ಮಂಗಳವಾರ, ಮೇ 11, 2021
28 °C
ಮುಂಗಾರು ಹಂಗಾಮಿಗೆ ಇಲಾಖೆ ಸಿದ್ಧತೆ

ಕೃಷಿ ಚಟುವಟಿಕೆ ಬಿರುಸು

ಪ್ರಜಾವಾಣಿ ವಾರ್ತೆ/ ಎಚ್.ಎಸ್. ರಘು Updated:

ಅಕ್ಷರ ಗಾತ್ರ : | |

ಕೃಷಿ ಚಟುವಟಿಕೆ ಬಿರುಸು

ಶಿಕಾರಿಪುರ: ಮಳೆ ಆರಂಭವಾದ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ಬಿರುಸಿನ ಕೃಷಿ ಚಟುವಟಿಕೆಗಳು ನಡೆದಿವೆ. ಹಲವು ದಿನಗಳಿಂದ ಮುಂಗಾರು ಆರಂಭವಾದ ಹಿನ್ನೆಲೆಯಲ್ಲಿ  ಬುಧವಾರ ರೈತರು ಜಮೀನುಗಳಲ್ಲಿ ಬಿತ್ತನೆ ಕಾರ್ಯದಲ್ಲಿ ನಿರತರಾಗ್ದ್ದಿದರು. ಅಲ್ಲಲ್ಲಿ, ಬಿತ್ತನೆಗೆ ಭೂಮಿ ಹದಗೊಳಿಸುತ್ತಿರುವುದು ಸಹ ಕಂಡುಬಂದಿದೆ. ಮೆಕ್ಕೆಜೋಳ ಬಿತ್ತನೆ ಮಾಡುತ್ತಿದ್ದ ದೃಶ್ಯ ಕಂಡುಬಂದಿತು.ತಾಲ್ಲೂಕಿನಲ್ಲಿ ಒಟ್ಟು ಕೃಷಿ ಭೂಮಿ 47,750 ಹೆಕ್ಟೇರ್ ಇದ್ದು, ಮೆಕ್ಕೆಜೋಳ ಹಾಗೂ ಭತ್ತ ಪ್ರಮುಖ ಬೆಳೆಯಾಗಿದೆ. ಇತ್ತಿಚೀನ ವರ್ಷಗಳಲ್ಲಿ ಬಹುತೇಕ ರೈತರು ಮೆಕ್ಕೆಜೋಳವನ್ನು ಹೆಚ್ಚು ಬೆಳೆಯುತ್ತಿದ್ದಾರೆ. ರೈತರು 22 ಸಾವಿರ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಭತ್ತವನ್ನು ಹಾಗೂ 25,400 ಹೆಕ್ಟೇರ್ ಭೂಮಿಯಲ್ಲಿ ಮೆಕ್ಕೆಜೋಳ ಬೆಳೆಯುತ್ತಾ ಬಂದಿದ್ದಾರೆ. ಉಳಿದ ಕೃಷಿ ಭೂಮಿಯಲ್ಲಿ ರಾಗಿ, ಹತ್ತಿ, ಹೈಬ್ರಿಡ್‌ಜೋಳ, ತೊಗರಿಬೇಳೆ ಸೇರಿದಂತೆ ಇತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ.ತಾಲ್ಲೂಕಿನಲ್ಲಿ ವಾಡಿಕೆಯಂತೆ ಇಲ್ಲಿಯವರೆಗೆ 280 ಮಿ.ಲಿ. ಮೀಟರ್ ಮಳೆಯಾಗಬೇಕಾಗಿತ್ತು. ಆದರೆ, 211 ಎಂ.ಎಂ. ಮಳೆಯಾಗಿದೆ. ವಾಡಿಕೆಗಿಂತ ಸುಮಾರು ಶೇ 25 ಮಳೆ ಪ್ರಮಾಣ ಕಡಿಮೆ ಆಗಿದೆ. ಕಡಿಮೆ ಮಳೆಯಾಗಿದ್ದರೂ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿ ರೈತರು ಗೊಬ್ಬರ ಹಾಗೂ ಬಿತ್ತನೆಬೀಜಗಳನ್ನು ಸಂಗ್ರಹಿಸುವ ಮೂಲಕ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.ಬಿತ್ತನೆಬೀಜ, ರಸಗೊಬ್ಬರ ಸೇರಿದಂತೆ ಕೃಷಿ ಪರಿಕರಗಳನ್ನು ಸಮರ್ಪಕವಾಗಿ ತಾಲ್ಲೂಕಿನ ರೈತರಿಗೆ ಒದಗಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ಕಾರ್ಯ ನಿರ್ವಹಿಸುತ್ತಿದ್ದು, ತಾಲ್ಲೂಕಿನ ವಿವಿಧ ಹೋಬಳಿಗಳ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಸಬಾ, ಹಿತ್ತಲ, ಹೊಸೂರು, ಶಿರಾಳಕೊಪ್ಪ ಹಾಗೂ ಸುಣ್ಣದ ಕೊಪ್ಪದಲ್ಲಿ 5 ರೈತ ಸಂಪರ್ಕ ಕೇಂದ್ರ ಸ್ಥಾಪಿಸಿದೆ. ಜತೆಗೆ ತೊಗರ್ಸಿ, ಕಿಟ್ಟದಹಳ್ಳಿ ಹೆಚ್ಚುವರಿ ರೈತ ಸಂಪರ್ಕ ಕೇಂದ್ರ ಹಾಗೂ ಅಂಜನಾಪುರ ಹೋಬಳಿಯ ಹೆಚ್ಚುವರಿ ಕೇಂದ್ರವಾಗಿ ಶಿಕಾರಿಪುರ ಪಟ್ಟಣದಲ್ಲಿ  ರೈತ ಸಂಪರ್ಕ ಕೇಂದ್ರವನ್ನು ಸ್ಥಾಪಿಸಿದೆ.ತಾಲ್ಲೂಕಿನ ಕೃಷಿ ಚಟುವಟಿಕೆಗಾಗಿ 3,825 ಕ್ವಿಂಟಲ್ ಬಿತ್ತನೆ ಮೆಕ್ಕೆಜೋಳ, 6,005 ಕ್ವಿಂಟಲ್ ಬಿತ್ತನೆ ಭತ್ತದ ಅವಶ್ಯಕತೆ ಇದ್ದು, ಇಲಾಖೆಯ ಗೋದಾಮುಗಳಲ್ಲಿ ದಾಸ್ತಾನು ಇದೆ. ಪ್ರಸ್ತುತ ವಿತರಿಸಲಾಗುತ್ತಿದೆ ಹಾಗೂ ಪ್ರಸ್ತುತ ವರ್ಷದ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ರಸಗೊಬ್ಬರ ಸಂಗ್ರಹಣೆಯಾಗಿದೆ. ಜತೆಗೆ, ಶಿವಮೊಗ್ಗ ಗೋದಾಮುನಲ್ಲಿ ಕೂಡ ರಸಗೊಬ್ಬರ ಕಾಪು ದಾಸ್ತಾನು ಮಾಡಲಾಗಿದೆ. ಹಂತ ಹಂತವಾಗಿ ರೈತರು ಪಡೆದುಕೊಳ್ಳಬಹುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಪ್ರಭಾಕರ್ ತಿಳಿಸಿದರು.ತಾಲ್ಲೂಕಿನ ಆಯ್ದ 9 ಸಹಕಾರ ಸಂಘಗಳಲ್ಲಿ ಈಗಾಗಲೇ ದಾಸ್ತಾನು ಮಾಡಿದ ಭತ್ತದ ಬೀಜ ಪಡೆಯಬಹುದು ಎಂದು ಕೃಷಿ ಅಧಿಕಾರಿ ಕಿರಣ್‌ಕುಮಾರ್ ತಿಳಿಸಿದರು. ರೈತರಿಗೆ ಸಕಾಲಕ್ಕೆ ಕೃಷಿ ಪರಿಕರ ಒದಗಿಸಲು ಇಲಾಖೆ ಕ್ರಮ ವಹಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.