲೆಗಳಲ್ಲಿ ಗುಲ್ಬರ್ಗ ಕೂಡಾ ಇದೆ.ಜಿಲ್ಲೆಗೆ ಪ್ರಥಮವಾಗಿ ದೊರೆತ ಯೋಜನೆಯನ್ನು ಯಶಸ್ವಿಗೊಳಿಸುವ ಜವಾಬ್ದಾರಿಯನ್ನು ಜಿಲ್ಲಾ ಜಲಾನಯನ ಅಭಿವೃದ್ಧಿ ಇಲಾಖೆಗೆ ವಹಿಸಲಾಗಿದೆ.ಮಳೆ ಆಶ್ರಯದಲ್ಲಿ ಹೆಚ್ಚು ದ್ವಿದಳ ಧಾನ್ಯ ಬೆಳೆಯುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಈ ಯೋಜನೆ ಪ್ರಕಟಿಸಿದ್ದು, ಒಂದು ಕೃಷಿಹೊಂಡ ನಿರ್ಮಿಸಿಕೊಳ್ಳಲು ರೂ 1.2 ಲಕ್ಷ ವೆಚ್ಚ ತಗುಲುವುದು. ಪ್ರತಿ ಕೃಷಿಹೊಂಡಕ್ಕೆ ಕೇಂದ್ರವು ರೂ 1 ಲಕ್ಷ ಸಹಾಯಧನ ಒದಗಿಸುತ್ತದೆ. ರೂ 20 ಸಾವಿರ ಫಲಾನುಭವಿ ಭರಿಸಬೇಕು. ಬೀದರ್ 450, ವಿಜಾಪುರ 450 ಹಾಗೂ ಗುಲ್ಬರ್ಗದಿಂದ 960 ರೈತ ಫಲಾನುಭವಿಗಳ ಆಯ್ಕೆಗೆ ಅವಕಾಶ ನೀಡಲಾಗಿದೆ.ಕೃಷಿಹೊಂಡ ನಿರ್ಮಿಸಿಕೊಳ್ಳಲು ಆಸಕ್ತಿ ಹೊಂದಿದ ರೈತರಿಂದ ಗುಲ್ಬರ್ಗ ಜಿಲ್ಲಾ ಜಲಾನಯನ ಅಭಿವೃದ್ಧಿ ಇಲಾಖೆ ವಿಧಾನಸಭೆ ಚುನಾವಣೆಗೂ ಮುನ್ನವೇ ಅರ್ಜಿ ಆಹ್ವಾನಿಸಿತ್ತು. ಗುಲ್ಬರ್ಗ ಜಿಲ್ಲೆಯಲ್ಲಿ 3,275 ರೈತರು ಅರ್ಜಿ ಸಲ್ಲಿಸಿದ್ದಾರೆ. ಹೆಚ್ಚು ಅರ್ಜಿಗಳು ಆಳಂದ ತಾಲ್ಲೂಕಿನಿಂದ (1,051) ಹಾಗೂ ಅಫಜಲಪುರ ತಾಲ್ಲೂಕಿನಿಂದ (911) ಬಂದಿವೆ. ಫಲಾನುಭವಿ ಆಯ್ಕೆ ನಿಯಮಗಳ ಪ್ರಕಾರ ಈಗಾಗಲೇ ಅಧಿಕಾರಿಗಳು ತಾತ್ಕಾಲಿಕ ಫಲಾನುಭವಿಗಳ ಪಟ್ಟಿ ತಯಾರಿಸಿದ್ದು, ಕೃಷಿಹೊಂಡ ನಿರ್ಮಾಣಕ್ಕೆ ಅಗತ್ಯ ಭೂಮಿ ಹಾಗೂ ಮಳೆನೀರು ಹರಿದು ಬರುವ ಸಾಧ್ಯತೆಯನ್ನು ಪರಿಶೀಲಿಸಿ ಫಲಾನುಭವಿಗಳ ಪಟ್ಟಿ ಅಂತಿಮಗೊಳಿಸಲಿದ್ದಾರೆ.ಫಲಾನುಭವಿಗಳ ಆಯ್ಕೆಯಲ್ಲಿ ಪ್ರಥಮ ಪ್ರಾಶಸ್ತ್ಯ ಎಸ್‌ಸಿ/ಎಸ್‌ಟಿ ಮಹಿಳೆ ಹಾಗೂ ದ್ವಿತೀಯ ಪ್ರಾಶಸ್ತ್ಯ ಎಸ್‌ಸಿ/ಎಸ್‌ಟಿ ಪುರುಷರಿಗೆ ಇದೆ. ಎಸ್‌ಸಿ/ಎಸ್‌ಟಿ ರೈತರಿಂದ ಒಟ್ಟು 939 ಅರ್ಜಿಗಳು ಬಂದಿವೆ. ನಂತರದ ಪ್ರಾಶಸ್ತ್ಯ ಬಿಪಿಎಲ್ ಕಾರ್ಡ್ ಹೊಂದಿದ ರೈತರಿಗಿದ್ದು, ಅದರಲ್ಲಿ 904 ಅರ್ಜಿಗಳು ಬಂದಿವೆ.ಕೃಷಿಹೊಂಡ ಹೇಗಿರುತ್ತದೆ: 20 ಮೀಟರ್ ಉದ್ದ (66 ಅಡಿ), 20 ಮೀಟರ್ ಅಗಲ ಹಾಗೂ ಮೂರು ಮೀಟರ್ 3 ಮೀಟರ್ (10) ಆಳವಾದ ಹೊಂಡವನ್ನು ಮಳೆನೀರು ಹರಿದುಬರುವ ಜಮೀನಿನ ಭಾಗದಲ್ಲಿ ನಿರ್ಮಿಸಬೇಕು. ಹೊಂಡದ ಮೇಲಿಂದ ಕೆಳಕ್ಕೆ 5.41 ಮೀಟರ್ ಇಳಿಜಾರು ಮಾಡಿಕೊಳ್ಳಬೇಕಾಗುತ್ತದೆ. ಈ ನೀರು ಭೂಮಿಗೆ ಸೇರಿಕೊಳ್ಳದಂತೆ 500 ಮೈಕ್ರಾನ್  ಗುಣಮಟ್ಟದ ಪ್ಲಾಸ್ಟಿಕ್‌ನ್ನು ಹೊಂಡದ ಆವರಣದಲ್ಲಿ ಗಟ್ಟಿಯಾಗಿ ಅಂಟಿಸಬೇಕು.ಹೊಂಡ ನಿರ್ಮಿಸಲು ರೂ 80 ಸಾವಿರ ಧನಸಹಾಯ ಸರ್ಕಾರ ಕೊಡುತ್ತದೆ. ಅಲ್ಲದೆ 500 ಮೈಕ್ರಾನ್ ಗುಣಮಟ್ಟದ ಪಾಲಿಥಿನ್ ಖರೀದಿಗೆ ತಲುಗುವ ರೂ 40 ಸಾವಿರಯಲ್ಲಿ ಶೇ 50ರಷ್ಟು ಅಂದರೆ ರೂ 20 ಸಾವಿರ ಧನಸಹಾಯವನ್ನು ಸರ್ಕಾರ ನೀಡುತ್ತದೆ. ಇನ್ನುಳಿದ ರೂ 20 ಸಾವಿರ ಹಣವನ್ನು ರೈತರು ಭರಿಸಬೇಕಾಗುತ್ತದೆ.ಫಲಾನುಭವಿ ಪಟ್ಟಿ ಸಿದ್ಧಪಡಿಸಿ ಪ್ರಕಟಿಸಿದ ಮೇಲೆ ಕೃಷಿಹೊಂಡ ನಿರ್ಮಿಸಿಕೊಂಡ ರೈತನಿಗೆ ಕೂಡಲೇ ರೂ 1 ಲಕ್ಷ ಸಹಾಯಧನದ ಚೆಕ್ ಅಥವಾ ಹಣ ವರ್ಗಾವಣೆ ಮಾಡಬೇಕೆನ್ನುವ ನಿಯಮವಿದೆ. ಕೃಷಿಹೊಂಡಗಳ ಪರಿಶೀಲನೆ ಕಾರ್ಯ ಎರಡು ವರ್ಷಗಳ ಬಳಿಕ ನಡೆಯಲಿದ್ದು, ಅಲ್ಲಿಯವರಿಗೂ ಬಾಳಿಕೆ ಬರುವ ಕೃಷಿಹೊಂಡ ನಿರ್ಮಿಸಿ ತೋರಿಸುವ ಹೊಣೆ ಇಲಾಖೆಯ ಮೇಲಿದೆ.ಯೋಜನೆ ಅನುಷ್ಠಾನ ತಯಾರಿ: `ಕರ್ನಾಟಕದಲ್ಲಿ ಎಲ್ಲಿಯೂ ವೈಜ್ಞಾನಿಕ ಕೃಷಿಹೊಂಡ ಸಿಗುವುದಿಲ್ಲ. ನೆರೆಯ ಆಂಧ್ರಪ್ರದೇಶದಲ್ಲಿ ಅಚ್ಚುಕಟ್ಟಾಗಿ ಕೃಷಿಹೊಂಡ ನಿರ್ಮಿಸಿದ್ದಾರೆ. ಆಂಧ್ರದ ರಂಗಾರೆಡ್ಡಿ, ಮೇಡಕ್ ಜಿಲ್ಲೆಗಳಿಗೆ ಭೇಟಿಕೊಟ್ಟು ಕೃಷಿಹೊಂಡ ಪರಿಶೀಲಿಸಿದ್ದೇವೆ. ಕೃಷಿಹೊಂಡ ನಿರ್ಮಾಣಕ್ಕೆ ಕುಶಲ ಕಾರ್ಮಿಕರ ಅಗತ್ಯವಿದ್ದು, ಅಲ್ಲಿಂದಲೇ ಕೆಲವು ಕಾರ್ಮಿಕರನ್ನು ಆಹ್ವಾನಿಸಿದ್ದೇವೆ. ಶೀಘ್ರದಲ್ಲೆ ಗುಲ್ಬರ್ಗದಲ್ಲೂ ಕೃಷಿಹೊಂಡ ನಿರ್ಮಾಣ ಆರಂಭಿಸಲಾಗುವುದು. ಎಲ್ಲದಕ್ಕೂ ಮುಂಚೆ ತಾಲ್ಲೂಕುವಾರು ರೈತರಿಗೆ ಇದರ ಬಗ್ಗೆ ಸಂಪೂರ್ಣ ತಿಳಿವಳಿಕೆ ಮೂಡಿಸಲಾಗುವುದು' ಎಂದು ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ ರಿತೇಶ್ ಸುಗೂರ `ಪ್ರಜಾವಾಣಿ'ಗೆ ತಿಳಿಸಿದರು.ಕೃಷಿಹೊಂಡದಲ್ಲಿ ಸಂಗ್ರಹವಾಗುವ ಸುಮಾರು 35 ಲಕ್ಷ ಲೀಟರ್ ಮಳೆನೀರನ್ನು ಬೇಸಿಗೆಯಲ್ಲಿ ರೈತರು ಕೃಷಿಗೆ ಉಪಯೋಗಿಸಿಕೊಂಡು ಉತ್ಪಾದನೆ ಹೆಚ್ಚಿಸಿಕೊಳ್ಳಬಹುದು. ಮಳೆನೀರಿನ ಸಮರ್ಪಕ ಬಳಕೆ ಹಾಗೂ ರೈತರಿಗೆ ನೀರಾವರಿ ಸೌಲಭ್ಯ ಈ ಮೂಲಕ ಒದಗಿಸಿದಂತಾಗುತ್ತದೆ ಎನ್ನುವುದು ಸರ್ಕಾರದ ಚಿಂತನೆಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.