ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಚುನಾವಣೆ

7

ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಚುನಾವಣೆ

Published:
Updated:

ಮಡಿಕೇರಿ: ಐದು ವರ್ಷ ಕಾಲಾವಧಿ ಪೂರೈಸಿರುವ ಕೊಡಗು ಜಿಲ್ಲೆಯ 42 ಕೃಷಿ ಪತ್ತಿನ ಸಹಕಾರ ಸಂಘಗಳ ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಿತು. ಬೆಳಿಗ್ಗೆ 9ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆದ ಮತದಾನದಲ್ಲಿ ಸಂಘದ ಸದಸ್ಯರು ತಮ್ಮ ಹಕ್ಕು ಚಲಾಯಿಸಿದರು.ಇದೇ ಮೊದಲ ಬಾರಿಗೆ ರಾಜ್ಯವ್ಯಾಪಿ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಒಂದೇ ದಿನ ಚುನಾವಣೆ ನಡೆಸಲಾಗುತ್ತಿದೆ. ಚುನಾವಣೆ ಪ್ರಕ್ರಿಯೆಯನ್ನು ಸಹಕಾರ ಚುನಾವಣಾ ಆಯೋಗವೇ ಹೊತ್ತುಕೊಂಡಿದ್ದು ವಿಶೇಷ.ಸಹಕಾರ ಕಾಯ್ದೆಯಂತೆ ತಾಲ್ಲೂಕು ಮಟ್ಟಕ್ಕಿಂತ ಕಡಿಮೆ ವ್ಯಾಪ್ತಿ ಪ್ರದೇಶವನ್ನು ಹೊಂದಿರುವ ಸಂಘಗಳಲ್ಲಿ ಕನಿಷ್ಠ 11 ನಿರ್ದೇಶಕರು ಇರಬೇಕು. ಇವರಲ್ಲಿ ಮಹಿಳೆಗೆ 2, ಎಸ್‌ಸಿ/ಎಸ್‌ಟಿಗೆ 1, ಹಿಂದುಳಿದ ವರ್ಗಕ್ಕೆ 1 ಸ್ಥಾನಗಳು ಮೀಸಲಾಗಿದ್ದು, ಬಾಕಿ ಎಲ್ಲ ಸ್ಥಾನಗಳು ಸಾಮಾನ್ಯ ಅಭ್ಯರ್ಥಿಗೆ ಇರುತ್ತವೆ.ಕೆಲವು ಸಂಘಗಳಲ್ಲಿ ಎಸ್‌ಸಿ/ಎಸ್‌ಟಿ ಸದಸ್ಯರು ಇಲ್ಲದಿದ್ದರೆ ಆ ಸ್ಥಾನವು ಖಾಲಿಯಾಗಿಯೇ ಉಳಿದಿರುತ್ತದೆ. ಹೀಗಾಗಿ ಎಲ್ಲ ಸಂಘಗಳಲ್ಲಿ 11 ಸದಸ್ಯರು ಕಡ್ಡಾಯವಾಗಿ ಇರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ.ಗೋಣಿಕೊಪ್ಪಲು ವರದಿ:

ಸಮೀಪದ ತಿತಿಮತಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಭಾನುವಾರ ನಡೆಯಿತು.  ಸಂಘದ ಸದಸ್ಯರೆಲ್ಲರೂ ಉತ್ಸಾಹದಿಂದ ಮತಚಲಾಯಿಸಿದರು. ಎಲ್ಲಕಡೆ ಶಾಂತಿಯುತವಾಗಿ ಚುನಾವಣೆ ನಡೆಯಿತು.ಸಂಘದ ಒಟ್ಟು 11 ಸ್ಥಾನಗಳಿಗೆ  32 ಮಂದಿ ಸ್ಪರ್ಧಿಗಳು ಕಣದಲ್ಲಿದ್ದಾರೆ. ಇವರಲ್ಲಿ 2 ಸ್ಥಾನಕ್ಕೆ ಮೂವರು  ಮಹಿಳೆಯರು ಸ್ಪರ್ಧಿಸಿದ್ದಾರೆ. ಉಳಿದಂತೆ ಪರಿಶಿಷ್ಟಜಾತಿ ಮತ್ತು ಪಂಗಡಕ್ಕೆ 1, ಸಾಮಾನ್ಯ 6, ಹಿಂದುಳಿದ ವರ್ಗ 1, ಸಾಲರಹಿತರಿಗೆ 1 ಸ್ಥಾನ ಮೀಸಲಾಗಿದೆ. ಒಟ್ಟು 1064 ಮತದಾರರಿದ್ದು ಇವರಲ್ಲಿ 368 ಮಂದಿ ಸಾಲರಹಿತ ಮತದಾರರಾಗಿದ್ದಾರೆ. ಇವರು ಸಾಲರಹಿತ  ಗುಂಪಿನ ಸದಸ್ಯರ  ಆಯ್ಕೆಗೆ ಮತಚಲಾಯಿಸಲಿದ್ದಾರೆ. ಮತದಾನ ಬೆಳಿಗ್ಗೆ 9ಗಂಟೆಗೆ ಆರಂಭಗೊಂಡು ಸಂಜೆ 4ಗಂಟೆವರೆಗೆ ನಡೆಯಿತು. ನಲ್ಲೂರು ಕೃಷಿ ಪತ್ತಿನ ಸಹಕಾರ ಸಂಘಕ್ಕೂ ಚುನಾವಣೆ ನಡೆಯಿತು.ಕುಶಾಲನಗರ ವರದಿ:

ಸುಂಟಿಕೊಪ್ಪ ಹಾಗೂ ಕುಶಾಲನಗರ ಹೋಬಳಿಗಳಲ್ಲಿ ಭಾನುವಾರ ಕೃಷಿ ಪತ್ತಿನ ಸಹಕಾರ ಸಂಘ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಬೆಳಿಗ್ಗಿಯಿಂದಲೇ ಬಿರುಸಿನ ಮತದಾನ ನಡೆಯಿತು.ಸಹಕಾರ ಸಂಘಗಳಿಗೆ ನಡೆದ ಚುನಾವಣೆಯಲ್ಲಿ ಸಮೀಪದ ಕೂಡಿಗೆ, ತೊರೆನೂರು, ನಂಜರಾಯಪಟ್ಟಣ ಮತ್ತು ಬಸವನಹಳ್ಳಿಯ ಮತಗಟ್ಟೆ ಕೇಂದ್ರಗಳಲ್ಲಿ ರೈತರು ಉತ್ಸುಕತೆಯಿಂದ ಮತದಾನದಲ್ಲಿ ಭಾಗವಹಿಸುತ್ತಿದ್ದ ದೃಶ್ಯ ಕಂಡು ಬಂತು. ಹೀಗಾಗಿ ಎಲ್ಲಾ ಮತಕೇಂದ್ರಗಳಲ್ಲಿ ಬಿರುಸಿನ ಮತದಾನ ನಡೆಯಿತು.ಕೂಡಿಗೆಯ ಸಹಕಾರ ಸಂಘದಲ್ಲಿ ಮತ ಚಲಾಯಿಸಲು ನೂರಾರು ಜನರು ನಿಂತು ಕಾಯುತ್ತಿದ್ದ ದೃಶ್ಯ ಕಂಡು ಬಂತು.

ಎರಡು ಹೋಬಳಿಗಳ ವ್ಯಾಪ್ತಿಯ ಸಹಕಾರ ಸಂಘಗಳಲ್ಲಿ ಚುನಾವಣೆ ಸಂದರ್ಭ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ಎಲ್ಲಾ ಸಂಘಗಳಲ್ಲೂ ಬಹುತೇಕ ಶಾಂತಿಯುವಾದ ಮತದಾನವಾಗಿದೆ.ಸಮೀಪದ ಕೂಡಿಗೆ ಸಹಕಾರ ಸಂಘದ ಮತಗಟ್ಟೆ ಬಳಿಯಲ್ಲೇ ಕೆಲವು ಅಭ್ಯರ್ಥಿಗಳು ಮತಪ್ರಚಾರ ಮಾಡುತ್ತಿದ್ದರಿಂದ ಹಲವು ವ್ಯಕ್ತಿಗಳ ನಡುವೆ ವಾಗ್ವಾದ ನಡೆಯಿತು.ಆದ್ದರಿಂದ ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾಣವಾಗಿತ್ತಾದ್ದರೂ ಪೊಲೀಸರು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry