ಗುರುವಾರ , ಮೇ 13, 2021
16 °C

`ಕೃಷಿ ಉತ್ಪನ್ನ ರಫ್ತು; ವಿಪುಲ ಅವಕಾಶ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: `ಕೃಷಿ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡಲು ಸಾಕಷ್ಟು ಅವಕಾಶಗಳಿದ್ದು, ಕೃಷಿಕರು ತಂತ್ರಜ್ಞಾನ ಹಾಗೂ ಗುಣಮಟ್ಟ ಕಾಪಾಡಿಕೊಳ್ಳುವ ಕೌಶಲ ಅರಿತುಕೊಳ್ಳಬೇಕು' ಎಂದು ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ವ್ಯಾಪಾರ ಕೇಂದ್ರದ ಉಪನಿರ್ದೇಶಕ ಎಂ.ವಿ.ಶರೀಫ್ ಹೇಳಿದರು.ನಗರದ ಟಿಎಸ್‌ಎಸ್ ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ರಫ್ತು ಜಾಗೃತಿ ಕಾರ್ಯಕ್ರಮದಲ್ಲಿ  ಅವರು ರೈತರಿಗೆ ಮಾಹಿತಿ ನೀಡಿದರು.`ಸ್ಥಳೀಯ ಮಾರುಕಟ್ಟೆ ಹಾಗೂ ರಫ್ತು ವ್ಯಾಪಾರಕ್ಕೆ ವ್ಯತ್ಯಾಸಗಳಿವೆ. ಆದರೆ ತಂತ್ರಗಾರಿಕೆ, ವಸ್ತುವಿನ ಉತ್ಕೃಷ್ಟ ಗುಣಮಟ್ಟ, ಆಕರ್ಷಕ ಪ್ಯಾಕಿಂಗ್ ಮೂಲಕ ರಫ್ತು ಉದ್ಯೋಗದಲ್ಲಿ ಆದಾಯ ಗಳಿಸಿಕೊಳ್ಳಬಹುದು.ರಫ್ತು ವ್ಯವಹಾರ ದೇಶದ ಆರ್ಥಿಕ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಅವಕಾಶವನ್ನು ಹೆಚ್ಚಿಸುತ್ತದೆ. ಭಾರತ ರಫ್ತು ಮಾಡುವ ದೇಶಗಳಲ್ಲಿ 19ನೇ ಸ್ಥಾನದಲ್ಲಿದ್ದರೆ ಆಮದು ಮಾಡಿಕೊಳ್ಳುವಲ್ಲಿ 13ನೇ ಸ್ಥಾನದಲ್ಲಿದೆ. ಚೀನಾ, ಅಮೇರಿಕಾ, ಜರ್ಮನಿ ರಫ್ತಿನಲ್ಲಿ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿವೆ. ದೇಶದ ಒಟ್ಟು ರಫ್ತು ಪ್ರಮಾಣದಲ್ಲಿ ಶೇ 12ರಷ್ಟು ಕರ್ನಾಟಕದ ಪಾಲಿದೆ' ಎಂದರು.ವ್ಯಾಪಾರ ಕುಟುಂಬದ ಹಿನ್ನೆಲೆಯಿಂದ ಕೃಷಿ ಕ್ಷೇತ್ರಕ್ಕೆ ಕಾಲಿಟ್ಟು ಯಶಸ್ವಿ ಕೃಷಿಕರಾಗಿ ರಫ್ತು ವ್ಯವಹಾರದಲ್ಲಿ ಲಾಭಗಳಿಸಿದ ಪ್ರಗತಿಪರ ಕೃಷಿಕ ರಾಮು ಕಿಣಿ ತಮ್ಮ ಅಭಿಪ್ರಾಯ ಹಂಚಿಕೊಂಡರು.`ತಾಳ್ಮೆ, ಗುಣಮಟ್ಟದ ವಸ್ತು, ವೈಜ್ಞಾನಿಕ ದೃಷ್ಟಿಕೋನ ಹಾಗೂ ವ್ಯಾಪಾರಿ ಮನೋಭಾವ ಹೊಂದಿದ್ದರೆ ಯಶಸ್ವಿಯಾಗಿ ರಫ್ತು ಉದ್ಯಮ ನಡೆಸಲು ಸಾಧ್ಯವಿದೆ.2005ರಲ್ಲಿ ವೆನಿಲ್ಲಾ ಗಿಡಗಳನ್ನು ವಿದೇಶಕ್ಕೆ ರಫ್ತು ಮಾಡಿ ಸೈ ಎನಿಸಿಕೊಂಡಿದ್ದೇನೆ. ವೆನಿಲ್ಲಾ ಬೀನ್ಸ್ ಸಂಸ್ಕರಿಸಿ ರಫ್ತು ಮಾಡಿದರೆ ಹಸಿ ಬೀನ್ಸ್‌ನ ಮೂರುಪಟ್ಟು ದರ ಪಡೆದುಕೊಳ್ಳಬಹುದು. ಕೃಷಿ ಕ್ಷೇತ್ರಕ್ಕೆ ಕೂಲಿಗಳ ಕೊರತೆಯೆಂದು ಕೊರಗುವುದರಲ್ಲಿ ಅರ್ಥವಿಲ್ಲ. ಪರಿಹಾರ ಯೋಚಿಸಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ ದೊಡ್ಡ ಮೊತ್ತದ ಲಾಭಗಳಿಸಬಹುದು' ಎಂದು ಅವರು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಅಧ್ಯಕ್ಷ ಶಾಂತಾರಾಮ ಹೆಗಡೆ ಮಾತನಾಡಿ, `ಟಿಎಸ್‌ಎಸ್ ಸಿಹಿ ಅಡಿಕೆ ಪುಡಿಯನ್ನು ದುಬೈ ಮೂಲಕ ರಫ್ತು ಮಾಡಲು ಸಿದ್ಧತೆ ನಡೆಸಿದೆ' ಎಂದರು.ಅಧ್ಯಕ್ಷತೆ ವಹಿಸಿದ್ದ ಗ್ರಾಹಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜಿ.ಜಿ.ಹೆಗಡೆ, `ರಫ್ತು ವ್ಯವಹಾರ ನಡೆಸಲು ಈ ಭಾಗದಲ್ಲಿ ಮೂಲ ಸೌಕರ್ಯದ ಕೊರತೆ ಇದ್ದು, ಕೋಲ್ಡ್‌ಸ್ಟೋರೇಜ್, ಸಂಪರ್ಕ ಸಾಧನಗಳ ಕೊರತೆ ಇದೆ. ಕಾರವಾರ ಬಂದರನ್ನು ಅಭಿವೃದ್ಧಿಪಡಿಸಿದರೆ ಉದ್ಯಮಿಗಳಿಗೆ ಅನುಕೂಲವಾಗುತ್ತದೆ' ಎಂದರು.ಎಪಿಎಂಸಿ ಅಧ್ಯಕ್ಷ ನರೇಶ ಭಟ್ಟ, ಟಿಎಸ್‌ಎಸ್ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ, ಕೈಗಾರಿಕಾ ಕೇಂದ್ರ ಧಾರವಾಡದ ಜಂಟಿ ನಿರ್ದೇಶಕ ವೀರಣ್ಣ ಎಚ್.ಎಸ್., ತೋಟಗಾರಿಕಾ ಇಲಾಖೆ ಅಧಿಕಾರಿ ಅಣ್ಣಪ್ಪ ನಾಯ್ಕ, ಕದಂಬ ಮಾರ್ಕೆಟಿಂಗ್ ವ್ಯವಸ್ಥಾಪಕ ವಿಶ್ವೇಶ್ವರ ಭಟ್ಟ ಉಪಸ್ಥಿತರಿದ್ದರು. ಜಿ.ವಿ.ಜೋಶಿ ಸ್ವಾಗತಿಸಿದರು. ಮುರಳೀಧರ ದೀಕ್ಷಿತ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.