ಕೃಷಿ ಕ್ಷೇತ್ರ ರಕ್ಷಿಸಿ ಆರ್ಥಿಕತೆ ಹೆಚ್ಚಿಸಬೇಕು

7

ಕೃಷಿ ಕ್ಷೇತ್ರ ರಕ್ಷಿಸಿ ಆರ್ಥಿಕತೆ ಹೆಚ್ಚಿಸಬೇಕು

Published:
Updated:

ಚಿತ್ರದುರ್ಗ: ಕೃಷಿ ಉತ್ಪಾದನೆ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು, ಮನುಷ್ಯನ ಉಳಿವಿಗಾಗಿ ಭೂಮಿ, ರೈತ ಸಮುದಾಯ ಮತ್ತು ಕೃಷಿ ಕ್ಷೇತ್ರವನ್ನು ರಕ್ಷಿಸುವ ಪ್ರಯತ್ನಗಳು ನಡೆಯುವುದು ಅತ್ಯಂತ ಅಗತ್ಯವಿದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಸ್. ಇಂದುಮತಿ ಪ್ರತಿಪಾದಿಸಿದರು.ಎಸ್‌ಜೆಎಂ ಮಹಿಳಾ ಕಲಾ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಹಾಗೂ ದಾವಣಗೆರೆ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕರ ಸಂಘದ  ಆಶ್ರಯದಲ್ಲಿ ಶನಿವಾರ `ಆಹಾರ ಭದ್ರತೆ ಮತ್ತು ಹಣದುಬ್ಬರ~ ಕುರಿತು ಆಯೋಜಿಸಿದ್ದ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಭಾಷಣ ಮಾಡಿದರು.ಜಪಾನ್ ಆರ್ಥಿಕತೆಯಲ್ಲಿ ಮಹತ್ವದ ಸಾಧನೆ ಮಾಡಿದ್ದರೂ ಆಹಾರ ಉತ್ಪಾದನೆಗೆ ಹರಸಾಹಸ ಮಾಡುತ್ತಿದೆ. ಪ್ರಪಂಚದ ಜನಸಂಖ್ಯೆ ಇಂದು 6 ಬಿಲಿಯನ್‌ಗೆ ತಲುಪಿದೆ. 60 ವರ್ಷಗಳ ಹಿಂದೆ 50 ಮಿಲಿಯನ್ ಪೌಂಡ್ ಆಹಾರ ಉತ್ಪಾದನೆಯಾಗುತ್ತಿತ್ತು. ಇಂದು 230 ಮಿಲಿಯನ್ ಪೌಂಡ್ ಉತ್ಪಾದನೆಯಾಗುತ್ತಿದೆ.

 

ಆದರೆ, ಇಂದು ನಿರೀಕ್ಷೆಗೂ ಮೀರಿ ಆಹಾರ ವ್ಯರ್ಥವಾಗುತ್ತಿದೆ. ಅಮೆರಿಕಾ ದೇಶದಲ್ಲಿ ಉತ್ಪಾದನೆಯಿಂದ ಊಟದ ತಟ್ಟೆಗೆ ಬರುವ ವೇಳೆಗೆ ಶೇ. 70ರಷ್ಟು ಆಹಾರ ವ್ಯರ್ಥವಾಗುತ್ತದೆ. ಇದರಿಂದ ಆಹಾರ ವ್ಯರ್ಥ ಆಗುತ್ತಿರುವುದರಿಂದ ಹಣದುಬ್ಬರವೂ ಹೆಚ್ಚುತ್ತಿದೆ. ಜತೆಗೆ ಜನರ ಆಹಾರ ಸೇವನೆಯ ಪದ್ಧತಿಯಲ್ಲಿ ಬದಲಾವಣೆ ಕಾಣುತ್ತಿದ್ದೇವೆ. ಇದರಿಂದಾಗಿ ಅಮೆರಿಕದಲ್ಲಿ ಶೇ. 60ರಿಂದ 70ರಷ್ಟು ಸ್ಥೂಲಕಾಯದ ಜನರಿದ್ದಾರೆ ಎಂದು ವಿವರಿಸಿದರು.ಬೇಡಿಕೆ ಮತ್ತು ಪೂರೈಕೆ ಸಮತೋಲನದಲ್ಲಿರಬೇಕು. ಅಸಮತೋಲನ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ. ಆರ್ಥಿಕ ಮುಗ್ಗಟ್ಟು ಹಣದುಬ್ಬರಕ್ಕೆ ಕಾರಣವಾಗುತ್ತದೆ. ಹಣದುಬ್ಬರವಾದಾಗ ಹಣದ ಮೌಲ್ಯ ಕುಗ್ಗುತ್ತದೆ. ಬಡ್ಡಿದರ ಕಡಿಮೆಯಾದರೂ ಬಂಡವಾಳ ಹೂಡದ ಪರಿಸ್ಥಿತಿ ಉಂಟಾಗುತ್ತದೆ. ಹಣದುಬ್ಬರ ಹೆಚ್ಚಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ. ಹಣದುಬ್ಬರ ಹೆಚ್ಚಾದಾಗ ಆರ್ಥಿಕತೆ ಕುಸಿಯುತ್ತದೆ ಎಂದು ವಿವರಿಸಿದರು.ನೈಸರ್ಗಿಕ ಸಂಪನ್ಮೂಲಗಳನ್ನು ಅವ್ಯಾಹತವಾಗಿ ಬಳಸಲಾಗುತ್ತಿದೆ. ಕೃಷಿ ಭೂಮಿ ಕಳೆದುಕೊಂಡರೆ  ಪರಾವಲಂಬಿಯಾಗುವ ಸ್ಥಿತಿಗೆ ತಲುಪಬೇಕಾಗುತ್ತದೆ. ನೀರು ಸಹ ಮುಂದಿನ ದಿನಗಳಲ್ಲಿ ಅತ್ಯಂತ ಶ್ರೇಷ್ಠವಾಗಲಿದೆ. ನೀರಿಗಾಗಿ ಯುದ್ಧ ನಡೆಯುವ ಪರಿಸ್ಥಿತಿ ಸೃಷ್ಟಿಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.ವಿಚಾರ ಸಂಕಿರಣ ಉದ್ಘಾಟಿಸಿದ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು, ಹಣದುಬ್ಬರ ಅನಾರೋಗ್ಯಕರ ಬೆಳವಣಿಗೆಯಾಗಿದ್ದು, ಇದನ್ನು ತಡೆಯಲು ಚಿಂತನೆ ಮಾಡಬೇಕು. ಹಣದುಬ್ಬರಕ್ಕೆ ಬಲಿ ಆಗುತ್ತಿರುವವರು ಜನಸಾಮಾನ್ಯರು. ಜನರಲ್ಲಿ ಹಣವಿದ್ದರೂ ಕೊಳ್ಳುವಂತ ಪ್ರವೃತ್ತಿ ಕಡಿಮೆಯಾದಾಗ ಹಣದುಬ್ಬರಕ್ಕೆ ಮುಖ್ಯ ಕಾರಣವಾಗುತ್ತದೆ. ಹಣ ಕೂಡಿಡುವ ಪ್ರವೃತ್ತಿ ನಮ್ಮಲ್ಲಿ ಬೆಳೆಯುತ್ತಿರುವುದು ಇದಕ್ಕೆ ಕಾರಣ ಎಂದು ನುಡಿದರು.ಮಧ್ಯಮ ವರ್ಗದ ಜನ ಕೊಳ್ಳಲು ಹಿಂದೇಟು ಹಾಕುತ್ತಾರೆ. ಕೊಳ್ಳುವ ಆಸಕ್ತಿ ಇರುವವರಿಗೆ ಹಣ ಇರುವುದಿಲ್ಲ. ಆದ್ದರಿಂದ ನೀತಿ ನಿರೂಪಕರು ಈ ಬಗ್ಗೆ ಚಿಂತನೆ ಮಾಡಬೇಕು ಎಂದರು.ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಪ್ರೊ.ಎಸ್.ಎಚ್. ಪಟೇಲ್, ಕಾರ್ಯ ನಿರ್ವಾಹಕ ನಿರ್ದೇಶಕ ಪ್ರೊ.ಇ. ಚಿತ್ರಶೇಖರ್,  ದಾವಣಗೆರೆ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಜಿ.ಟಿ. ಗೋವಿಂದಪ್ಪ, ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ. ರಂಗಸ್ವಾಮಿ ಹಾಜರಿದ್ದರು. ಅರ್ಥಶಾಸ್ತ್ರ ವಿಭಾಗದ ಪ್ರೊ.ಪಿ.ಸಿ. ಗಾಯತ್ರಿ ಸ್ವಾಗತಿಸಿದರು. ಶ್ವೇತಾರಾಣಿ ಪ್ರಾರ್ಥಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry