ಶುಕ್ರವಾರ, ಜೂನ್ 25, 2021
26 °C

ಕೃಷಿ ಉತ್ತೇಜನದಿಂದ ದುರ್ಭಿಕ್ಷೆ ದೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುತ್ತೂರು: `ಕೃಷಿ ಕ್ಷೇತ್ರಯಲ್ಲಿ ಸಿಗುವ ಸಂತೃಪ್ತಿ ಬೇರಾವ ಕ್ಷೇತ್ರದಲ್ಲೂ ಸಿಗಲು ಸಾಧ್ಯವಿಲ್ಲ. ಕೃಷಿ  ಉತ್ತೇಜನದಿಂದ ದುರ್ಭಿಕ್ಷೆ ದೂರ ಮಾಡಲು ಸಾಧ್ಯ. ಆದರೆ ನಾವಿಂದು ಕೃಷಿ ಕ್ಷೇತ್ರದ ಉಪೇಕ್ಷೆಯಿಂದ  ಸಮಸ್ಯೆ ಎದುರಿಸುವಂತಾಗಿದೆ~ ಎಂದು ಪುತ್ತೂರು ಉಪವಿಭಾಗಾಧಿಕಾರಿ ಎಂ.ಸುಂದರ ಭಟ್ ಹೇಳಿದರು.ಪುತ್ತೂರು ಉಪವಿಭಾಗ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಕೃಷಿ ವಿಜ್ಞಾನದ ಪ್ರಾಮುಖ್ಯತೆ ಹಾಗೂ ಕೃಷಿ ಭವಿಷ್ಯದ ಕುರಿತು ಮಾಹಿತಿ ನೀಡುವ ನಿಟ್ಟಿನಲ್ಲಿ ಪುತ್ತೂರಿನ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಮಂಗಳವಾರ ನಡೆದ ಕೃಷಿ ಶಿಕ್ಷಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸಂಶೋಧನೆಗಳ ಮೂಲಕ ಕೃಷಿ ಕ್ಷೇತ್ರದಲ್ಲಾಗುವ ಸುಧಾರಣೆಗಳನ್ನು ಅಳವಡಿಸಿಕೊಂಡು ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಯುವ ಜನತೆ ಮುಂದೆ ಬರಬೇಕು ಎಂದು ಅವರು ಕರೆ ನೀಡಿದರು. ಸಂಸ್ಥೆಯ ನಿರ್ದೇಶಕ ಡಾ.ಎಂ.ಜಿ.ಭಟ್ ಅವರು ಮಾತನಾಡಿ ಇಂದಿನ ಯುವ ಪೀಳಿಗೆ ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ಸಾಫ್ಟ್‌ವೇರ್ ಕ್ಷೇತ್ರದೆಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದು, ಕೃಷಿ ಕ್ಷೇತ್ರಕ್ಕೆ ನೀಡಬೇಕಾಗಿದ್ದ ಮಹತ್ವ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು.`ನಮ್ಮ ದೇಶದಲ್ಲಿ ಹೆಚ್ಚುತ್ತಿರುವ ಜನಸ್ಫೋಟಕ್ಕೆ ಪ್ರತಿಯಾಗಿ ಆಹಾರ ಉತ್ಪಾದನೆಯೂ ಅದೇ ವೇಗದಲ್ಲಿ ಹೆಚ್ಚಾಗಬೇಕಿದೆ. ಭವಿಷ್ಯದಲ್ಲಿ ಎದುರಾಗಬಹುದಾದ ಆಹಾರ ಸಮಸ್ಯೆಯನ್ನು ಎದುರಿಸುವ ನಿಟ್ಟಿನಲ್ಲಿ ಕೃಷಿ ವಿಜ್ಞಾನದ ಅಭಿವೃದ್ಧಿ ಅತ್ಯಗತ್ಯವಾಗಿದ್ದು, ಕೃಷಿ ಕ್ಷೇತ್ರದ ಕಡೆಗಣನೆ ಸಲ್ಲದು. ಇತರ ಕ್ಷೇತ್ರಗಳಿಗೆ ಹೋಲಿಸಿದರೆ ಕೃಷಿ ಶಿಕ್ಷಣವನ್ನು ಅತೀ ಕಡಿಮೆ ವೆಚ್ಚದಲ್ಲಿ ಪಡೆಯಬಹುದು~ ಎಂದರು.ದ.ಕ. ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಪದ್ಮಯ್ಯ ನಾಯಕ್ ಅವರು ಮಾತನಾಡಿ ಕೇವಲ ಹಣ ಬಲದಿಂದಲೇ ಈ ಪ್ರಪಂಚ ನಡೆಸಲು ಸಾಧ್ಯವಿಲ್ಲ. ನಾವು ಬದುಕುವ ಪರಿಸರದ ಮಣ್ಣು, ನೀರು, ಗಾಳಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಕೃಷಿಯನ್ನು ಮುನ್ನಡೆಸುವ ಅಗತ್ಯವಿದೆ ಎಂದರು.ಪುತ್ತೂರಿನ ಗೇರು ಸಂಶೋಧನಾ ನಿರ್ದೇಶನಾಲಯ ಪ್ರಧಾನ ವಿಜ್ಞಾನಿಗಳಾದ ಡಾ.ಎಂ.ಗಂಗಾಧರ ನಾಯಕ್, ಡಾ.ಪಿ.ಶಿವರಾಮ ಭಟ್ ಇದ್ದರು.ಬೆಳ್ಳಾರೆಯ ಜ್ಞಾನಗಂಗಾ ವಿದ್ಯಾಸಂಸ್ಥೆ, ಪುತ್ತೂರಿನ ಫಿಲೋಮಿನಾ, ಸುದಾನ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.