ಬುಧವಾರ, ಜೂನ್ 16, 2021
27 °C

ಕೃಷಿ ಇಳುವರಿ ಹೆಚ್ಚಳಕ್ಕೆ ವಿಜ್ಞಾನ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ವಿಶ್ವಕ್ಕೆ ಆಹಾರ ಬೆಳೆಗಳನ್ನು ಪೂರೈಸುವ ಶಕ್ತಿ ಇರುವುದು ಭಾರತ, ಚೀನಾ ಮತ್ತು ಬ್ರೆಜಿಲ್‌ ದೇಶಗಳಿಗೆ ಮಾತ್ರ. ಆದರೆ, ಭಾರತ ತನ್ನ ಕೃಷಿಯಲ್ಲಿ ವಿಜ್ಞಾನವನ್ನು ಅಳವಡಿಸುಲ್ಲಿ ಹಿಂದಿರುವುದರಿಂದ ಹೆಚ್ಚು ಇಳುವರಿಯನ್ನು ಪಡೆಯಲಾಗುತ್ತಿಲ್ಲ ಎಂದು ಕೃಷಿ ವಿಜ್ಞಾನಿ ಡಾ.ಎಂ. ಮಹದೇವಪ್ಪ ವಿಷಾದ ವ್ಯಕ್ತಪಡಿಸಿದರು.ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್‌ ಮಹಿಳಾ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ವಿಜ್ಞಾನ ಉಪನ್ಯಾಸ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  ಉತ್ತಮ ವಾಯುಗುಣ ಮತ್ತು ಹವಾಮಾನವನ್ನು ಹೊಂದಿರುವ ಭಾರತ ನೆರೆಯ ಚೀನಾಕ್ಕೆ ಹೋಲಿಸಿದರೆ ಕೃಷಿಯಲ್ಲಿ ವೈಜ್ಞಾನಿಕ ಪ್ರಗತಿ ಸಾಧಿಸಿಲ್ಲ. ಕಳೆದ ದಶಕದಲ್ಲಿ ಹೈಬ್ರಿಡ್‌ ಹತ್ತಿಯನ್ನು ಬಳಸಿದ್ದರಿಂದಲೆ ಹತ್ತಿ ಬೆಳೆಯಲ್ಲಿ ಸ್ವಾವಲಂಭಿತನವನ್ನು ಭಾರತ ಸಾಧಿಸಿತು. ಇಳುವರಿ ಹೆಚ್ಚಿಸಲು ಕುಲಾಂತರಿ ಪದ್ಧತಿಗಳನ್ನು ಅಳವಡಿಸಬೇಕು. ಇಲ್ಲದಿದ್ದರೆ ಕೃಷಿ ವಿಜ್ಞಾನ ನಿಸ್ತೇಜಗೊಳ್ಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.ಭಾರತ 143ಮಿಲಿಯನ್‌ ಹೆಕ್ಟೇರ್‌ ಪ್ರದೇಶದಲ್ಲಿ 260ಮಿಲಿಯನ್‌ ಟನ್‌ ಆಹಾರ ಬೆಳೆಗಳನ್ನು ಉತ್ಪಾದಿಸಿದರೆ, ಚೀನಾ 103ಮಿಲಿಯನ್‌ ಹೆಕ್ಟೇರ್‌ ಪ್ರದೇಶದಲ್ಲಿ 500ಮಿಲಿಯನ್‌ ಟನ್‌ ಆಹಾರ ಬೆಳೆಗಳನ್ನು ಉತ್ಪಾದಿಸುತ್ತಿದೆ. ಇದಕ್ಕೆ ಚೀನಾ ಕೃಷಿ ವಿಜ್ಞಾನದಲ್ಲಿ ಪ್ರಗತಿ ಸಾಧಿಸಿರುವುದೇ ಕಾರಣ ಎಂದು ಅಭಿಪ್ರಾಯಪಟ್ಟರು.ಹಳೆಯ ಕೃಷಿ ಪದ್ಧತಿಗಳಿಗೆ ವೈಜ್ಞಾನಿಕ ಸ್ಪರ್ಶ ನೀಡಿದರೆ ನಮ್ಮ ದೇಶದ ಆಹಾರೋತ್ಪಾದನೆ ಹೆಚ್ಚು ತ್ತದೆ. ರಾಗಿ, ನವಣೆ, ಸಜ್ಜೆ, ಕಾಳುಗಳು ಮುಂತಾದ ಸಿರಿಧಾನ್ಯಗಳನ್ನು ಬೆಳೆಯುವಲ್ಲಿ ರೈತರು ನಿರ್ಲಕ್ಷ್ಯ ತಾಳಿರುವುದಕ್ಕೆ ನವ ಜೀವನಶೈಲಿಯೇ ಕಾರಣ. ವಿಜ್ಞಾನ ಮತ್ತು ಆಧುನಿಕತೆಯನ್ನು ಬಳಸುವುದರ ಜೊತೆಗೆ ಭಾರತೀಯತೆಯನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು. ಕಾಲೇಜಿನ ವತಿಯಿಂದ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ ಡಾ.ಎಂ. ಮಹದೇವಪ್ಪ ಅವರನ್ನು ಸನ್ಮಾನಿಸಲಾಯಿತು.ಪ್ರಾಂಶುಪಾಲ ಪ್ರೊ.ಲೋಕೇಶ ಮೂರ್ತಿ, ಕಾಲೇಜಿನ ಆಡಳಿತಾಧಿಕಾರಿ ಡಾ.ಎಚ್‌.ಸಿ. ಹೊನ್ನಪ್ಪ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಪೂಜಾ ಅನುಧರ್‌ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.