ಮಂಗಳವಾರ, ಜನವರಿ 28, 2020
19 °C

ಕೃಷಿ ಇಲಾಖೆ ಸಾಧನೆಗೆ ಶ್ಲಾಘನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಕೃಷಿ ಇಲಾಖೆ ಕಾರ್ಯಕ್ರಮ ಅನುಷ್ಠಾನದಲ್ಲಿ ಜಿಲ್ಲೆ ಹಾಗೂ ತಾಲ್ಲೂಕು ರಾಜ್ಯದಲ್ಲಿಯೇ ಪ್ರಥಮ. ಆಯಾ ಇಲಾಖೆಗೆ ಬೇಕಾಗುವ ಕಾಮಗಾರಿ ನಡೆಸುವ ಬಗ್ಗೆ ಬೇಡಿಕೆ ಪಟ್ಟಿಯನ್ನು ಶೀಘ್ರವೇ ಆಯಾ ಗ್ರಾಮ ಪಂಚಾಯ್ತಿಗೆ ಸಲ್ಲಿಸಬೇಕು. ಬಸವ ವಸತಿ ಯೋಜನೆ ಅಡಿ ಪ್ರಸಕ್ತ ವರ್ಷಕ್ಕೆ ಮತ್ತೆ 9,000 ಮನೆಗಳ ಮಂಜೂರು. ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಆರಂಭ.-ಇದು ಸೋಮವಾರ ನಡೆದ ದಾವಣಗೆರೆ ತಾಲ್ಲೂಕು ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆಯ ಸಾರಾಂಶ.

ಕೃಷಿ ಇಲಾಖೆಯ ಪ್ರಗತಿಯನ್ನು ತೆರೆದಿಟ್ಟ ಸಹಾಯಕ ಕೃಷಿ ನಿರ್ದೇಶಕ ಎಲ್.ಬಿ. ರಾಜಶೇಖರ್ ಅವರು, ಸರ್ಕಾರದ ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿರುವಲ್ಲಿ ಜಿಲ್ಲೆ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ. ಅದರಲ್ಲಿಯೂ ದಾವಣಗೆರೆ ತಾಲ್ಲೂಕು ಅಗ್ರಸ್ಥಾನ ಪಡೆದಿದೆ ಎಂದರು.ಭೂಚೇತನ ಯೋಜನೆ ಅಡಿ 1,381 ಜನರಿಗೆ  ಧನಸಹಾಯ ನೀಡಲಾಗಿದೆ. 2,809 ಸುವರ್ಣ ಭೂಮಿ ಫಲಾನುಭವಿಗಳನ್ನು ಗುರುತಿಸಲಾಗಿದೆ. ಅದರಲ್ಲಿ 1,380 ಮಂದಿಗೆ ಧನಸಹಾಯ ನೀಡಲಾಗಿದೆ ಎಂದು ವಿವರ ನೀಡಿದರು.ಈ ಮಾಹಿತಿಗೆ ಹರ್ಷ ವ್ಯಕ್ತಪಡಿಸಿ ಪ್ರತಿಕ್ರಿಯಿಸಿದ ಶಾಸಕ ಎಂ. ಬಸರಾಜ ನಾಯ್ಕ ಅವರು, ಅಕ್ಕಡಿ ಬೆಳೆಗಳಿಗೂ ಉತ್ತೇಜನ ನೀಡಬೇಕು. ಸಾವಯವ ಕೃಷಿಗೂ ಪ್ರೋತ್ಸಾಹಿಸಬೇಕು ಎಂದರು.ಶಿಕ್ಷಣ ಇಲಾಖೆ

ಎಲ್ಲ ಸೌಲಭ್ಯ ನೀಡಿಯೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿರುವುದಕ್ಕೆ ಶಾಸಕರು ಕಳವಳ ವ್ಯಕ್ತಪಡಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್. ಅಮಿತ್ ಮಾತನಾಡಿ, ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ (ನರ್ಸರಿ) ಶಾಲೆ ಆರಂಭಿಸಿದರೆ ಆ ಮಕ್ಕಳು ಅಲ್ಲಿಯೇ ವಿದ್ಯಾಭ್ಯಾಸ ಮುಂದುವರಿಸುತ್ತಾರೆ. ಆಯ್ದ ಶಾಲೆಗಳಲ್ಲಿ ಈ ಕ್ರಮವನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಪ್ರೌಢಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಉತ್ತಮವಾಗಿಯೇ ಇದೆ. ಆದರೆ, ಪ್ರಾಥಮಿಕ ಶಾಲೆಗಳಲ್ಲಿ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ ಎಂದು ಹೇಳಿದರು.ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಏ. 2ರಿಂದ ಆರಂಭವಾಗಲಿವೆ. ಅದಕ್ಕಾಗಿ ಈಗಾಗಲೇ ಮಾಯಕೊಂಡ, ಕುಂಟಪಾಲನಹಳ್ಳಿ ಮತ್ತು ನಗರದ ಸೇಂಟ್ ಪಾಲ್ಸ್ ಕಾನ್ವೆಂಟ್ ಶಾಲೆಗಳಲ್ಲಿ ಪರೀಕ್ಷಾ ಪೂರ್ವತಯಾರಿಗೆ ಸಂಬಂಧಿಸಿದಂತೆ ವಿಶೇಷ ತರಬೇತಿ ಕಾರ್ಯಾಗಾರ ನಡೆಸಲಾಗಿದೆ. ಒಟ್ಟಿನಲ್ಲಿ  ಫಲಿತಾಂಶ ವೃದ್ಧಿಗೆ ಇಲಾಖೆ ಪರಿಶ್ರಮ ವಹಿಸುತ್ತಿದೆ ಎಂದರು.ಅನುದಾನರಹಿತ ಶಾಲೆಗಳ ಬಗ್ಗೆ ಶೈಕ್ಷಣಿಕ ಚಟುವಟಿಕೆಗಳ ಮಧ್ಯೆ ಇಲಾಖೆ ಕ್ರಮಗಳಿಂದ ತೊಂದರೆ ಆಗದಂತೆ ಎಚ್ಚರ ವಹಿಸಬೇಕು ಎಂದು ಶಾಸಕರು ಸೂಚಿಸಿದರು.ಎಲ್ಲ ಶಾಲೆಗಳಲ್ಲಿಯೂ ಕನಿಷ್ಠ ಎರಡು ಸಂಪಿಗೆ ಸಸಿಗಳನ್ನು ನೆಡಬೇಕು. ಅವುಗಳನ್ನು ಕಾಳಜಿ ವಹಿಸಿ ಬೆಳೆಸಬೇಕು ಎಂದು ತಾ.ಪಂ. ಇಒ ಪ್ರಭುದೇವ್ ಸೂಚಿಸಿದರು.ಅಂಗನವಾಡಿಗೆ ಹೊಸ ಆಹಾರ 

 ಅಂಗನವಾಡಿ ಕಾರ್ಯಕರ್ತೆಯರಿಗೆ ಹೊಸ ಆಹಾರ ತಯಾರಿಸುವ ಬಗ್ಗೆ ಈಗಾಗಲೇ ತರಬೇತಿ ನೀಡಲಾಗಿದೆ. ಮುಂದಿನ ತಿಂಗಳಿನಿಂದ ಎರಡು ಬಗೆಯ ಆಹಾರ ಒದಗಿಸಲಾಗುತ್ತದೆ. ಅಲ್ಲದೇ ಮಾಯಕೊಂಡ ಮತ್ತಿತರೆಡೆಗಳಲ್ಲಿ ಅತ್ಯಂತ ಕಡಿಮೆ ತೂಕವಿರುವ ಮಕ್ಕಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಸಿಡಿಪಿಒ ವಿವರಿಸಿದರು.ಮಾಯಕೊಂಡ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಬಗ್ಗೆ ಮಾಧ್ಯಮಗಳ ವರದಿ ಹಿನ್ನೆಲೆಯಲ್ಲಿ ಅಲ್ಲಿನ ಕಾಮಗಾರಿ ಬಿಲ್ ತಡೆಹಿಡಿಯುವಂತೆ ಶಾಸಕರು ಸೂಚಿಸಿದರು. ಈಗಾಗಲೇ ್ಙ 26 ಲಕ್ಷವನ್ನು ಪಾವತಿಸಲಾಗಿದೆ. ್ಙ  54 ಲಕ್ಷ ಬಾಕಿ ಇದೆ. ಆದ್ದರಿಂದ ತಾವು ಪರಿಶೀಲನೆ ನಡೆಸಿದ ಬಳಿಕ ಪಾವತಿಸುವಂತೆ ಹೇಳಿದರು.ಮಳಲ್ಕೆರೆ ಸಹಿತ ವಿವಿಧ ಕೆರೆಗಳಲ್ಲಿ ಕಡಿಮೆ ಮೊತ್ತಕ್ಕೆ ಮೀನುಗಾರಿಕೆಗೆ ಟೆಂಡರು ನೀಡಿರುವ ಬಗ್ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ಅದನ್ನು ಮರು ಟೆಂಡರು ಕರೆಯಬೇಕು ಎಂದು ಶಾಸಕರು ಮೀನುಗಾರಿಕಾ ಇಲಾಖೆ ಅಧಿಕಾರಿಗೆ ಸೂಚಿಸಿದರು.ಕಳೆದ ಸಾಲಿನಲ್ಲಿ ತಾಲ್ಲೂಕಿನಲ್ಲಿ 5,363 ಮನೆಗಳನ್ನು ಬಸವ ವಸತಿ ಯೋಜನೆ ಅಡಿ ಮಂಜೂರು ಮಾಡಲಾಗಿದೆ. 903 ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. 1,673 ಮನೆಗಳ ನಿರ್ಮಾಣ ಕಾರ್ಯ ವಿವಿಧ ಹಂತಗಳಲ್ಲಿದೆ.ಅಲ್ಲದೇ ಹೊಸದಾಗಿ 9 ಸಾವಿರ ಮನೆಗಳು ಮಂಜೂರಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು.

ಸಭೆಯಲ್ಲಿ ತಾ.ಪಂ. ಅಧ್ಯಕ್ಷೆ ಸೌಭಾಗ್ಯಮ್ಮ ಈಶ್ವರಪ್ಪ, ಉಪಾಧ್ಯಕ್ಷ ಶಿವರುದ್ರಪ್ಪ, ತಹಶೀಲ್ದಾರ್ ಡಾ.ಬಿ.ಆರ್. ಹರೀಶ್ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)