ಕೃಷಿ ಜಮೀನಿನಲ್ಲಿ ಮರಳು ಗಣಿಗಾರಿಕೆ

7

ಕೃಷಿ ಜಮೀನಿನಲ್ಲಿ ಮರಳು ಗಣಿಗಾರಿಕೆ

Published:
Updated:

ಕೋಲಾರ:  ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳಲ್ಲಿ,  ಕೃಷಿ ಜಮೀನುಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ನಿಲ್ಲಿಸಬೇಕು ಎಂದು ಕೋರಿ ಜಿಲ್ಲೆಯ ಮುಳಬಾಗಲು ತಾಲ್ಲೂಕಿನ ಮುಷ್ಟೂರು ಗ್ರಾಮ ಪಂಚಾಯಿತಿ ಮತ್ತು ಗ್ರಾಮಸ್ಥರು ಹೈಕೋರ್ಟ್‌ನಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ಸಾರ್ವಜನಿಕ ಮೊಕದ್ದಮೆ ಹೂಡುವ ಮುನ್ನವೇ ನಂಗಲಿ ಗ್ರಾಮದ ಹಿರಿಯ ನಾಗರಿಕರೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿ, ಕೃಷಿ ಜಮೀನಿನಲ್ಲಿ ಮರಳು ಗಣಿಗಾರಿಕೆಗೆ ತಡೆಯೊಡ್ಡಿದ್ದಾರೆ.ತಾಲ್ಲೂಕಿನ ಬಹಳಷ್ಟು ರೈತರು ತಕ್ಷಣದ ಲಾಭಕ್ಕಾಗಿ ತಮ್ಮ ಬೆಲೆ ಬಾಳುವ ಜಮೀನನ್ನು ಮರಳು ಗಣಿಗಾರಿಕೆಗೆ ಯಾವ ಮುಲಾಜು, ಭಾವನಾತ್ಮಕ ನಂಟನ್ನು ಲೆಕ್ಕಕ್ಕಿಡದೆ ಮಾರುತ್ತಿರುವ ಹೊತ್ತಿನಲ್ಲೇ ಈ ರೈತ ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ನೀರು ಹರಿಸಿ ರಾಗಿ ಬೆಳೆದಿದ್ದಾರೆ. ತಮ್ಮ ಪಕ್ಕದ ಜಮೀನನ್ನು ಮರಳು ಗಣಿಗಾರಿಕೆಗೆ ಮಾರಿದ ಮತ್ತು ಗಣಿಗಾರಿಕೆಯ ಲಕ್ಷಣಗಳು ಗೋಚರಿಸುತ್ತಿದ್ದಂತೆಯೇ ರೈಲ್ವೆ ಇಲಾಖೆಯ ನಿವೃತ್ತ ತಾಂತ್ರಿಕ ಅಧಿಕಾರಿ ಬಿ.ಎನ್.ಗೋಪಾಲಕೃಷ್ಣಸ್ವಾಮಿ ಅದೇ ಗ್ರಾಮದ ಮಂಡಲ ಪಂಚಾಯತಿ ಮಾಜಿ ಪ್ರಧಾನ ಕೃಷ್ಣಪ್ಪ ಅವರೊಡನೆ ಸೇರಿ ನಂಗಲಿ ಪೊಲೀಸ್ ಠಾಣೆಗೆ ದೂರು ನೀಡಿದ ಪರಿಣಾಮ ಈಗ ಜಮೀನು ಸುರಕ್ಷಿತವಾಗಿದೆ. ಆದರೆ ಅದನ್ನು ಅಣಕಿಸುವಂತೆ ಜಮೀನು ಪಕ್ಕದಲ್ಲೇ ಉದ್ದಕ್ಕೂ ಬೃಹತ್ತಾದ ಹಳ್ಳವೊಂದು ಬಾಯ್ತೆರೆದಿದೆ. ಅವರು ದೂರು ನೀಡುವ ಮುನ್ನ ಅಲ್ಲಿ ಅವ್ಯಾಹತವಾಗಿ ಮರಳನ್ನು ತೆಗೆಯಲಾಗಿತ್ತು.ನಂಗಲಿ ಗ್ರಾಮದ ಮುಖ್ಯ ಬೀದಿಯಲ್ಲಿರುವ ಅವರ ಮನೆಗೆ ಭಾನುವಾರ `ಪ್ರಜಾವಾಣಿ~ ಪ್ರತಿನಿಧಿ ಭೇಟಿ ನೀಡಿದ ಸಂದರ್ಭದಲ್ಲಿ ಅವರು, ದಸರೆ ರಜೆಗೆಂದು ಬೆಂಗಳೂರಿನಿಂದ ಬಂದಿದ್ದ ತಮ್ಮ ನೆಂಟರ ಮಕ್ಕಳಿಗೆ ಮರಳು, ಕೆರೆಗಳು, ನೀರಿನ ಸಂರಕ್ಷಣೆ ಬಗ್ಗೆ ವಿವರಿಸುತ್ತಿದ್ದರು.ನಂತರ ತಮ್ಮ ಪ್ರಯತ್ನದ ಬಗ್ಗೆ ಹೀಗೆ ವಿವರಿಸಿದರು. `ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತನಾಗಿ ಹಳ್ಳಿಯಲ್ಲಿ ಬದುಕಬೇಕು ಎಂದು ಐದು ಎಕರೆ ಜಮೀನು ಖರೀದಿಸಿದೆ.  ಕೆರೆಗಳಲ್ಲಿ ಮರಳು ತೆಗೆಯುವ ದಂಧೆ ನೋಡಿ, ಅನ್ನ ಕೊಡುವ ಭೂಮಿ ತಾಯಿಯ ಒಡಲನ್ನು ದರೋಡೆ ಮಾಡಲು ರೈತರು ಮುಂದಾಗಿರುವುದನ್ನು ನೋಡಿ ಬೇಸರಪಟ್ಟೆ. ನಮ್ಮ ಜಮೀನಿನ ಪಕ್ಕದಲ್ಲೇ ಇರುವವರು ಮರಳು ತೆಗೆಯಲು ಭೂಮಿ ಮಾರಿಕೊಂಡರು. ಮರಳು ತೆಗೆಯಲು ಶುರು ಮಾಡಿದ್ದು ಗೊತ್ತಾದ ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿದೆ~ ಎಂದು ಸ್ಮರಿಸಿದರು.ಕೃಷಿ ಜಮೀನಲ್ಲಿ ಮರಳು ತೆಗೆದರೆ ಅನ್ನ ಎಲ್ಲಿ ಬೆಳೆಯಲು ಸಾಧ್ಯ. ನೀರನ್ನು ಹಿಡಿದಿಟ್ಟುಕೊಳ್ಳುವ ಮರಳು ಕರಗಿದರೆ ಮಳೆ ನೀರು ನಿಲ್ಲುವುದಾದರೂ ಎಲ್ಲಿ. ದೂರು ಸ್ವೀಕರಿಸಿ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಠಾಣೆ ಮುಂದೆಯೇ ಧರಣಿ ನಡೆಸುವಾಗಿ ಮೊದಲೇ ಎಚ್ಚರಿಸಿದೆವು. ಕೃಷ್ಣಪ್ಪ ಜತೆಗಿದ್ದರು.ನಮ್ಮ ಹಿರಿತನ ನೋಡಿಯೋ, ತಮ್ಮ ಅಧಿಕಾರದ ಬಲ ಬಳಸಿ ಒಳ್ಳೆಯದನ್ನು ಮಾಡಬೇಕು ಎಂಬ ಸದ್ಭಾವನೆಯೋ ಏನೋ ಕೂಡಲೇ ಸಬ್‌ಇನ್‌ಸ್ಪೆಕ್ಟರ್ ವಾಹನದಲ್ಲಿ ಜತೆಗೆ ಬಂದರು. ಮರಳು ತೆಗೆಯಲು ಮುಂದಾಗಿದ್ದವರು ಅವರು ಬರುವುದನ್ನು ಕಂಡು ಪರಾರಿಯಾದರು. ಈಗ ಜಮೀನು ಸುರಕ್ಷಿತವಾಗಿದೆ ಎಂದು ಸಮಾಧಾನದ ನಿಟ್ಟುಸಿರುಬಿಟ್ಟರು.ನಂಗಲಿ ಕೆರೆಯ ಅಚ್ಟುಕಟ್ಟು ಪ್ರದೇಶದಲ್ಲಿ ಬೆಳೆ ತೆಗೆಯುತ್ತಿದ್ದ ರೈತರೂ ಮರಳಿನಿಂದ ಸಿಗುವ ಹಣಕ್ಕಾಗಿ ತಮ್ಮ ಭೂಮಿಯ ಋಣ ಬಿಟ್ಟುಕೊಡುತ್ತಿದ್ದಾರೆ. ಭೂಮಿಯಷ್ಟೇ ಅಲ್ಲದೆ, ನೂರಾರು ಮರಗಳೂ ಉರುಳುತ್ತಿವೆ. ಕೆರೆ ಅಂಗಳದಲ್ಲಿ ನಡೆಯುತ್ತಿದ್ದ ಮರಳು ಗಣಿಗಾರಿಕೆ ಕೃಷಿ ಜಮೀನನ್ನು ನುಂಗುತ್ತಿರುವುದರಿಂದ ಆಗುವ ಪರಿಣಾಮಗಳ ಬಗ್ಗೆ ರೈತರಿಗೆ ಬೇಗ ಅರ್ಥವಾಗದಿದ್ದರೆ ದುರ್ದಿನಗಳು ಬರಲಿವೆ ಎಂದು ಭವಿಷ್ಯ ನುಡಿದರು.ಕೆರೆಯಂಗಳವನ್ನೂ ದಾಟಿ ಮರಳಿನ ನಿಧಿಯನ್ನು ಬಗೆದು ಜಲ ಶ್ರೀಮಂತಿಕೆ ಬರಿದು ಮಾಡುವ ರೈತರು ಬೇಗ ಎಚ್ಚೆತ್ತುಕೊಳ್ಳಬೇಕಾಗಿದೆ. ಕೃಷಿಗಾಗಿಯೇ ಭೂಮಿಯ ಮೇಲೆ ಪ್ರೀತಿ, ಅವಲಂಬನೆ ರೂಢಿಸಿಕೊಂಡಿರುವ ರೈತರು ಅದನ್ನು ಕರಗುವ ಹಣಕ್ಕಾಗಿ ಸುಲಭವಾಗಿ ಬಿಟ್ಟುಕೊಟ್ಟರೆ ಬಂಗಾರದ ಮೊಟ್ಟೆ ಇಡುವ ಬಾತುಕೋಳಿಯನ್ನು ಕತ್ತರಿಸಿದವನಂತೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂಬುದು ನಂಗಲಿ ಮೂಲದ ವಿಮರ್ಶಕ ಡಾ.ಚಂದ್ರಶೇಖರ ನಂಗಲಿ ಅಭಿಪ್ರಾಯ.

`ಕಠಿಣ ಕ್ರಮಕ್ಕೆ ಸೂಚನೆ~

ತಾಲ್ಲೂಕಿನಲ್ಲಿ ಶೇ 80ರಷ್ಟು ರೈತರು ತಮ್ಮ ಭೂಮಿಯನ್ನು ಮರಳು ಗಣಿಗಾರಿಕೆಗೆ ಮಾರುತ್ತಿದ್ದಾರೆ. ಹಾಗೆ ಮಾಡಬಾರದು ಎಂಬ ಸಂಗತಿ ಅವರಿಗೇ ಸ್ವತಃ ಅರ್ಥವಾಗುವವರೆಗೂ ಜಿಲ್ಲಾಡಳಿತದ ಪ್ರಯತ್ನಗಳು ನಿರೀಕ್ಷಿತ ಫಲ ಕೊಡುವುದು ಕಷ್ಟಸಾಧ್ಯ. ಆದರೂ ಅಂಥ ರೈತರ ವಿರುದ್ಧ ಮೊಕದ್ದಮೆ ದಾಖಲಿಸುವ ಕಠಿಣ ಕ್ರಮಕ್ಕೆ ಮುಂದಾಗಿದ್ದೇವೆ.

- ಡಾ.ಡಿ.ಎಸ್.ವಿಶ್ವನಾಥ್

(ಜಿಲ್ಲಾಧಿಕಾರಿ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry