ಸೋಮವಾರ, ಮೇ 17, 2021
27 °C

ಕೃಷಿ ಜಾತ್ರೆಯಲ್ಲಿ ಸವಿ ಸವಿ ಊಟ

ಪ್ರಜಾವಾಣಿ ವಾರ್ತೆ ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

ಧಾರವಾಡ: ಕೃಷಿ ಜಾತ್ರೆಗೆ ವರುಣ ಬಿಡುವು ಮಾಡಿಕೊಟ್ಟಿದ್ದಾನೆ. ಮೇಳದಲ್ಲಿ ಕೃಷಿ ಮಾಹಿತಿ ಯಥೇಚ್ಚವಾಗಿ ದೊರೆಯುತ್ತಿದೆ. ಪ್ರದರ್ಶನ ರೂಪದಲ್ಲಿ ನೂರಾರು ಮಾಹಿತಿ ಕೇಂದ್ರಗಳು ತೆರೆದುಕೊಂಡಿವೆ. ಇಲ್ಲಿಗೆ ಬರುವ ರೈತರು ಒಂದೇ ದಿನದಲ್ಲಿ ಎಲ್ಲ ವಿಷಯಗಳನ್ನೂ  ಗ್ರಹಿಸಿಕೊಳ್ಳುವುದು ಕಷ್ಟ ಸಾಧ್ಯ. ಹೀಗಾಗಿ ಒಮ್ಮೆ ಬಂದ ವ್ಯಕ್ತಿ ಬಿಟ್ಟು ಬಿಡದೆ ನಾಲ್ಕೂ ದಿನ ಬರಲೇಬೇಕು. ನಾಲ್ಕೂ ದಿನ ಬಂದರೆ ಊಟೋಪಚಾರದ ವ್ಯವಸ್ಥೆ ಹೇಗೆ ಎಂದು ಯೋಜಿಸಬೇಕಿಲ್ಲ. ಅದಕ್ಕಾಗಿಯೇ 25ಕ್ಕೂ ಹೆಚ್ಚು ಖಾನಾವಳಿಗಳು  ತೆರೆದುಕೊಂಡಿವೆ.ಹೊಸ ಯಂತ್ರೋಪಕರಣ, ಬಿತ್ತನೆ ಬೀಜ, ರಸಗೊಬ್ಬರ ಇತ್ಯಾದಿಗಳ ಮಾಹಿತಿ ಪಡೆಯಲು ಹಲವು ಮಳಿಗೆಗಳನ್ನು  ಸುತ್ತಾಡಿ ಸುಸ್ತಾಗುತ್ತಿರುವ  ರೈತರಿಗೆ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿಯೇ  ನಡೆಯುತ್ತಿರುವ ಕೃಷಿ ಮೇಳದ ಮಳಿಗೆಗಳ ಬದಿಯಲ್ಲಿಯೇ ಬಾಣಸಿಗರು ಬಿಸಿ ಬಿಸಿಯಾದ ಅಡುಗೆ ಮಾಡಿ ಊಟ ಒದಗಿಸಿ ಅವರ ಹೊಟ್ಟೆ ತಣ್ಣಗೆ ಮಾಡುತ್ತಿದ್ದಾರೆ.ರಜತ ಸಂಭ್ರಮದ ಕೃಷಿ ಮೇಳಕ್ಕೆ ಮೊದಲ ದಿನವೇ 70 ಸಾವಿರ ಜನ ರೈತರು ಬಂದು ಕೃಷಿ ಬಗೆಗೆ ಇರುವ ತಮ್ಮ ಆಸಕ್ತಿ ತೋರಿದ್ದಾರೆ. ಹಲವು ವಿಷಯಗಳನ್ನು  ಅರಿತುಕೊಂಡಿದ್ದಾರೆ. ಶನಿವಾರವೂ ರೈತರು ಭಾರಿ ಸಂಖ್ಯೆಯಲ್ಲಿ ಬಂದು ಮಾಹಿತಿ ಪಡೆದುಕೊಂಡಿದ್ದಾರೆ. ಇಲ್ಲಿ ಬರುವ ರೈತರಿಗೆ  ಊಟೋಪಚಾರದಂತಹ ವ್ಯವಸ್ಥೆಯನ್ನೂ  ಮಾಡಿರುವ ಕಾರಣ ರೈತರು ಬರುತ್ತಲೇ ಇದ್ದಾರೆ.ಬಸವೇಶ್ವರ ಖಾನಾವಳಿ, ವೀರಭದ್ರೇಶ್ವರ ಖಾನಾವಳಿ, ಗಣೇಶ ಖಾನಾವಳಿ, ರೊಟ್ಟಿ ಖಾನಾವಳಿ ಹೀಗೆ ಹಲವು  ಮಳಿಗೆಗಳು ತೆರೆದುಕೊಂಡಿವೆ. ಮಳಿಗೆಯ ಮುಂಭಾಗದಲ್ಲಿ  ಪೋಸ್ಟರ್‌ಗಳನ್ನೂ  ಹಾಕಲಾಗಿದೆ. ಪ್ರತಿ ಮಳಿಗೆಯಲ್ಲಿ ರೈತರಿಗೆ ಪೂರೈಸಲಾಗುತ್ತಿರುವ ಊಟ ಭಿನ್ನವಾಗಿಯೇ ಇದೆ.  ಹೀಗಾಗಿ ರೈತರು ಪ್ರತಿ ಮಳಿಗೆಗೂ ಭೇಟಿ ನೀಡಿ ಪರಿಶೀಲಿಸಿದ ನಂತರವೇ  ತಮಗೆ ಇಷ್ಟವಿರುವ ಮಳಿಗೆಗೆ ತೆರಳಿ ಊಟ ಮಾಡುತ್ತಿರುವುದು ಕಂಡು ಬಂದಿತು.ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಯ ರೈತರು ವಾಹನಗಳಲ್ಲಿ ತಂಡೋಪತಂಡವಾಗಿ ಆಗಮಿಸಿದರೆ, ಬಾಗಲಕೋಟೆ,  ಕೊಲ್ಹಾಪುರ ಹಾಗೂ ಸಾತಾರಾ ಜಿಲ್ಲೆಯ ರೈತರು ಸಹ ಸಾರಿಗೆ ಬಸ್ಸಿನಲ್ಲಿ ಇಲ್ಲಿಗೆ ಬಂದು ಕೃಷಿ ಪ್ರದರ್ಶನ ವೀಕ್ಷಿಸಿ, ಇಲ್ಲಿಯ ಊಟವನ್ನು ಸವಿದು ಖುಷಿ ಪಟ್ಟರು. `ಮಾರಾಟ ಮಳಿಗೆಯಲ್ಲಿಯೇ ದೇಸಿ ಹಾಗೂ ಗುಣಮಟ್ಟದ ಊಟ ನೀಡುತ್ತಿದ್ದಾರೆ. ಊಟವೂ ಚೆನ್ನಾಗಿದೆ. ನಮಗಂತೂ ನಮ್ಮ ಊರ ಜಾತ್ರೆಗೆ ಬಂದಂತೆ ಆಗಿದೆ~ ಎಂದು ಕೊಲ್ಹಾಪುರ ಜಿಲ್ಲೆಯ ಸಾಗರ್ ಹರಳಿಕರ್ ಹೇಳಿದರು.`ಕೃಷಿ ಮ್ಯಾಳದಾಗ ಊಟ ಸಿಗತದೋ, ಇಲ್ಲೋ ಅನ್ನೋ ವಿಚಾರದಾಗ ಇದ್ವಿ. ಇಲ್ಲಿ ಚಲೊ ಊಟಾನ ಸಿಕೈತಿ. ಊಟಕ್ಕೂ ಚಲೊ ವ್ಯವಸ್ಥಾ ಮಾಡ್ಯಾರ ~ ಎಂದರು ಕೊಪ್ಪಳ ಜಿಲ್ಲೆ ಯಲಬುರ್ಗಾದ ರೈತ ಮಹಿಳೆ ರತ್ನಕ್ಕ.

`ಸರ್, ನಾವು ಧಾರವಾಡ ತಾಲ್ಲೂಕಿನ ಮದಿಹಾಳ ಗ್ರಾಮದವರು. ಗ್ರಾಹಕರಿಗೆ ಒಳ್ಳೆ ಊಟ ಕೋಡತೀವಿ. ಅದಕ್ಕ ನಮ್ಮ ಖಾನಾವಳಿಗೆ ಇಷ್ಟ ಜನ ಬಂದಾರ‌್ರಿ. ಒಂದ್ ಊಟಕ್ಕೆ 40 ರೂಪಾಯಿ ಇಟ್ಟಿವಿ. ನಮಗೂ  ಚಲೊ ಇನಕಮ್ ಆಗಾತೈತಿ~ ಎಂದು ಗ್ರಾಹಕರಿಗೆ ಊಟದ ಕೂಪನ್ ವಿತರಿಸುತ್ತಲೇ ಮಾಹಿತಿ ನೀಡಿದರು ಗಣೇಶ ಖಾನಾವಳಿಯ ಮಾಲೀಕ ರಾಜು ಮುರಗೋಡ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.