ಕೃಷಿ ಉಪಕರಣಗಳ ಪೂರೈಕೆ ಸ್ಥಗಿತ: ಆತಂಕದಲ್ಲಿ ರೈತ

7

ಕೃಷಿ ಉಪಕರಣಗಳ ಪೂರೈಕೆ ಸ್ಥಗಿತ: ಆತಂಕದಲ್ಲಿ ರೈತ

Published:
Updated:

ಶಿವಮೊಗ್ಗ:  ಕೃಷಿ ಕ್ಷೇತ್ರದ ಬಗ್ಗೆ ಸರ್ಕಾರಕ್ಕೆ ಇರುವ ನಿರ್ಲಕ್ಷ್ಯಕ್ಕೆ ಇದು ಕನ್ನಡಿ!

ಸರ್ಕಾರ, ಖಾಸಗಿ ಕಂಪೆನಿಗಳಿಗೆ ನೀಡಬೇಕಾದ ಹಣ ಬಾಕಿ ಉಳಿಸಿಕೊಂಡಿದ್ದರಿಂದ ಕೃಷಿ ಯಂತ್ರೋಪಕರಣಗಳ ಪೂರೈಕೆ ಸ್ಥಗಿತಗೊಂಡಿದೆ. ಇದರಿಂದ ರೈತರು ನಾಲ್ಕು ತಿಂಗಳಿಂದ ಯಂತ್ರೋಪಕರಣಗಳಿಗೆ ಪರದಾಡುತ್ತಿದ್ದಾರೆ.ಕೃಷಿ ಚಟುವಟಿಕೆಗಳಿಗೆ ಅಗತ್ಯವಾಗಿ ಬೇಕಾಗುವ ಉಪಕರಣಗಳನ್ನು ಸಬ್ಸಿಡಿ ದರದಲ್ಲಿ ರೈತರಿಗೆ ನೀಡುವ ಮಹತ್ವಾಕಾಂಕ್ಷಿ ಯೋಜನೆ ‘ಕೃಷಿ ಯಾಂತ್ರೀಕರಣ ಯೋಜನೆ’. ಸಾಂಪ್ರದಾಯಿಕ ಕೃಷಿ ಪದ್ಧತಿಯಿಂದ ಸಮಯ ಸಾಕಷ್ಟು ವ್ಯಯವಾಗುತ್ತದೆ. ಜತೆಗೆ, ಕೂಲಿಕಾರ್ಮಿಕರೂ ಸಿಗುವುದಿಲ್ಲ. ಇದರಿಂದ ಕೃಷಿ ಚಟುವಟಿಕೆಗಳನ್ನು ಸಕಾಲದಲ್ಲಿ ನಿರ್ವಹಿಸಲು ಆಗುವುದಿಲ್ಲ ಎಂಬ ದೂರದೃಷ್ಟಿಯಿಂದ ಈ ಯೋಜನೆ ಜಾರಿಗೆ ಬಂದಿದೆ.ಅಕ್ಟೋಬರ್‌ನಿಂದ ಸ್ಥಗಿತ: ಸರ್ಕಾರ, ಯಂತ್ರೋಪಕರಣಗಳನ್ನು ಪೂರೈಸುವ ಸಂಬಂಧ ಖಾಸಗಿ ಕಂಪೆನಿಗಳ  ಜತೆ ಕರಾರು ಒಪ್ಪಂದ ಮಾಡಿಕೊಂಡು ಹಣ ಪಾವತಿಸುತ್ತದೆ. ಆದರೆ, ಸರ್ಕಾರ ಜಿಲ್ಲೆಯಲ್ಲಿ ಸುಮಾರು ್ಙ 3.80ಕೋಟಿ ಬಾಕಿ ಉಳಿಸಿಕೊಂಡಿದ್ದರಿಂದ ಕಂಪೆನಿಗಳು ಉಪಕರಣಗಳ ಸರಬರಾಜನ್ನು ಸ್ಥಗಿತಗೊಳಿಸಿವೆ. ಅಕ್ಟೋಬರ್‌ನಿಂದ ಈವರೆಗೆ ಒಂದೇ ಒಂದು ಯಂತ್ರೋಪಕರಣ ವಿತರಣೆಯಾಗಿಲ್ಲ.ಯೋಜನೆ ಅಡಿ ಟ್ರ್ಯಾಕ್ಟರ್ ಟಿಲ್ಲರ್, ಬಹು ಒಕ್ಕಣಿ ಯಂತ್ರ, ಕಟಾವು ರೀಪರ್, ನಾಟಿ ಮಾಡುವ, ಕಳೆ ತೆಗೆಯುವ ಯಂತ್ರ ಸೇರಿದಂತೆ ಹತ್ತಾರು ಉಪಕರಣಗಳನ್ನು ವಿತರಿಸಲಾಗುತ್ತದೆ.ಇದಕ್ಕಾಗಿ ರೈತರು ಪಹಣಿ ಪತ್ರ ನೀಡಿದರೆ, ಕೃಷಿ ಉಪಕರಣಗಳಿಗೆ 5ಸಾವಿರದಿಂದ 40ಸಾವಿರ ರೂಗಳವರೆಗೆ ಸಬ್ಸಿಡಿ ನೀಡುತ್ತದೆ. ಈ ಯೋಜನೆಗೆ ರೈತರಿಂದ ಉತ್ತಮ ಸ್ಪಂದನೆಯೂ ಸಿಕ್ಕಿದೆ. ರಾಜ್ಯದಲ್ಲಿ ಅತಿ ಹೆಚ್ಚು ಕೃಷಿ ಯಂತ್ರೋಪಕರಣಗಳನ್ನು ಬಳಕೆ ಮಾಡುತ್ತಿರುವ ಹೆಗ್ಗಳಿಕೆ ಶಿವಮೊಗ್ಗಕ್ಕಿದೆ. ಆದರೆ, ಈ ಯೋಜನೆ ಈಗ ಸಂಪೂರ್ಣ ನೆನೆಗುದಿಗೆ ಬಿದ್ದಿದೆ.ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಇಲ್ಲಿಯವರೆಗೂ ವಿವಿಧ ಉಪಕರಣಗಳಿಗಾಗಿ 2,498 ಜನ ರೈತರು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಶಿವಮೊಗ್ಗದಿಂದ 520, ಶಿಕಾರಿಪುರ 512, ಸೊರಬ 420, ಭದ್ರಾವತಿ 450, ಹೊಸನಗರ 220, ಸಾಗರ 210, ತೀರ್ಥಹಳ್ಳಿಯಿಂದ 168 ಅರ್ಜಿಗಳು ಬಂದಿವೆ. ಈ ಎಲ್ಲ ರೈತರು ನಿತ್ಯ ಕೃಷಿ ಇಲಾಖೆಗೆ ಅಲೆದಾಡುತ್ತಿದ್ದಾರೆ. ಆದರೆ, ಎಲ್ಲರಿಗೂ ಕೃಷಿ ಇಲಾಖೆ ಒಂದೊಂದು ಸಬೂಬು ಹೇಳಿ ಕಳುಹಿಸುತ್ತಿದೆ.ರೈತರ ಅಸಹಾಯಕತೆ: ಮುಖ್ಯಮಂತ್ರಿಗಳ ಜಿಲ್ಲೆಯಲ್ಲಿಯೇ ಈ ಪರಿಸ್ಥಿತಿಯಾದರೆ ಉಳಿದೆಡೆ ಹೇಗೆ? ಕೃಷಿ ಚಟುವಟಿಕೆಗಳಿಗೆ ಈಗ ತುರ್ತಾಗಿ ರೈತರಿಗೆ ಎಚ್.ಡಿ. ಪೈಪ್‌ಗಳು, ಭತ್ತ ಕೊಯ್ಯುವ ಯಂತ್ರ ಬೇಕಿದೆ. ಆದರೆ, ಕೃಷಿ ಇಲಾಖೆ ದಿನಕ್ಕೊಂದು ನೆಪ ಹೇಳಿಕಳುಹಿಸುತ್ತಿದೆ. ಕೃಷಿ ಚಟುವಟಿಕೆಗಳಿಗೆ ತೀವ್ರ ಸಮಸ್ಯೆಯಾಗಿದೆ ಎಂದು ಕೃಷಿಕ ಸಮಾಜ ಹೊಸನಗರ ತಾಲ್ಲೂಕು ಘಟಕದ ಸದಸ್ಯ ರಾಜು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.ಸರ್ಕಾರ ಮತ್ತು ಖಾಸಗಿ ಕಂಪೆನಿಗಳ ನಡುವೆ ಈ ಸಂಬಂಧ ಕರಾರು ಒಪ್ಪಂದ ಆಗಬೇಕಿದೆ. ಅಷ್ಟಕ್ಕೂ ಉಪಕರಣಗಳ ವಿತರಣೆಯಲ್ಲಿ ಕೃಷಿ ಇಲಾಖೆಯ ಲೋಪವಿಲ್ಲ. ಉನ್ನತ ಮಟ್ಟದಲ್ಲಿ ಯೋಜನೆಗೆ ಮತ್ತೆ ಚಾಲನೆ ದೊರೆಯಬೇಕಿದೆ ಎನ್ನುತ್ತಾರೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಶಿವಮೂರ್ತಪ್ಪ.ಈಗಾಗಲೇ ಸರ್ಕಾರಕ್ಕೆ ರೂ 5ಕೋಟಿ ಪ್ರಸ್ತಾವ  ಸಲ್ಲಿಸಲಾಗಿದೆ. ಶೀಘ್ರ ಬಿಡುಗಡೆಯಾಗಲಿದ್ದು, ಉಪಕರಣಗಳ ವಿತರಣೆ ಕಾರ್ಯ ಆರಂಭವಾಗಲಿದೆ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ವಿಜಯಕುಮಾರ ಚಂದರಗಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry