ಕೃಷಿ ಕಾರ್ಮಿಕರ ಕೊರತೆ: ಕಳೆ ತೆಗೆಯಲೂ ಆಳಿಲ್ಲ!

7

ಕೃಷಿ ಕಾರ್ಮಿಕರ ಕೊರತೆ: ಕಳೆ ತೆಗೆಯಲೂ ಆಳಿಲ್ಲ!

Published:
Updated:

ಲಕ್ಷ್ಮೇಶ್ವರ: ಸಕಾಲಕ್ಕೆ ದೊರೆಯದ ಕಾರ್ಮಿಕರು ಒಂದೆಡೆಯಾದರೆ ಮತ್ತೊಂದೆಡೆ ಮುಗಿಲು ಮುಟ್ಟಿರುವ ಕಾರ್ಮಿಕರ ಕೂಲಿಯಿಂದಾಗಿ ರೈತರು ಕಂಗಾಲಾಗಿದ್ದಾರೆ.ಈ ಬಾರಿ ಹೇಳಿಕೊಳ್ಳುವಷ್ಟು ಉತ್ತಮ ಮಳೆ ಆಗದಿದ್ದರೂ ಆಗಾಗ ಸುರಿದ ಜಿಟಿ ಮಳೆಯಿಂದಾಗಿ ಬಳ್ಳಿ ಶೇಂಗಾ ಉತ್ತಮವಾಗಿದೆ. ಆದರೆ ಕಳೆದ ಇಪ್ಪತ್ತು ದಿನಗಳ ಹಿಂದೆ ಸುರಿದ ಹನಿ ಹನಿ ಮಳೆಗೆ ಇಡೀ ಶೇಂಗಾ ಹೊಲಗಳ ತುಂಬೆಲ್ಲ ಕಳೆ ಬೆಳೆದಿದ್ದು ಅದರ ಮಧ್ಯೆ ಶೇಂಗಾ ಬೆಳೆಯೇ ಕಾಣದಂತಾಗಿದೆ. ಹೀಗಾಗಿ ರೈತರು ಕಳೆ ತೆಗೆಸುವ ಸಲು ವಾಗಿ ಹೆಣಗಾಡುತ್ತಿದ್ದಾರೆ.ಪ್ರತಿ ವರ್ಷದಂತೆ ಈ ವರ್ಷವೂ ಸಾವಿರಾರು ಹೆಕ್ಟೇರ್‌ನಲ್ಲಿ ಬಳ್ಳಿ ಶೇಂಗಾ ಬಿತ್ತನೆಯಾಗಿದೆ. ಆದರೆ ಕಳೆ ಸಮಸ್ಯೆ ಯಿಂದಾಗಿ ಇಳುವರಿಯಲ್ಲಿ ಕುಸಿತ ಆಗುವ ಸಂಭವ ಎದುರಾಗಿದ್ದು ಕಳೆ ತೆಗೆಸಲು ರೈತರು ಕಾರ್ಮಿಕರ ಮೊರೆ ಹೋಗುತ್ತಿದ್ದಾರೆ. ಆದರೆ ತಾಲ್ಲೂಕಿನ ಎಲ್ಲ ಹೊಲಗಳಲ್ಲಿ ಕಳೆ ಹೆಚ್ಚಿದ್ದು ಈಗ ಕಾರ್ಮಿಕರಿಗೆ ಭಾರಿ ಬೇಡಿಕೆ ಬಂದಿದೆ. ಹೀಗಾಗಿ ಅವರು ಎಕರೆಗೆ ಇಂತಿಷ್ಟು ಕೂಲಿ ಎಂದು ಮೊದಲೇ ಹೊಂದಿಸಿಕೊಳ್ಳುತ್ತಿದ್ದಾರೆ. ಸದ್ಯ ಕಾರ್ಮಿಕರ ಕೂಲಿಯಲ್ಲಿ ಸ್ವಲ್ಪ ಹೆಚ್ಚಳವಾಗಿದ್ದು ಇದು ರೈತರಿಗೆ ತಲೆನೋವಾಗಿ ಪರಿಣಿಮಿಸಿದೆ.ದಿನದ ಪಗಾರಕ್ಕೆ ಕಾರ್ಮಿಕರು ಸಿಗುತ್ತಿಲ್ಲ. ಹಳ್ಳಿಗಳಲ್ಲಂತೂ ಕಾರ್ಮಿಕರು ಗುಂಪುಗೂಡಿ ಕೆಲಸಕ್ಕೆ ಬರಲು ಒಪ್ಪುತ್ತಿದ್ದಾರೆ. ಕಾರ್ಮಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಎಲ್ಲರಿಗೂ ಪಗಾರ ಬೀಳುವ ಹಾಗೆ ಅವರು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕಾರ್ಮಿಕರ ಕೂಲಿ ಹೆಚ್ಚಳ ಆಗಿರುವುದು ರೈತರಿಗೆ ಅದರಲ್ಲಿಯೂ ಸಣ್ಣ ರೈತರಿಗೆ ಬಹಳ ತೊಂದರೆ ಆಗುತ್ತಿದ್ದು ಕೆಲ ಬಡ ರೈತರು ಕಳೆ ತೆಗೆಸುವುದನ್ನೇ ಕೈ ಬಿಟ್ಟಿದ್ದಾರೆ.`ಶೇಂಗಾ ಹೊಲದ ತುಂಬಾ ಕಸಾ ಬೆಳದೈತ್ರೀ. ಅದನ್ನು ತೆಗೆಸಬೇಕಂದ್ರ ಭಾಳಷ್ಟು ಆಳು ಬೇಕು. ಆದ್ರ ಈಗ ಆಳಿನ ಪಗಾರ ಭಾಳ ಆಗೈತಿ. ಹಿಂಗಾಗಿ ಕಸಾ ತೆಗ್ಯಾಕ ಸಾವಿರಾರು ರೂಪಾಯಿ ಎಲ್ಲಿಂದ ತರಬೇಕಪಾ ಅನ್ನ ಚಿಂತಿ ಕಾಡಾಕತ್ತೈತಿ' ಎಂದು ಲಕ್ಷ್ಮೇಶ್ವರದ ಯುವ ರೈತ ಬಸವರಾಜ ಮೆಣಸಿನಕಾಯಿ ಹೇಳುತ್ತಾರೆ.`ಮದ್ಲ ಆಳಿನ ಸಮಸ್ಯಾ ಇರಲಿಲ್ಲ. ಆದ್ರ ಈಗ ದುಡ್ಯಾಕ ಆಳ ಬರವಲ್ವು. ಹೊಲದಾಗ ಕಸಾ ಬೆಳದಿದ್ದ ನೋಡಿದ್ರ ಎಷ್ಟ ಮಂದಿ ಆದ್ರೂ ಅದನ್ನ ಕೀಳಾಕ ಸಾಕಾಂಗಿಲ್ಲ' ಎಂದು ಶಿಗ್ಲಿಯ ಸಾವಯವ ಕೃಷಿಕ ಶಿವಾನಂದ ಮೂಲಿಮನಿ ಹೇಳುತ್ತಾರೆ. `ಕೂಲಿ ಭಾಳ ಅಂತಾ ಹೇಳ್ತಾರ‌್ರೀ. ಆದರ ಪ್ಯಾಟ್ಯಾಗ ಯಾವ ಸಾಮಾನ ಸಸ್ತಾ ಐತಿ ಹೇಳ್ರೀ' ಎಂದು ರೈತ ಕಾರ್ಮಿಕರಾದ ಲಕ್ಷ್ಮವ್ವ ಪ್ರಶ್ನಿಸುತ್ತಾರೆ. ಇನ್ನು ಗ್ರಾಮಾಂತರ ಪ್ರದೇಶಗಳಲ್ಲಿ ರೈತರು ಹೆಚ್ಚಾಗಿ ಕೃಷಿ ಕಾರ್ಮಿಕರ ಸಮಸ್ಯೆ ಎದುರಿಸುತ್ತಿದ್ದಾರೆ.ಉದ್ಯೋಗ ಖಾತ್ರಿ ಯೋಜನೆ ಬಂದ ಮೇಲೆ ಕೂಲಿಕಾರರ ಕೊರತೆಯ ಬಿಸಿ ಕೃಷಿ ಕ್ಷೇತ್ರಕ್ಕೆ ತಟ್ಟಿದ್ದು  ಹಳ್ಳಿಗಳಲ್ಲಿ ಕೂಲಿಕಾರರು ಹೊಲಕ್ಕೆ ಬರುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಇದಕ್ಕೆ ನಾನಾ ಕಾರಣಗಳೂ ಇವೆ. ಹೀಗಾಗಿ ಎಷ್ಟೋ ಹೊಲಗಳು ಬಿತ್ತನೆ ಆಗದೆ ಬಿಕೋ ಎನ್ನುತ್ತಿವೆ. ಖಾತ್ರಿ ಯೋಜನೆಯಡಿ ಹೆಸರು ನೋಂದಾ ಯಿಸಿಕೊಂಡ ಕಾರ್ಮಿಕರು ರೈತರ ಹೊಲಗಳಲ್ಲಿಯೂ ದುಡಿಯು ವಂತೆ ಆದರೆ ಮಾತ್ರ ಕೃಷಿ ಕ್ಷೇತ್ರ ಉಳಿಯು ತ್ತದೆ. ಇಲ್ಲದಿದ್ದರೆ ಕಾರ್ಮಿಕರ ಸಮಸ್ಯೆ ಯಿಂದಾಗಿ ಒಕ್ಕಲುತನ ಮೂಲೆ ಗುಂಪಾದರೆ ಅದರಲ್ಲಿ ಅಚ್ಚರಿ ಇಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry