ಕೃಷಿ ಪಂಚಾಂಗ

7

ಕೃಷಿ ಪಂಚಾಂಗ

Published:
Updated:

ಇದು ವ್ಯವಸಾಯವನ್ನೇ ನಂಬಿ ಬದುಕುತ್ತಿರುವ `ಹಳ್ಳಿಗರ ಪಂಚಾಂಗ~ ಎಂದರೆ ತಪ್ಪಾಗಲಾರದು. ಮರೆತ ಕೃಷಿ ಆಚರಣೆಗಳನ್ನು, ಪದ್ಧತಿಗಳನ್ನು ಮತ್ತು ಭತ್ತದ ವೈವಿಧ್ಯಗಳನ್ನು ದಾಖಲು ಮಾಡಿ ಕೃಷಿಕರಿಗೆ ಪರಿಚಯಿಸುವ ಒಂದು ಪ್ರಯತ್ನವನ್ನು `ಗ್ರಾಮಸಿರಿ ಕ್ಯಾಲೆಂಡರ್~ ಮೂಲಕ ಮಾಡಿದೆ ಬೆಂಗಳೂರಿನ `ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗ~. ರೈತ ಮತ್ತು ಬೀಜದ ಸಂಬಂಧ ಅವಿನಾಭಾವಿ.ಹಾಗಾಗಿಯೇ ಬಿತ್ತನೆ ಬೀಜಕ್ಕೆ ಸಂಬಂಧಿಸಿದ ಹತ್ತಾರು ಆಚರಣೆಗಳು, ವಿಧಿ, ವಿಧಾನಗಳು ರೈತರ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ಈ ಆಚರಣೆಗಳಿಗೆ ವೈಜ್ಞಾನಿಕ ಹಿನ್ನೆಲೆ ಕೂಡಾ ಇದೆ.  ಪೂರ್ವಿಕರ ಈ ಪರಿಣತಿ, ವೈಜ್ಞಾನಿಕ ಅನುಭವಗಳನ್ನು ನಾವೀಗ ಮರೆತಿರುವುದರಿಂದ ಕೃಷಿ ಕಷ್ಟ ಎನಿಸಿದೆ. ಆದ್ದರಿಂದ ಈ ಕ್ಯಾಲೆಂಡರ್ ಸಾಕಷ್ಟು ಪೂರಕ ಮಾಹಿತಿ ನೀಡುತ್ತದೆ.`ಸಹಜ ಸಮೃದ್ಧ~ ಸಂಘಟನೆ ಒಂದು ದಶಕಕ್ಕೂ ಹೆಚ್ಚು ಕಾಲ `ಭತ್ತ ಉಳಿಸಿ~ ಆಂದೋಲನದ ಜೊತೆಗೂಡಿ ಕರ್ನಾಟಕದುದ್ದಕ್ಕೂ 300ರಕ್ಕೂ ಹೆಚ್ಚು ಕಣ್ಮರೆಯಾಗುತ್ತಿರುವ ದೇಸಿ ಭತ್ತದ ತಳಿಗಳನ್ನು ಭತ್ತ ಸಂರಕ್ಷಕರ ಮಡಿಲಿಗೆ ಸೇರಿಸಿದೆ.ಸಾವಯವ ಕೃಷಿ ಪದ್ಧತಿಯಲ್ಲಿ ಭತ್ತ ಬೆಳೆದು ಶುದ್ಧ ಬೀಜಗಳನ್ನು ದೇಶದ ಬೇರೆಬೇರೆ ಕಡೆ ಹಂಚುವುದರ ಮೂಲಕ ದೇಸಿ ಬೀಜಗಳ ಪ್ರಾಮುಖ್ಯತೆ ತಿಳಿಸುವ ಕಾರ್ಯದಲ್ಲಿ ತೊಡಗಿದೆ.  ಹಾಗಾಗೇ ಕ್ಯಾಲೆಂಡರ್‌ನಲ್ಲಿಭತ್ತ ಕೃಷಿಗೆ ಹೆಚ್ಚು ಆದ್ಯತೆ. 

ಗ್ರಾಮ ಸಿರಿಯ ವಿಶೇಷ

ಒಟ್ಟು 6 ಪುಟಗಳನ್ನು ಹೊಂದಿರುವ ಕ್ಯಾಲೆಂಡರ್‌ನ ಮುಂಭಾಗದಲ್ಲಿ ಮುಖ್ಯವಾಗಿ ತಾರೀಖು, ವಾರ, ರಜೆ ದಿನ, ಮಳೆ ನಕ್ಷತ್ರಗಳು, ಹಬ್ಬಗಳು ಹಾಗು ಅಮಾವಾಸ್ಯೆ, ಹುಣ್ಣಿಮೆಗಳ ವಿವರ ಇದೆ.ಇದರ ಜೊತೆಗೆ ಬೀಜ ಸಂಸ್ಕೃತಿ, ಭತ್ತ ವೈವಿಧ್ಯ, ಭತ್ತ ಸಂರಕ್ಷಕರು, ರೈತ ವಿಜ್ಞಾನಿಗಳು, ದೇಸಿ ಅಕ್ಕಿ ಮಾರುಕಟ್ಟೆ ಹಾಗು ಕುಲಾಂತರಿ ಭತ್ತಗಳ ಬಗ್ಗೆ ಆಕರ್ಷಕ ಚಿತ್ರಗಳು ಹಾಗು ಸೂಕ್ತ ವಿವರಗಳಿವೆ.ಪ್ರತಿಯೊಂದು ಪುಟದ ಹಿಂಬದಿಯಲ್ಲಿ ಉತ್ತರ, ದಕ್ಷಿಣ ಕರ್ನಾಟಕ ಹಾಗು ಕರಾವಳಿ, ಮಲೆನಾಡು ಭಾಗಗಳ ಕೃಷಿ ಆಚರಣೆಗಳ ಬಗ್ಗೆ ತಿಂಗಳಿಗೆ ಅನುಸಾರವಾಗಿ ಮಾಹಿತಿ ನೀಡಲಾಗಿದೆ.ಸಾವಯವ ಪದ್ಧತಿಯಲ್ಲಿ ಭತ್ತ ಬೆಳೆಯುವ ಸೂತ್ರ, ದೇಸಿ ಅಕ್ಕಿಯ ವಿಶೇಷತೆ ಹಾಗು ಮಾರಾಟ ಮಾಡುವ ಮಾಹಿತಿ, ದೇಸಿ ಭತ್ತದ ಬೀಜಗಳಿಗೆ ಹಾಗು ಮಾಹಿತಿಗಾಗಿ ಸಂಪರ್ಕಿಸಲು ಕರ್ನಾಟಕದ ಶ್ರೇಷ್ಠ ಭತ್ತ ಸಂರಕ್ಷಕರ ವಿಳಾಸ, ರೈತ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿರುವ ಭತ್ತಗಳ ವೈಶಿಷ್ಟ್ಯ,  ಜಾನುವಾರುಗಳ ವಾರದ ಸಂತೆ ಮತ್ತು ಜಾತ್ರೆಗಳ ಮಾಹಿತಿಯಿದೆ. ರೈತರು ಕಡಿಮೆ ಖರ್ಚಿನಲ್ಲಿ,  ಶ್ರಮವಿಲ್ಲದೆ ಮಾಡಿಕೊಳ್ಳಬಹುದಾದ ಕೆಲವು ದ್ರವ ಗೊಬ್ಬರಗಳ ವಿವರ ಇದೆ. ಮಾಹಿತಿಗೆ: ಸಹಜ ಸಮದ್ಧ, ನಂದನ, ನಂ 7, 2 ನೇ ಕ್ರಾಸ್, 7 ನೇ ಮುಖ್ಯರಸ್ತೆ, ಸುಲ್ತಾನ್‌ಪಾಳ್ಯ, ಬೆಂಗಳೂರು - 560 032. ದೂರವಾಣಿ: 080- 2365 5302.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry